ಬಿಜೆಪಿ ಬಂಡಾಯದ ಒಳ ಗುಟ್ಟುಗಳು

Update: 2023-04-17 06:19 GMT

ನಾಗಪುರದ ಜಗದ್ಗುರುಗಳಿಗೆ ಪ್ರಹ್ಲಾದ್ ಜೋಶಿಯವರು ಮುಖ್ಯ ಮಂತ್ರಿಯಾಗುವುದು ಬೇಕಾಗಿದೆ. ಅದಕ್ಕಾಗಿ ಇಷ್ಟೆಲ್ಲಾ ಕಸರತ್ತು ನಡೆದಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಎರಡು ತಿಂಗಳ ಹಿಂದೆಯೇ ಪೇಶ್ವ ವಂಶದ ಬ್ರಾಹ್ಮಣ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಕುರಿತು ನಾಗಪುರದ ಆರೆಸ್ಸೆಸ್ ಶಕ್ತಿ ಕೇಂದ್ರದಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದ್ದರು.ಆಗ ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ವಿರೊಧಿಸಿ ಬಿಜೆಪಿ ನಾಯಕರಾಗಲಿ, ಪ್ರಹ್ಲಾದ್ ಜೋಶಿ ಅವರಾಗಲಿ ಒಂದೇ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಈ ವಿದ್ಯಮಾನಗಳನ್ನು ಗಮನಿಸಿದರೆ ಕುಮಾರಸ್ವಾಮಿ ಆಗ ಹೇಳಿದ ಮಾತು ನಿಜವಾದಂತಾಗಿದೆ.



ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ನಾಮಪತ್ರಗಳ ಸಲ್ಲಿಕೆ ಆರಂಭವಾಗಿದೆ. ಆದರೂ ರಾಜಕೀಯ ಪಕ್ಷಗಳ ಅದರಲ್ಲೂ ಬಿಜೆಪಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ದಿಲ್ಲಿಯಿಂದ ಬರುತ್ತಲೇ ಇಲ್ಲ.ಈ ನಡುವೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಏಕದಂ ಕಾಂಗ್ರೆಸ್ ಮನೆಯೊಳಗೆ ಬಂದು ಕೂತಿದ್ದಾರೆ. ಅವರೊಬ್ಬರೇ ಅಲ್ಲ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ತುಂಬಾ ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ.

ದಕ್ಷಿಣ ಭಾರತದ ತನ್ನ ಏಕೈಕ (ಕಮಲದ) ಕೋಟೆಯಾದ ಕರ್ನಾಟಕವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂದು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಜಗದ್ಗುರುಗಳು ಮತ್ತು ಅವರ ದಿಲ್ಲಿಯ ಶಾಖಾ ಮಠದ ಮರಿ ಜಗದ್ಗುರುಗಳು ರೂಪಿಸಿದ ಷಡ್ಯಂತ್ರ ಉಲ್ಟಾ ಆಗತೊಡಗಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಜನ ನಾಯಕರೇ ಇಲ್ಲ.ಇದ್ದೊಬ್ಬ ಯಡಿಯೂರಪ್ಪನವರನ್ನು ಅತ್ಯಂತ ಅವಮಾನಕಾರಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದು ಮಾತ್ರವಲ್ಲದೆ ಅಭ್ಯರ್ಥಿಗಳ ಆಯ್ಕೆಯ ಸಭೆಯಿಂದಲೂ ಅವರನ್ನು ಹೊರಗೆ ಕಳಿಸಲಾಯಿತು.

