×
Ad

ಅಮುಲ್ ಹುಟ್ಟು ಮತ್ತು ಲಾಲ್ ಬಹದ್ದೂರರ ಗ್ರಾಮವಾಸ್ತವ್ಯ...

ಸರಣಿ - 2

Update: 2023-04-15 11:41 IST

ಶಾಸ್ತ್ರಿಯವರು ಆನಂದಕ್ಕೆ ಬಂದಿಳಿದಾಗ ಒಂದೇ ಕಾರಿನಲ್ಲಿ ಅವರು ಮತ್ತು ಗುಜರಾತ್ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಇಬ್ಬರೇ ಅಜರ್‌ಪುರಕ್ಕೆ ಹೋದರು. ಇಡೀ ಹಳ್ಳಿಯವರಿಗೆ ದಿಗ್ಭ್ರಮೆ. ಅಂದು ರಾತ್ರಿ ಸುಮಾರು ಎರಡು ಗಂಟೆಯವರೆಗೂ ಶಾಸ್ತ್ರಿಯವರು ಗ್ರಾಮಸ್ಥರಲ್ಲಿ ಸಂವಾದ ನಡೆಸಿದರು. ಬಹುಶಃ ಪ್ರಧಾನಿಗಳ ಮೊತ್ತಮೊದಲ  ಗ್ರಾಮವಾಸ್ತವ್ಯ ಅದೇ ಆಗಿದ್ದಿರಬಹುದು.

ಗುಜರಾತಿನ ಇಂದಿನ ಖೇಡಾ ಜಿಲ್ಲೆ ಅಂದು ಬ್ರಿಟಿಷ್ ಮುಂಬೈ ಪ್ರಾಂತದಲ್ಲಿದ್ದು ಕೈರಾ ಎಂದು ಕರೆಸಿಕೊಳ್ಳುತ್ತಿತ್ತು. 1960ರಲ್ಲಿ ಆ ಜಿಲ್ಲೆ ಗುಜರಾತ್ ರಾಜ್ಯಕ್ಕೆ ಸೇರಿಕೊಂಡಿತು. ಮಳೆಯಾಧಾರಿತ ಬೇಸಾಯವನ್ನೇ ನೆಚ್ಚಿಕೊಂಡಿದ್ದ ಅಲ್ಲಿಯ ರೈತರು, ಉಪ ಆದಾಯಕ್ಕೆ ಪಶುಸಂಗೋಪನೆಯನ್ನು ಮಾಡುತ್ತಿದ್ದರು. ಅವರು ಉತ್ಪಾದಿಸಿದ ಹಾಲನ್ನು ಮಧ್ಯವರ್ತಿಗಳು ತೀರ ಕಡಿಮೆ ಬೆಲೆಗೆ ಕೊಂಡು ಬೇರೆ ಪಟ್ಟಣಗಳಲ್ಲಿ ದೊಡ್ಡ ಬೆಲೆಗೆ ಮಾರುತ್ತಿದ್ದರು. ರೈತರ ಸಂಕಷ್ಟಕ್ಕೆ ಅವರು ಒಂದಿಷ್ಟೂ ಸ್ಪಂದಿಸುತ್ತಿರಲಿಲ್ಲ. ಅಂದಿನ ಬ್ರಿಟಿಷ್ ಸರಕಾರ 1945 ರಲ್ಲಿ ಮುಂಬೈ ನಗರಕ್ಕೆ ಹಾಲು ಪೂರೈಸಲು ‘ಬಾಂಬೆ ಮಿಲ್ಕ್ ಸ್ಕೀಮ್’ ಯೋಜನೆಯನ್ನು ಹಮ್ಮಿಕೊಂಡಿತು. ಪೋಲ್ಸನ್ ಕಂಪೆನಿಗೆ ಹಾಲು ಸರಬರಾಜು ಮಾಡುವ ಗುತ್ತಿಗೆ ಕೊಟ್ಟಿತು. ಕೈರಾದ ಮಧ್ಯವರ್ತಿಗಳು ಪೋಲ್ಸನ್ ಕಂಪೆನಿಗೆ ಹಾಲು ನೀಡಿದರೆ, ಆ ಕಂಪೆನಿ ಜಿಲ್ಲೆಯ ಆನಂದ್ ಹಳ್ಳಿಯಿಂದ 427 ಕಿ.ಮೀ. ದೂರದ ಮುಂಬೈಗೆ ಪ್ರತಿದಿನ ಹಾಲು ಸಾಗಿಸಿ ಬಾಂಬೆ ಮಿಲ್ಕ್ ಸ್ಕೀಮ್‌ಗೆ ಪೂರೈಸತೊಡಗಿತು. ಈ ವ್ಯವಸ್ಥೆ ಹಾಲು ಉತ್ಪಾದಿಸುವ ರೈತರನ್ನು ಬಿಟ್ಟು ಬೇರೆಲ್ಲ ಭಾಗೀದಾರರಿಗೂ ಅನುಕೂಲವಾಯಿತು. ಬೇಸತ್ತ ರೈತರು ವಲ್ಲಭಭಾಯಿ ಪಟೇಲರನ್ನು ಕಂಡು ತಮ್ಮ ಅಳಲನ್ನು ತೋಡಿಕೊಂಡರು. 1942ರಿಂದಲೇ ಸಹಕಾರಿ ತತ್ವವನ್ನು ಪ್ರತಿಪಾದಿಸುತ್ತಿದ್ದ ಪಟೇಲರು, ‘‘ನೀವೇ ಒಂದು ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳಿ, ಗ್ರಾಹಕರಿಗೆ ಮತ್ತು ಮುಂಬೈಗೆ ನೇರವಾಗಿ ಸರಬರಾಜು ಮಾಡಿ’’ ಎಂದು ಹುರಿದುಂಬಿಸಿದರು. ‘‘ಒಂದು ವೇಳೆ ಮುಂಬೈ ಸರಕಾರ ಒಪ್ಪದೆ ಹೋದರೆ, ನೀವು ಯಾರೂ ಹಾಲನ್ನು ಮಾರುವುದಿಲ್ಲವೆಂದು ಮುಷ್ಕರ ಹೂಡಿ, ಕೆಲವು ದಿನ ನಿಮಗೆ ನಷ್ಟವಾಗಬಹುದು, ಅದಕ್ಕೆ ನೀವು ತಯಾರಿದ್ದೀರಾ?’’ ಎಂದು ಕೇಳಿದರು. ರೈತರು ಒಪ್ಪಿಮುಷ್ಕರ ಹೂಡಿದರು.

