ಮೋದಿ ಕುರಿತ BBC ಸಾಕ್ಷ್ಯಚಿತ್ರ ಕುರಿತ ಟ್ವೀಟ್ ಗಳನ್ನು ತೆಗೆದುಹಾಕಿರುವ ಹಿಂದಿನ ನಿಖರ ಕಾರಣ ತಿಳಿದಿಲ್ಲ: ಮಸ್ಕ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಟೀಕಾತ್ಮಕ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಟ್ವಿಟರ್‌ನಿಂದ ತೆಗೆದುಹಾಕಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್, ನಿಖರವಾಗಿ ಏನಾಯಿತೆಂದು ತಮಗೆ ತಿಳಿದಿಲ್ಲ ಹಾಗೂ ಸಾಮಾಜಿಕ ಜಾಲತಾಣ ವಿಷಯಗಳ ಕುರಿತಂತೆ ಕೆಲ ನಿಯಮಗಳು ಭಾರತದಲ್ಲಿ ʻಸಾಕಷ್ಟು ಕಠಿಣವಾಗಿವೆ,ʼ ಎಂದು ಹೇಳಿದರು.
2002 ರಲ್ಲಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ರಾಜ್ಯದಲ್ಲಿ ನಡೆದ ಗಲಭೆಗಳ ಕುರಿತಾದ ಈ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ನಿರ್ಬಂಧಿಸುವಂತೆ ಸರ್ಕಾರ ಟ್ವಿಟರ್‌ಗೆ ಸೂಚಿಸಿತ್ತಲ್ಲದೆ ಅದರ ಲಿಂಕ್‌ಗಳನ್ನು ಶೇರ್ ಮಾಡುವುದನ್ನೂ ನಿರ್ಬಂಧಿಸಲಾಗಿತ್ತು.
"ಈ ನಿರ್ದಿಷ್ಟ ಸನ್ನಿವೇಶದ ಬಗ್ಗೆ ನನಗೆ ತಿಳಿದಿಲ್ಲ, ಏನಾಯಿತೆಂದು ನಿಖರವಾಗಿ ತಿಳಿದಿಲ್ಲ," ಎಂದು ಟ್ವಿಟರ್ ಸ್ಪೇಸಸ್‌ನಲ್ಲಿ ಬಿಬಿಸಿ ನೇರ ಪ್ರಸಾರದಲ್ಲಿ ಮಸ್ಕ್ ಹೇಳಿದರು.
ಭಾರತ ಸರ್ಕಾರದ ಸೂಚನೆಯಂತೆ ಕೆಲ ವಿಷಯಗಳನ್ನು ತೆಗೆದುಹಾಕಲಾಗಿತ್ತೇ ಎಂಬ ಪ್ರಶ್ನೆಗೆ ಮಸ್ಕ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
"ಸಾಮಾಜಿಕ ಜಾಲತಾಣಗಳಲ್ಲಿ ಏನು ಕಾಣಿಸಬಹುದು ಎಂಬ ಕುರಿತು ಭಾರತದಲ್ಲಿ ನಿಯಮಗಳು ಸಾಕಷ್ಟು ಕಠಿಣವಾಗಿವೆ ಹಾಗೂ ನಾವು ದೇಶದ ಕಾನೂನನ್ನು ಉಲ್ಲಂಘಿಸುವ ಹಾಗಿಲ್ಲ," ಎಂದು ಅವರು ಹೇಳಿದರು.
"ನಮ್ಮ ಜನರು ಜೈಲಿಗೆ ಹೋಗಬೇಕೇ ಅಥವಾ ನಾವು ಕಾನೂನನ್ನು ಪಾಲಿಸಬೇಕೇ ಎಂಬ ಆಯ್ಕೆ ನಮ್ಮ ಮುಂದಿದ್ದಾಗ ನಾವು ಕಾನೂನಿಗೆ ಬದ್ಧರಾಗುತ್ತೇವೆ," ಎಂದು ಮಸ್ಕ್ ಹೇಳಿದರು.