ನಂದಿನಿಯ ಕತ್ತು ಕುಯ್ಯುವ ಸಂಚು!

Update: 2023-04-10 03:56 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ದೇಶದ ಎಲ್ಲ ಸರಕಾರಿ ಸಂಘಗಳನ್ನು ಕೇಂದ್ರೀಕರಣಗೊಳಿಸುವ ಪ್ರಸ್ತಾವವನ್ನು ಇತ್ತೀಚೆಗೆ ಕೇಂದ್ರ ಸರಕಾರ ಮೊದಲು ಮುಂದಿಟ್ಟಿತ್ತು. 'ಒಂದು ದೇಶ-ಒಂದು ಸಹಕಾರ ಸಂಘ' ಎನ್ನುವ ಘೋಷಣೆಯಡಿಯಲ್ಲಿ ವಿವಿಧ ರಾಜ್ಯಗಳಲ್ಲಿ ತಲೆ ಎತ್ತಿ ನಿಂತಿರುವ ಸಹಕಾರಿ ಸಂಘಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ದೂರದ ಉದ್ದೇಶ- ದುರುದ್ದೇಶ ಎರಡನ್ನೂ ಕೇಂದ್ರ ಸರಕಾರ ಹೊಂದಿತ್ತು. ಇದರ ವಿರುದ್ಧ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆಯೇ, ಸಹಕಾರಿ ಸಂಘಗಳ ವಿಲೀನದ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟೀಕರಣವನ್ನು ನೀಡತೊಡಗಿದರು. ಇದರ ಬೆನ್ನಿಗೇ ಇತ್ತೀಚೆಗೆ ಕರ್ನಾಟಕದ ಮಂಡ್ಯದಲ್ಲಿ ನಡೆದ ಸಮಾವೇಶವೊಂದರಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಗುಜರಾತ್‌ನ ಅಮುಲ್ ಜೊತೆಗೆ ನಂದಿನಿಯನ್ನು ವಿಲೀನಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು 'ಭರವಸೆ' ನೀಡಿದರು. 'ಗುಜರಾತಿ ಮಾದರಿ'ಗೆ ಮೆದುಳನ್ನು ಒತ್ತೆಯಿಟ್ಟ ಕೆಲವರು ಅದನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಉತ್ತರ ಭಾರತದ ನಷ್ಟದಲ್ಲಿರುವ ಬ್ಯಾಂಕುಗಳ ಜೊತೆಗೆ ಕರ್ನಾಟಕದ ಜನರು ಕಟ್ಟಿ ಬೆಳೆಸಿದ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿ, ನಮ್ಮ ಬ್ಯಾಂಕುಗಳನ್ನು ಹೇಳ ಹೆಸರಿಲ್ಲದಂತೆ ಮಾಡಿರುವ ಕೇಂದ್ರ ಸರಕಾರ, ಇದೀಗ ಕರ್ನಾಟಕದ ಜನತೆ ಕಟ್ಟಿ ಬೆಳೆಸಿದ ಸಹಕಾರಿ ಸಂಘ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಲಾಭದಾಯಕವಾಗಿ ಮುನ್ನಡೆಯುತ್ತಿರುವ, ಸಹಸ್ರಾರು ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ನಂದಿನಿಯನ್ನು ಅಮುಲ್ ಜೊತೆಗೆ ವಿಲೀನಗೊಳಿಸಿ ರಾಜ್ಯದ ಸ್ವಾಯತ್ತತೆಯನ್ನು ಹಂತ ಹಂತವಾಗಿ ಕಿತ್ತುಕೊಳ್ಳಲು ಮುಂದಾಗಿದೆ.