ಮುಂಬೈ ಸರಕಾರ ರೈತರಿಂದ ನೇರ ಖರೀದಿಸಲು ಒಪ್ಪದಾಗ, ಹದಿನೈದು ದಿನ ಆನಂದನಿಂದ ಒಂದು ಹನಿ ಹಾಲೂ ಮುಂಬೈಗೆ ಹೋಗಲಿಲ್ಲ. ಆಗ ಸರಕಾರದ ಅಧಿಕಾರಿಗಳು ಆನಂದಕ್ಕೆ ಬಂದು ರೈತರ ಬೇಡಿಕೆಗೆ ಒಪ್ಪಿದರು. ಆಗ 1946ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ತ್ರಿಭುವನ್ ದಾಸ್ ಪಟೇಲ್ ಅವರ ಮುಂದಾಳತ್ವದಲ್ಲಿ ಕೈರಾ ಜಿಲ್ಲಾ ಹಾಲು ಉತ್ಪಾದಕರ ಸಂಘ ಸ್ಥಾಪನೆಯಾಯಿತು. ಮೊದಲಿಗೆ ಬರೀ ಎರಡು ಗ್ರಾಮಗಳು ಪಾಲ್ಗೊಂಡವು. ದಿನಕ್ಕೆ 250 ಲೀಟರ್ ಹಾಲು ಮಾತ್ರ ಉತ್ಪಾದನೆಯಾಗಿ ಮುಂಬೈಗೆ ಸರಬರಾಜಾಗತೊಡಗಿತು. 

