ಪ್ರಜಾತಂತ್ರದಲ್ಲಿ ಚುನಾವಣೆಯೆಂಬ ಪ್ರಹಸನ

Update: 2023-04-13 11:56 GMT

ಯಾವುದೇ ರಾಜಕೀಯ ಪಕ್ಷವಿರಲಿ, ಮತನೀಡಿದ ಮುಠ್ಠಾಳರು ಚಾತಕ ಪಕ್ಷಿಗಳು ಮಳೆ ನೀರ ಹನಿಗೆ ಕಾದು ಕತ್ತು ಚಾಚಿ ಬಾಯಿ ತೆರೆದು ಆಗಸವನ್ನು ನಿಟ್ಟಿಸಿ ನಿಂತಂತೆ ಬರಲಿರುವ, ಬರುತ್ತದೆಂದು ನಿರೀಕ್ಷಿಸಿದ, ‘ಒಳ್ಳೆಯ ದಿನ’ಕ್ಕಾಗಿ ಕಾಯುತ್ತಿರುತ್ತಾರೆ. ತಮ್ಮೆದುರಿರುವ ಈ ನಿರೀಕ್ಷೆ, ಅಪೇಕ್ಷೆ ಕುದುರೆಯ ಮುಖದೆದುರು ಅಂತರವಿಟ್ಟು ಕಟ್ಟಿ ಅದನ್ನು ಮುಂದೆ ಹೋಗುವಂತೆ ಪ್ರೇರೇಪಿಸುವ ಹುಲ್ಲಿನ ಕಂತೆಯೆಂದು ಗೊತ್ತಾಗುವ ಹೊತ್ತಿಗೆ ಪದ ಕುಸಿಯುತ್ತದೆ; ನೆಲವಿದೆಯಲ್ಲ, ಅಲ್ಲಿ ವಿರಮಿಸುವುದು ಅನಿವಾರ್ಯವಾಗುತ್ತದೆ. ಉಪನಿಷತ್ತಿನ ಉಷಸ್ಸಿನ ಕಥೆಯಂತೆ ತನ್ನ ಪರಿಪಾಟಲನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿ ನಮ್ಮಿಂದಂತೂ ಆಗಿಲ್ಲ, ನೀವಾದರೂ ಮುಂದುವರಿಸಿ ಎಂಬ ಹತಾಶೆಯೊಂದಿಗೆ ನಂದುವ ದೊಂದಿಯನ್ನು ಹಸ್ತಾಂತರಿಸುತ್ತಾರೆ. ಬಿಸಿಲುಗುದುರೆಯೆಂಬುದು ಎಷ್ಟು ನಿಚ್ಚಳವಾಗಿದೆಯಲ್ಲ!

ಕರ್ನಾಟಕದಲ್ಲಿ ಚುನಾವಣೆಯೆಂಬ ಪ್ರಜಾತಂತ್ರದ ಪ್ರಹಸನ ನಡೆಯುತ್ತಿದೆ. ಕಥಾಸರಿತ್ಸಾಗರದಂತೆ ಇಲ್ಲಿ ಕಥೆ, ಉಪಕಥೆಗಳು ಹೇರಳವಾಗಿವೆ. ಈ ಅಂಕಣ ಸಿದ್ಧವಾಗುವ ಹೊತ್ತಿಗೆ ಅನೇಕ ಡೊಂಕುಬಾಲದ ‘ನಾಯಕರು’ ಪಿತೃಪಕ್ಷ, ಮಾತೃಪಕ್ಷ ಎಂದುಕೊಂಡು ಅಲ್ಲಿ ಇಲ್ಲಿ ಸುತ್ತಿ ಸುಳಿವ ಚಿನ್ನದ ನಳಿಕೆಯನ್ನು ಕಟ್ಟಿಕೊಂಡ ಆತ್ಮಗಳಂತೆ ಪ್ರತ್ಯಕ್ಷರಾಗುತ್ತಿದ್ದಾರೆ; ಅಂತರ್ಧಾನರಾಗುತ್ತಿದ್ದಾರೆ. ಇಲ್ಲೆಲ್ಲೋ ಭೂಗತರಾಗಿ ಇನ್ನೆಲ್ಲೋ ಮೇಲೇಳುತ್ತಿದ್ದಾರೆ. ಅಶ್ವಸೇನ ಸಿದ್ಧಾಂತವು ರಾಜಕಾರಣದ ಮುನ್ನೆಲೆಗೆ ಬಂದಿದೆ. ವೈರಿಯ ವೈರಿ ಮಿತ್ರನೆಂಬ ಸಾಪೇಕ್ಷ ಸಿದ್ಧಾಂತದಡಿ ಎಲ್ಲರೂ ತಮಗಾಗದವರ ಬತ್ತಳಿಕೆಯನ್ನು ಸೇರುತ್ತಿದ್ದಾರೆ. ಯಾರು ಅರ್ಜುನ, ಯಾರು ಕರ್ಣ ಎಂಬುದು ಮಾತ್ರ ಮರೆತಿದೆ. ಇನ್ನೊಂದೆಡೆ ಪ್ರಜೆಗಳು ದೇವತೆಗಳಂತೆ ತಮಗಿಷ್ಟವಾದ ಪಕ್ಷವನ್ನು, ನಾಯಕರನ್ನು ಬೆಂಬಲಿಸಲು, ಸಮರ್ಥವಾದ ನೆಪಗಳನ್ನು ಹುಡುಕುತ್ತಿದ್ದಾರೆ. ಏಳು-ಹನ್ನೊಂದು ಅಕ್ಷೋಹಿಣಿ ಸೇನೆಗಳ ನಡುವಿನ ಮಹಾಭಾರತ ಕದನ ಇದಲ್ಲ. ಕಪಿ-ರಾಕ್ಷಸ ಸೇನೆಗಳ ರಾಮಾಯಣವೂ ಇದಲ್ಲ. ಎಲ್ಲವೂ ಸೇರಿದ ಅಧರ್ಮಕ್ಷೇತ್ರದ ಕುರುಕ್ಷೇತ್ರದ ಸಮರಾಂಗಣ. ಇವೆಲ್ಲವುಗಳ ನಡುವೆ ಅಲಿಪ್ತವಾಗಿ, ನಿರ್ಲಿಪ್ತವಾಗಿ, ನೋಡುವ, ಆಲನಹಳ್ಳಿಯ ಕಾಡಿನ ಕಿಟ್ಟಿ ಕಣ್ಣುಗಳಿದ್ದರೆ ಮುಗ್ಧ ಪ್ರಜೆಗಳ, ಕಾಲದ, ದೇಶದ, ಅದೃಷ್ಟ. 

