ಕಾಂಗ್ರೆಸ್‌ನ ಎಚ್ಚರಿಕೆಯ ಹೊರತಾಗಿಯೂ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿನ್ ಪೈಲಟ್
ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Sachin Pilot)ಇಂದು ಜೈಪುರದಲ್ಲಿ ತಮ್ಮದೇ ಸರಕಾರವನ್ನು ಗುರಿಯಾಗಿಟ್ಟುಕೊಂಡು ತಮ್ಮ ಪ್ರತಿಭಟನಾ ಉಪವಾಸವನ್ನು ಆರಂಭಿಸಿದರು.
ತಮ್ಮ ನಡೆಯನ್ನು "ಪಕ್ಷ ವಿರೋಧಿ ಚಟುವಟಿಕೆ" ಎಂದು ಪರಿಗಣಿಸಬಹುದು ಎಂದು ವರಿಷ್ಟರ ಎಚ್ಚರಿಕೆಯನ್ನು ಪೈಲಟ್ ನಿರ್ಲಕ್ಷಿಸಿದ್ದಾರೆ.
ಮಹಾತ್ಮಾ ಗಾಂಧಿ ಅವರ ಭಾವಚಿತ್ರದೊಂದಿಗೆ ಸಚಿನ್ ಪೈಲಟ್ ಭ್ರಷ್ಟಾಚಾರದ ವಿರುದ್ಧದ ತನ್ನ ಒಂದು ದಿನ ಉಪವಾಸಕ್ಕಾಗಿ "ಶಹೀದ್ ಸ್ಮಾರಕ ಸ್ಥಳ" ದಲ್ಲಿ ಕುಳಿತುಕೊಂಡರು. ಬಿಜೆಪಿಯ ವಸುಂಧರಾ ರಾಜೆ ವಿರುದ್ಧದ ಆರೋಪಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಪಕ್ಷದ ಪ್ರತಿಸ್ಪರ್ಧಿ ಅಶೋಕ್ ಗೆಹ್ಲೋಟ್ ಅವರನ್ನು ಗುರಿಯಾಗಿಸಿಕೊಂಡು ಪೈಲಟ್ ಆರೋಪಿಸಿದ್ದಾರೆ.
ಗೆಹ್ಲೋಟ್ ಸರಕಾರವು ಪೈಲಟ್ ಅವರ ಆರೋಪಗಳನ್ನು ನಿರಾಕರಿಸಿದೆ. ಇದು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಆಡಳಿತಾರೂಢ ಕಾಂಗ್ರೆಸ್‌ಗೆ ಭಾರೀ ಮುಜುಗರವನ್ನುಂಟು ಮಾಡಿದೆ.
ಉಪವಾಸ ಸತ್ಯಾಗ್ರಹ ಮಾಡದಂತೆ ಕಾಂಗ್ರೆಸ್ ಸಚಿನ್ ಪೈಲಟ್‌ಗೆ ಎಚ್ಚರಿಕೆ ನೀಡಿತ್ತು.
“ಮಂಗಳವಾರ ಸಚಿನ್ ಪೈಲಟ್ ನಡೆಸುತ್ತಿರುವ ಅಹೋರಾತ್ರಿ ಉಪವಾಸ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ತಮ್ಮದೇ ಸರಕಾರದಲ್ಲಿ ಯಾವುದೇ ಸಮಸ್ಯೆಯಿದ್ದರೆ, ಅದನ್ನು ಮಾಧ್ಯಮಗಳು ಹಾಗೂ ಸಾರ್ವಜನಿಕರಲ್ಲಿ ಚರ್ಚಿಸುವ ಬದಲು ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬಹುದು'' ಎಂದು ಕಾಂಗ್ರೆಸ್‌ನ ರಾಜಸ್ಥಾನದ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.