ನಿಶ್ಚಿತ ಮಾರುಕಟ್ಟೆಯ ಭರವಸೆ ಕಂಡಂತೆ ಬೇರೆಬೇರೆ ಹಳ್ಳಿಗಳವರು ಕ್ರಮೇಣ ಹಾಲು ಉತ್ಪಾದಕ ಸಂಘಗಳನ್ನು ರಚಿಸಿಕೊಂಡು ಕೈರಾ ಸಂಘಕ್ಕೆ ನೀಡತೊಡಗಿದರು. ಯಾರು ಎಷ್ಟು ಹಾಲು ತಂದರೂ ಸ್ವೀಕರಿಸಬೇಕು ಎನ್ನುವ ನಿಯಮವನ್ನು ಸಂಘವು ತನಗೆ ತಾನೇ ವಿಧಿಸಿಕೊಂಡಿತು. ಹೀಗೆ ಜಿಲ್ಲೆಯಲ್ಲಿ ಸಹಕಾರಿ ಚಳವಳಿ ವೇಗವಾಗಿ ಬೆಳೆಯುತ್ತಾ, 1948ರ ಹೊತ್ತಿಗೆ ದಿನಕ್ಕೆ 5,000 ಲೀಟರ್ ಶೇಖರವಾದಾಗ, ಸಂಘವು ತನ್ನದೇ ಸಂಸ್ಕರಣಾ ಘಟಕವನ್ನು ಆರಂಭಿಸಿತು.

ಡಾ. ವರ್ಗೀಸ್ ಕುರಿಯನ್ ಅಮುಲ್ ಸೇರಿದ ಕತೆ ಕುತೂಹಲಕಾರಿಯಾಗಿದೆ. ಅವರು ಮೂಲತಃ ಕೇರಳದವರಾಗಿದ್ದು, ಮದ್ರಾಸಿನ ಗಿಂಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ, ಜಮ್ಶೆಡ್‌ಪುರದಲ್ಲಿ ಟಾಟಾ ಸ್ಟೀಲ್ ಟೆಕ್ನಿಕಲ್ ಇನ್‌ಸ್ಟ್ಟಿಟ್ಯೂಟ್‌ನಲ್ಲೂ ಮತ್ತೊಂದು ಪದವಿ ಪಡೆದರು. ಆದರೆ ಅವರಿಗೆ ಭಾರತ ಸರಕಾರ ನೀಡುತ್ತಿದ್ದ ಸ್ಕಾಲರ್‌ಶಿಪ್ ಪಡೆದು ಇಂಗ್ಲೆಂಡಿನಲ್ಲಿ ಡೇರಿ ಇಂಜಿನಿಯರಿಂಗ್ ಮಾಡುವ ಮನಸ್ಸಿತ್ತು. ಅದಕ್ಕೆ ಅಂದಿನ ವಿತ್ತಮಂತ್ರಿಯಾಗಿದ್ದ ಅವರ ಚಿಕ್ಕಪ್ಪಜಾನ್ ಮಥಾಯ್ ಒಪ್ಪದೆ, ಅವರನ್ನು ಬೆಂಗಳೂರಿನ ಇಂಪೀರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡ್ರಿ (ಈಗ ನ್ಯಾಷನಲ್ ಡೇರಿ ರಿಸರ್ಚ್ ಇನ್‌ಸ್ಟಿಟ್ಯೂಟ್)ಗೆ ಕಳಿಸಿದರು. ಅವರು ಒಂಭತ್ತು ತಿಂಗಳ ಕಾಲ ಅಲ್ಲಿ ವ್ಯಾಸಂಗ ಮಾಡಿ, ಮತ್ತೆ ಡೇರಿ ಇಂಜಿನಿಯರಿಂಗ್ ಓದಲು ಭಾರತದ ಸ್ಕಾಲರ್‌ಶಿಪ್ ಪಡೆದು ಅಮೆರಿಕದ ಮಿಷಿಗನ್ ಸ್ಟೇಟ್ ವಿಶ್ವವಿದ್ಯಾನಿಲಯಕ್ಕೆ ಹೋದರು. ಅಲ್ಲಿ ಅವರು ಡೇರಿ ಬದಲಿಗೆ ಮೆಟಲರ್ಜಿಕಲ್ ಇಂಜಿನಿಯರಿಂಗ್ ಓದಿ ಭಾರತಕ್ಕೆ ಮರಳಿದರು. ಅವರ ಸ್ಕಾಲರ್‌ಶಿಪ್ ಬಾಂಡ್ ಪ್ರಕಾರ ಭಾರತ ಸರಕಾರ ಅವರನ್ನು ಕೈರಾ ಜಿಲ್ಲೆಯ ಆನಂದ್‌ನ ಸರಕಾರಿ ಡೇರಿ ವಿಭಾಗದಲ್ಲಿ ಸೇವೆ ಸಲ್ಲಿಸಲು ಕಳಿಸಿತು. ಅಲ್ಲಿ ಅವರಿಗೆ ತ್ರಿಭುವನ್ ದಾಸ್ ಪಟೇಲರ ಸ್ನೇಹವಾಗಿ, ಆಗಾಗ ಅವರು ಕೈರಾ ಜಿಲ್ಲಾ ಹಾಲು ಉತ್ಪಾದಕರ ಸಂಘದ ಚಟುವಟಿಕೆಗಳಲ್ಲಿ ತಾಂತ್ರಿಕ ಸಲಹೆಗಳನ್ನು ಕೊಡುತ್ತಿದ್ದರು. ಐದು ವರ್ಷದ ಬಾಂಡ್ ಮುಗಿಯುತ್ತಿದ್ದಂತೆಯೇ ಆನಂದ್ ಗ್ರಾಮದಿಂದ ಬಿಡುಗಡೆ ಹೊಂದಿ ಮುಂಬೈಗೆ ಹೋಗಲು ತವಕಿಸುತ್ತಿದ್ದ ಕುರಿಯನ್ ಅವರನ್ನು ತ್ರಿಭುವನ್ ದಾಸ್ ತಮ್ಮ ಸಹಕಾರ ಸಂಘಕ್ಕೆ ಜನರಲ್ ಮ್ಯಾನೇಜರ್ ಆಗಿ ಸೇರಿಕೊಳ್ಳುವಂತೆ ವಾತ್ಸಲ್ಯದ ಕಟ್ಟು ಬಿಗಿದರು. ನಿರಾಕರಿಸಲಾಗದ ಕುರಿಯನ್ 1950ರಲ್ಲಿ ಅಮುಲ್ ಸೇರಿದರು. ಅಲ್ಲಿಂದ ಮುಂದೆ ದೇಶದ ಕ್ಷೀರ ಕ್ರಾಂತಿಯ ಚರಿತ್ರೆಯೇ ಸೃಷ್ಟಿಯಾಯಿತು.

