×
Ad

ಸಚಿನ್ ಪೈಲಟ್ ಧರಣಿ ಕಾಂಗ್ರೆಸ್ ಹೈಕಮಾಂಡ್ ಗೆ ಬಹಿರಂಗ ಸವಾಲು: ಬಿಜೆಪಿ

Update: 2023-04-11 13:37 IST

 ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್(Sachin Pilot) ಮಂಗಳವಾರ ತಮ್ಮದೇ ಸರಕಾರದ ವಿರುದ್ಧವೇ  ಒಂದು ದಿನದ ಧರಣಿ ಕುಳಿತಿದ್ದಾರೆ. ಇದನ್ನು "ಪಕ್ಷ ವಿರೋಧಿ ಚಟುವಟಿಕೆ" ಎಂದು ಪರಿಗಣಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಪೈಲಟ್‌ಗೆ ಎಚ್ಚರಿಕೆ ನೀಡಿದರೆ, ರಾಜಸ್ಥಾನ ನಾಯಕನ ಈ  ಹೆಜ್ಜೆಯು "ಪಕ್ಷದ ಹೈಕಮಾಂಡ್‌ಗೆ ಬಹಿರಂಗ ಸವಾಲು" ಎಂದು ಬಿಜೆಪಿ ಹೇಳಿದೆ.

"ಸಚಿನ್ ಪೈಲಟ್ ಹೈಕಮಾಂಡ್‌ಗೆ ಬಹಿರಂಗ ಸವಾಲು ಹಾಕುತ್ತಿದ್ದಾರೆ. ಅವರ ಅಹೋರಾತ್ರಿ ಉಪವಾಸ ಕಾಂಗ್ರೆಸ್ ಸರಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಸಾಬೀತುಪಡಿಸುತ್ತದೆ. ದೇಶಾದ್ಯಂತ ಕಾಂಗ್ರೆಸ್ ತನ್ನ ಹಿಡಿತವನ್ನು ಕಳೆದುಕೊಂಡಿದೆ" ಎಂದು ಬಿಜೆಪಿ ನಾಯಕ ರಾಜೇಂದ್ರ ರಾಥೋಡ್ ಹೇಳಿದ್ದಾರೆ.

ರಾಥೋಡ್ ರಾಜಸ್ಥಾನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ರಾಜ್ಯದಲ್ಲಿ ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರವು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೈಲಟ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

"ಸಚಿನ್ ಪೈಲಟ್ ಅವರ ಉಪವಾಸವು ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಅವರು ಈ ವಿಷಯದ ಬಗ್ಗೆ ನನ್ನೊಂದಿಗೆ ಎಂದಿಗೂ ಮಾತನಾಡಲಿಲ್ಲ. ಸಚಿನ್ ಪೈಲಟ್ ಅವರು ಪಕ್ಷದ ಆಸ್ತಿಯಾಗಿರುವುದರಿಂದ ಶಾಂತಿ ಮಾತುಕತೆಗಾಗಿ ನಾನು ಮನವಿ ಮಾಡುತ್ತೇನೆ" ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News