ಐಪಿಎಲ್ ಆಟಗಾರರು ಸದಾ ನಿಷ್ಠೆಯನ್ನು ಬೇರೆ ಬೇರೆ ಕಾರಣಗಳಿಂದ ತಂಡದಿಂದ ತಂಡಕ್ಕೆ ಬದಲಾಯಿಸುತ್ತಾರೆ. ಹೀಗಾಗಿ ಐಪಿಎಲ್ ಎಂದರೆ ಅದೊಂದು ಧನಪ್ರದರ್ಶನ ಪಂದ್ಯದಂತಾಗಿದೆ. ರಾಜಕೀಯವೂ ಹೆಚ್ಚು ಕಡಿಮೆ ಹೀಗೇ ಇದೆ ಎಂದರೆ ಕ್ರಿಕೆಟನ್ನು ಅವಮಾನಿಸಿದಂತಾದೀತು. ಏಕೆಂದರೆ ಕ್ರಿಕೆಟಿನಲ್ಲಿ ರಾಜಕೀಯಕ್ಕಿಂತ ಹೆಚ್ಚು ಪಾತಿವ್ರತ್ಯವಿದೆ. 

ರಾಜಕಾರಣಿಗಳು ಅದೆಷ್ಟೇ ಒಳ್ಳೆಯವರಾಗಿರಲಿ (ಒಳ್ಳೆಯವರು ರಾಜಕಾರಣಿಗಳಾಗುವುದು, ಆದರೂ ನೇರ ಚುನಾವಣೆಯ ಮೂಲಕ ಆಯ್ಕೆಯಾಗುವುದು, ಆಯ್ಕೆಯಾದರೂ ರಾಜಕಾರಣಿಗಳಾಗಿ ಉಳಿಯುವುದು ಸಾಧ್ಯವೇ ಎಂಬ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯಬೇಕು!) ಬುದ್ಧಿವಂತ ಸಜ್ಜನರನ್ನು ನಂಬಿ ಯಾರೂ ರಾಜಕಾರಣ ನಡೆಸುವುದಿಲ್ಲ. ಅವರು ಸಮಾಜದಲ್ಲಿರುವ ಮೂರ್ಖರನ್ನು, ಬುದ್ಧಿವಂತರ ಪೈಕಿ ಧೂರ್ತರನ್ನು ಮತ್ತು ಇತರರ ನಡುವೆ ದಡ್ಡರನ್ನು ನಂಬಿಯೇ ಆಯ್ಕೆಯಾಗುತ್ತಾರೆ; ಅಧಿಕಾರಕ್ಕೆ ಬರುತ್ತಾರೆ; ತಮ್ಮನ್ನು ಬೆಂಬಲಿಸಿದ, ಆಯ್ಕೆ ಮಾಡಿದ ಮಂದಿಯೂ ಸೇರಿದಂತೆ ಎಲ್ಲರನ್ನೂ ಶೋಷಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ವೆಚ್ಚಕ್ಕೆ ಬೇಕಾದಷ್ಟು ಮಾತ್ರವಲ್ಲ, ತಮ್ಮ ವಂಶಪಾರಂಪರ್ಯ ಜೀವಿತಾವಧಿಗೆ ಬೇಕಾದಷ್ಟನ್ನು ಸಂಪಾದಿಸುತ್ತಾರೆ; ಮುಂದಿನ ಚುನಾವಣೆಯಲ್ಲಿ ಮರುಆಯ್ಕೆಯ ಅವಕಾಶವಿಲ್ಲವೆಂದು ಗೊತ್ತಾದರೆ ಚುನಾವಣಾ ವೆಚ್ಚಕ್ಕೆ ಮೀಸಲಾಗಿಟ್ಟದ್ದನ್ನೂ ತಮ್ಮ ವೈಯಕ್ತಿಕ ಇಲ್ಲವೇ ಕುಟುಂಬನಿಧಿಗೆ ವರ್ಗಾಯಿಸುತ್ತಾರೆ. ಯಾವುದೇ ರಾಜಕೀಯ ಪಕ್ಷವಿರಲಿ, ಮತನೀಡಿದ ಮುಠ್ಠಾಳರು ಚಾತಕ ಪಕ್ಷಿಗಳು ಮಳೆ ನೀರ ಹನಿಗೆ ಕಾದು ಕತ್ತು ಚಾಚಿ ಬಾಯಿ ತೆರೆದು ಆಗಸವನ್ನು ನಿಟ್ಟಿಸಿ ನಿಂತಂತೆ ಬರಲಿರುವ, ಬರುತ್ತದೆಂದು ನಿರೀಕ್ಷಿಸಿದ, ‘ಒಳ್ಳೆಯ ದಿನ’ಕ್ಕಾಗಿ ಕಾಯುತ್ತಿರುತ್ತಾರೆ. ತಮ್ಮೆದುರಿರುವ ಈ ನಿರೀಕ್ಷೆ, ಅಪೇಕ್ಷೆ ಕುದುರೆಯ ಮುಖದೆದುರು ಅಂತರವಿಟ್ಟು ಕಟ್ಟಿ ಅದನ್ನು ಮುಂದೆ ಹೋಗುವಂತೆ ಪ್ರೇರೇಪಿಸುವ ಹುಲ್ಲಿನ ಕಂತೆಯೆಂದು ಗೊತ್ತಾಗುವ ಹೊತ್ತಿಗೆ ಪದ ಕುಸಿಯುತ್ತದೆ; ನೆಲವಿದೆಯಲ್ಲ, ಅಲ್ಲಿ ವಿರಮಿಸುವುದು ಅನಿವಾರ್ಯವಾಗುತ್ತದೆ. ಉಪನಿಷತ್ತಿನ ಉಷಸ್ಸಿನ ಕಥೆಯಂತೆ ತನ್ನ ಪರಿಪಾಟಲನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿ ನಮ್ಮಿಂದಂತೂ ಆಗಿಲ್ಲ, ನೀವಾದರೂ ಮುಂದುವರಿಸಿ ಎಂಬ ಹತಾಶೆಯೊಂದಿಗೆ ನಂದುವ ದೊಂದಿಯನ್ನು ಹಸ್ತಾಂತರಿಸುತ್ತಾರೆ. ಬಿಸಿಲುಗುದುರೆಯೆಂಬುದು ಎಷ್ಟು ನಿಚ್ಚಳವಾಗಿದೆಯಲ್ಲ!