ಅವರಿಗೆ ತಾತ್ಕಾಲಿಕ ಪರ್ಯಾಯ ಎಂದು ಬಸವರಾಜ ಬೊಮ್ಮಾಯಿ ಯವರನ್ನು ತರಲಾಯಿತು. ತನ್ನ ಅಧಿಕಾರಾವಧಿಯನ್ನು ನಾಗಪುರದ ಗುರುಗಳು ಮತ್ತು ಅವರ ಮರಿ ಗುರುಗಳನ್ನು ಒಲೈಸುವುದರಲ್ಲೇ ಕಳೆದ ಬೊಮ್ಮಾಯಿಯವರು ಆಡಳಿತ ವೈಫಲ್ಯಗಳನ್ನು, ಅದರಲ್ಲೂ ವಿಶೇಷವಾಗಿ ಶೇ.40 ರ ಹಗರಣ, ರೀಡೂ ಮುಂತಾದ ಪ್ರಕರಣಗಳನ್ನು ಮುಚ್ಚಿ ಹಾಕಲು ಉಗ್ರ ಹಿಂದುತ್ವದ ಮೊರೆ ಹೋದರು. ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಜನರು ಮಾತನಾಡಬಾರದೆಂದು ತಮ್ಮ ಕೈಗೊಂಬೆ ಮಾಧ್ಯಮಗಳ ಮೂಲಕ ಲವ್ ಜಿಹಾದ್, ಹಿಜಾಬ್, ಮತಾಂತರ, ಹಲಾಲ್, ಅಝಾನ್, ಬಾಂಬ್ ಸ್ಫೋಟ, ಹಿಂದೂ ನಾಯಕರ ಹತ್ಯೆ ಸಂಚು ಹೀಗೆ ಏನೇನೋ ಕತೆ ,ಕಾದಂಬರಿಗಳನ್ನು ಹೆಣೆದರೂ ಕೊನೆಗೆ ಅವೆಲ್ಲ ಠುಸ್ ಎಂದು ಜನ ಮತ್ತೆ ಬೆಲೆ ಏರಿಕೆ ,ಬಡತನದ ಬಗ್ಗೆ ಮಾತಾಡುತ್ತಿದ್ದಾರೆ.

ಏತನ್ಮಧ್ಯೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಘಟಾನುಘಟಿ ನಾಯಕರನ್ನೇ ಕೈ ಬಿಡಲಾಗಿದೆ. ಟಿಕೆಟ್‌ಗಾಗಿ ಮುಸಲ್ಮಾನರ ವಿರುದ್ಧ ಹಾದಿ ಬೀದಿಯಲ್ಲಿ ಅರಚಾಡುತ್ತಿದ್ದ ಈಶ್ವರಪ್ಪನ ನಾಲಿಗೆಗೆ ಬಿಜೆಪಿ ಹೈಕಮಾಂಡಗ ಬರೆ ಕೊಟ್ಟಿದೆ. ಇನ್ನು ಸೋಮಣ್ಣ ಮತ್ತು ಅಶೋಕರ ಪರಿಸ್ಥಿತಿ ಯಾರಿಗೂ ಬರಬಾರದು. ಈ ವಯಸ್ಸಿನಲ್ಲಿ ನುಂಗುವಂತಿಲ್ಲ, ಉಗುಳುವಂತಿಲ್ಲ.

'ದಶಕಗಳ ಕಾಲ ಪ್ರತಿನಿಧಿಸಿದ್ದ ಕ್ಷೇತ್ರವನ್ನು ಬಿಟ್ಟು ಮೇಲಿನವರು ಹೇಳಿದರೆಂದು ಸಿದ್ದರಾಮಯ್ಯನವರ ವಿರುದ್ಧ ಮನಸ್ಸಿಲ್ಲದ ಮನಸ್ಸಿನಿಂದ ಸ್ಪರ್ಧೆ ಮಾಡಬೇಕಲ್ಲ' ಎಂದು ಟಿವಿ ವರದಿಗಾರರೊಬ್ಬರು ಕೇಳಿದಾಗ ಸೋಮಣ್ಣನವರ ಕಣ್ಣತುಂಬ ನೀರಿತ್ತು. ಅಶೋಕರಂತೂ ಡಿ.ಕೆ.ಶಿವಕುಮಾರ್ ಎದುರು ಸ್ಪರ್ಧಿಸುವುದು ತಮಗೆ ಗೊತ್ತೇ ಇರಲಿಲ್ಲ, ಪಕ್ಷದ ಹೈಕಮಾಂಡ್ ತೀರ್ಮಾನ ಎಂದು ಸಪ್ಪೆ ಮುಖದಲ್ಲಿ ಹೇಳಿದರು.