ತ್ವರಿತವಾಗಿ ಬೆಳೆಯುತ್ತಿದ್ದ ಸಂಸ್ಥೆಗೆ ಸಾಕಷ್ಟು ಸಮಸ್ಯೆಗಳೂ ಎದುರಾದವು. ಹಸು, ಎಮ್ಮೆಗಳು ಬೇಸಿಗೆಯಲ್ಲಿ ಕರೆಯುತ್ತಿದ್ದ ಹಾಲಿನ ಪ್ರಮಾಣಕ್ಕಿಂತ ಎರಡೂವರೆ ಪಟ್ಟು ಹಾಲನ್ನು ಚಳಿಗಾಲದಲ್ಲಿ ನೀಡುತ್ತಿದ್ದವು. ಅಷ್ಟು ಹೆಚ್ಚುವರಿ ಹಾಲನ್ನು ಬಾಂಬೆ ಮಿಲ್ಕ್ ಸ್ಕೀಮ್ ಸ್ವೀಕರಿಸಲು ಸಿದ್ಧವಿರಲಿಲ್ಲ. ಈ ಸಮಸ್ಯೆಗೆ ಹೆಚ್ಚುವರಿ ಹಾಲಿನಿಂದ ಬೆಣ್ಣೆ ಮತ್ತು ಹಾಲಿನಪುಡಿಯನ್ನು ತಯಾರಿಸುವುದೇ ಪರಿಹಾರವೆಂದು ಸಂಘ 1953ರ ಸಮಯದಲ್ಲಿ ಕಂಡುಕೊಂಡಿತು. ಯೂನಿಸೆಫ್ ಹಾಗೂ ನ್ಯೂಝಿಲ್ಯಾಂಡ್ ಸರಕಾರದ ಆರ್ಥಿಕ ನೆರವಿನಿಂದ ಸಂಘವು ಬೆಣ್ಣೆ ಮತ್ತು ಹಾಲಿನಪುಡಿ ಘಟಕವನ್ನು ಸ್ಥಾಪಿಸಲು ಭಾರತ ಸರಕಾರ ಸಹಾಯ ಮಾಡಿತು. 1954ರಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರು ಆ ಘಟಕದ ಶಂಕುಸ್ಥಾಪನೆ ಮಾಡಿದರೆ, ಮರುವರ್ಷ ಪ್ರಧಾನಿ ನೆಹರೂ ಉದ್ಘಾಟನೆ ಮಾಡಿದರು. ಭಾರತದ ಜನಸಮೂಹದ ಆರ್ಥಿಕ, ಸಾಮಾಜಿಕ ಮುನ್ನಡೆಗೆ ಸಹಕಾರಿ ತತ್ವವೇ ಅತ್ಯಂತ ಸೂಕ್ತ ಮಾರ್ಗ ಎನ್ನುವ ವಿಚಾರಧಾರೆ ಅಂದು ದೇಶ ನಡೆಸುತ್ತಿದ್ದವರ ಪ್ರಾಮಾಣಿಕ ನಂಬಿಕೆಯಾಗಿತ್ತು. ಅದು ಪ್ರಭುತ್ವವು ಪ್ರಜೆಗಳಿಗೆ, ಪ್ರಜಾ ಸ್ವಾತಂತ್ರ್ಯಕ್ಕೆ ನೀಡಿದ್ದ ಮಹತ್ವದ ಕುರುಹೂ ಆಗಿತ್ತು. ಆನಂತರದಲ್ಲಿ ಸಂಘ ಅಮುಲ್  ಹೆಸರಿನಲ್ಲಿ ತನ್ನ ಉತ್ಪನ್ನಗಳನ್ನು ಹಲವಾರು ರಾಜ್ಯಗಳಿಗೆ ವಿತರಿಸಲು ಆರಂಭಿಸಿತು.