ಕಳೆದ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಗಳಿಸದೆಯೇ ಪ್ರತಿಪಕ್ಷಗಳ ಜನಪ್ರತಿನಿಧಿಗಳಿಗೆ ಗಾಳಹಾಕಿ ಅವರನ್ನು ಎಳೆದೋ ಸೆಳೆದೋ ಬಹುಮತ ಪಡೆಯಿತು. ಈ ಗಾಳಕ್ಕೆ ಸಿಕ್ಕಿಸಿದ ಎರೆಹುಳದ ಮೌಲ್ಯ ಗಾಳಹಾಕಿದವರಿಗೂ ಗಾಳಕ್ಕೆ ಬಾಯೊಡ್ಡಿದವರಿಗೂ ಮಾತ್ರ ಗೊತ್ತು. ಅಲ್ಲೂ ಒಂದು ತರ್ಕವಿದೆ. ಹೀಗೆ ಪಕ್ಷ ಬದಲಾಯಿಸಿದವರು ಮತ್ತೆ ಸ್ಪರ್ಧಿಸಿ ಅಗ್ನಿದಿವ್ಯವನ್ನು ಮತ್ತು ಮತದಾರಕುರಿಗಳ ಮೂರ್ಖತನವನ್ನು ಬಯಲಿಗೆಳೆದಿದ್ದಾರೆ. 

ಚುನಾವಣೆಗಳಲ್ಲಿ ಜಯಿಸಿದ ಪಕ್ಷವೊಂದು ಕೆಲವೇ ವರ್ಷಗಳಲ್ಲಿ ತನಗೆ ತಾನೇ ಶತ್ರುವಾದದ್ದಕ್ಕೆ, ಭಾರವಾದದ್ದಕ್ಕೆ ಬಿಜೆಪಿಗಿಂತ ಒಳ್ಳೆಯ ಉದಾಹರಣೆ ಸಿಕ್ಕದು. ಮುಂದೆ ಗೆಲ್ಲುತ್ತೇವೋ ಇಲ್ಲವೋ ಎಂಬ ಭಯ, ಆತಂಕದಿಂದ ಎಂಬಂತೆ ಅದರ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದೇ ತೊಡಗಿದ್ದು. ಕಾಂಗ್ರೆಸ್‌ನಂತಹ ಕಾರ್ಯಕರ್ತರಹಿತ ಪಕ್ಷದತ್ತ ಜನರು ಮುಖಮಾಡಿದ್ದರೆ ಭಾಜಪದ ಪ್ರಯತ್ನ, ಸಾಧನೆ, ಅಸಾಮಾನ್ಯವಾದ್ದಿರಬೇಕು. ಆತ್ಮನಿರ್ಭರತೆಯ ನೆಪದಲ್ಲಿ ಅಸ್ಮಿತೆಯೆಂಬುದನ್ನೇ ಮರೆತಂತಿರುವ ರಾಜ್ಯದ ಭಾಜಪ ನಾಯಕರು ಜನಪ್ರತಿನಿಧಿಗಳಾಗಿ ರಾಜ್ಯದ ಆಡಳಿತದಲ್ಲಿ ಭಾಗವಹಿಸುವುದನ್ನು ಮರೆತು ಒಕ್ಕೂಟ ಸರಕಾರದ ಗುಲಾಮರಂತೆ ಶ್ರುತಿಪೆಟ್ಟಿಗೆ ಹಿಡಿದು ಕುಣಿದದ್ದರ  ಪರಿಣಾಮವಾಗಿ ರಾಜ್ಯದಲ್ಲಿ ಅನಾಥಪ್ರಜ್ಞೆ ತಲೆದೋರಿದೆ ಹಾಗೂ ಹೀಗೂ ಚುನಾವಣೆ ಎದುರಾಗಿದೆ; ನಿಜವಾದ ಸವಾಲು ಈಗ.

