'ಬಾಬ್ರಿ ಮಸೀದಿ ಧ್ವಂಸದಲ್ಲಿ ಶಿವಸೇನೆ ಪಾತ್ರವಿಲ್ಲ' ಎಂಬ ಸಚಿವರ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ: ಬಿಜೆಪಿ
ಮುಂಬೈ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಶಿವಸೇನೆಯ ಪಾತ್ರವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ನೀಡಿರುವ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಚಂದ್ರಶೇಖರ್ ಬವಂಕುಲೆ ಹೇಳಿದ್ದಾರೆ.
"ಬಾಬರಿ ಮಸೀದಿ ಧ್ವಂಸದ ನೇತೃತ್ವವನ್ನು ಹಿಂದುತ್ವ ಸಂಘಟನೆಗಳಾದ ವಿಶ್ವ ಹಿಂದು ಪರಿಷದ್, ಬಜರಂಗದಳ ಮತ್ತು ದುರ್ಗಾ ವಾಹಿನಿ ವಹಿಸಿದ್ದವು. ಶಿವಸೇನೆ (ಆಗ ಬಾಳ್ ಠಾಕ್ರೆ ನೇತೃತ್ವದ) ಈ ಮಸೀದಿ ಧ್ವಂಸದಲ್ಲಿ ಯಾವುದೇ ಪಾತ್ರ ಹೊಂದಿರಲಿಲ್ಲ," ಎಂದು ಪಾಟೀಲ್ ಇತ್ತೀಚೆಗೆ ಹೇಳಿದ್ದರು.
ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿದ ಬವಂಕುಲೆ, ಪಾಟೀಲ್ ಹೇಳಿಕೆಯನ್ನು ಪಕ್ಷ ಬೆಂಬಲಿಸುವುದಿಲ್ಲ ಹಾಗೂ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾದವರೆಲ್ಲರೂ ರಾಮ ಮಂದಿರ ನಿರ್ಮಾಣದ ಒಂದೇ ಕನಸು ಹೊಂದಿದ್ದರು ಎಂದು ಅವರು ಹೇಳಿದರು.
"ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಮತ್ತು ಶಿವಸೈನಿಕರು ಕೂಡ ಮಸೀದಿ ಧ್ವಂಸಗೊಂಡು ಅಯ್ಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಅಂದುಕೊಂಡಿದ್ದರು," ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಪಾಟೀಲ್ ಅವರ ಹೇಳಿಕೆ ಶಿವಸೇನೆಯ (ಉದ್ಧವ್ ಬಣ) ತೀವ್ರ ಟೀಕೆಗೆ ಗುರಿಯಾಗಿತ್ತು. ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ತಮ್ಮ ಸಚಿವ ಪಾಟೀಲ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಬೇಕು ಎಂದು ಉದ್ಧವ್ ಆಗ್ರಹಿಸಿದ್ದರು.
"ರಾಮ ಮಂದಿರವು ಕೋರ್ಟ್ ಆದೇಶದ ಕಾರಣ ನಿರ್ಮಾಣಗೊಳ್ಳುತ್ತಿದೆ ಆದರೆ ಕೆಲವು ಇಲಿಗಳು ತಮ್ಮ ಬಿಲಗಳಿಂದ ಹೊರಬಂದು ಅದಕ್ಕೆ ಶ್ರೇಯ ಪಡೆದುಕೊಳ್ಳಲು ಯತ್ನಿಸುತ್ತಿವೆ," ಎಂದು ಉದ್ಧವ್ ಹೇಳಿದ್ದರು.
ತಮ್ಮ ಹೇಳಿಕೆ ಕುರಿತು ಮಂಗಳವಾರ ಸ್ಪಷ್ಟೀಕರಣ ನೀಡಿದ ಸಚಿವ ಪಾಟೀಲ್, ಅದನ್ನು ತಿರುಚಲಾಗಿದೆ ಎಂದರು. "ನಿರ್ಮಾಣ(ಬಾಬರಿ ಮಸೀದಿ)ವನ್ನು ಕೆಳಕ್ಕೆ ಬೀಳಿಸಿದಾಗ ಈ ಸಂಘಟನೆ, ಆ ಸಂಘಟನೆ ಎಂಬ ಬೇಧಭಾವವಿರಲಿಲ್ಲ. ಎಲ್ಲರೂ ಹಿಂದುಗಳಾಗಿದ್ದರು. ಆದರೆ ಅವರನ್ನು ಯಾವುದೇ ಸಂಘಟನೆಯ ಅಡಿಯಲ್ಲಿ ನಿಲ್ಲಿಸಿದರೆ ಅದು ಬಜರಂಗದಳ ಮತ್ತು ವಿಶ್ವ ಹಿಂದು ಪರಿಷದ್," ಎಂದು ಹೇಳಿದ್ದರು.
ಅದೇ ಸಮಯ ತಾವು ಬಾಳ್ ಠಾಕ್ರೆ ಅವರನ್ನು ಬಹಳಷ್ಟು ಗೌರವಿಸುವುದಾಗಿ, ಅವರು ಹಿಂದೂಗಳ ಹಲವು ಉದ್ದೇಶಗಳಿಗೆ ಹೋರಾಡಿದ್ದರು ಎಂದು ಪಾಟೀಲ್ ಹೇಳಿದರು.