ಅಮಿತ್ ಶಾ ಅವರು ಇಂತಹದೊಂದು ಹೇಳಿಕೆಯನ್ನು ನೀಡಿ ಹೋದ ಬೆನ್ನಿಗೇ, ಎಲ್ಲರೂ 'ಮೊಸರನ್ನು ದಹಿ'ಯೆಂದು ಕರೆಯಬೇಕು ಎನ್ನುವ ಆದೇಶ ಕೇಂದ್ರದಿಂದ ಹೊರಟಿತು. ಇದರ ವಿರುದ್ಧ ಮೊತ್ತ ಮೊದಲು ಧ್ವನಿಯೆತ್ತಿದ್ದು ತಮಿಳುನಾಡು. ಕೇಂದ್ರದ ಆದೇಶ ಸ್ಥಳೀಯ ಭಾಷೆಯ ಮೇಲೆ ನಡೆಸಿದ ಪ್ರಹಾರವೆಂಬಂತೆ ಕಂಡರೂ, ಆಳದಲ್ಲಿ ಅಮುಲ್‌ನ ಆಹಾರ ಪದಾರ್ಥಗಳ ಮಾರುಕಟ್ಟೆಯನ್ನು ಸುಲಭ ಮಾಡಿಕೊಡುವ ಉದ್ದೇಶವನ್ನು ಹೊಂದಿತ್ತು. ದಕ್ಷಿಣದ ರಾಜ್ಯಗಳು ಮೊಸರನ್ನು 'ದಹಿ'ಯಾಗಿಸಲು ಒಪ್ಪದೇ ಇದ್ದಾಗ, ಸರಕಾರ ಅನಿವಾರ್ಯವಾಗಿ ಆದೇಶವನ್ನು ಹಿಂದೆಗೆದುಕೊಂಡಿತು. ಇದೀಗ ನಿಧಾನಕ್ಕೆ ಅಮಿತ್ ಶಾ ಬೆನ್ನ ಹಿಂದಿನಿಂದ ಅಮುಲ್ ತನ್ನ ಮುಖವನ್ನು ಹೊರ ಹಾಕಿದೆ. ರಾಜ್ಯದ ಮಾರುಕಟ್ಟೆಗೆ ಹಾಲು, ಮೊಸರು ರೂಪದಲ್ಲಿ ಅಮುಲ್ ಅಧಿಕೃತವಾಗಿ ಕಾಲಿಟ್ಟಿದೆ ಮಾತ್ರವಲ್ಲ, ಬೇರೆ ಬೇರೆ ತಂತ್ರಗಳ ಮೂಲಕ ನಂದಿನಿಯ ಜಾಗವನ್ನು ಆಕ್ರಮಿಸಲು ಮುಂದಾಗಿದೆ. ನಂದಿನಿಯ ಅಳಿವು ಉಳಿವು ಈ ನಾಡಿನ ರೈತರ ಅಳಿವು ಉಳಿವು ಕೂಡ ಆಗಿರುವುದರಿಂದ, ಅಮುಲ್‌ನ ವಿರುದ್ಧ ಜನರು ಒಂದಾಗಿ ಮುಗಿ ಬಿದ್ದಿದ್ದಾರೆ. ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದೇ ಸಂದರ್ಭದಲ್ಲಿ, ರಾಜ್ಯ ಸರಕಾರ ಅಮುಲ್‌ನ ವಿಷಯದಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದೆ. 'ಅಮುಲ್ ಕೂಡ ಭಾರತೀಯ ಉತ್ಪನ್ನ. ಅದನ್ನು ತಡೆಯುವುದು ಸಾಧ್ಯವಿಲ್ಲ' ಎಂದು ಹೇಳುತ್ತಿದೆ.

