ಬಜೆ ಡ್ಯಾಂನಲ್ಲಿ 25 ದಿನಗಳಿಗಷ್ಟೇ ನೀರಿನ ಸಂಗ್ರಹ !

ಗುಂಡಿಗಳಿಂದ ನೀರು ಪಂಪಿಂಗ್: ಜಲಾಶಯದಲ್ಲಿ 4.5 ಮೀಟರ್ ನೀರು

Update: 2023-04-16 12:17 GMT

ಉಡುಪಿ, ಎ.16: ಬಿಸಿಲ ತಾಪದಿಂದ ಉಡುಪಿ ನಗರಸಭೆಯ 35 ವಾರ್ಡ್ ಗಳಿಗೆ ನೀರು ಪೂರೈಕೆ ಮಾಡುವ ಬಜೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಮಳೆ ಬಾರದೆ ಇದೇ ಪರಿಸ್ಥಿತಿ ಮುಂದುವರಿದರೆ 25 ದಿನಗಳಲ್ಲಿ ಬಜೆ ಅಣೆಕಟ್ಟು ಖಾಲಿಯಾಗಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಬಜೆ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ 6 ಮೀಟರ್ ಆಗಿದ್ದು, ಉಡುಪಿಗೆ ನಿತ್ಯ ನೀರಿನ ಪ್ರಮಾಣ 25ರಿಂದ 30 ಎಂಎಲ್‌ಡಿ ಅಗತ್ಯವಿದೆ. ಪ್ರಸ್ತುತ ಬಜೆ ಡ್ಯಾಂನಲ್ಲಿ 4.5 ಮೀಟರ್ ನೀರಿದೆ. ಅದರಲ್ಲಿ 1.2 ಮೀಟರ್ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಬಳಕೆಗೆ ಲಭ್ಯವಿರುವುದು ಕೇವಲ 3.3 ಮೀಟರ್ ನೀರು ಮಾತ್ರ. ಉಡುಪಿ ನಗರಕ್ಕೆ ಪ್ರತಿದಿನ 6 ರಿಂದ 7 ಸೆಂ.ಮೀ ನೀರಿನ ಅಗತ್ಯವಿದ್ದು, ಸದ್ಯ ಜಲಾಶಯದಲ್ಲಿ ಸಂಗ್ರಹ ಇರುವ ನೀರನ್ನು ಮೇ 10ರವರೆಗೆ ಬಳಕೆ ಮಾಡಬಹುದು ಎಂದು ಅಧಿಕಾರಿಗಳ ಲೆಕ್ಕಚಾರ.

ಕಳೆದ ವರ್ಷ ಇದೇ ದಿನಕ್ಕೆ ಬಜೆ ಡ್ಯಾಂನಲ್ಲಿ 5.3 ಮೀಟರ್ ನೀರಿನ ಸಂಗ್ರಹ ಇತ್ತು. ಶಿರೂರು ಬಳಿಯ 4.5 ಮೀಟರ್ ಸಾಮರ್ಥ್ಯದ ನೀರಿನ ಸಂಗ್ರಹಾಗಾರವೂ ಈ ಬಾರಿ ಅವಧಿಗೂ ಮುನ್ನವೇ ಖಾಲಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶಿರೂರಿನಲ್ಲಿ 4.3 ಮೀಟರ್ ನೀರಿನ ಸಂಗ್ರಹವಿತ್ತು.

ಹಲವೆಡೆ ನೀರಿನ ಸಮಸ್ಯೆ

ಬಜೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆಯೇ ನಗರಸಭೆಯ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಲ್ಲದೆ ಎತ್ತರದ ಪ್ರದೇಶಗಳಿಗೆ ನೀರು ಪೂರೈಕೆಗೆ ಸಾಕಷ್ಟು ತೊಡಕಾಗುತ್ತಿದೆ.  
ಬೈಲೂರು ವಾರ್ಡಿನ ಮಿಷನ್ ಕಾಂಪೌಂಡ್, ಪೊಲೀಸ್ ಕ್ವಾಟ್ರಸ್, ಭಜನಾ ಮಂದಿರ, ಎಸ್‌ಬಿಐ ಕಾಲೋನಿ, ಗೋಪಾಲಪುರ, ಕೊಡಂಕೂರು, ಅನಂತ ನಗರ, ಚಿಟ್ಪಾಡಿ, ಇಂದ್ರಾಳಿ, ಕೊಳಂಬೆ, ಸರಳೆಬೆಟ್ಟು, ಅಜ್ಜರಕಾಡು ಸೇರಿದಂತೆ ಮಣಿಪಾಲದ ಹಲವು ಪ್ರದೇಶಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ.