ಮೋದಿ ಸರಕಾರ ನಿಜವಾಗಿಯೂ ಸಾಧನೆಯ ಮೆಟ್ಟಲೇರಿದ್ದರೆ ಮೋದಿ ಮತ್ತು ಶಾ ಕರ್ನಾಟಕಕ್ಕೆ ಪದೇಪದೇ ಬರಬೇಕಾದ ಅಗತ್ಯವಿರಲಿಲ್ಲ. ಈ ಹಿಂದೆ ಬಾರದ ಅಭಾವವನ್ನು ಬಡ್ಡಿಸಹಿತ ತೀರಿಸುವಂತೆ ಈಗ ಈ ಅಧಿಕಾರದ್ವಯರು ಕರ್ನಾಟಕವೇ ಭಾರತ ಜನನಿಯ ಏಕೈಕ ತನುಜಾತೆಯೆಂಬಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದೆ ಇವರನ್ನು ಬರಮಾಡಿಕೊಳ್ಳುವುದೆಂದರೆ ಸುರಪನೈರಾವತವನ್ನು ಭೂಮಿಗಿಳಿಸಿದಷ್ಟು ಕಷ್ಟವಿತ್ತು. ಈಗ ಅವರೇ ಜಾರಿ ಬೀಳುತ್ತಿದ್ದಾರೆ. ಈಗ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವುದೋ ಅಥವಾ ಕಾವಲಿಯಿಂದ ಒಲೆಗೋ ಎಂಬುದನ್ನು ನಿರೀಕ್ಷಿಸೋಣ. 

ಇದರ ಹಿಂದೆ ಇನ್ನೂ ಕುತೂಹಲಕಾರಿ ವಿಚಾರವೆಂದರೆ ಕರ್ನಾಟಕದಲ್ಲಿ ಪಕ್ಷವನ್ನು ಎತ್ತಿಹಿಡಿದು ಮೆರವಣಿಗೆ ಮಾಡಬಲ್ಲ ಯಾವುದೇ ನಾಯಕರಿಲ್ಲದಿರುವುದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿದ್ದರು. ವಯಸ್ಸಿನ ನೆಪದಲ್ಲಿ ಅವರನ್ನು ಪದಭ್ರಷ್ಟರನ್ನಾಗಿ ಮಾಡಲಾಯಿತು. ಆದರೆ ಚುನಾವಣೆ ಹತ್ತಿರವಾದಂತೆ ಅವರನ್ನು ಜನನಾಯಕ ಎಂಬುದಕ್ಕಿಂತ ಒಂದು ಕೋಮಿನ ನಾಯಕರಂತೆ ಪರಿಗಣಿಸಿ ತುಳುನಾಡಿನಲ್ಲಿ ಪ್ರಚಲಿತವಿರುವ ‘ಮೀತು ಉಣ್ಪುನ ಅಣ್ಣೆ’ಯಾಗಿಸಿ ಮೊದಲ ಸಾಲಿನಲ್ಲಿ ನಿಲ್ಲಿಸಲಾಯಿತು. ಅದು ಭೀಷ್ಮಸೇನಾಧಿಪತ್ಯವಾಗಿರಲಿಲ್ಲ. ಆದರೆ ಅವರಿಗೆ ತನ್ನ ಯಥಾಯೋಗ್ಯ ಸ್ಥಾನ ಯಾವುದು ಮತ್ತು ತನಗಿತ್ತ ಮನ್ನಣೆಯು ಅರ್ಥಹೀನ ಗೌರವವೆಂದು ಅರ್ಥವಾಗಿರಬೇಕು. ಅವರು ಸುಮ್ಮನಾಗುತ್ತಿದ್ದಾರೆ. ಈಗ ತನ್ನೊಬ್ಬ ಮಗನಿಗೆ ಟಿಕೆಟ್ ಸಿಕ್ಕಿದೆ; ಅಲ್ಲಿಗೆ ಬದುಕು ಸಾರ್ಥಕವೆಂಬಂತೆ ನಡೆದುಕೊಳ್ಳುವುದು ಅನಿವಾರ್ಯ. ಜಗದೀಶ ಶೆಟ್ಟರ್ ಟಿಕೆಟ್ ಪಡೆಯದೆ ಬಂಡಾಯದ ಬಾವುಟ ಹಾರಿಸಲು ಹೊರಟಂತಿದೆ. ಇದು ಉತ್ತರಕುಮಾರನ ಪೌರುಷವೇ ಎಂಬುದನ್ನು ಕಾದು ನೋಡಬೇಕು. ಮಾಜಿ ಮುಖ್ಯಮಂತ್ರಿಗೆ ಎಲ್ಲಾದರೂ ರಾಜ್ಯಪಾಲ ಹುದ್ದೆ ಸಿಗಬಹುದೆಂಬುದೇ ಅವರ ಮನ್ನಣೆಯ ದಾಹವನ್ನು ತಣಿಸುವ ಪಾನ. ಹೈಕಮಾಂಡನ್ನು ಸುಪ್ರೀತಗೊಳಿಸಬಲ್ಲ ಏಕೈಕ ಮಾಧ್ಯಮವೆಂದರೆ ಕೊಳಕು ನಾಲಗೆಯೆಂದು ಸಾಬೀತು ಪಡಿಸಿದ ಈಶ್ವರಪ್ಪನೆಂಬ ರಾಜಕಾರಣಿಯನ್ನು ಕಾನೂನು, ಪ್ರಜೆಗಳು, ಮೌನವಾಗಿರಿಸಬೇಕಿತ್ತು. ಅದಾಗಲಿಲ್ಲ. ಆದರೆ ಮಿತಿಮೀರಿ ಬೆಳೆದ ನಾಲಗೆಯನ್ನು ಅವರದೇ ಹೈಕಮಾಂಡು ಕತ್ತರಿಸಿದೆ. ಭಸ್ಮಾಸುರನ ನಾಶಕ್ಕೆ ಶಿವ ಸಾಲದು; ನರ್ತಿಸುವ ಮದೋರು ಭಾಗಂನ ಮೋಹಮೋಹಿನಿಯೇ ಬೇಕು. ಸುಳ್ಯದ ಅಂಗಾರರೆಂಬ ಬಂಗಾರರನ್ನು ೬ ಬಾರಿ ಶಾಸಕ ಸ್ಥಾನವೆಂಬ ಅಡಿಕೆ ಮರಕ್ಕೆ ಹತ್ತಿಸಿ ತುತ್ತತುದಿಯಲ್ಲಿ ಮಂತ್ರಿಪದವಿಯೆಂಬ ಅಡಿಕೆಗೊಂಚಲನ್ನು ಕೀಳಿಸಿ ಈಗ ಒಮ್ಮೆಲೇ ಬೀಳಿಸಿದಾಗ ‘ಏರುವವನು ತಾನಿಳಿಯಲೇಬೇಕೆಂಬ’ ತತ್ವಕ್ಕೆ ಒಂದು ಚಿಕ್ಕ ಉದಾಹರಣೆ ಸಿಕ್ಕಿದೆ. 