ಈಶ್ವರಪ್ಪ ಮತ್ತು ಉಡುಪಿ ಭಟ್ಟರ ಪರಿಸ್ಥಿತಿ ಇನ್ನೂ ಗಂಭೀರ. ಟಿಕೆಟ್‌ಗಾಗಿ ಮುಸ್ಲಿಮರನ್ನು ಬೈದದ್ದೇ ಬೈದದ್ದು. ಹಿಜಾಬ್, ಹಲಾಲ್ ಕಟ್ ಎಂದೂ ಕೂಗಾಡಿದ್ದು, ಯಾವುದು ಉಪಯೋಗಕ್ಕೆ ಬರಲಿಲ್ಲ. ಸೋಮಣ್ಣನವರಿಗೆ ವರುಣಾನೂ ಇಲ್ಲ, ಚಾಮರಾಜನಗರನೂ ಇಲ್ಲ ಎನ್ನುವ ಪರಿಸ್ಥಿತಿ, ಅಶೋಕ್ ಸೋಲಿಸಲು ಡಿಕೆಶಿ ಸೋದರರು ಸವಾಲು ಹಾಕಿರುವುದರಿಂದ ಪದ್ಮನಾಭ ನಗರವೂ ಅನುಮಾನ, ಸಿದ್ದರಾಮಯ್ಯನವರನ್ನು ಸೊಲಿಸುವ ಟಾಸ್ಕ್ ಪೂರೈಸದಿದ್ದರೆ ಸೋಮಣ್ಣ ನವರ ಬಾಲ ಕಟ್, ಅಶೋಕ್ ಸಾಮ್ರಾಟರದೂ ಇದೇ ಪರಿಸ್ಥಿತಿ.

ಇನ್ನು ಐಪಿಎಸ್ ಭಾಸ್ಕರರಾವ್‌ಗೆ ಟಿಕೆಟ್ ಸಿಕ್ಕಿದ್ದರೂ ಓಟಿಗಾಗಿ ಸೈಲಂಟ್ ಸುನೀಲನ ಮನೆ ಬಾಗಿಲಿಗೆ ಹೋಗುವ ದೈನೇಸಿ ಪರಿಸ್ಥಿತಿ.ಸೋಮಣ್ಣ ಬೆಂಗ ಳೂರಿನ ಗೋವಿಂದರಾಜ ನಗರ ಕ್ಷೇತ್ರದಲ್ಲಿ ದಶಕಗಳ ಕಾಲ ಜನಸಾಮಾನ್ಯರ ವಿಶ್ವಾಸ ಗಳಿಸಿ ಗಟ್ಟಿ ಮತಕ್ಷೇತ್ರವನ್ನು ನಿರ್ಮಾಣ ಮಾಡಿಕೊಂಡವರು. ಈ ಬಾರಿ ಮಗನನ್ನು ಅಲ್ಲಿ ನಿಲ್ಲಿಸಿ ಬೇರೆಡೆ ಹೋಗಲು ಬಯಸಿದ್ದರು. ಏಕಾಏಕಿ ದಿಲ್ಲಿ ಮರಿ ಜಗದ್ಗುರುಗಳು ನೀಡಿರುವ ಹೊಡೆತದಿಂದ ತತ್ತರಿಸಿದ ಸೋಮಣ್ಣ ಹಿಂದೆ ಯಡಿಯೂರಪ್ಪನವರ ಮನೆಯಲ್ಲಿ ಸೇವಕನಾಗಿದ್ದ ಕಾಪು ನಂಜುಂಡಸ್ವಾಮಿ ಬಳಿ ಹೋಗಿ ವರುಣಾದಲ್ಲಿ ನನ್ನನ್ನು ನೀನೇ ಕಾಪಾಡ ಬೇಕಪ್ಪ ಎಂದು ಕೈ ಮುಗಿದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಜೆಪಿ ಒಳಗಿನ ಮೂಲಗಳ ಪ್ರಕಾರ ಒಟ್ಟಾರೆ ಈ ಬೆಳವಣಿಗೆಯ ಹಿನ್ನೆಲೆ ಯೇನು? ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಪಕ್ಷದ ಹಿರಿಯ ನಾಯಕರಿಗೆ ಯಾಕೆ ಟಿಕೆಟ್ ನಿರಾಕರಿಸಲಾಯಿತು? ಜಗದೀಶ್ ಶೆಟ್ಟರ್ ಟಿಕೆಟ್‌ಗಾಗಿ ಯಾಕೆ ಪಟ್ಟು ಹಿಡಿದು ಕೊನೆಗೆ ಬಿಜೆಪಿಯಿಂದ ಹೊರಗೆ ಹೋದರು? ಈ ಅಂಶಗಳನ್ನು ಪರಾಮರ್ಶಿಸಿದಾಗ ಉತ್ತರ ಸಿಗುತ್ತದೆ.

