ರಾಕೆಟ್ ಅವಶೇಷಗಳ ಪತನ ಸಾಧ್ಯತೆ: ತೈವಾನ್ ಸಮೀಪ ನೌಕಾಯಾನ ನಿಷೇಧಿಸಿದ ಚೀನಾ

Update: 2023-04-13 17:44 GMT

ಬೀಜಿಂಗ್,ಎ.13: ರಾಕೆಟ್ ಅವಶೇಷಗಳ ಪತನ ಸಾಧ್ಯತೆಯ ಹಿನ್ನೆಲೆಯಲ್ಲಿ ರವಿವಾರದಂದು ತೈವಾನ್ ಸಮೀಪದ ಸಾಗರ ಪ್ರದೇಶದಲ್ಲಿ ಎಲ್ಲಾ ನೌಕೆಗಳ ಸಂಚಾರವನ್ನು ಚೀನಾವು ನಿಷೇಧಿಸಿದೆಯೆಂದು ಆ ದೇಶದ ಸಮುದ್ರಯಾನ ಸುರಕ್ಷತಾ ಏಜೆನ್ಸಿಯು ಗುರುವಾರ ತಿಳಿಸಿದೆ. 

ಚೀನಾವು ಎಪ್ರಿಲ್ 16ರಿಂದ 18ರವರೆಗೆ ತೈವಾನ್ ಸಮೀಪದ ಸಾಗರಪ್ರದೇಶದಲ್ಲಿ ವಿಮಾನ ಹಾರಾಟ ನಿಷೇಧವನ್ನು ಹೇರಲು ಕೂಡಾ ಚೀನಾ ಯೋಚಿಸುತ್ತಿದೆಯೆಂದು ತೈವಾನ್ ಸರಕಾರವು ಬುಧವಾರ ದೃಢಪಡಿಸಿದೆ. ಜಪಾನ್ ನಲ್ಲಿ ಜಿ7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಯಲಿರುವ ಸಂದರ್ಭದಲ್ಲಿಯೇ ವಿಮಾನಹಾರಾಟಕ್ಕೆ ನಿಷೇಧ ಹೇರಿರುವ ಬಗ್ಗೆ ತೈವಾನ್ ಪ್ರತಿಭಟನೆ ವ್ಯಕ್ತಪಡಿಸಿತ್ತು. ಆ ಬಳಿಕ ಚೀನಾವು ಈ ವಿಮಾನಹಾರಾಟ ನಿಷೇಧವನ್ನು ರವಿವಾರದಂದು ಕೇವಲ 27 ನಿಮಿಷಗಳಿಗೆ ಇಳಿಸಿದೆಯೆಂದು ಹೇಳಲಾಗುತ್ತಿದೆ.

ರಾಕೆಟ್ ನ ಅವಶೇಷಗಳು ಉರಿದು ಬೀಳುವ ಸಾಧ್ಯತೆಯಿರುವುದರಿಂದ ರವಿವಾರದಂದು ಸ್ಥಳೀಯ ಕಾಲಮಾನ ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಹಡಗುಸಂಚಾರವನ್ನು ನಿಷೇಧಿಸಲಾಗಿದೆಯೆಂದು ಚೀನಾದ ನೌಕಾಯಾನ ಸುರಕ್ಷತಾ ಆಡಳಿತವು ಗುರುವಾರ ಬಿಡುಗಡೆಗೊಳಿಸಿದ ಸಂಕ್ಷಿಪ್ತ ಹೇಳಿಕೆಯೊಂದರಲ್ಲಿ ತಿಳಿಸಿದೆ.

ತೈವಾನ್ ನ ಈಶಾನ್ಯಭಾಗದಿಂದ ಚೀನಾದ ಜೊತೆಗಿನ 118 ಕಿ..ಮೀ. ಸಮುದ್ರ ಪ್ರದೇಶದ ವ್ಯಾಪ್ತಿಯಲ್ಲಿ ನೌಕಾ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಚೀನಾವು ಘೋಷಿಸಿರುವ ಹಾರಾಟನಿಷೇಧಿತ ವಲಯವು ಜಪಾನ್ ನ ಇಶಿಗಾಕಿ ದ್ವೀಪದಿಂದ, ಪೂರ್ವ ಚೀನಾ ಸಾಗರಪ್ರದೇಶದಲ್ಲಿರುವ ವಿವಾದಿತ ದ್ವೀಪಸ್ತೋಮದ ಪಕ್ಕದಲ್ಲೇ ಇವೆ. ಈ ಪ್ರದೇಶದಲ್ಲಿ ವಿಮಾನಯಾನ ನಿಷೇಧಿಸಿರುವ ಬಗ್ಗೆ ಬುಧವಾರ ಜಪಾನ್ ಚೀನಾದಿಂದ ವಿವರಣೆಯನ್ನು ಕೋರಿತ್ತು ಎಂದು ಜಪಾನ್ ಸರಕಾರದ ಮುಖ್ಯಸಂಪುಟ ಕಾರ್ಯದರ್ಶಿ ಹಿರೊಕಾಝು ಮತ್ಸುನೊ ತಿಳಿಸಿದ್ದಾರೆ.

Similar News