ಈ ಕಾಯಿಲೆ ಎಲ್ಲ ಪಕ್ಷಗಳಿಗಿದ್ದರೂ ಆಡಳಿತದ ಪಕ್ಷವೆಂಬ ಕಾರಣಕ್ಕೆ ಭಾಜಪವನ್ನು ಆದ್ಯತೆಯ ಮೇರೆಗೆ ಮತ್ತು ಆಪರೇಷನ್‌ನ ಅಗತ್ಯದ ಈ ಕಾಯಿಲೆಯ ಮುಖ್ಯ ಪಾಲುದಾರವೆಂಬ ಕಾರಣಕ್ಕೆ ಮೊದಲು ಪ್ರಸ್ತಾವಿಸಲಾಗಿದೆ. ಹಾಗೆಂದು ಇದು ಏಕವ್ಯಕ್ತಿ ಪ್ರದರ್ಶನವಲ್ಲ. ಎಲ್ಲ ಪಕ್ಷಗಳೂ ಯಥಾನುಶಕ್ತಿ ಈ ಪ್ರಕರಣಗಳನ್ನು ಪೋಷಿಸುತ್ತವೆ.

ವಿನಾಕಾರಣ (ರಾಜಕೀಯದಲ್ಲಿ ಅಂತಹ ಪದವೇ ಇಲ್ಲ! ಕಾರಣಗಳನ್ನು ಸೃಷ್ಟಿಬಹುದು!) ತಮ್ಮ ಪಕ್ಷವನ್ನು ತ್ಯಜಿಸಿ ಬೇಷರತ್ ಇನ್ನೊಂದು ಪಕ್ಷವನ್ನು ಸೇರಿ ಕಣ್ಣು ಮಿಟುಕಿಸುವ ಮೊದಲೇ ಅಲ್ಲಿಂದ ಕಾಲ್ಕೀಳುವ ಹಿರಿಯ ನಾಯಕರದೆಷ್ಟಿಲ್ಲ! ಟಿಕೆಟ್‌ಗಾಗಿ ಯಾವುದೊಂದು ಪಕ್ಷ ಸೇರುವ ರಾಜಕಾರಣಿಗೂ (ಈ ಪದವನ್ನು ಒಂದು ನಿರ್ದಿಷ್ಟ ಗುರುತಿಗಾಗಿ ನಿಶಾನಿಯಂತೆ ಪರಿಗಣಿಸಲಾಗಿದೆ. ರಾಜಕಾರಣಿಯೆಂಬುದು ಬಹಳ ಮಹತ್ವದ ಪದ!) ವೀಸಾ ಸಿಕ್ಕಿ ವಿದೇಶದಲ್ಲಿ ನೆಲೆನಿಲ್ಲುವ ಉದ್ದೇಶದಿಂದ ವಿದೇಶವಾಸಿಯನ್ನೋ, ವಿದೇಶಿಯನ್ನೋ ಮದುವೆಯಾದಂತೆ ಇದು. ಭಾರತದಲ್ಲಿ ಇಷ್ಟೇ ಅಲ್ಲ, ಯಾರನ್ನು ಬೇಕಾದರೂ ಅಪ್ಪ-ಅಮ್ಮ ಮಾಡಿಕೊಳ್ಳಬಲ್ಲ ಪ್ರಜ್ಞೆಯಿದೆ. ಕ್ಯೂ ಎಂಬುದೇ ಇಲ್ಲ, ಇದ್ದರೂ ಅದನ್ನು ಉಲ್ಲಂಘಿಸುವವರೇ ಹೆಚ್ಚು ಎಂದು ಪಾಶ್ಚಾತ್ಯರೊಬ್ಬರು ಹೇಳಿದಾಗ ಆತ್ಮನಿರ್ಭರರಿಗೆ ದೇಶೀ ಸಿಟ್ಟು ಬರುವುದು ಸಹಜ. ಆದರೆ ರಾಜಕಾರಣದ ಹಿರಿತನ, ಕಿರಿತನ, ಆಯ್ಕೆ, ಪುರಸ್ಕಾರ-ತಿರಸ್ಕಾರಗಳನ್ನು ಕಂಡಾಗ ಹಾಗೆ ಹೇಳಿದ ಮಹಾನುಭಾವನನ್ನು ಹುಡುಕಿ ಆದರಿಸಿ ಪ್ರಶಸ್ತಿ ನೀಡಬೇಕೆನ್ನಿಸುತ್ತದೆ.

