ಹೌರಾದಲ್ಲಿ ನಡೆದ ರಾಮನವಮಿ ಹಿಂಸಾಚಾರ ಪೂರ್ವ ಯೋಜಿತವೆಂದು ಕಾಣುತ್ತದೆ: ನ್ಯಾಯಾಲಯ

Update: 2023-04-11 17:53 GMT

ಕೋಲ್ಕತಾ, ಎ. 11: ಹೌರಾದಲ್ಲಿ ರಾಮನವಮಿ ಹಬ್ಬದ ಸಂದರ್ಭ ನಡೆದ ಹಿಂಸಾಚಾರ ಪೂರ್ವ ಯೋಜಿತ ಎಂದು ಕಾಣುತ್ತದೆ ಹಾಗೂ ಪಶ್ಚಿಮಬಂಗಾಳ ಪೊಲೀಸರು ಬೇಹುಗಾರಿಕೆಯಲ್ಲಿ ವಿಫಲರಾಗಿದ್ದಾರೆ ಎಂದು ಕೋಲ್ಕತ್ತಾ ಉಚ್ಚ ನ್ಯಾಯಾಲಯ ಸೋಮವಾರ ಅಭಿಪ್ರಾಯಿಸಿದೆ.

‘‘ಮೇಲ್ಛಾವಣಿಯಿಂದ ಕಲ್ಲುಗಳನ್ನು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, 10ರಿಂದ 15 ನಿಮಿಷಗಳಲ್ಲಿ ಮೇಲ್ಛಾವಣಿ ವರೆಗೆ ಯಾರೊಬ್ಬರೂ ಕಲ್ಲುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದು’’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರು ಹೇಳಿದ್ದಾರೆ. 

ಈ ಹಿಂಸಾಚಾರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಮನವಿಯ ಮೇಲಿನ ತನ್ನ ಆದೇಶವನ್ನು ಕಾಯ್ದಿರಿಸಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಮಾರ್ಚ್ 30ರಂದು ರಾಮನವಮಿ ಮೆರವಣಿಗೆ ಸಂದರ್ಭ ನಡೆದ ಘರ್ಷಣೆಯಲ್ಲಿ ಹೌರಾದ ವಿವಿಧ ಭಾಗಗಳಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ದಾಂಧಲೆ ನಡೆಸಲಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿರುವಂತೆ ಕೆಲವರು ಕಲ್ಲು ತೂರಾಟ ನಡೆಸುತ್ತಿರುವ ಹಾಗೂ ಅಂಗಡಿಗಳಿಗೆ ಹಾನಿ ಉಂಟು ಮಾಡುತ್ತಿರುವುದು ಸಾಮಾಜಿಕ ಮಾಧ್ಯಮದ ವೀಡಿಯೊಗಳಲ್ಲಿ ಕಂಡು ಬಂದಿತ್ತು. 

ಸೋಮವಾರ ವಿಚಾರಣೆ ಸಂದರ್ಭ ಪೊಲೀಸರು ಪೆಲೆಟ್ ಗನ್ ಹಾಗೂ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿ ಗುಂಪನ್ನು ಚದುರಿಸಬೇಕಾಯಿತು. ಇದು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆದಿರುವುದಕ್ಕೆ ಸೂಚನೆ ಎಂದು  ವಿಚಾರಣೆ ಸಂದರ್ಭ ನ್ಯಾಯಾಧೀಶರು ಹೇಳಿದ್ದಾರೆ. 

Similar News