ಸವದಿ ರಾಜೀನಾಮೆ ಲಿಂಗಾಯತ ಸಮುದಾಯದ ಮೇಲೆ ಪರಿಣಾಮ ಬೀರದು: ಸಚಿವ ಕೋಟ
ಉಡುಪಿ: ಲಕ್ಷ್ಮಣ ಸವದಿ ಅವರದ್ದೇ ಕಾರಣಗಳನ್ನು ಮುಂದೆ ಇಟ್ಟು ಪಕ್ಷವನ್ನು ಬಿಟ್ಟಿದ್ದಾರೆ. ಆದರೆ ಅದು ಲಿಂಗಾಯತ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಲಿಂಗಾಯತ ಸಮುದಾಯದ ಬಹುದೊಡ್ಡ ಬೇಡಿಕೆಯನ್ನು ಬಿಜೆಪಿ ಸರಕಾರ ಈಡೇರಿಸಿದೆ. ಯಡಿಯೂರಪ್ಪ ಬೊಮ್ಮಾಯಿ ಸೇರಿದಂತೆ ಅನೇಕ ಲಿಂಗಾಯತ ಮುಖಂಡರಿಂದ ಬಿಜೆಪಿ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಕಡಿಯಾಳಿಯ ಮಾಂಡವಿ ಟ್ರೇಡ್ ಸೆಂಟರ್‌ನಲ್ಲಿ ಸ್ಥಾಪಿಸಲಾದ ಬಿಜೆಪಿ ಜಿಲ್ಲಾ ಮಾಧ್ಯಮ ಕೇಂದ್ರವನ್ನು ರವಿವಾರ ಉದ್ಘಾಟಿಸಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಜಗದೀಶ್ ಶೆಟ್ಟರನ್ನು ಮುಖ್ಯಮಂತ್ರಿ ಹಾಗೂ ಕೇಂದ್ರದ ನಾಯಕರು ಭೇಟಿಯಾಗಿ ವಾಸ್ತವ ಸ್ಥಿತಿ ಬಗ್ಗೆ ಚರ್ಚೆ ಮಾಡಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುತ್ತದೆ. ಆದರೂ ಜಗದೀಶ್ ಶೆಟ್ಟರು ಸೇರಿದಂತೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾರ್ಯವನ್ನು ರಾಜ್ಯ ಬಿಜೆಪಿ ಮಾಡಲಿದೆ. ಯಾವುದೇ ಗೊಂದಲಗಳಿಲ್ಲದೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದರು.
ಕಾಂಗ್ರೆಸ್ ಅಧಿಕಾರ ಬಂದರೆ ಗೋಹತ್ಯೆ ಮತ್ತು ಮತಾಂತರ ಕಾಯಿದೆಯನ್ನು ವಾಪಾಸ್ಸು ಪಡೆಯುತ್ತೇವೆ ಎಂದು ಹೇಳುತ್ತಿದೆ. ರಾಜ್ಯ ಜನತೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ನೈಜ್ಯ ಮುಖ ಹೊರಗಡೆ ಬರುತ್ತಿದೆ. ಆಮಿಷಯೊಡ್ಡಿ ಮಾಡುವ ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂಬುದು ಇವರ ಇಂಗಿತ. ಜನಪರ ಕಾಯಿದೆಗಳನ್ನು ವಾಪಾಸು ಪಡೆಯುವ ಕಾಂಗ್ರೆಸ್‌ನ ನಿಲುವಿನ ಬಗ್ಗೆ ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಬಿಜೆಪಿ ಸರಕಾರ ನೀಡಿರುವ ಮೀಸಲಾತಿಯನ್ನು ವಾಪಾಸ್ಸು ಪಡೆಯುತ್ತೇವೆ ಎಂಬ ಸಿದ್ಧರಾಮಯ್ಯ ಹಾಗೂ ಡಿಕೆಶಿ ಹೇಳಿಕೆಯ ಅರ್ಥ, ಲಿಂಗಾಯತ ಮತ್ತು ಒಕ್ಕಲಿಗರಿಗೆ ನೀಡಿದ ಮೀಸಲಾತಿಯನ್ನು ವಾಪಾಸ್ಸು ಪಡೆಯುತ್ತೇವೆ ಎಂಬುದು. ಪರಿಶಿಷ್ಟ ಜಾತಿಯ ಶೇ.15ರಷ್ಟಿದ್ದ ಮೀಸಲಾತಿಯನ್ನು 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆರಿಸಿದ್ದೇವೆ. ಇದನ್ನು ವಾಪಾಸ್ಸು ಪಡೆದರೆ ಈ ಸಮುದಾಯಕ್ಕೆ ಕಾಂಗ್ರೆಸ್ ಬಹಳದೊಡ್ಡ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಅವರು ದೂರಿದರು.
ಕಾರ್ಕಳ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರು ಚುನಾವಣೆ ಸ್ಪರ್ಧಿಸುವ ಹಕ್ಕು ಹೊಂದಿದ್ದಾರೆ. ನಿಶ್ಚಯವಾಗಿ ಸುನೀಲ್ ಕುಮಾರ್ ಬಹಳ ಅಂತರದಿಂದ ಗೆಲವು ಸಾಧಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಮಾಡುವ ಮುತಾಲಿಕ್ ಅವರ ಹಕ್ಕು ಎಲ್ಲರೂ ಗೌರವಿಸುತ್ತೇವೆ ಎಂದ ಅವರು, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದ ಹಲವು ಜನಪರ ಯೋಜನೆ ಮತ್ತು ಶಾಸಕರ ಸಾಧನೆಗಳಿಂದ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಐದಕ್ಕೆ ಐದು ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ವಂಚಿತ ಸುಕುಮಾರ್ ಶೆಟ್ಟಿ, ಬಾಬು ಹೆಗ್ಡೆ ಸಹಿತ ಹಲವರನ್ನು ಪಕ್ಷದ ಪ್ರಮುಖ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಒಂದಾಗಿ ಒಟ್ಟಾಗಿ ಬೈಂದೂರು ಅಭ್ಯರ್ಥಿ ಗುರುರಾಜ್ ಅವರನ್ನು ಬಹಳ ದೊಡ್ಡ ಅಂತರದಲ್ಲಿ ಗೆಲ್ಲಿಸಿಕೊಡುತ್ತೇವೆ. ಟಿಕೆಟ್ ಬದಲಾವಣೆ ಆದಾಗ ನೋವು ಆಗುವುದು ಸಹಜ. ಅದನ್ನೆಲ್ಲ ಸರಿಪಡಿಸಿ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್, ದಿಲ್ಲಿ ಶಾಸಕ ವಿಜಯೇಂದ್ರ ಗುಪ್ತ, ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.