1964ರಲ್ಲಿ ಅಮುಲ್ ತನ್ನದೇ ಪಶು ಆಹಾರ ಉತ್ಪಾದನಾ ಘಟಕವನ್ನು ಆನಂದ್ ಗ್ರಾಮದಿಂದ ಎಂಟು ದೂರದ ಕಂಜಾರಿ ಎನ್ನುವ ಹಳ್ಳಿಯಲ್ಲಿ ಸ್ಥಾಪಿಸಿತು. ಅದರ ಉದ್ಘಾಟನೆಗೆ ಬರಲು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಒಪ್ಪಿಕೊಂಡರು. ಅಲ್ಲದೆ, ತಾನು ಒಂದು ದಿನ ಮುಂಚಿತವಾಗಿಯೇ ಬರುವೆನೆಂದೂ, ಒಂದು ಪುಟ್ಟ ಗ್ರಾಮದಲ್ಲಿ ಒಬ್ಬ ಸಾಮಾನ್ಯ ರೈತನ ಮನೆಯಲ್ಲಿ ವಾಸ್ತವ್ಯ ಹೂಡುವೆನೆಂದೂ ಅವರು ಇಚ್ಛಿಸಿದರು. ಆದರೆ ದೇಶದ ಪ್ರಧಾನಿ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡುತ್ತಾರೆಂದಾಗ, ಅವರ ಭದ್ರತೆಗಾಗಿ ಆ ಗ್ರಾಮಕ್ಕೆ ಕನಿಷ್ಠ ಮುನ್ನೂರು ಪೊಲೀಸರಾದರೂ ನಿಯೋಜಿತರಾಗುತ್ತಾರೆ, ಪ್ರಧಾನಿಗಳು ಬಯಸಿದಂತೆ ಗ್ರಾಮವಾಸ್ತವ್ಯ ಸಾಧ್ಯವಾಗದು ಎಂದು ಕುರಿಯನ್ ಅವರಿಗೆ ಚಿಂತೆಯಾಯಿತು. ಕೊನೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪ್ರಧಾನಿಗಳ ಗ್ರಾಮವಾಸ್ತವ್ಯದ ಕಾರ್ಯಕ್ರಮ ಸಂಪೂರ್ಣ ತಾನು ಯೋಜಿಸಿದಂತೆಯೇ ನಡೆಯಬೇಕು, ಒಬ್ಬನೇ ಒಬ್ಬ ಪೊಲೀಸ್ ಪೇದೆಯೂ ಆ ಹಳ್ಳಿಗೆ ಬರಬಾರದು ಎಂದು ಕುರಿಯನ್ ಕೇಳಿಕೊಂಡರು. ಪೊಲೀಸ್ ಮಹಾನಿರ್ದೇಶಕರು, ‘‘ಏನಾದರೂ ಲೋಪವಾದರೆ ನನ್ನ ಕುತ್ತಿಗೆ ಹೋಗುತ್ತದೆ, ನಿಮ್ಮದಲ್ಲ’’ ಎಂದು ಆಕ್ಷೇಪಿಸಿದರು. ಕುರಿಯನ್ ತನ್ನ ಯೋಜನೆಗೇ ಪಟ್ಟು ಹಿಡಿದಾಗ, ಮಹಾನಿರ್ದೇಶಕರೇ ಒಂದು ಸಲಹೆಯಿತ್ತು, ‘‘ಆ ಹಳ್ಳಿಯಲ್ಲಿ ಪ್ರಧಾನಿಗಳು ವಾಸ್ತವ್ಯ ಹೂಡಲಿದ್ದಾರೆ ಎಂದು ಯಾರಿಗೂ, ಯಾವ ಕಾರಣಕ್ಕೂ ತಿಳಿಸಕೂಡದು’’ ಎಂದರು. 
ಕುರಿಯನ್ ಒಪ್ಪಿ, ಆನಂದ ಗ್ರಾಮದಿಂದ ನಾಲ್ಕು ಕಿ.ಮೀ. ದೂರದಲ್ಲಿದ್ದ ಅಜರ್‌ಪುರ ಎನ್ನುವ ಹಳ್ಳಿಯ ರಮಣಭಾಯ್ ಪಟೇಲ್ ಎನ್ನುವ ರೈತನ ಮನೆಗೆ ತೆರಳಿ, ‘‘ನಾಳೆ ನಿಮ್ಮ ಮನೆಗೆ ಇಬ್ಬರು ವಿದೇಶೀಯರು ಬರಲಿದ್ದಾರೆ, ಅವರು ಒಂದು ರಾತ್ರಿ ನಿಮ್ಮ ಮನೆಯಲ್ಲಿಯೇ ಉಳಿಯುತ್ತಾರೆ, ನಿಮ್ಮ ಮನೆಯಲ್ಲಿನ ಸರಳ ವ್ಯವಸ್ಥೆ, ಸರಳ ಊಟವೇ ಸಾಕು, ವ್ಯವಸ್ಥೆ ಮಾಡಿ’’ ಎಂದು ಕೇಳಿಕೊಂಡರು.  ರಮಣಭಾಯ್‌ಗೆ ಆಶ್ಚರ್ಯವಾದರೂ ಒಪ್ಪಿಕೊಂಡರು.

