×
Ad

ಭಟಿಂಡ ಸೇನಾ ನೆಲೆಯ ಒಳಗೆ ಗುಂಡು ಹಾರಾಟ: 4 ಸೈನಿಕರು ಸಾವು

‘‘ಭಯೋತ್ಪಾದಕ ದಾಳಿ" ಅಲ್ಲವೆಂದ ಪೊಲೀಸರು

Update: 2023-04-12 22:32 IST

ಚಂಡೀಗಢ, ಎ. 12: ಪಂಜಾಬ್‌ನ ಭಟಿಂಡ ಸೇನಾ ನೆಲೆಯಲ್ಲಿ ಬುಧವಾರ ಮುಂಜಾನೆ ನಡೆದ ಗುಂಡು ಹಾರಾಟದಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಅದೇ ವೇಳೆ, ‘‘ಭಯೋತ್ಪಾದಕ ದಾಳಿ’’ಯ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.

ಇದು ಸೈನಿಕರು ಪರಸ್ಪರ ಗುಂಡು ಹಾರಿಸಿಕೊಂಡ ಘಟನೆಯೆಂಬಂತೆ ಆರಂಭಿಕ ತನಿಖೆಯಲ್ಲಿ ಕಂಡುಬಂದಿದೆ ಎಂದು ಭಟಿಂಡ ಸೀನಿಯರ್ ಪೊಲೀಸ್ ಸೂಪರಿಂಟೆಂಡೆಂಟ್ ಗುಲ್ನೀತ್ ಖುರಾನಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ನಾವು ಸೇನೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ತಂಡವು ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದೆ. ಇದು ಭಯೋತ್ಪಾದಕ ದಾಳಿಯಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಕೆಲವು ಆಂತರಿಕ ವಿಷಯಗಳಿಗೆ ಸಂಬಂಧಿಸಿ ಘಟನೆ ನಡೆದಿದೆ ಎನ್ನುವುದು ಈವರೆಗಿನ ತನಿಖೆಯಲ್ಲಿ ಗೊತ್ತಾಗಿದೆ’’ ಎಂದು ಖರಾನಾ ಹೇಳಿದರು.

ಘಟನೆಯ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುರಿಂದರ್ ಪಾಲ್ ಸಿಂಗ್ ಪಾರ್ಮರ್, ‘‘ಇದು ಭಯೋತ್ಪಾದಕ ದಾಳಿಯಲ್ಲ, ಇದು ಹೊರಗಿನಿಂದ ನಡೆದ ಆಕ್ರಮಣವಲ್ಲ. ಇದು ಸೈನಿಕರೇ ಪರಸ್ಪರರ ವಿರುದ್ಧ ನಡೆಸಿದ ದಾಳಿಯಾಗಿದೆ’’ ಎಂದು ಅವರು ಹೇಳಿದರು.

ಘಟನೆಗೆ ಸಂಬಂಧಿಸಿ, ಭಾರತೀಯ ಸೇನೆಯ ನೈರುತ್ಯ ಕಮಾಂಡ್ ಹೇಳಿಕೆಯೊಂದನ್ನು ಹೊರಡಿಸಿದೆ: ‘‘ದುರದೃಷ್ಟಕರ ಘಟನೆಯಲ್ಲಿ, ಫಿರಂಗಿ ತುಕಡಿಯೊಂದರ ನಾಲ್ವರು ಸೈನಿಕರು ಗುಂಡಿನ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ. ಇತರರಿಗೆ ಗಾಯವಾಗಿರುವ ಬಗ್ಗೆ ಅಥವಾ ಸೊತ್ತುಗಳಿಗೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ’’.

‘‘ಈ ಪ್ರದೇಶವನ್ನು ಮುಚ್ಚಲಾಗಿದೆ ಹಾಗೂ ಪಂಜಾಬ್ ಪೊಲೀಸರೊಂದಿಗೆ ಜಂಟಿ ತನಿಖೆಯನ್ನು ನಡೆಸಲಾಗುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.

‘‘ಗುಂಡು ಹಾರಾಟದಲ್ಲಿ, ಎರಡು ದಿನಗಳ ಹಿಂದೆ ನಾಪತ್ತೆಯಾಯಿತೆನ್ನಲಾದ ಒಂದು ಇನ್ಸಾಸ್ ರೈಫಲ್ ಮತ್ತು 28 ಗುಂಡುಗಳ ಬಳಕೆ ಸಾಧ್ಯತೆ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಭಟಿಂಡ ಸೇನಾ ನೆಲೆಯ ಒಳಗೆ ಬುಧವಾರ ಮುಂಜಾನೆ ಸುಮಾರು 4:35ರ ಹೊತ್ತಿಗೆ ಗುಂಡು ಹಾರಾಟ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯ ಬಳಿಕ, ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಲಾಯಿತು ಹಾಗೂ ಸ್ಥಳವನ್ನು ಸುತ್ತುವರಿದು ಮುಚ್ಚಲಾಯಿತು.

Similar News