ಜಗದೀಶ್ ಶೆಟ್ಟರ್ ನನಗೆ 1969 ರಿಂದ ಗೊತ್ತು. ಅವರ ತಂದೆ ಎಸ್.ಎಸ್.ಶೆಟ್ಟರ್ ಅಂದಿನ ಭಾರತೀಯ ಜನಸಂಘದ ನಾಯಕರಾಗಿದ್ದರು. ಅವರಿಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ ಜಗದೀಶ್ ಶೆಟ್ಟರ್ ದೊಡ್ಡಪ್ಪ ಸದಾಶಿವ ಶೆಟ್ಟರ್ ಎಂಬವರು1967ರ ವಿಧಾನಸಭಾ ಚುನಾವಣೆ ಯಲ್ಲಿ ಚುನಾಯಿತರಾಗಿ ಬಂದರು. 1968ರ ಕೊನೆಯಲ್ಲಿ ಹೃದಯಾಘಾತ ದಿಂದ ನಿಧನರಾದರು. ಆಗ ಜನಸಂಘದ ನಾಯಕರಾಗಿದ್ದ ಜಗನ್ನಾಥರಾವ್ ಜೋಶಿಯವರು ಸದಾಶಿವ ಶೆಟ್ಟರ್ ಅವರ ಸೋದರ ಎಸ್.ಎಸ್.ಶೆಟ್ಟರ್ (ವಕೀಲರನ್ನು) 1969ರ ಹುಬ್ಬಳ್ಳಿ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆ ಯಲ್ಲಿ ಪಕ್ಷದ ಟಿಕೆಟ್ ನೀಡಿ ಕಣಕ್ಕಿಳಿಸಿದರು. ಆಗ ಜಗದೀಶ್ ಶೆಟ್ಟರ್ ಇನ್ನೂ ಹೈಸ್ಕೂಲ್ ವಿದ್ಯಾರ್ಥಿ. ಆಗಲೇ ಪತ್ರಿಕೆಗಳ ಓದುಗರ ವಿಭಾಗಕ್ಕೆ ಪತ್ರಗಳನ್ನು ಬರೆಯುತ್ತಿದ್ದರು.

