ದೇಶದಲ್ಲಿ ಕೋವಿಡ್ ಸೋಂಕಿಗೆ ಮತ್ತೆ 24 ಮಂದಿ ಬಲಿ

Update: 2023-04-18 03:18 GMT

ಹೊಸದಿಲ್ಲಿ: ದೇಶದಲ್ಲಿ ಸೋಮವಾರ ಕೋವಿಡ್-19 ಸೋಂಕಿಗೆ ಮತ್ತೆ 24 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಮಖ್ಯೆ 5,31,141ಕ್ಕೇರಿದೆ. ಗುಜರಾತ್‌ನಲ್ಲಿ ಗರಿಷ್ಠ ಅಂದರೆ ಆರು ಸಾವು ಸಂಭವಿಸಿದ್ದು, ನಾಲ್ಕು ಸಾವುಗಳು ಸಂಭವಿಸಿದ ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.

ದೆಹಲಿ ಹಾಗೂ ರಾಜಸ್ಥಾನಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ತಲಾ ಮೂರು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ತಮಿಳುನಾಡು, ಮಹಾರಾಷ್ಟ್ರ, ಕೇರಳ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತ್ತೀಸ್‌ಗಢ ಹಾಗೂ ಬಿಹಾರದಲ್ಲಿ ಉಳಿದ ಸಾವು ಸಂಭವಿಸಿದೆ.

ದೇಶದಲ್ಲಿ ಸೋಮವಾರ 9111 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಭಾನುವಾರ ದಾಖಲಾದ 10093ಕ್ಕೆ ಹೋಲಿಸಿದರೆ ಇದು ತುಸು ಕಡಿಮೆ. ಆದರೆ ಕಡಿಮೆ ಪರೀಕ್ಷೆ ನಡೆದಿರುವುದು ಇದಕ್ಕೆ ಕಾರಣವಾಗಿದ್ದು, ಪಾಸಿಟಿವಿಟಿ ದರ ಶೇಕಡ 8.4ಕ್ಕೆ ಏರಿದೆ.

ಸೋಂಕಿನ ಪ್ರಮಾಣ ಹೆಚ್ಚಳವಾಗುತಿದ್ದರೂ, ಕೋವಿಡ್ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆ ಇದೆ. ಭಾನುವಾರ ಇಡೀ ದೇಶದಲ್ಲಿ ಕೇವಲ 198 ಡೋಸ್ ಲಸಿಕೆ ನೀಡಲಾಗಿದೆ ಎಂದು ಸರ್ಕಾರಿ ಅಂಕಿ ಅಂಶ ಸ್ಪಷ್ಟಪಡಿಸುತ್ತದೆ. ಏಪ್ರಿಲ್ 10 ರಿಂದ 16ರ ಅವಧಿಯಲ್ಲಿ ದೇಶಾದ್ಯಂತ ಕೇವಲ 3000 ಲಸಿಕೆಗಳನ್ನಷ್ಟೇ ನೀಡಲಾಗಿದೆ.

Similar News