ಉಡುಪಿ ಶಾಸಕ ರಘುಪತಿ ಭಟ್ ಮನೆ ಸನಿಹದಲ್ಲೇ ಮತದಾನ ಬಹಿಷ್ಕಾರದ ಕೂಗು!

►ಅವೈಜ್ಞಾನಿಕ ಚರಂಡಿ ಕಾಮಗಾರಿ ► ಹಲವು ಮನೆಗಳ ಬಾವಿ ನೀರು ಕಲುಷಿತ

Update: 2023-04-11 16:43 GMT

ಉಡುಪಿ: ಉಡುಪಿ ಶಾಸಕ ಕೆ.ರಘುಪತಿ ಭಟ್ ಮನೆ ಸಮೀಪದ ಲೇಔಟ್‌ನಲ್ಲಿ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿವೆ. ಪ್ರತಿ ಮನೆಗಳ ಗೇಟುಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕೆಲ್ಲ ಕಾರಣ ಉಡುಪಿ ನಗರಸಭೆಯ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ. ಇದರಿಂದ ಕರಂಬಳ್ಳಿ ವೆಂಕಟರಮಣ ಲೇಔಟ್‌ನ ಹಲವು ಮನೆಗಳ ಬಾವಿ ನೀರು ಹಾಳಾಗಿ, ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಶಾಸಕ ರಘುಪತಿ ಭಟ್ ಅವರ ಕರಂಬಳ್ಳಿಯ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ವೆಂಕಟರಮಣ ಲೇಔಟ್‌ನಲ್ಲಿ ಸುಮಾರು 15-20 ಮನೆಗಳಿದ್ದು, ಇವರು ಕಳೆದ 10 ವರ್ಷಗಳಿಂದ ಚರಂಡಿ ಸಮಸ್ಯೆಯನ್ನು ಎದು ರಿಸುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ನೆರೆಯ ನೀರಿನೊಂದಿಗೆ ಇಲ್ಲಿನ ಚರಂಡಿ ಯಲ್ಲಿನ ತ್ಯಾಜ್ಯ ನೀರು ಮೇಲೆ ಬಂದು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದ ಬಾವಿ ನೀರು ಮಲೀನವಾಗಿ ಕುಡಿಯಲು ಸಾಧ್ಯವಾಗುತ್ತಿರಲಿಲ್ಲ.

"ಸಮಸ್ಯೆ ಪರಿಹಾರದ ಬದಲು ಹೆಚ್ಚಳ"

ಈ ಸಮಸ್ಯೆ ಪರಿಹಾರ ಮಾಡುವಂತೆ ಸ್ಥಳೀಯರ ನಿಯೋಗ ಶಾಸಕ ರಘುಪತಿ ಭಟ್ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಇದಕ್ಕೆ ಶಾಶ್ವತ ಪರಿಹಾರ ಕೊಡುವ ಶಾಸಕರ ಭರವಸೆಯಂತೆ ಒಂದೂವರೆ ತಿಂಗಳ ಹಿಂದೆ ಹೊಸ ಒಳ ಚರಂಡಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದರಿಂದ ಮೊದಲು ಮಳೆಗಾಲಕ್ಕೆ ಮಾತ್ರ ಹಾಳಾಗುತ್ತಿದ್ದ ಬಾವಿಯ ನೀರು ಈಗ ಪ್ರತಿನಿತ್ಯ ಮಲೀನವಾಗಿ ಕುಡಿಯಲು ಅಯೋಗ್ಯವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಶಿಕ್ಷಕಿ ಸವಿತಾ ತಿಳಿಸಿದ್ದಾರೆ.