 ಅಮುಲ್ ಉತ್ಪನ್ನಗಳನ್ನು ಈ ಹಿಂದೆಯೂ ಕರ್ನಾಟಕದ ಜನರು ವಿರೋಧಿಸಿರಲಿಲ್ಲ ಎನ್ನುವುದನ್ನು ಸರಕಾರ ನೆನಪಿನಲ್ಲಿಡಬೇಕು. ಒಂದು ಕಾಲದಲ್ಲಿ 'ಅಮುಲ್ ಡಬ್ಬಿ' ಇಲ್ಲದ ಮನೆಗಳಿರಲಿಲ್ಲ. ಅಮುಲ್ ಉತ್ಪನ್ನಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಈ ನಾಡಿನ ಜನತೆ ಬಳಸುತ್ತಾ ಬಂದಿದ್ದಾರೆ. ಅಷ್ಟೇ ಏಕೆ? ಕ್ಷೀರ ಕ್ಷೇತ್ರದಲ್ಲಿ ಅಮುಲ್ ಮಾಡಿದ ಸಾಧನೆಯೇ, ನಂದಿನಿ ಹುಟ್ಟುವುದಕ್ಕೆ ಸ್ಫೂರ್ತಿಯಾಯಿತು. ಅಮುಲ್‌ಅನ್ನು ಯಾವತ್ತೂ ನಂದಿನಿ ಮಾದರಿಯಾಗಿ ನೋಡಿದೆಯೇ ಹೊರತು, ಸ್ಪರ್ಧಿಯಾಗಿ ನೋಡಿಲ್ಲ. ವಿಪರ್ಯಾಸವೆಂದರೆ, ಎಲ್ಲವನ್ನೂ ಲಾಭದ ಕಣ್ಣಿನಿಂದಲೇ ನೋಡುತ್ತಿರುವ ಗುಜರಾತಿ ಕಾರ್ಪೊರೇಟ್ ಶಕ್ತಿಗಳಿಗೆ ಅಮುಲ್ ಸೇರಿದಂತೆ, ದೇಶದಲ್ಲಿರುವ ಎಲ್ಲ ಸಹಕಾರಿ ಸಂಸ್ಥೆಗಳೂ ಚಿನ್ನದ ಮೊಟ್ಟೆಯಿಡುತ್ತಿರುವ ಕೋಳಿಯಂತೆ ಕಾಣುತ್ತಿದೆಯೇ ಹೊರತು, ಅದರ ಹಿಂದಿರುವ ಸಂಘಟಿತ ಜನಶಕ್ತಿಯ ಹೋರಾಟಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರದ ನೆರವಿನಿಂದ ಕಾರ್ಪೊರೇಟ್ ಶಕ್ತಿಗಳು ಎಲ್ಲ ಲಾಭದಾಯಕ ಸಂಸ್ಥೆಗಳನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಹೊರಟಿವೆ. ಅದರ ಭಾಗವಾಗಿಯೇ ನಂದಿನಿಯನ್ನು ಅಮುಲ್ ಜೊತೆಗೆ ವಿಲೀನಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಅಮುಲ್ ಜೊತೆಗೆ ನಂದಿನಿ ಯಾವುದೇ ರೀತಿಯ ಸ್ಪರ್ಧೆಗೆ ಅಂಜುತ್ತಿಲ್ಲ. ಅಮುಲ್‌ನದ್ದು 70,000 ಕೋಟಿ ರೂಪಾಯಿಯ ವ್ಯವಹಾರವಾಗಿದ್ದರೆ, ನಂದಿನಿಯದ್ದು 20,000 ಕೋಟಿ ರೂಪಾಯಿಯ ವ್ಯವಹಾರ. ನಂದಿನಿಯೂ ತನ್ನ ಉತ್ಪನ್ನಗಳನ್ನು ಕರ್ನಾಟಕವಲ್ಲದೆ ಇತರ ರಾಜ್ಯಗಳಿಗೆ ವಿಸ್ತರಿಸುತ್ತಾ ಬಂದಿದೆ. ಅಮುಲ್‌ಗೆ ಹೋಲಿಸಿದರೆ ನಂದಿನಿಯ ವ್ಯವಹಾರ ಕಡಿಮೆಯಿರಬಹುದು. ಆದರೆ, ನಂದಿನಿಯ ಹಿಂದೆ ಒಂದು ಯಶಸ್ವಿ ಸಹಕಾರಿ ತತ್ವವಿದೆ. ನಾಡಿನ ರೈತರ ಬದುಕನ್ನು ಮೇಲೆತ್ತುವ ಕನಸನ್ನು ಅದು ಹೊಂದಿದೆ. ಲಾಭವಷ್ಟೇ ಅದರ ಗುರಿಯಲ್ಲ. ಅಮುಲ್ ಹುಟ್ಟಿದ ಎಷ್ಟೋ ವರ್ಷಗಳ ಬಳಿಕ ನಂದಿನಿ ಹುಟ್ಟಿತು. ಆದರೆ ಅದು ಅಲ್ಪಕಾಲದಲ್ಲೇ ಸಾಧಿಸಿದ ಸಾಧನೆ ಬಹುದೊಡ್ಡದು. ನಂದಿನಿಯ ಮೂಲಕ ರೈತರು ಆರ್ಥಿಕ ಸ್ವಾಯತ್ತತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ರಾಜಕೀಯ ಶಕ್ತಿಯಾಗಿಯೂ ಬೆಳೆದಿದ್ದಾರೆ. ನಂದಿನಿ ಇಂದು ಭಯಪಡುತ್ತಿರುವುದು, ಅಮುಲ್‌ನ ಬೆನ್ನ ಹಿಂದೆ ನಿಂತಿರುವ ರಾಜಕೀಯ ಶಕ್ತಿಗಳ ಬಗ್ಗೆ. ಕೇಂದ್ರ ಸರಕಾರದ ಬಲದ ಮೂಲಕ ಅಮುಲ್ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಹುನ್ನಾರದಲ್ಲಿದೆ ಎನ್ನುವುದು ರೈತರ ಅತಿ ದೊಡ್ಡ ಆತಂಕ.