ಶಾಸ್ತ್ರಿಯವರು ಆನಂದಕ್ಕೆ ಬಂದಿಳಿದಾಗ ಒಂದೇ ಕಾರಿನಲ್ಲಿ ಅವರು ಮತ್ತು ಗುಜರಾತ್ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಇಬ್ಬರೇ ಅಜರ್‌ಪುರಕ್ಕೆ ಹೋದರು. ಇಡೀ ಹಳ್ಳಿಯವರಿಗೆ ದಿಗ್ಭ್ರಮೆ. ಅಂದು ರಾತ್ರಿ ಸುಮಾರು ಎರಡು ಗಂಟೆಯವರೆಗೂ ಶಾಸ್ತ್ರಿಯವರು ಗ್ರಾಮಸ್ಥರಲ್ಲಿ ಸಂವಾದ ನಡೆಸಿದರು. ಬಹುಶಃ ಪ್ರಧಾನಿಗಳ ಮೊತ್ತಮೊದಲ  ಗ್ರಾಮವಾಸ್ತವ್ಯ ಅದೇ ಆಗಿದ್ದಿರಬಹುದು. ಮಾರನೆಯ ದಿನ ಪಶು ಆಹಾರ ಘಟಕವನ್ನು ಉದ್ಘಾಟಿಸಿದ ನಂತರ, ಕುರಿಯನ್ ಮನೆಗೆ ಬಂದು ಆತಿಥ್ಯ ಸ್ವೀಕರಿಸುವಾಗ ಶಾಸ್ತ್ರಿಯವರು, ‘‘ನಾನು ನಿನ್ನೆ ಎಷ್ಟು ಪ್ರಯತ್ನಿಸಿದರೂ ಅಮುಲ್‌ನ ಯಶಸ್ಸಿನ ಗುಟ್ಟನ್ನು ಕಾಣಲಾಗಲಿಲ್ಲ. ಅದನ್ನು ಕಾಣಲೆಂದೇ ಇಲ್ಲಿ ಗ್ರಾಮವಾಸ್ತವ್ಯ ಮಾಡಲೆಂದು ನಾನು ಬಂದಿದ್ದು. ಭಾರತದ ಬಹುತೇಕ ಎಲ್ಲ ಬಡ ಹಳ್ಳಿಗಳಂತೆಯೇ ಅಜರ್‌ಪುರ ಕೂಡ ಇದೆ. ಏನೂ ವಿಶೇಷವಿಲ್ಲ. ಇಲ್ಲಿ ಈ ಯಶಸ್ಸನ್ನು ಸಾಧಿಸಲು ನಿಮಗೆ ಹೇಗೆ ಸಾಧ್ಯವಾಯಿತು?’’ ಎಂದು ಕೇಳಿದರು. ಆಗ ಕುರಿಯನ್, ‘‘ತಾವು ಹೇಳಿದ್ದೆಲ್ಲ ನಿಜ. ಆದರೆ ಒಂದು ವ್ಯತ್ಯಾಸವನ್ನು ನೀವು ಗುರುತಿಸಲಿಲ್ಲ. ಅದೇನೆಂದರೆ ನಮ್ಮ ಸಹಕಾರ ಸಂಸ್ಥೆಯ ಮಾಲಕರು ರೈತರು. ಅವರು ನನ್ನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ನಾನು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಹಾಲೆಂಡ್, ಡೆನ್ಮಾರ್ಕ್, ನ್ಯೂಝಿಲ್ಯಾಂಡ್, ಅಮೆರಿಕ ದೇಶಗಳಲ್ಲಿ ಎಲ್ಲೆಲ್ಲಿ ಡೇರಿಗಳು ಯಶಸ್ವಿಯಾಗಿವೆಯೋ, ಅಲ್ಲೆಲ್ಲ ಆ ಡೇರಿಗಳ ಮಾಲಕರು ರೈತರೇ. ಅದನ್ನೇ ನಾವಿಲ್ಲಿ ಮಾಡಿದ್ದೇವೆ’’ ಎಂದರು.
ಅಂದೇ ‘‘ಅಮುಲ್‌ನ ಈ ಯಶಸ್ಸು ಇಡೀ ಭಾರತದ ಯಶಸ್ಸಾಗಬೇಕು, ನೀವು ನೇತೃತ್ವ ವಹಿಸಿಕೊಂಡು ನ್ಯಾಷನಲ್ ಡೇರಿ ಡೆವಲಪ್‌ಮೆಂಟ್ ಬೋರ್ಡ್ ಅನ್ನು ಸ್ಥಾಪಿಸಿ. ಅದರ ಮೂಲಕ ಸಹಕಾರೀ ಹಾಲು ಉತ್ಪಾದಕ ಸಂಘಗಳನ್ನು ಪ್ರೋತ್ಸಾಹಿಸೋಣ’’ ಎಂದರು ಲಾಲ್ ಬಹದ್ದೂರರು. ಕುರಿಯನ್ ‘‘ಆನಂದ್‌ನಲ್ಲೇ ಅದರ ಪ್ರಧಾನ ಕಚೇರಿಯಾಗುವುದಾದರೆ ಆದೀತು, ನಾನು ಬೋರ್ಡಿನಿಂದ ಒಂದು ರೂಪಾಯಿಯನ್ನೂ ತೆಗೆದುಕೊಳ್ಳುವುದಿಲ್ಲ, ನನಗಿಲ್ಲಿ ಸಂಬಳವಿದೆ’’ ಎಂದು ಷರತ್ತು ಹಾಕಿದರು. ಬೋರ್ಡ್ ಆನಂದ್‌ನಲ್ಲಿ ಸ್ಥಾಪನೆಯಾಯಿತು.

(ನಾಳೆ: ಭಾರತದ ಕ್ಷೀರಕ್ರಾಂತಿ...)

Similar News