ಮಳೆ ಬರುವವರೆಗೆ ಬಜೆಯಲ್ಲಿ ನೀರನ್ನು ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ನಗರಸಭೆ 24 ತಾಸು ನೀರು ಪಂಪಿಂಗ್ ಮಾಡುವ ಬದಲು ಶಿಫ್ಟ್ ಮೂಲಕ ಮಾಡುತ್ತಿದೆ. ಉಡುಪಿ ನಗರದಲ್ಲಿ ಒಟ್ಟು 21,000 ನಲ್ಲಿಗಳ ಸಂಪರ್ಕ ಇದೆ. ಅದೇ ರೀತಿ ನಗರಸಭೆ ಅಧೀನದಲ್ಲಿ 22 ಬೋರ್‌ವೆಲ್‌ಗಳು ಮತ್ತು 18 ಬಾವಿಗಳಿವೆ.

ಗುಂಡಿಗಳಿಂದ ಪಂಪಿಂಗ್

ಜಿಲ್ಲೆಯಲ್ಲಿ ಸಾಮನ್ಯವಾಗಿ ಮೇ ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತದೆ. ಈ ಬಾರಿ ಅವಧಿಗೂ ಮುನ್ನವೇ ಮಳೆ ಬೀಳಬೇಕು. ಇಲ್ಲವಾದರೆ ಸ್ವರ್ಣಾ ನದಿ ಪಾತ್ರದಲ್ಲಿರುವ ಶಿರೂರು, ಮಾಣೈ, ಭಂಡಾರಿಬೆಟ್ಟು ಭಾಗದ ಬೃಹತ್ ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪಿಂಗ್ ಮೂಲಕ ಬಜೆ ಜಲಾಯಶಕ್ಕೆ ಹರಿಸಿ ಅಲ್ಲಿಂದ ನೀರು ಪೂರೈಕೆ ಮಾಡಬೇಕಾಗುತ್ತದೆ.

ಎ.19ರಂದು ನೀರಿನ ಮಟ್ಟ ತೀರ ಕೆಳಮಟ್ಟಕ್ಕೆ ಅಂದರೆ 2.96ಮೀ.ಗೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ  ಗುಂಡಿಗಳಲ್ಲಿ ಶೇಖರಣೆಯಾಗಿರುವ ನೀರನ್ನು ಮೋಟಾರ್ ಅಳವಡಿಸಿ ಪಂಪಿಂಗ್ ಮಾಡಿ ಬಜೆ ಡ್ಯಾಂಗೆ ಹರಿಸುವ ಕೆಲಸ ಕೈಗೆತ್ತಿಕೊಳ್ಳಲಾಯಿತು. ಇದರಿಂದ ಬಜೆಯಲ್ಲಿ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಲಾಯಿತು. ಅದರಂತೆ ಎ.20ರಂದು 4.19ಮೀ., ಎ.21ರಂದು 4.35ಮೀ. ಮತ್ತು ಎ.22ರಂದು 5.16ಮೀ.ಗೆ ಏರಿಕೆಯಾಗಿದೆ.

ಈಗಾಗಲೇ ಐದು ಹೊಂಡಗಳಿಂದ ನೀರು ಪಂಪಿಂಗ್ ಮಾಡಿ ಬಜೆ ಜಲಾಶಯಕ್ಕೆ ಹರಿಸಲಾಗಿದೆ. ಇನ್ನು 4-5 ಹೊಂಡಗಳಿದ್ದು, ಅಲ್ಲಿಂದಲೂ ನೀರು ಹರಿಸುವ ಕಾರ್ಯ ಮುಂದುವರೆಸಲಾಗುತ್ತದೆ. ಒಟ್ಟಾರೆ ನಗರಕ್ಕೆ ನೀರು ಪೂರೈಸಲು ಅಧಿಕಾರಿಗಳು ಪ್ರತಿದಿನ ಹರಸಾಹಸ ಪಡುತ್ತಿದ್ದಾರೆ.