ಬಿಎಸ್‌ಎನ್‌ಎಲ್‌ನ್ನು ಯಾರು ಸರ್ವನಾಶ ಮಾಡಿದರು ಎನ್ನುವುದನ್ನೊಮ್ಮೆ ಸ್ಮರಿಸಿಕೊಳ್ಳಬೇಕಾಗಿದೆ. ಅತ್ಯಧಿಕ ಸವಲತ್ತುಗಳನ್ನು ಬಿಎಸ್‌ಎನ್‌ಎಲ್ ಹೊಂದಿದ್ದರೂ, ಖಾಸಗಿ ಕಂಪೆನಿಗಳು ಸರಕಾರದ ಬಲದಿಂದ ಅದರ ಮೇಲೆ ತನ್ನ ಪಾರಮ್ಯವನ್ನು ಸಾಧಿಸಿದವು. ಬಿಎಸ್‌ಎನ್‌ಎಲ್‌ನ್ನು ಪ್ರತಿನಿಧಿಸಬೇಕಾಗಿದ್ದ ಪ್ರಧಾನಿ ಮೋದಿಯವರು, ಅಂಬಾನಿಯವರ 'ಜಿಯೋ' ಜಾಹೀರಾತಿನಲ್ಲಿ ಗುರುತಿಸಿಕೊಂಡರು. ಖಾಸಗಿ ಕಂಪೆನಿಗಳು ಬಿಎಸ್‌ಎನ್‌ಎಲ್ ಜೊತೆಗೆ ಸ್ಪರ್ಧಿಸುವುದಕ್ಕಾಗಿ ವಂಚನೆಯ ಮಾರ್ಗಗಳನ್ನು ಅನುಸರಿಸಿದವು. ಸರಕಾರ ಬಿಎಸ್‌ಎನ್‌ಎಲ್‌ಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಿಂದೇಟು ಹಾಕಿದರೆ, ಕಂಪೆನಿಯೊಳಗಿರುವ ಸಿಬ್ಬಂದಿ ಸಂಸ್ಥೆಯ ವಿರುದ್ಧವೇ ಕೆಲಸ ಮಾಡತೊಡಗಿತು. ಕೊನೆಯಲ್ಲಿ, ಬಿಎಸ್‌ಎನ್‌ಎಲ್‌ಗಿಂತ ಖಾಸಗಿ ಕಂಪೆನಿಗಳ ಸೇವೆ ಉತ್ತಮ ಎಂದು ಜನರೇ ನಂಬುವಂತೆ ಮಾಡುವಲ್ಲಿ ಸರಕಾರ ಯಶಸ್ವಿಯಾಯಿತು. ಇಂದು ಬಿಎಸ್‌ಎನ್‌ಎಲ್ ಮೂಲೆಗುಂಪಾಗಿ ಆ ಜಾಗದಲ್ಲಿ ಖಾಸಗಿ ಕಂಪೆನಿಗಳು ವಿಜೃಂಭಿಸುತ್ತಿವೆ.