ಚರಂಡಿಯಲ್ಲಿನ ಹರಿಯುವ ತ್ಯಾಜ್ಯ ನೀರು ಬಾವಿಗೆ ಸೇರಿ ವಠಾರದಲ್ಲಿರುವ ಸುಮಾರು 15 ಮನೆಗಳ ಬಾವಿಗಳು ಹಾಳಾಗಿವೆ. ಬೇಸಿಗೆ ಸಮಯ ಆಗಿರುವುದರಿಂದ ನಗರಸಭೆಯಿಂದ ದಿನ ಬಿಟ್ಟು ದಿನಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಕುಡಿಯಲು, ಸ್ನಾನ ಮಾಡಲು ನೀರು ಇಲ್ಲದಂತಾಗಿದೆ. ಬಾವಿಯ ನೀರುಗಳು ಕೆಟ್ಟ ವಾಸನೆ ಬೀರುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.

ಬಾವಿ ನೀರಿನಲ್ಲಿ ಹುಳ

ಸ್ಥಳೀಯ ನಿವಾಸಿ ಜಯಂತಿ ಮಾತನಾಡಿ, ಚರಂಡಿ ಹರಿಯುವ ತ್ಯಾಜ್ಯ ನೀರು ಲೀಕ್ ಆಗಿ ನಮ್ಮ ಮನೆಯ ಬಾವಿಗಳಿಗೆ ಸೇರುತ್ತಿವೆ. ಇದರಿಂದ ನಮ್ಮ ಮನೆಯ ಬಾವಿಯಲ್ಲಿ ಹುಳಗಳಾಗಿವೆ. ಅಲ್ಲದೆ ನೀರು ಗಬ್ಬು ವಾಸನೆ ಬೀರುತ್ತಿದೆ. ಕುಡಿಯಲು ಸಾಧ್ಯವಾಗುತ್ತಿಲ್ಲ. ನಗರಸಭೆಯಿಂದಲೂ ಸರಿಯಾಗಿ ನೀರು ಬಾರದೆ ಲೀಟರ್‌ಗೆ 75 ರೂ. ಕೊಟ್ಟು ಮಿನಾರಲ್ ವಾಟರ್ ತಂದು ಕುಡಿ ಯುವ ಪರಿಸ್ಥಿತಿ ಎದುರಾಗಿದೆ. ಇತರ ಬಳಕೆಗೆ ದೂರದ ಮನೆಯಿಂದ ನೀರು ಹೊತ್ತುಕೊಂಡು ಬರಬೇಕಾಗಿದೆ ಎಂದು ಅಳಲು ತೋಡಿಕೊಂಡರು.

‘ಇಲ್ಲಿನ ಬಾವಿ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಬಾವಿ ನೀರು ಕುಡಿಯಲು ಯೋಗ್ಯ ಅಲ್ಲ ಎಂಬ ವರದಿ ಬಂದಿದೆ. ಇದರಲ್ಲಿ ಬ್ಯಾಕ್ಟಿರಿಯಾ ಇರುವುದು ಕಂಡುಬಂದಿದೆ. ಅದರ ಅಡ್ಡ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ವೈದ್ಯರು ಕೂಡ ಈ ನೀರು ಕುಡಿಯದಂತೆ ಸಲಹೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ನೀರಿನ ಅಭಾವ ತಲೆದೋರಿದೆ ಎನ್ನುತ್ತಾರೆ ಸ್ಥಳೀಯರಾದ ಕಿಶೋರ್.

ಮಕ್ಕಳಲ್ಲಿ ಅನಾರೋಗ್ಯ

ಮಲೀನದಿಂದ ಕೂಡಿದ ನೀರು ಸೇವಿಸಿದ ಪರಿಣಾಮ ವಠಾರದ ಬಹುತೇಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಎಲ್ಲ ಮನೆಗಳಲ್ಲೂ ಆರೋಗ್ಯದ ಸಮಸ್ಯೆ ತಾಂಡವಾಡುತ್ತಿದೆ. ಇಲ್ಲಿನ ಎಂಟು ತಿಂಗಳ ಮಕ್ಕಳಿಂದ 15 ವರ್ಷ ಮಕ್ಕಳವರೆಗೆ ವಾಂತಿ ಭೇದಿ ಸಮಸ್ಯೆ ಕಾಡುತ್ತಿದೆ ಎಂದು ಸ್ಥಳೀಯರು ದೂರಿದರು.