ನಾನೂ ಬರೆಯುತ್ತಿದ್ದೆ. ಹೀಗಾಗಿ ಪರಿಚಯವಾದವರು. ಆರೆಸ್ಸೆಸ್‌ನ ರಾಜಕೀಯ ವೇದಿಕೆಯಾದ ಜನಸಂಘಕ್ಕೆ ಪಕ್ಷವನ್ನು ಬೆಳೆಸಲು ಒಬ್ಬ ವೀರಶೈವ ಲಿಂಗಾಯತ ನಾಯಕನ ಅಗತ್ಯವಿತ್ತು. ಹೀಗಾಗಿ ಜಗದೀಶ್ ಶೆಟ್ಟರ್ ತಂದೆಯನ್ನು ಚುನಾವಣೆಗೆ ನಿಲ್ಲಿಸಿದರು. ಆಗ ಭಾರತ ಕಮ್ಯುನಿಸ್ಟ್ ಪಕ್ಷದ ಪರವಾಗಿ ಏ.ಜೆ.ಮುಧೋಳ ಮತ್ತು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಬೆಂಬಲದಿಂದ ಸ್ವಾತಂತ್ರ ಹೋರಾಟಗಾರ ಮಹಾದೇವಪ್ಪ ಮುರಗೋಡರು ಕೂಡ ಸ್ಪರ್ಧಿಸಿ ದ್ದರು. ಆಗ ರಾಜಕೀಯಕ್ಕೆ ಬಂದ ಎಸ್.ಎಸ್.ಶೆಟ್ಟರ್ ವಕೀಲರು ನಂತರ ತಾವು ಹಿಂದೆ ಸರಿದು ತಮ್ಮ ಪುತ್ರ ಜಗದೀಶ್ ಶೆಟ್ಟರ್‌ರನ್ನು ಜನಸಂಘಕ್ಕೆ ತಂದರು. ಅದು ಮುಂದೆ ಭಾರತೀಯ ಜನತಾ ಪಕ್ಷವಾಯಿತು. ತೊಂಭತ್ತರ ದಶಕದಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಜಯಶಾಲಿಯಾದ ಜಗದೀಶ್ ಶೆಟ್ಟರ್ ಮತ್ತೆ ಹೊರಳಿ ನೀಡಲಿಲ್ಲ. ನಾನು ದಶಕಗಳಿಂದ ಗಮನಿಸಿದಂತೆ ಬಿಜೆಪಿಯಲ್ಲಿ ಇದ್ದರೂ ಜಗದೀಶ್ ಶೆಟ್ಟರ್ ಕಡು ಕೋಮುವಾದಿ ಅಲ್ಲ. ದೇವರಲ್ಲಿ ನಂಬಿಕೆಯಿಲ್ಲದ ನಾಸ್ತಿಕ. ಪುಸ್ತಕ ಓದುವ ಅಭಿರುಚಿ ಇದೆ. ಹೀಗಾಗಿ ಆಗಾಗ ಬೆಂಗಳೂರಿನ ಶಿವಾನಂದ ಸ್ಟೋರ್ಸ್‌ ಬಳಿ ಇರುವ ನವ ಕರ್ನಾಟಕ ಪುಸ್ತಕ ಮಳಿಗೆಗೆ ಬರುತ್ತಿರುತ್ತಾರೆ. ಅದೇನೇ ಇರಲಿ, ರಾಜ್ಯದಲ್ಲಿ ಕೋಮುವಾದಿ ಪಕ್ಷವೊಂದರ ಬೆಳವಣಿಗೆಯಲ್ಲಿ ಅವರ ಪಾತ್ರವೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಈಗ ನಾನು ಹೇಳ ಹೊರಟಿರುವುದು ಅದನ್ನಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮುಂತಾದ ಹಿರಿಯ ನಾಯಕರಿಗೆ ಯಾಕೆ ಟಿಕೆಟ್ ನಿರಾಕರಿಸಲಾಯಿತು. ಇದಕ್ಕೆ ಸರಳ ಉತ್ತರವೆಂದರೆ ಒಂದು ವೇಳೆ ಬಿಜೆಪಿ ಬಹುಮತ ಗಳಿಸಿದರೆ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಉದ್ದೇಶದಿಂದ ಹಿರಿಯರಿಗೆ ಟಿಕೆಟ್ ನಿರಾಕರಿಸುವ ಈ ತಂತ್ರವನ್ನು ಅನುಸರಿಸಲಾಗಿದೆ. ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರು ಗೆದ್ದು ಬಂದರೆ ಮುಖ್ಯಮಂತ್ರಿ ಸ್ಥಾನದ ಪ್ರಶ್ನೆ ಬಂದಾಗ ಹಿರಿಯರಾದ ಅವರನ್ನು ಕಡೆಗಣಿಸಲಾಗುವುದಿಲ್ಲ. ಅದಕ್ಕೆ ಚುನಾವಣೆ ಟಿಕೆಟ್ ನಿರಾಕರಿಸಿ ವಯಸ್ಸಿನ ನೆಪ ಮುಂದೆ ಮಾಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಂತೆ ಸೂಚಿಸಲಾಯಿತು. ಈ ಪ್ರಸ್ತಾವನೆಯನ್ನು ಶೆಟ್ಟರ್ ತಿರಸ್ಕರಿಸಿದರು. ಕೊನೆಗೆ ಬಿಜೆಪಿ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ರಾಜಿಗೆ ಬಂದಾಗ ಜಗದೀಶ್ ಶೆಟ್ಟರ್ ಮಗನಿಗೆ ಅಥವಾ ಮನೆಯಲ್ಲಿ ಯಾರಿಗಾದರೂ ಟಿಕೆಟ್ ನೀಡುವ ಭರವಸೆಯನ್ನು ನೀಡಲಾಯಿತು. ಈ ರಾಜಿ ಸೂತ್ರವನ್ನು ಶೆಟ್ಟರ್ ನಿರಾಕರಿಸಿದರು. ಅವರದೊಂದೇ ಪ್ರಶ್ನೆ ನನಗೇಕೆ ಚುನಾವಣಾ ಟಿಕೆಟ್ ನಿರಾಕರಿಸುತ್ತೀರಿ? ಎಂಬುದು. ಈ ಪ್ರಶ್ನೆಗೆ ಧರ್ಮೇಂದ್ರ ಪ್ರಧಾನ್ ಬಳಿ ಉತ್ತರವಿರಲಿಲ್ಲ. ಹೀಗಾಗಿ ಶೆಟ್ಟರ್ ಬಿಜೆಪಿಗೆ ಕೊನೆಯ ನಮಸ್ಕಾರ ಹೇಳಿ ಹೊರಗೆ ಬಂದಿದ್ದಾರೆ