 ಬಿಎಸ್‌ಎನ್‌ಎಲ್‌ಗಾಗಿರುವ ದ್ರೋಹ, ನಂದಿನಿ ವಿಷಯದಲ್ಲಿ ಪುನರಾವರ್ತನೆಯಾಗಬಾರದು. ನಂದಿನಿಯನ್ನು ಅಮುಲ್‌ಜೊತೆಗೆ ವಿಲೀನಗೊಳಿಸಲು ಪೌರೋಹಿತ್ಯ ವಹಿಸಿರುವುದು ಕೇಂದ್ರ ಸಚಿವ ಅಮಿತ್ ಶಾ ಅವರು, ಅಮುಲ್ ಸಂಸ್ಥೆಯನ್ನು ಈ ಮೂಲಕ ಬೃಹತ್ ಕಾರ್ಪೊರೇಟ್ ಸಂಸ್ಥೆಯಾಗಿ ಬೆಳೆಸುವ ಉದ್ದೇಶವನ್ನು ಹೊಂದಿದ್ದಾರೆಯೇ ಹೊರತು, ಈ ನಾಡಿನ ಹೈನೋದ್ಯಮವನ್ನು ನೆಚ್ಚಿಕೊಂಡಿರುವ ರೈತರ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ. ಅಮುಲ್ ಮಾರುಕಟ್ಟೆಗೆ ಬಂದಿರುವುದೇನೋ ನಿಜ. ಆದರೆ ಈಗಾಗಲೇ ಹಾಲಿನ ಕೊರತೆಯನ್ನೆದುರಿಸುತ್ತಿರುವ ಅಮುಲ್‌ಗೆ ನಂದಿನಿಯ ಮೂಲಕವೇ ಹಾಲನ್ನು ವಿತರಿಸುವ ಒತ್ತಡ ಕೇಂದ್ರದಿಂದ ಬಂದಿದೆ ಎನ್ನುವ ಆರೋಪಗಳಿವೆ. ರಾಜ್ಯ ಸರಕಾರವನ್ನು ಬಳಸಿಕೊಂಡು ಹಂತಹಂತವಾಗಿ ನಂದಿನಿಯನ್ನು ದುರ್ಬಲಗೊಳಿಸುವ ದೂರದ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಮಾರುಕಟ್ಟೆಯಲ್ಲಿ ನಂದಿನಿಯ ಉತ್ಪನ್ನಗಳ ಕೊರತೆ ಎದ್ದು ಕಾಣುತ್ತಿವೆ. ಈ ಕೊರತೆ ಕೃತಕ ಸೃಷ್ಟಿ ಎಂದು ಜನಸಾಮಾನ್ಯರು ದೂರುತ್ತಿದ್ದಾರೆ. ಒಂದೆಡೆ ನಂದಿನಿಯ ಹಾಲನ್ನು ಇತರ ಕಂಪೆನಿಗಳಿಗೆ ಗುಟ್ಟಾಗಿ ಮಾರಲಾಗುತ್ತಿದೆ. ನಮ್ಮದೇ ಹಾಲನ್ನು ಬಳಸಿಕೊಂಡು ಅವುಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಲಾಭ ಮಾಡಿಕೊಳ್ಳುತ್ತಿವೆ. ಇತ್ತ ಹಾಲಿನ ಕೊರತೆಯಿಂದ ನಂದಿನಿಯ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಕಾಣ ಸಿಗುತ್ತಿಲ್ಲ. ನಂದಿನಿಯ ಜಾಗದಲ್ಲಿ ಅಮುಲ್ ಉತ್ಪನ್ನಗಳು ಬಂದು ಕುಳಿತಿವೆ. ಒಟ್ಟಿನಲ್ಲಿ ಕೇಂದ್ರ ಸರಕಾರದ ನೇತೃತ್ವದಲ್ಲಿ ನಂದಿನಿಯ ಕತ್ತು ಕುಯ್ಯುವ ಪ್ರಯತ್ನ ನಡೆದಿದೆ. ನಂದಿನಿಯ ಕತ್ತು ಕುಯ್ಯುವುದೆಂದರೆ ಈ ನಾಡಿನ ಸಹಸ್ರಾರು ರೈತರ ಕತ್ತುಕುಯ್ಯುವುದೆಂದೇ ಅರ್ಥ. ರಾಜ್ಯದ ರಾಜಕೀಯ ನಾಯಕರನ್ನು ಕಾಡುತ್ತಿರುವ ಈ 'ಅಮೂಲ ವ್ಯಾಧಿ'ಗೆ ಜನರೇ ಔಷಧಿಯನ್ನು ಹುಡುಕಬೇಕಾಗಿದೆ.

Similar News