ಎರಡೇ ತಿಂಗಳಲ್ಲಿ ಅತೀಕ್ ಅಹ್ಮದ್ ಸೇರಿದಂತೆ ಉಮೇಶ್ ಪಾಲ್ ಕೊಲೆ ಹಿಂದಿನ ಆರು ಜನರ ಹತ್ಯೆ
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ತನ್ನ ನಿವಾಸದ ಹೊರಗೆ ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರ ಹತ್ಯೆ ನಡೆದು ಎರಡು ತಿಂಗಳುಗಳು ಕಳೆಯುವ ಮುನ್ನವೇ ಗ್ಯಾಂಗ್‌ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನಿಗೆ ಸಂಬಂಧಿಸಿದವರು ಸೇರಿದಂತೆ ಆರು ಜನರು ಕೊಲ್ಲಲ್ಪಟ್ಟಿದ್ದಾರೆ. ಅತೀಕ್, ಆತನ ಸೋದರ ಅಶ್ರಫ್, ಪುತ್ರ ಅಸದ್, ಸಹಚರ ಅರ್ಬಾಝ್, ವಿಜಯ ಚೌಧರಿ ಅಲಿಯಾಸ್ ಉಸ್ಮಾನ್ ಮತ್ತು ಗುಲಾಂ ಹಸನ್ ಕೊಲೆಯಾದವರ ಪಟ್ಟಿಯಲ್ಲಿ ಸೇರಿದ್ದಾರೆ.
ಶನಿವಾರ ತಡರಾತ್ರಿ ಅತೀಕ್ ಮತ್ತು ಅಶ್ರಫ್ರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಉಪಸ್ಥಿತಿಯಲ್ಲಿಯೇ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಮಾಧ್ಯಮಗಳೊಂದಿಗೆ ಸಂವಾದದ ನಡುವೆಯೇ ಪತ್ರಕರ್ತರ ಸೋಗಿನಲ್ಲಿದ್ದ ಮೂವರು ದುಷ್ಕರ್ಮಿಗಳು ತೀರ ಹತ್ತಿರದಿಂದ ಹಾರಿಸಿದ ಗುಂಡುಗಳಿಗೆ ಅತೀಕ್ ಮತ್ತು ಅಶ್ರಫ್ ಬಲಿಯಾಗಿದ್ದಾರೆ.
ಗುರುವಾರವಷ್ಟೇ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಅತೀಕ್ ನ ಪುತ್ರ ಅಸದ್ ಮತ್ತು ಆತನ ಸಹಚರ ಗುಲಾಂ ಹಸನ್ ಝಾನ್ಸಿ ಬಳಿ ಉತ್ತರ ಪ್ರದೇಶ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದರು.
ಉಮೇಶ್ ಪಾಲ್ ಹತ್ಯೆಯಲ್ಲಿ ಹಂತಕರು ಬಳಸಿದ್ದ ವಾಹನದ ಚಾಲಕ ಅರ್ಬಾಝ್ ಫೆ.27ರಂದು ಪ್ರಯಾಗರಾಜ್ ನಲ್ಲಿ ಕೊಲ್ಲಲ್ಪಡುವುದರೊಂದಿಗೆ ಮೊದಲ ಎನ್ಕೌಂಟರ್ ನಡೆದಿತ್ತು. ಇದರ ಬಳಿಕ ಮಾ.6ರಂದು ಪ್ರಯಾಗ್ರಾಜ್ ನಲ್ಲಿಯೇ ಉಮೇಶ್ ಪಾಲ್ ಹತ್ಯೆ ಆರೋಪಿ ವಿಜಯ ಅಲಿಯಾಸ್ ಉಸ್ಮಾನ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟಿದ್ದ.