ಬಿಜೆಪಿ ಹೈಕಮಾಂಡನ್ನು, ಅದರಲ್ಲೂ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಬಿಜೆಪಿಯೊಳಗೆ ಯಾರಿಗೂ ಇರಲಿಲ್ಲ. ಮುಖ್ಯವಾಗಿ ಸಿಬಿಐ, ಐಟಿ, ಜಾರಿ ನಿರ್ದೇಶನಾಲಯ ಇವುಗಳ ದಾಳಿಯ ಭಯದಿಂದ ಮಾತಾಡುತ್ತಿರಲಿಲ್ಲ. ಈ ವಿಧಾನಸಭಾ ಚುನಾವಣೆಯಲ್ಲಿ ಆ ಭಯವನ್ನು ಧಿಕ್ಕರಿಸಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮುಂತಾದವರು ಬಂಡೆದ್ದಿದ್ದಾರೆ.
ನಾಗಪುರದ ಜಗದ್ಗುರುಗಳಿಗೆ ಪ್ರಹ್ಲಾದ್ ಜೋಶಿಯವರು ಮುಖ್ಯ ಮಂತ್ರಿಯಾಗುವುದು ಬೇಕಾಗಿದೆ. ಅದಕ್ಕಾಗಿ ಇಷ್ಟೆಲ್ಲಾ ಕಸರತ್ತು ನಡೆದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ತಿಂಗಳ ಹಿಂದೆಯೇ ಪೇಶ್ವ ವಂಶದ ಬ್ರಾಹ್ಮಣ ಪ್ರಹ್ಲಾದ್ ಜೋಶಿಯವರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡುವ ಕುರಿತು ನಾಗಪುರದ ಆರೆಸ್ಸೆಸ್ ಶಕ್ತಿ ಕೇಂದ್ರದಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದ್ದರು.

ಆಗ ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ವಿರೊಧಿಸಿ ಬಿಜೆಪಿ ನಾಯಕರಾಗಲಿ, ಪ್ರಹ್ಲಾದ್ ಜೋಶಿ ಅವರಾಗಲಿ ಒಂದೇ ಒಂದು ಹೇಳಿಕೆ ಯನ್ನೂ ನೀಡಲಿಲ್ಲ. ಈ ವಿದ್ಯಮಾನಗಳನ್ನು ಗಮನಿಸಿದರೆ ಕುಮಾರಸ್ವಾಮಿ ಆಗ ಹೇಳಿದ ಮಾತು ನಿಜವಾದಂತಾಗಿದೆ.

ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬಲವಂತ ವಾಗಿ, ಅವಮಾನಕಾರಿಯಾಗಿ ತೆಗೆದು ಹಾಕಿದ ನಂತರದ ವಿದ್ಯಮಾನಗಳ ಒಳ ಸುಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನು ತಳ್ಳಿ ಹಾಕಲಾಗುವುದಿಲ್ಲ. ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್, ಕೆ.ಎಸ್.ಈಶ್ವರಪ್ಪ, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಹಿರಿಯ ಮತ್ತು ಪ್ರಭಾವೀ ನಾಯಕರಿಗೆ ಟಿಕೆಟ್ ನಿರಾಕರಿಸಿ ಮೂಲೆ ಗುಂಪು ಮಾಡಿರುವುದು ಜೋಶಿಯವರ ಆಯ್ಕೆಯನ್ನು ಸುಗಮಗೊ ಳಿಸಲು ಎಂಬುದ ಬಿಜೆಪಿ ಒಳಗಿನ ಭಿನ್ನಮತೀಯರ ಅಭಿಪ್ರಾಯ.
ಯಡಿಯೂರಪ್ಪನವರ ಆಪ್ತರಾದ ಕುಂದಗೋಳದ ಎಸ್. ಐ.ಚಿಕ್ಕನಗೌಡರು ಹಿಂದೊಮ್ಮೆ ಬಿಜೆಪಿ ಊಚ್ಞ 
ಪಿಜೆಪಿ ( ಪ್ರಹ್ಲಾದ ಜೋಶಿ ಜನತಾ ಪಾರ್ಟಿ) ಎಂದು ಟೀಕಿಸಿದ್ದರು. ಈ ಚುನಾವಣೆಯಲ್ಲಿ ಅವರಿಗೆ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿದೆ.

ಈ ಸಲದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ದರೆ ಪ್ರಹ್ಲಾದ್ ಜೋಶಿಯವರ ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗೊತ್ತಾಗುತ್ತದೆ. ಯಡಿಯೂರಪ್ಪ, ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿ ಅವರ ಮಕ್ಕಳಿಗೆ ಕೊಡುವ ಉದ್ದೇಶ, ಅವರಿನ್ನೂ ತರುಣರು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಗಳಲ್ಲ. ಹಿರಿಯರನ್ನೆಲ್ಲ ಹೊರದಬ್ಬಿದ ನಂತರ ಜೋಶಿಮಯ. ಸಂತೋಷ ಅವರೇ ಹಿರಿಯರಾಗುತ್ತಾರೆ.

ಮುಖ್ಯಮಂತ್ರಿ ಸ್ಥಾನದ ಇನ್ನಿಬ್ಬರು ಆಕಾಂಕ್ಷಿಗಳೆಂದರೆ ಒಕ್ಕಲಿಗ ಸಮುದಾ ಯಕ್ಕೆ ಸೇರಿದ ಸಚಿವರಾದ ಆರ್. ಅಶೋಕ್ ಮತ್ತು ಸೋಮಣ್ಣ ಬಿಜೆಪಿ ಹೈಕಮಾಂಡ್ ಇವರಿಬ್ಬರನ್ನು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನವರ ವಿರುದ್ಧ ಸ್ಪರ್ಧೆಗಿಳಿಸಿ ಮೇಲೇಳದಂತೆ ಮಾಡಿದೆ. ಒಟ್ಟಾರೆ ಹೇಳ ಬೇಕೆಂದರೆ ರಾಜ್ಯ ಬಿಜೆಪಿ ನಾಯಕತ್ವ ವೀರಶೈವ, ಲಿಂಗಾಯತ, ಒಕ್ಕಲಿಗ ಸಮುದಾ ಯಗಳಿಂದ ಪ್ರಹ್ಲಾದ್ ಜೋಶಿ, ಸಂತೋಷ್ ಕೈಗೆ ಬಂದಂತಾಗಿದೆ. ಇದರ ಪರಿಣಾಮಗಳ ಬಗ್ಗೆ ಕಾಯ್ದು ನೋಡಬೇಕಾಗಿದೆ.

Similar News