×
Ad

ಹತ್ಯೆಗೈಯುವ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಬೆದರಿಕೆ ಹಾಕಿದ್ದರು ಎಂದಿದ್ದ ಅತೀಕ್‌ ಅಹ್ಮದ್‌ ಸಹೋದರ

Update: 2023-04-17 14:13 IST

ಲಕ್ನೊ: ನಾನು ಇನ್ನೆರಡು ವಾರಗಳಲ್ಲಿ ಹತ್ಯೆಗೀಡಾಗಲಿದ್ದೇನೆ ಎಂದು ರಾಜಕಾರಣಿಯಾಗಿ ಬದಲಾಗಿದ್ದ ಭೂಗತ ಪಾತಕಿ ಅತೀಕ್ ಅಹಮದ್ ಸಹೋದರ ಅಶ್ರಫ್ ಮಾರ್ಚ್ 28, 2022ರ ರಾತ್ರಿ ಹೇಳಿಕೆ ನೀಡಿದ್ದ. ಅಲ್ಲದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಿನ್ನನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಿ ಇನ್ನೆರಡು ವಾರದಲ್ಲಿ ಹತ್ಯೆ ಮಾಡುತ್ತೇವೆ ಎಂದು ಬೆದರಿಸಿದ್ದರು ಎಂದೂ ಆರೋಪಿಸಿದ್ದ ಎಂದು indiatoday.in ವರದಿ ಮಾಡಿದೆ.

ಇದರ ಬೆನ್ನಿಗೇ ಕಳೆದ ಶನಿವಾರ ರಾತ್ರಿ ಮಾಧ್ಯಮ ಸಂವಾದ ನಡೆಯುವಾಗ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ಮೂವರು ಹಂತಕರು ತೀರಾ ಸನಿಹದಿಂದ ಗುಂಡು ಹಾರಿಸಿ ಅತೀಕ್ ಅಹಮದ್ ಹಾಗೂ ಅಶ್ರಪ್ ಅಹಮದ್ ಅವರನ್ನು ಹತ್ಯೆಗೈದಿದ್ದಾರೆ. ಪೊಲೀಸ್ ಸಿಬ್ಬಂದಿಗಳು ಅವರನ್ನು ವೈದ್ಯಕೀಯ ತಪಾಸಣೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಬಂದಿದ್ದಾಗ ಅವರನ್ನು ಹತ್ಯೆಗೈಯ್ಯಲಾಗಿದೆ.

ಕಳೆದ ತಿಂಗಳು 2006ರ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅಶ್ರಫ್‌ನನ್ನು ಬರೇಲಿ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಅಶ್ರಫ್ ಖುಲಾಸೆಗೊಂಡರೆ, ಅತೀಕ್‌ಗೆ ಶಿಕ್ಷೆಯಾಗಿತ್ತು.

"ಕಿಸಿ ಬಹಾನೆ ಸೇ ಟೂ ಹಫ್ತೆ ಬಾದ್ ತುಮ್ಹೆ ಜೈಲ್ ಸೆ ನಿಕಾಲೇಂಗೆ ಔರ್ ನಿಪ್ಟಾ ದೇಂಗೆ" (ಯಾವುದೇ ರೀತಿಯಲ್ಲಾದರೂ ನಿನ್ನನ್ನು ಎರಡು ವಾರಗಳಲ್ಲಿ ಜೈಲಿನಿಂದ ಹೊರ ತಂದು ಉಡಾಯಿಸುತ್ತೇವೆ) ಎಂದು ನನಗೆ ಬೆದರಿಕೆ ಹಾಕಿರುವ ಪೊಲೀಸ್ ಅಧಿಕಾರಿಯ ಹೆಸರನ್ನು ಬಹಿರಂಗಗೊಳಿಸಲಾರೆ. ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಇದು ಉತ್ತರ ಪ್ರದೇಶ ಸರ್ಕಾರದ ಹೆಸರನ್ನು ಕೆಡಿಸುವ ಪಿತೂರಿ ಕೂಡಾ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಲವಾರು ನಕಲಿ ಪ್ರಕರಣಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ ಅವರಿಗೆ ನನ್ನ ನೋವು ಅರ್ಥವಾಗುತ್ತದೆ ಎಂದು ಅಶ್ರಫ್ ಹೇಳಿಕೆ ನೀಡಿದ್ದ.

"ನನ್ನ ಹತ್ಯೆಯ ನಂತರ ಪ್ರಯಾಗ್‌ರಾಜ್‌ನ ಮುಖ್ಯ ನ್ಯಾಯಾಧೀಶ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯಾಥ್‌ಗೆ ಮುಚ್ಚಿದ ಲಕೋಟೆಯೊಂದು ತಲುಪಲಿದೆ. ನಾನು ನಿಮಗೆ ಭೂಗತ ಪಾತಕಿಯಂತೆ ಕಾಣುತ್ತೇನೆಯೆ? ನಾನು ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದೇನೆ. ಒಂದು ಬಾರಿ ಶಾಸಕನೂ ಆಗಿದ್ದೇನೆ. ನಾನು ಜೈಲಿನಲ್ಲಿರುವಾಗ ಅದು ಹೇಗೆ ಪಿತೂರಿ ಮಾಡಲು ಸಾಧ್ಯ?" ಎಂದು ಮಾಧ್ಯಮ ಮಂದಿಯ ಕೆಲವು ಪ್ರಶ್ನೆಗಳಿಗೆ ಅಶ್ರಫ್ ಉತ್ತರಿಸಿದ್ದ.

ನಿರಂತರವಾಗಿ ಕಣ್ಗಾವಲಿನಲ್ಲಿರುವಾಗ ಹತ್ಯಾ ಯೋಜನೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದ ಅಶ್ರಫ್, ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ತಾನು ಪಾಲ್ಗೊಂಡಿರುವುದನ್ನು ನಿರಾಕರಿಸಿದ್ದ. ಶನಿವಾರ ರಾತ್ರಿ ಹತ್ಯೆಗೊಳಗಾಗುವ ಕೆಲವೇ ಕ್ಷಣಗಳ ಮುನ್ನ ಕಳೆದ ವರ್ಷ ಫೆಬ್ರವರಿ 24ರಂದು ಉಮೇಶ್ ಪಾಲ್ ಬೈಕ್ ಮೇಲೆ ಬಾಂಬ್ ಎಸೆದಿದ್ದ 'ಗುಡ್ಡು ಮುಸ್ಲಿಂ' ಹೆಸರನ್ನು ಅಶ್ರಫ್ ಉಚ್ಚರಿಸಿದ್ದ. 

"ಮೇಂ ಬಾತ್ ಯೆ ಹೈ ಕಿ ಗುಡ್ಡು ಮುಸ್ಲಿಂ..." (ನನ್ನ ಮಾತೇನೆಂದರೆ ಗುಡ್ಡು ಮುಸ್ಲಿಂ..) ಎಂದು ತನ್ನ ಹೇಳಿಕೆಯನ್ನು ಮುಗಿಸುವ ಮುನ್ನವೇ ಅತೀಕ್ ಅಹಮದ್ ತಲೆಗೆ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ನಂತರ ಅಶ್ರಫ್‌ಗೆ ಗುಂಡು ಹಾರಿಸಲಾಯಿತು. ಇದರಿಂದ ಗುಡ್ಡು ಮುಸ್ಲಿಂ ಬಗ್ಗೆ ಅವರೇನು ಬಹಿರಂಗಗೊಳಿಸಲಿದ್ದರು ಎಂಬುದು ಕೊನೆಗೂ ತಿಳಿಯದೇ ಹೋಯಿತು ಎಂದು indiatoday.in ವರದಿ ಮಾಡಿದೆ.

Similar News