ಕರ್ನಾಟಕದ ಚುನಾವಣಾ ಸರ್ಕಸ್‌ನಲ್ಲಿರುವ ಇನ್ನಿಬ್ಬರು ಮಹತ್ವದ ಪಾತ್ರಧಾರಿಗಳು ಕಾಂಗ್ರೆಸ್ ಹಾಗೂ ಜೆಡಿ(ಎಸ್). ಕಾಂಗ್ರೆಸ್ ಕಾರ್ಯಕರ್ತರಿಲ್ಲದ, ನಾಯಕರೇ ಇರುವ ಒಂದು ಪಕ್ಷ; ಅಲ್ಲಿ ದೇಶ ಬಿಡಿ, ಪಕ್ಷಕ್ಕೂ ಗೌರವ ಸಿಕ್ಕುವಷ್ಟು ಶ್ರಮ ಪಡುವ ನಾಯಕರಿಲ್ಲ. ಅಲ್ಲಿನ ನಾಯಕರ ಪೈಕಿ ಪ್ರತಿಯೊಬ್ಬನೂ ತನ್ನ ಅನುಕೂಲಕ್ಕೆ ತಕ್ಕಂತೆ, ಬೇಕಾದಂತೆ, ವ್ಯವಹರಿಸಬಲ್ಲ. ತನ್ನ ಏಳ್ಗೆಗೆ ತಾನೇ ಶಿಲ್ಪಿ! ಭಾಜಪದ ಕೆಟ್ಟ ಆಡಳಿತವೇ ಕಾಂಗ್ರೆಸಿಗೆ ಸಂಜೀವಿನಿ; ಆಡಳಿತ ವಿರೋಧಿ ನೇತ್ಯಾತ್ಮಕತೆಯೇ ಅದಕ್ಕೀಗ ಜೀವಾಳ. ಪರಸ್ಪರ ಕಾಲೆಳೆದುಕೊಂಡು ತನ್ನ ಸೋಲನ್ನೂ ತನ್ನ ಎದುರಾಳಿಯ ಸೋಲನ್ನೂ ಚುನಾವಣೆಗೆ ಮೊದಲೇ ನಿರ್ಧರಿಸುವ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯನವರನ್ನು ಶಿವಕುಮಾರ್, ಶಿವಕುಮಾರ್‌ರನ್ನು ಸಿದ್ದರಾಮಯ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸೋಲಿಸಲಾರರು; ಆದರೆ ಮುಂದೆ ಬರುವ ವಸಂತದಲ್ಲಿ ನಾಯಕ ಪಾತ್ರಧಾರಿಯ ಸ್ಪರ್ಧೆಗೆ ಇವರು ಈಗಲೇ ಅಣಿಯಾದಂತಿದೆ. ತಮ್ಮ ತಮ್ಮ ಬೆಂಬಲಿಗರನ್ನು ಅಭ್ಯರ್ಥಿಗಳಾಗಿಸುವ ಇವರ ಯತ್ನದಲ್ಲಿ ಸೋರಿಹೋಗುತ್ತಿರುವುದು ಪಕ್ಷದ ಮಾನ (ಹಾಗೊಂದಿದ್ದರೆ). ಇವರ ನಡುವಣ ಬಿಗು ವಾತಾವರಣದಲ್ಲಿ ಪಕ್ಷ ಈಗಾಗಲೇ ಬಳಲಿದೆ. ‘ಬರುವ ಭಾಗ್ಯವ ನೆನೆದು...’ ಎಂದು ಡಿವಿಜಿ ಕಾಂಗ್ರೆಸಿಗಾಗಿಯೇ ಬರೆದರೇನೋ?

