×
Ad

ಉತ್ತರಪ್ರದೇಶದಲ್ಲಿ ಮತ್ತೆ ಶೂಟೌಟ್: ಪರೀಕ್ಷೆ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗುಂಡಿನ ದಾಳಿ

Update: 2023-04-17 20:34 IST

ಹೊಸದಿಲ್ಲಿ: ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಕಾಲೇಜು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಯುವತಿಗೆ ಬೈಕ್‌ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಜನನಿಬಿಡ ಸ್ಥಳದಲ್ಲೇ ದುಷ್ಕರ್ಮಿಗಳು ಶೂಟ್‌ ಮಾಡಿದ್ದು, ಗನ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯನ್ನು 21 ವರ್ಷದ ಬಿಎ ವಿದ್ಯಾರ್ಥಿನಿ ರೋಶ್ನಿ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ಮುಗಿಸಿ ರಾಮ್ ಲಖನ್ ಪಟೇಲ್ ಮಹಾವಿದ್ಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಜಾಜ್ ಪಲ್ಸರ್ ಬೈಕ್‌ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಂಟ್ರಿ ಮೇಡ್ ಪಿಸ್ತೂಲ್‌ ನಿಂದ ಆಕೆಯ ತಲೆಗೆ ಗುಂಡು ಹಾರಿಸಿದ್ದು, ರೋಶನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ದುಷ್ಕರ್ಮಿಗಳನ್ನು ಹಿಡಿಯಲು ಧಾವಿಸಿದ್ದು, ಆದರೆ, ಅವರು ಆಯುಧವನ್ನು ಎಸೆದು ಪರಾರಿಯಾಗಿದ್ದಾರೆ.
 
ಮಹಿಳೆಯ ಪೋಷಕರು ರಾಜ್ ಅಹಿರ್ವಾರ್ ವಿರುದ್ಧ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಮತ್ತು ಪೊಲೀಸರು ನೋಡುತ್ತಿದ್ದಂತೆ ಮಹಿಳೆ ರಕ್ತದ ಮಡುವಿನಲ್ಲಿ ನೆಲದ ಮೇಲೆ ನರಳಾಡಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಮಹಿಳೆ ಕಾಲೇಜು ಸಮವಸ್ತ್ರದಲ್ಲಿದ್ದು, ವಿದ್ಯಾರ್ಥಿನಿಯ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಹಲವಾರು ನೆಟ್ಟಿಗರು  ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪ್ರಶ್ನಿಸಿದ್ದು, ಗ್ಯಾಂಗ್‌ ಸ್ಟರ್‌ ಅತೀಕ್‌ ಅಹ್ಮದ್‌ ಹಾಗೂ ಆತನ ಸಹೋದರನ ಹತ್ಯೆ ಬಳಿ ಉತ್ತರ ಪ್ರದೇಶ ಪೊಲೀಸರಿಗೆ ಮತ್ತೆ ಮುಜುಗರ ತಂದೊಡ್ಡಿದೆ. 

ರಾಷ್ಟ್ರೀಯ ಜನತಾ ದಳ ಕೂಡ ಈ ವೀಡಿಯೊ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು,  ಯುಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. "ಗೋದಿ ಮಾಧ್ಯಮದ ತೋಳಗಳು ಮತ್ತು ಬಿಜೆಪಿಯವರೂ ಈ ಸಾವನ್ನು ಸಂಭ್ರಮಿಸುತ್ತಾರೆಯೇ?" ಎಂದು ಪ್ರಶ್ನಿಸಿದೆ.

Similar News