ಡೇರಿ ಫಾರ್ಮ್‌ನಲ್ಲಿ ಸ್ಫೋಟ: 18,000ಕ್ಕೂ ಹೆಚ್ಚು ಹಸುಗಳು ಸಾವು
ಟೆಕ್ಸಾಸ್: ಸೌತ್‌ಫೋರ್ಕ್ ಡೇರಿ ಫಾರ್ಮ್‌ನಲ್ಲಿ ಬಾಯ್ಲರ್ ಸ್ಫೋಟದ ನಂತರ 18,000 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಘಟನೆ ಅಮೆರಿಕದ ಪಶ್ಚಿಮ ಟೆಕ್ಸಾಸ್ ನಲ್ಲಿ ನಡೆದಿದೆ.
ಮಂಗಳವಾರ ಪಶ್ಚಿಮ ಟೆಕ್ಸಾಸ್ ನ ಸೌತ್ ಪೋರ್ಕ್ ಡೇರಿ ಎಂಬಲ್ಲಿ ಬಾಯ್ಲರ್ ಸ್ಫೋಟಿಸಿ ಇಡೀ ಫಾರ್ಮ್ ಹೊತ್ತಿ ಉರಿದಿದೆ. ಇದರಿಂದ ಡೇರಿ ಫಾರ್ಮ್ ನ 18 ಸಾವಿರ ಹಸುಗಳು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿ ತಿಳಿಸಿದೆ.
ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಹಾಗೂ ಡೇರಿ ಫಾರ್ಮ್ ನ ಮಾಲೀಕತ್ವದ ಕುಟುಂಬವು ಘಟನೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ಅಗ್ನಿಶಾಮಕ ದಳದವರು ಉರಿಯುತ್ತಿರುವ ಕಟ್ಟಡದೊಳಗೆ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಿದ್ದಾರೆ ಎಂದು ಕ್ಯಾಸ್ಟ್ರೋ ಕೌಂಟಿ ಶೆರಿಫ್‌ನ ಕಛೇರಿಯು ತಿಳಿಸಿದೆ.
ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಗಾಗಿ ಫಾರ್ಮ್ ನತ್ತ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ.
ಮೃತಪಟ್ಟ ಒಂದು ಹಸುವಿನ ಬೆಲೆ 1.63 ಲಕ್ಷ ರೂ. ಇತ್ತು ಎಂದು ತಿಳಿದುಬಂದಿದೆ. ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.