ಭ್ರಷ್ಟಾಚಾರವೇ ಸಿದ್ಧಾಂತವಾದ ಕಾಂಗ್ರೆಸಿನಿಂದ ಅನೇಕರು ಭಾಜಪಕ್ಕೆ ಜಿಗಿದಾಗಲೇ ಕಾಂಗ್ರೆಸ್ ಎಚ್ಚರವಾಗಬೇಕಾಗಿತ್ತು. ಆದರೆ ಅವರಲ್ಲಿ ಮತ್ತೆ ತನ್ನ ಮಡಿಲಿಗೆ ಜಿಗಿದವರನ್ನು ಸಲಹುವ ಮಾತೃಹೃದಯ ತರ್ಕವನ್ನು ಮೀರಿದ್ದು. ಈಗ ಏನಿದ್ದರೂ ಟಿಕೆಟ್ ರಾಜಕೀಯ. ದೂರಪ್ರಯಾಣದ ಖಾಸಗಿ ಬಸ್‌ಗಳಂತೆ ಸೀಸನ್‌ಗಳಲ್ಲಿ ಹೆಚ್ಚು ದರ ನಿಗದಿಪಡಿಸುವವರಂತೆ ವ್ಯವಹಾರ ನಡೆಯುತ್ತದೆ. ಬಾಳೆಕಾಯಿ ವ್ಯಾಪಾರ ನಡೆಸುವವರು ಒಂದು ಕರ್ಚೀಫ್ ಹೊದಿಸಿ ಪರಸ್ಪರ ಕೈಕುಲುಕಿಕೊಂಡು ದರ ನಿಗದಿಮಾಡಿಕೊಳ್ಳುತ್ತಾರೆ. ರಾಜಕಾರಣಿಗಳು ಇದನ್ನೂ ಮೀರಿ ಅದ್ಯಾವುದೋ ಗೀರ್ವಾಣ ಅಂದರೆ ಶ್ರೀಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಟಿಕೆಟ್ ಕುದುರಿಸಿಕೊಳ್ಳುತ್ತಾರೆ. ಟಿಕೆಟ್ ಸಿಗದವರು? ಕೊಳ್ಳಿದೆವ್ವಗಳಂತೆ ಸಿಡಿಯುತ್ತಾರೆ. ಶೆಟ್ಟರ್‌ರವರಂತೆ  ಬಂಡಾಯದ್ದೋ ಇನ್ನೊಂದೋ ಬಾವುಟ ಹಾರಿಸುತ್ತಾರೆ. ಹೀಗೆ ಹಾರಿದ್ದರಲ್ಲಿ ಯಶಸ್ಸಿನ ಬಾವುಟ ಯಾವುದು, ಮಾನಕಳೆಯುವ ಕೌಪೀನ ಯಾವುದು ಎಂಬುದು ಅರ್ಥವಾಗದು. ವೈ.ಎಸ್.ವಿ.ದತ್ತರಂತಹ ರಾಜಕಾರಣಿ ಕಾಂಗ್ರೆಸಿಗೆ ಹೋಗುವಾಗಲೇ ಅವರಿಗೆ ಅರ್ಥವಾಗಬೇಕಾಗಿತ್ತು- ಇದು ಕೆಂಡದರಾಶಿ; ಮೇಲೇರಿದರೂ ಇಳಿದರೂ ಸುಡುವ ಬೆಂಕಿ ಎಂಬುದು. ಈಗ ಟಿಕೆಟ್ ವಂಚಿತರು ಜನಪ್ರಿಯತೆಯನ್ನು ಸಾಧಿಸುವುದೆಂದರೆ ಪಕ್ಷರಾಜಕೀಯದ ದುರ್ನಾತವನ್ನು ಮೆತ್ತಿಕೊಂಡು ಮೆರವಣಿಗೆ ಹೋದಂತೆ. ಅದರ ಬದಲಾಗಿ ಈಶ್ವರಪ್ಪನವರಂತೆ ಕೇದಾರನಾಥದ ಯೋಗಿಯಾಗುವುದು ಒಳ್ಳೆಯದು. ಆದರೆ ರಾಜಕೀಯದಲ್ಲಿ ಲಜ್ಜೆಗೆಟ್ಟು ಮರಳಿ ಯತ್ನವ ಮಾಡು ಎಂಬ ಪಾಠವಿದೆಯಲ್ಲ!

