×
Ad

ಮ್ಯಾನ್ಮಾರ್ ಸೇನಾಡಳಿತದ ವೈಮಾನಿಕ ದಾಳಿಗೆ ವ್ಯಾಪಕ ಖಂಡನೆ

Update: 2023-04-12 23:08 IST

ಯಾಂಗಾನ್, ಎ.12: ಮ್ಯಾನ್ಮಾರ್ ನ ಗ್ರಾಮವೊಂದರಲ್ಲಿ ಸೇನಾಡಳಿತ ವಿರೋಧಿಸುವ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಮೇಲೆ ಮಂಗಳವಾರ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಗೆ ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ, ಅಮೆರಿಕ ಸಹಿತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮ್ಯಾನ್ಮಾರ್ ನ ಸಗಾಯಿಂಗ್ ವಲಯದಲ್ಲಿ ಸೇನೆ ನಡೆಸಿದ ವಾಯುದಾಳಿಯಲ್ಲಿ ಮಕ್ಕಳ ಸಹಿತ  ಸುಮಾರು 100 ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ. `ಮ್ಯಾನ್ಮಾರ್ನಾದ್ಯಂತ ನಡೆಯುತ್ತಿರುವ ನಿರಂತರ ವೈಮಾನಿಕ ದಾಳಿಗಳು ವಾಯುಯಾನ ಇಂಧನದ ಆಮದನ್ನು ಸ್ಥಗಿತಗೊಳಿಸುವ ತುರ್ತು ಅಗತ್ಯವನ್ನು ಎತ್ತಿತೋರಿಸುತ್ತದೆ. ಮ್ಯಾನ್ಮಾರ್ನ ವಾಯುಪಡೆಯ ಕೈಸೇರುವ ವಾಯುಯಾನ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲು ಎಲ್ಲಾ ದೇಶಗಳು ಮತ್ತು ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು' ಎಂದು ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹಿಸಿದೆ. ಈ ಕೃತ್ಯಕ್ಕೆ ಮ್ಯಾನ್ಮಾರ್ನ  ಮಿಲಿಟರಿಯನ್ನು ಹೊಣೆಯಾಗಿಸಬೇಕು ಮತ್ತು ದೇಶದಲ್ಲಿನ ಪರಿಸ್ಥಿತಿಯನ್ನು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನ ಕ್ರಮಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.

ವೈಮಾನಿಕ ದಾಳಿಯ ಹೊಣೆಗಾರರನ್ನು ನ್ಯಾಯದ ವ್ಯಾಪ್ತಿಗೆ ತರಬೇಕು. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಯಾವತ್ತೂ ಇಂತಹ ಪರಿಸ್ಥಿತಿಗಳಲ್ಲಿ ಸವಾಲಿನ ಕಾರ್ಯವಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡ್ಯುಜರಿಕ್ ಹೇಳಿದ್ದಾರೆ. ಮ್ಯಾನ್ಮಾರ್ ಸರಕಾರದ ಅಡಿಯಲ್ಲಿರುವ ಆಸ್ಪತ್ರೆಗಳಲ್ಲಿ ಸಿಬಂದಿಗಳ ಹಾಗೂ ಔಷಧಿಗಳ ಕೊರತೆಯಿದೆ.

`ಭಯೋತ್ಪಾದಕ ಮಿಲಿಟರಿಯ ಈ ಹೇಯಕೃತ್ಯವು ಮುಗ್ಧ ನಾಗರಿಕರ ವಿರುದ್ಧ ವಿವೇಚನಾರಹಿತ ಬಲಪ್ರಯೋಗಕ್ಕೆ ಮತ್ತೊಂದು ಉದಾಹರಣೆಯಾಗಿದೆ ಮತ್ತು ಯುದ್ಧಾಪರಾಧದ ಪ್ರಕರಣವಾಗಿದೆ' ಎಂದು ವಿಪಕ್ಷ `ನ್ಯಾಷನಲ್ ಯುನಿಟಿ ಗವರ್ನ್ಮೆಂಟ್(ಎನ್ಯುಜಿ)' ಹೇಳಿಕೆ ನೀಡಿದೆ. ತನ್ನನ್ನು ದೇಶದ ಕಾನೂನುಬದ್ಧ ಸರಕಾರ ಎಂದು ಕರೆದುಕೊಳ್ಳುವ ಎನ್ಯುಜಿ ಸೇನಾಡಳಿತವನ್ನು ವಿರೋಧಿಸುತ್ತಿದೆ. ತನ್ನ ಆಡಳಿತಾತ್ಮಕ ವ್ಯವಹಾರಕ್ಕೆ ಸಂಬಂಧಿಸಿದ ಕಚೇರಿಯನ್ನು ಮಂಗಳವಾರ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಸೇರಿದ್ದ ಜನರ ಮೇಲೆ ವೈಮಾನಿಕ ದಾಳಿ ನಡೆದಿತ್ತು.

