ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಾವರ್ಕರ್‌ ಮೊಮ್ಮಗ

Update: 2023-04-13 15:42 GMT

ಹೊಸದಿಲ್ಲಿ: ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಮ್‌ಗೆ ರಾಹುಲ್‌ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ. 

ರಾಹುಲ್‌ ಗಾಂಧಿಯವರು ಸಾವರ್ಕರ್ ಅವರನ್ನು ಹಲವು ವರ್ಷಗಳಿಂದ ಪದೇ ಪದೇ ಮಾನಹಾನಿ ಮಾಡುತ್ತಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಅವರು ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.

ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತರಲು ರಾಹುಲ್‌ ಗಾಂಧಿ ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ. ತನಗೆ ಮತ್ತು ತನ್ನ ಕುಟುಂಬಕ್ಕೆ ಮಾನಸಿಕ ಯಾತನೆ ಉಂಟು ಮಾಡಲು ಗಾಂಧಿ ಉದ್ದೇಶಪೂರ್ವಕವಾಗಿ ಇಂತಹ ಮಾತುಗಳನ್ನು ಹೇಳಿದ್ದಾರೆ  ಎಂದು ಪುಣೆಯ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಗೆ ನೀಡಲಾದ ದೂರಿನಲ್ಲಿ ದೂರುದಾರರು ಆರೋಪಿಸಿದ್ದಾರೆ.

 ರಾಹುಲ್‌ ಗಾಂಧಿ ಅವರು ಸಾವರ್ಕರ್ ಮತ್ತು ಇತರರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನಿಯಮಿತವಾಗಿ ನೀಡುತ್ತಿದ್ದಾರೆ. ಈಗಾಗಲೇ ಅವರ ವಿರುದ್ಧ ಇಂತಹದ್ದೇ ಒಂದು ಪ್ರಕರಣದಲ್ಲಿ ಎರಡು ವರ್ಷದ ಶಿಕ್ಷೆ ಪ್ರಕಟವಾಗಿದೆ, ಇನ್ನಷ್ಟು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ ಎಂದು ಸಾವರ್ಕರ್‌ ಮೊಮ್ಮಗ ದೂರಿದ್ದಾರೆ. 

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಹುಲ್‌ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ದೂರುದಾರ ಕೋರಿದ್ದಾರೆ.

Similar News