ಅತೀಕ್ ನ ಸಹಚರರಾದ ಗುಡ್ಡು ಮುಸ್ಲಿಮ್, ಅರ್ಮಾನ್ ಮತ್ತು ಸಾಬೀರ್ ಈಗಲೂ ತಲೆ ಮರೆಸಿಕೊಂಡಿದ್ದು, ಪ್ರತಿಯೊಬ್ಬರೂ ತಮ್ಮ ತಲೆಯ ಮೇಲೆ ಐದು ಲಕ್ಷ ರೂ.ಗಳ ಬಹುಮಾನ ಹೊತ್ತಿದ್ದಾರೆ.
ಅಪಹರಣ ಮತ್ತು ಕೊಲೆ ಸೇರಿದಂತೆ ಹಲವಾರು ಅಪರಾಧಗಳಿಗಾಗಿ ಉತ್ತರ ಪ್ರದೇಶ ಪೊಲೀಸರ ಕಸ್ಟಡಿಯಲ್ಲಿದ್ದ ಅತೀಕ್ ಮತ್ತು ಅಶ್ರಫ್ ಶನಿವಾರ ತಡರಾತ್ರಿ ಮಾಧ್ಯಮಗಳ ಕ್ಯಾಮೆರಾಗಳ ಮುಂದೆಯೇ ಹತ್ಯೆಯಾಗಿದ್ದಾರೆ. ಅವರ ಹಂತಕರು ಕೈಗಳನ್ನು ಮೇಲಕ್ಕೆತ್ತಿ ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳಿಗೆ ಶರಣಾಗಿದ್ದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ.
ಈ ಸಾವುಗಳೊಂದಿಗೆ ಅತೀಕ್ ನ ಕುಟುಂಬ ಹೆಚ್ಚುಕಡಿಮೆ ನಿರ್ನಾಮಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.
ಅತೀಕ್ ಪತ್ನಿ ಶಾಯಿಸ್ತಾ ಪರ್ವೀನ್ ಕೂಡ ಉಮೇಶ ಪಾಲ್ ಹತ್ಯೆ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಆಕೆಯ ಸುಳಿವು ನೀಡುವವರಿಗೆ 50,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿದೆ.
ಅತೀಕ್ ನ ಇಬ್ಬರು ಪುತ್ರರಾದ ಉಮರ್ ಮತ್ತು ಅಲಿ ಜೈಲಿನಲ್ಲಿದ್ದರೆ, ಆತನ ಇಬ್ಬರು ಅಪ್ರಾಪ್ತ ವಯಸ್ಕ ಮಕ್ಕಳು ಪೊಲೀಸರ ನಿಕಟ ನಿಗಾದಡಿ ಮಕ್ಕಳ ರಕ್ಷಣಾ ಗೃಹದಲ್ಲಿದ್ದಾರೆ.
ತನಗೆ ಜೀವ ಬೆದರಿಕೆಯಿದೆ ಎಂದು ಅತೀಕ್ ಆತಂಕ ವ್ಯಕ್ತಪಡಿಸಿದ್ದನ್ನು ಇಲ್ಲಿ ಗಮನಿಸಬಹುದು. ಅಸದ್ ಮತ್ತು ಗುಲಾಂ ಹಸನ್ ಹತ್ಯೆಗೆ ಒಂದು ತಿಂಗಳು ಮೊದಲು ಉಮೇಶ ಪಾಲ್ ಕೊಲೆ ಪ್ರಕರಣದಲ್ಲಿ ಕಸ್ಟಡಿಯಲ್ಲಿ ತನ್ನ ರಕ್ಷಣೆಗಾಗಿ ಅತೀಕ್ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದ.
ಆದರೆ ಇದು ತಾನು ಹಸ್ತಕ್ಷೇಪ ಮಾಡುವ ವಿಷಯವಲ್ಲ ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆತನಿಗೆ ಸೂಚಿಸಿತ್ತು. ‘ಸರಕಾರವು ನಿನ್ನ ಕಾಳಜಿಯನ್ನು ವಹಿಸಲಿದೆ ’ ಎಂದು ಅದು ಅತೀಕ್ ಗೆ ಹೇಳಿತ್ತು.