ಟೆಂಡರ್‌ಗೆ ಸ್ಪಂದನೆ ಇಲ್ಲ

ನದಿಯಲ್ಲಿ ಎಲ್ಲ ಗುಂಡಿಗಳ ನೀರು ಖಾಲಿಯಾಗಿ ಬಜೆ ಬತ್ತಿ ಹೊದರೆ ಮುಂದೆ ಮನೆ ಮನೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಅದಕ್ಕಾಗಿ ನಗರಸಭೆ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಟೆಂಡರ್ ಕರೆದಿದ್ದಾರೆ. ಆದರೆ ಅದಕ್ಕೆ ಈವರೆಗೆ ಯಾರು ಕೂಡ ಮುಂದೆ ಬಂದಿಲ್ಲ. ಆದುದರಿಂದ ಆ ಟೆಂಡರ್ ಪ್ರಕ್ರಿಯೆ ಇನ್ನು ಬಾಕಿ ಉಳಿದುಕೊಂಡಿದೆ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ್ ತಿಳಿಸಿದ್ದಾರೆ.

2021ರಲ್ಲಿ ಮಾ.10ರವರೆಗೂ ನಿರಂತರ ಮಳೆ ಬಿದ್ದಿತ್ತು. ಪರಿಣಾಮ ಬೇಸಗೆ ಆರಂಭದವರೆಗೂ ಬಜೆ ಜಲಾಶಯಕ್ಕೆ ನೀರಿನ ಒಳ ಹರಿವು ಇತ್ತು. ಈ ಬಾರಿ ಜನವರಿಯಲ್ಲಿಯೇ ಒಳ ಹರಿವು ಸಂಪೂರ್ಣವಾಗಿ ನಿಂತು ಹೋಗಿರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ.

ವಾರಾಹಿ ಯೋಜನೆ ವಿಳಂಬ

ವಾರಾಹಿ ಕುಡಿಯುವ ನೀರಿನ ಯೋಜನೆ ನಿಗದಿತ ಅವಧಿಯೊಳಗೆ ಪೂರ್ಣಗೊಂಡಿದ್ದರೆ ಉಡುಪಿ ನಗರದ ಜನತೆಗೆ 365 ದಿನ 24 ತಾಸು ಕುಡಿಯುವ ನೀರು ದೊರೆಯುತ್ತಿತ್ತು.

ವಾರಾಹಿಯಿಂದ 38.8 ಕಿ.ಮೀ ಉದ್ದದ ಪೈಪ್‌ಲೈನ್ ಮೂಲಕ ಪ್ರತಿದಿನ 45 ಎಂಲ್‌ಡಿ ನೀರನ್ನು ಉಡುಪಿಗೆ ಹರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ತೀರಾ ನಿಧನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಯಿಂದ ವಾರಾಹಿ ಯೋಜನೆಯ ಅನುಷ್ಠಾನ ಇನ್ನಷ್ಟು ವಿಳಂಬವಾಗುತ್ತಿದೆ.  ಮೂರು ಪ್ಯಾಕೇಜ್‌ಗಳಲ್ಲಿ ವಾರಾಹಿ ಕಾಮಗಾರಿ ನಡೆಯುತ್ತಿದ್ದು 2024ಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಬಜೆಯಲ್ಲಿರುವ ಗುಂಡಿಗಳಿಂದ ಜಲಾಶಯಕ್ಕೆ ನೀರು ಪಂಪಿಂಗ್ ಮೂಲಕ ಹರಿಸುವ ಕಾರ್ಯ ನಡೆಯುತ್ತಿದೆ. ಈಗಲೂ ಎತ್ತರ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತಿದ್ದೇವೆ. ಆದರೆ ಪ್ರಮಾಣದಲ್ಲಿ ಕಡಿಮೆ ಆಗಿರಬಹುದು. ಈಗ ಇರುವ ನೀರು ಮೇ 10ಕ್ಕೆ ಸಾಕಾಗುತ್ತದೆ. ಮಳೆ ಬಂದರೆ ಬಾರದಿದ್ದರೆ ತುಂಬಾ ಕಷ್ಟ ಅನುಭವಿಸ ಬೇಕಾಗುತ್ತದೆ. ಆದುದರಿಂದ ಜನರು ನೀರನ್ನು ಮಿತವಾಗಿ ಬಳಕೆ ಮಾಡಬೇಕು".
-ಆರ್.ಪಿ.ನಾಯ್ಕ್, ಪೌರಾಯುಕ್ತರು, ನಗರಸಭೆ

Similar News