ತಲೆಗಳು ಹೋಮಕುಂಡಕ್ಕೆ ಬೀಳುವಂತೆ ಸ್ವಯಂ ಶಿರಚ್ಛೇದ ಮಾಡಿಕೊಂಡ ದಂಪತಿ
ಗುಜರಾತಿನಲ್ಲಿ ಆಘಾತಕಾರಿ ನರಬಲಿ ಪ್ರಕರಣ
ರಾಜಕೋಟ್,ಎ.17: ಇಲ್ಲಿ ಸಂಭವಿಸಿರುವ ಭೀಕರ ಘಟನೆಯಲ್ಲಿ ಅತೀಂದ್ರಿಯ ಸಂಬಂಧಿತ ಬಲಿ ಆಚರಣೆಯಲ್ಲಿ ಪತಿ-ಪತ್ನಿ ಗಿಲೋಟಿನ್ ನಂತಹ ಸಾಧನವನ್ನು ಬಳಸಿ ತಮ್ಮ ತಲೆಗಳು ಹೋಮಕುಂಡಕ್ಕೆ ಬೀಳುವಂತೆ ಸ್ವಯಂ ಶಿರಚ್ಛೇದ ಮಾಡಿಕೊಂಡಿದ್ದಾರೆ. ದಂಪತಿ ತಮ್ಮ ಹೊಲದಲ್ಲಿ ಕೆಲವೊಂದು ವಿಧಿಗಳನ್ನು ನಡೆಸಿದ ಬಳಿಕ ಪ್ರಧಾನ ದೇವತೆಯನ್ನು ತೃಪ್ತಗೊಳಿಸಲು ತಮ್ಮ ತಲೆಗಳನ್ನು ಕತ್ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಚೀಟಿಯೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.
ಹೇಮುಭಾಯಿ (38) ಮತ್ತು ಹಂಸಾಬೆನ್ ಮಕ್ವಾನಾ (35) ಮೂಢನಂಬಿಕೆಯ ತಾಂತ್ರಿಕ ವಿಧಿಗಳ ಹೆಸರಿನಲ್ಲಿ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ ಎನ್ನುವುದು ಈ ಆತ್ಮಹತ್ಯಾ ಚೀಟಿಯಿಂದ ವ್ಯಕ್ತವಾಗಿದೆ. ದಂಪತಿ ಹಗ್ಗದಿಂದ ಹಿಡಿದಿಡಲಾಗಿದ್ದ,ತಾವೇ ತಯಾರಿಸಿದ್ದ ಗಿಲೋಟಿನ್ ರೀತಿಯ ಸಾಧನದಡಿ ತಮ್ಮ ತಲೆಗಳನ್ನು ಇರಿಸುವ ಮುನ್ನ ಬಲಿಗಾಗಿ ಹೋಮಕುಂಡವನ್ನು ಸಿದ್ಧಪಡಿಸಿದ್ದರು.
ಅವರು ಹಗ್ಗವನ್ನು ಬಿಟ್ಟ ತಕ್ಷಣ ಕಬ್ಬಿಣದ ಬ್ಲೇಡ್ ಅವರ ಮೇಲೆ ಬಿದ್ದು ರುಂಡ-ಮುಂಡಗಳನ್ನು ಪ್ರತ್ಯೇಕಿಸಿತ್ತು ಎಂದು ವಿಂಛಿಯಾ ಗ್ರಾಮದ ಪೊಲೀಸ್ ಅಧಿಕಾರಿ ಇಂದ್ರಜಿತ ಸಿನ್ಹ ಜಡೇಜಾ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ. ಶನಿವರ ರಾತ್ರಿ ಮತ್ತು ರವಿವಾರ ಮಧ್ಯಾಹ್ನದ ನಡುವೆ ಈ ಘಟನೆ ನಡೆದಿದ್ದಾಗಿ ಅವರು ತಿಳಿಸಿದ್ದಾರೆ. ಘಟನಾ ಸ್ಥಳದ ಚಿತ್ರಗಳು ಪತ್ನಿಯ ತಲೆ ಹೋಮಕುಂಡದಲ್ಲಿರುವುದನ್ನು ಮತ್ತು ಪತಿಯ ತಲೆ ಗುಡಿಸಲಿನ ಮೂಲೆಯಲ್ಲಿ ಬಿದ್ದಿರುವುದನ್ನು ತೋರಿಸಿವೆ.