ಕಳೆದ 10 ದಿನಗಳಿಂದ ನಮ್ಮ ಸಮಸ್ಯೆ ಕೇಳಲು ಯಾರು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸದೆ ನಗರಸಭೆಯ ನೀರಿನ ಸಂಪರ್ಕ ಹಾಗೂ ಪೂರೈಕೆಯ ಹಣವನ್ನು ಕೂಡ ಪಾವತಿ ಮಾಡುವುದಿಲ್ಲ ಎಂದು ನಾವು ಎಚ್ಚರಿಕೆ ಕೊಟ್ಟಿದ್ದೇವೆ. ಈ ಚರಂಡಿ ಕಾಮಗಾರಿಗೆ ಇಲ್ಲಿ ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಕೂಡ ಹಾಳು ಮಾಡಿ ಬಿಟ್ಟಿದ್ದಾರೆ. ಮುಂದಿನ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸವಿತಾ ಆರೋಪಿಸಿದರು.

ಮನೆ ಗೇಟುಗಳಲ್ಲಿ ಬಹಿಷ್ಕಾರದ ಬ್ಯಾನರ್!

ಲೇಔಟ್‌ನ ಸುಮಾರು 12 ಮನೆಗಳ ಗೇಟುಗಳಲ್ಲಿ ಮತದಾನ ಬಹಿಷ್ಕರಿಸುವ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

‘ಕಳಪೆ ಚರಂಡಿ ವ್ಯವಸ್ಥೆಯಿಂದಾಗಿ ವೆಂಕಟರಮಣ ಲೇಔಟ್‌ನ ಚರಂಡಿಯ ನೀರು ಪ್ರತಿ ಮನೆಯ ಬಾವಿಯ ನೀರಿಗೆ ಸೇರಿಕೊಂಡಿದೆ. ಇದರಿಂದ ಪ್ರತಿ ಮನೆಯಲ್ಲಿಯ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಇದನ್ನು ಸರಿಪಡಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗುವುದು’ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

‘ನಮ್ಮ ಸಮಸ್ಯೆ ಪರಿಹರಿಸದಿದ್ದರೆ ನಾವು ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರಿಸಲು ನಿರ್ಧರಿಸಿದ್ದೇವೆ. ಇಲ್ಲಿ 50-60 ಮತದಾರರು ಇದ್ದಾರೆ. ನಾವು ಯಾರು ಮತದಾನ ಮಾಡಲು ಹೋಗುವುದಿಲ್ಲ. ಮತದಾನನ ನಮ್ಮ ಹಕ್ಕು. ಅದನ್ನು ಕಿತ್ತುಕೊಂಡು ಮಾಡದೆ ಹಾಗೆ ಮಾಡಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಕಳೆದ 10 ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಕೊಡುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇಲ್ಲಿ ನಾವು ಇರಬೇಕೆ ಬೇಡವೇ ಎಂಬ ಪರಿಸ್ಥಿತಿಯಲ್ಲಿದ್ದೇವೆ. ಮುಂದೆ ಇಲ್ಲಿ ನಮಗೆ ಬದುಕಲು ಕಷ್ಟವಾಗುತ್ತದೆ. ಈ ಚರಂಡಿ ವ್ಯವಸ್ಥೆ ಇಲ್ಲಿರುವ ಒಂದೇ ಒಂದು ಮನೆಗೆ ಸಂಬಂಧಿಸಿಲ್ಲ. ಆದರೂ ಈ ರಸ್ತೆಯಲ್ಲಿಯೇ ಇದು ಸಾಗಿ ಹೋಗಿದೆ. ಇಲ್ಲಿರುವುದು ಗದ್ದೆ ಪ್ರದೇಶ ಮತ್ತು ಜನ ವಸತಿ ಪ್ರದೇಶ. ಮೊದಲು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ ಈ ಸಮಸ್ಯೆಯನ್ನು ಬೇಸಿಗೆಯಲ್ಲೂ ಬರುವಂತೆ ಮಾಡಿದ್ದಾರೆʼ.
-ಕಿಶೋರ್, ಸ್ಥಳೀಯರು

Similar News