ತಮಿಳುನಾಡಿನಲ್ಲಿ ಆರೆಸ್ಸೆಸ್ ರ‍್ಯಾಲಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಇಂದು ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ರ‍್ಯಾಲಿ ನಡೆಸಲು ಅನುಮತಿ ನೀಡಿದೆ.
ರಾಜ್ಯದಲ್ಲಿ ಮೆರವಣಿಗೆ ನಡೆಸಲು ಆರೆಸ್ಸೆಸ್‌ಗೆ ಅನುಮತಿ ನೀಡುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಡಿಎಂಕೆ ಸರಕಾರ ಪ್ರಶ್ನಿಸಿತ್ತು.
ರಾಜ್ಯ ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
"ಆಝಾದಿ ಕಾ ಅಮೃತ್ ಮಹೋತ್ಸವ" ಹಾಗೂ ಗಾಂಧಿ ಜಯಂತಿಯಂದು ಮೆರವಣಿಗೆ ನಡೆಸಲು ಅಕ್ಟೋಬರ್‌ನಲ್ಲಿ ಆರೆಸ್ಸೆಸ್ , ತಮಿಳುನಾಡು ಸರಕಾರದ ಅನುಮತಿ ಕೋರಿತ್ತು.
ರಾಜ್ಯ ಸರಕಾರ ಅನುಮತಿ ನಿರಾಕರಿಸಿದ್ದು, ಆರೆಸ್ಸೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
ನವೆಂಬರ್‌ನಲ್ಲಿ ಏಕ ನ್ಯಾಯಾಧೀಶರ ಪೀಠವು ಆರೆಸ್ಸೆಸ್ ಮೆರವಣಿಗೆಯನ್ನು ಒಳಾಂಗಣದಲ್ಲಿ ಅಥವಾ ಸುತ್ತುವರಿದ ಸ್ಥಳಗಳಲ್ಲಿ ನಿರ್ಬಂಧಿಸುವಂತಹ ಷರತ್ತುಗಳೊಂದಿಗೆ ಅನುಮತಿ ನೀಡಿತು.
ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ವಿಭಾಗೀಯ ಪೀಠವು ಫೆಬ್ರವರಿಯಲ್ಲಿ ಈ ನಿರ್ಬಂಧಗಳನ್ನು ತೆಗೆದುಹಾಕಿತು.
ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು.