×
Ad

ಜಾತಿಗಣತಿಯನ್ನು ನವೀಕರಿಸಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಅದು ಅಗತ್ಯ: ಪ್ರಧಾನಿಗೆ ಖರ್ಗೆ ಪತ್ರ

Update: 2023-04-17 22:20 IST

ಹೊಸದಿಲ್ಲಿ,ಎ.17: ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನವೀಕೃತ ಜಾತಿಗಣತಿಗಾಗಿ ಆಗ್ರಹಿಸಿದ್ದಾರೆ. ನವೀಕೃತ ಜಾತಿಗಣತಿಯ ಅನುಪಸ್ಥಿತಿಯಲ್ಲಿ, ವಿಶೇಷವಾಗಿ ಒಬಿಸಿ ವರ್ಗಗಳಿಗಾಗಿ ಅರ್ಥಪೂರ್ಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗಾಗಿ ಅತ್ಯಂತ ಅಗತ್ಯವಾಗಿರುವ ವಿಶ್ವಾಸಾರ್ಹ ದತ್ತಾಂಶ ಕೋಶವು ಅಪೂರ್ಣವಾಗಿದೆ ಎಂದು ಖರ್ಗೆ ತನ್ನ ಪತ್ರದಲ್ಲಿ ಹೇಳಿದ್ದಾರೆ.

‘ನವೀಕೃತ ಜಾತಿಗಣತಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಬೇಡಿಕೆಯನ್ನು ಮತ್ತೊಮ್ಮೆ ದಾಖಲಿಸಲು ನಾನು ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ನಾನು ಮತ್ತು ನನ್ನ ಸಹೋದ್ಯೋಗಿಗಳು ಹಾಗೂ ಇತರ ಹಲವಾರು ಪ್ರತಿಪಕ್ಷಗಳ ನಾಯಕರು ಈ ಹಿಂದೆ ಸದನದಲ್ಲಿ ಅನೇಕ ಸಂದರ್ಭಗಳಲ್ಲಿ ಈ ಬೇಡಿಕೆಯನ್ನು ಪ್ರಸ್ತಾಪಿಸಿದ್ದೇವೆ ’ಎಂದು ತಿಳಿಸಿದ್ದಾರೆ.

ಯುಪಿಎ ಸರಕಾರವು 2012-13ರಲ್ಲಿ ಮೊದಲ ಬಾರಿಗೆ ಸುಮಾರು 25 ಕೋ.ಕುಟುಂಬಗಳನ್ನು ಒಳಗೊಂಡಿದ್ದ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿ(ಎಸ್ಇಸಿಸಿ)ಯನ್ನು ನಡೆಸಿತ್ತು.ಆದರೆ, ಮೇ 2014ರಲ್ಲಿ ನಿಮ್ಮ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಮತ್ತು ಇತರ ಸಂಸದರು ಗಣತಿಯ ಬಿಡುಗಡೆಗಾಗಿ ಒತ್ತಾಯಿಸಿದ್ದರೂ ಕೆಲವು ಕಾರಣಗಳಿಂದಾಗಿ ಅದಿನ್ನೂ ಪ್ರಕಟಗೊಂಡಿಲ್ಲ. ಈ ಗಣತಿಯು ಕೇಂದ್ರ ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಖರ್ಗೆ ಎ.16ರಂದು ಬರೆದಿರುವ ತನ್ನ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ 2021ರಲ್ಲಿ ನಿಯಮಿತ ದಶವಾರ್ಷಿಕ ಸಾಮಾನ್ಯಜನಗಣತಿಯು ನಡೆಯಬೇಕಾಗಿತ್ತು, ಆದರೆ ಇನ್ನೂ ಅದನ್ನು ಕೈಗೊಳ್ಳಲಾಗಿಲ್ಲ ಎಂದು ಬೆಟ್ಟು ಮಾಡಿರುವ ಅವರು,ಈ ಗಣತಿಯನ್ನು ತಕ್ಷಣವೇ ನಡೆಸಬೇಕು ಮತ್ತು ಸಮಗ್ರ ಜಾತಿ ಗಣತಿಯನ್ನು ಅದರ ಅವಿಭಾಜ್ಯ ಅಂಗವನ್ನಾಗಿಸಬೇಕು ಎಂದು ಆಗ್ರಹಿಸಿದ್ದಾರೆ.

ರವಿವಾರ ಕೋಲಾರದಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ,ಯುಪಿಎ 2011ರಲ್ಲಿ ಜಾತಿಗಣತಿಯನ್ನು ನಡೆಸಿತ್ತು. ಅದು ಎಲ್ಲ ಜಾತಿಗಳ ದತ್ತಾಂಶಗಳನ್ನು ಒಳಗೊಂಡಿದೆ. ಪ್ರಧಾನಿಯವರೇ,ನೀವು ಒಬಿಸಿಗಳ ಬಗ್ಗೆ ಮಾತನಾಡುತ್ತೀರಿ. ಆ ದತ್ತಾಂಶಗಳನ್ನು ಬಹಿರಂಗಗೊಳಿಸಿ. ದೇಶದಲ್ಲಿ ಎಷ್ಟು ಒಬಿಸಿಗಳು,ದಲಿತರು ಮತ್ತು ಬುಡಕಟ್ಟು ಜನರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಲಿ ಎಂದು ಆಗ್ರಹಿಸಿದ್ದರು. 

Similar News