ಸಗಾಯಿಂಗ್ ವಲಯದ ಕನ್ಬಾಲು ನಗರದ ಬಳಿಕ ಪಝಿಗ್ವಿ ಗ್ರಾಮದಲ್ಲಿ ಸೇನಾಡಳಿತವನ್ನು ವಿರೋಧಿಸುವ ಸಂಘಟನೆಯ ಕಚೇರಿಯ ಉದ್ಘಾಟನಾ  ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ನೃತ್ಯಪ್ರದರ್ಶನ ನೀಡುತ್ತಿದ್ದರು ಹಾಗೂ ಇತರ ನಾಗರೀಕರೂ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಗುರಿಯಾಗಿಸಿ ಹೆಲಿಕಾಪ್ಟರ್ ಮೂಲಕ ಗುಂಡಿನ ದಾಳಿ ನಡೆಸಿರುವುದು ಅತ್ಯಂತ ಬೀಭತ್ಸ, ಘೋರ ಕೃತ್ಯವಾಗಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.

ಮ್ಯಾನ್ಮಾರ್ನ ಮಿಲಿಟರಿಯು ತನ್ನ ಕಾನೂನು ಬಾಧ್ಯತೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಮತ್ತು ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ಮರೆತಿದೆ. ಅಂತರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ ನಿಯಮವನ್ನು ನಿರ್ಲಕ್ಷಿಸುತ್ತಿದೆ ಎಂದು ವೋಕರ್ ಟರ್ಕ್ ಆರೋಪಿಸಿದ್ದಾರೆ. 2021ರ ಫೆಬ್ರವರಿ 1ರಿಂದ ಅತ್ಯಂತ ವ್ಯಾಪಕವಾದ ಮಾನವ ಹಕ್ಕು ಉಲ್ಲಂಘನೆ ಮತ್ತು ದುರುಪಯೋಗಗಳಿಗೆ ಮಿಲಿಟರಿ ಮತ್ತದರ ಅಂಗಸಂಸ್ಥೆ ಸೇನಾಪಡೆ ಕಾರಣವೆಂದು ನಂಬಲು ಸಮಂಜಸವಾದ ಆಧಾರಗಳಿವೆ. ಇದರಲ್ಲಿ ಕೆಲವು ಉಲ್ಲಂಘನೆಗಳು ಮನುಕುಲದ ವಿರುದ್ಧದ ಅಪರಾಧ ಮತ್ತು ಯುದ್ಧಾಪರಾಧವಾಗಲಿದೆ ಎಂದವರು ಎಚ್ಚರಿಸಿದ್ದಾರೆ.

ಸರಕಾರ ವಿರೋಧಿ ಶಕ್ತಿಗಳ ಕೈವಾಡ ಎಂದ ಸೇನಾಡಳಿತ

ಮಂಗಳವಾರ ಕಾರ್ಯಕ್ರಮವೊಂದರ ಮೇಲೆ ವೈಮಾನಿಕ ದಾಳಿ ನಡೆದಿರುವುದನ್ನು ಸೇನಾ ಸರಕಾರದ ವಕ್ತಾರ ಮೇ|ಜ| ಝಾವ್ ಮಿನ್ ಟುನ್ ಒಪ್ಪಿಕೊಂಡಿದ್ದಾರೆ. ಆದರೆ ಇದು ಸರಕಾರ ವಿರೋಧಿ ಶಕ್ತಿಗಳ ಕೈವಾಡ ಎಂದವರು ಪ್ರತಿಪಾದಿಸಿದ್ದಾರೆ.

ನ್ಯಾಷನಲ್ ಯುನಿಟಿ ಗವರ್ನ್ಮೆಂಟ್ನ ಸಶಸ್ತ್ರ ವಿಭಾಗ `ಪೀಪಲ್ಸ್ ಡಿಫೆನ್ಸ್ ಫೋರ್ಸಸ್' ತನ್ನನ್ನು ಬೆಂಬಲಿಸಬೇಕೆಂದು ಜನರನ್ನು ಬೆದರಿಸಲು ಈ ಕೃತ್ಯ ಎಸಗಿದೆ. ಆದರೆ ಸೇನಾಡಳಿತ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತಿದೆ ಎಂದವರು ಹೇಳಿದ್ದಾರೆ.

Similar News