ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಗೆ ಚೀನಾ ಖಂಡನೆ
Update: 2023-04-09 23:05 IST
ಬೀಜಿಂಗ್, ಎ.9: ಕೋವಿಡ್-19 ಸೋಂಕಿಗೆ ಸಂಬಂಧಿಸಿದ ವಂಶವಾಹಿ ಮಾಹಿತಿಯನ್ನು ಚೀನಾವು 3 ವರ್ಷದ ಹಿಂದೆಯೇ ಜಾಗತಿಕ ಸಮುದಾಯದೊಂದಿಗೆ ಹಂಚಿಕೊಳ್ಳಬೇಕಿತ್ತು ಎಂಬ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರ ಹೇಳಿಕೆ ಆಕ್ರಮಣಕಾರಿ ಮತ್ತು ಅಸಂಬದ್ಧವಾಗಿದೆ ಎಂದು ಚೀನಾದ ಆರೋಗ್ಯ ಇಲಾಖೆ ಖಂಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಬಗ್ಗೆ ತಪ್ಪುಮಾಹಿತಿ ಹರಡುತ್ತಿದೆ ಎಂದು `ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್'ನ ನಿರ್ದೇಶಕ ಶೆನ್ ಹಾಂಗ್ಬಿಂಗ್ ಆರೋಪಿಸಿದ್ದು, ಕೋವಿಡ್ ಸೋಂಕಿನ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ನೆರವಾಗಬಾರದು. ಒಂದು ಜವಾಬ್ದಾರಿ ದೇಶವಾಗಿ ಮತ್ತು ವಿಜ್ಞಾನಿಗಳಾಗಿ, ನಾವು ಯಾವತ್ತೂ ಸಂಶೋಧನೆಯ ಫಲಿತಾಂಶವನ್ನು ಜಾಗತಿಕ ವಿಜ್ಞಾನಿಗಳೊಂದಿಗೆ ಹಂಚಿಕೊಂಡಿದ್ದೇವೆ ಎಂದಿದ್ದಾರೆ.