ಜೆಡಿಎಸ್ ಎಂಬ ಮಿತಾಕ್ಷರ ಕಾನೂನಿನ ಕುಟುಂಬ ವಲಯದಲ್ಲಿ ತಮ್ಮ ಪಡಿತರ ಚೀಟಿಯಲ್ಲಿರುವವರಿಗೆಲ್ಲ ಟಿಕೆಟ್ ನೀಡಿದ ಮೇಲೆ ಇತರರಿಗೆ ಅವಕಾಶ ನೀಡುವ ಪ್ರಾದೇಶಿಕ ಪಕ್ಷವಿದೆ. ಅಲ್ಲಿರುವ ಹಿರಿಯರಿಗೆ ಪ್ರತೀ ಚುನಾವಣೆಯೂ ಕೊನೆಯದ್ದು. ಶತ್ರು ನಿರ್ನಾಮ ಯಜ್ಞದಿಂದ ಮೊದಲ್ಗೊಂಡು ಆಯುರ್ವೇದ ಪಂಚಕರ್ಮ ಚಿಕಿತ್ಸೆಯವರೆಗೆ ಊದುವ ಪುಂಗಿನಾದಕ್ಕೆ ಅನೇಕರು ಮರುಳಾಗಿರಬೇಕು. ರಾಜನಾಗುವುದಕ್ಕಿಂತ ರಾಜನಿರ್ಣಾಯಕನಾಗಿರಬೇಕೆಂಬುದೇ ತತ್ವವಾಗಿರುವಾಗ ಬಂದಷ್ಟು ಬರಲಿ ಬರಡೆಮ್ಮೆ ಹಾಲು (ಬರಡು ದನದ ಹಾಲನ್ನೆಲ್ಲ ಗೋರಕ್ಷಕರ ಮೂಲಕ ಭಾಜಪದವರು ಕರೆದು ಮೈಗೆ ಸುರಿದುಕೊಂಡಿದ್ದಾರೆ) ಎಂದು ಯೋಚಿಸುವುದೇ ಪಂಚತಂತ್ರ! ಈಗ ನಡೆಯುವ ಈ ಕೋಳಿಅಂಕದಲ್ಲಿ, ಜೂಜಿನಲ್ಲಿ ಈ ಪಕ್ಷ ಮಧ್ಯವರ್ತಿಯಂತಿದೆ. ಭೌತಶಾಸ್ತ್ರದ ಸ್ಥಿತಿಸ್ಥಾಪಕತ್ವಕ್ಕೆ ಈ ಪಕ್ಷವು ಅತ್ಯುತ್ತಮ ಉದಾಹರಣೆ. ಇವರು ಸಮರಸಮಶಪ್ತಕರು. ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿ ಕೌರವರಿಗೆ ಸಹಾಯಮಾಡುವವರು. ಹಾಗಂತ ಇವರನ್ನು ದೂರುವಂತಿಲ್ಲ. ಅಳಿದೂರಿಗೆ ಉಳಿಯುವವರಿವರು.

ಇವೆಲ್ಲದರೊಂದಿಗೆ ಮತದಾನ ಬಹಿಷ್ಕಾರ ಹಾಕುವ ಮೂರ್ಖ ಮತದಾರರೂ ಇದ್ದಾರೆ. ಇದರಿಂದ ಯಾವ ಸ್ಪರ್ಧಿಗೂ ಲಾಭ-ನಷ್ಟವಿಲ್ಲ ಎಂಬುದನ್ನು ಇವರರಿಯರು. ಇವರು ಹೋರಾಡುತ್ತಿರುವುದು ಮತರಾಜಕೀಯದ ವಿರುದ್ಧವಲ್ಲ; ಬದಲಾಗಿ ತಮಗಿರುವ ಮತದಾನದ ಹಕ್ಕಿನ ವಿರುದ್ಧ; ಸಂವಿಧಾನದ ವಿರುದ್ಧ; ಪ್ರಜಾಪ್ರಭುತ್ವದ ವಿರುದ್ಧ. ಈ ಸಲ್ಲೇಖನ ವ್ರತ ಸಮಾಜೋದ್ಧಾರಕವಲ್ಲ. ತಮಗಿಷ್ಟ ಬಂದವರನ್ನು ಆಯ್ಕೆ ಮಾಡುವ-ಅದೆಷ್ಟೇ ನಿಷ್ಫಲವಾಗಿರಲಿ-ಹಕ್ಕಿಗಿಂತ ಕೀಳು ಈ ಬಹಿಷ್ಕಾರವೆಂಬುದನ್ನರಿಯರು.

ಇನ್ನೆಷ್ಟು ಮಂದಿ ಈ ಅಂದರ್ ಬಾಹರ್ ಆಟದಲ್ಲಿ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ. ತುಂಬಾ ಸಿಟ್ಟುಬಂದಾಗ ನಗಬೇಕೆಂದು ಒಬ್ಬರು ಹೇಳಿದರು. ಮುನ್ನಾಭಾಯಿ ಸಿನೆಮಾದಲ್ಲಿ ಬೊಮ್ಮನ್ ಇರಾನಿ ವಹಿಸಿದ ಈ ಬಗೆಯ ಪಾತ್ರವೊಂದಿದೆ. ಅಂತೂ ಐಪಿಎಲ್ ಎಂಬ ಮನರಂಜನೆಯೊಂದಿಗೆ ಇದೂ ಇರಲಿ!

ಕನ್ನಡಕ್ಕೆ, ಕರ್ನಾಟಕಕ್ಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವರ್ತಮಾನದ ಮತ್ತು ಭವಿಷ್ಯದ ಸಮಾಜಕ್ಕೆ ಒಳ್ಳೆಯದಾಗಲೆಂದು ಮತನೀಡಬೇಕು. ನಮ್ಮ ಮಕ್ಕಳ ಭವಿಷ್ಯವೂ ಒಳ್ಳೆಯದಾಗಬೇಕಲ್ಲ! ನಾವು ಭಾಗವಹಿಸಬೇಕಾದ್ದು ಈ ಸ್ಪರ್ಧೆಗೆ!

Similar News