×
Ad

ಹರ್ಯಾಣ: ಮಾನ್ಸ ದೇವಿ ದೇವಳ ಸುತ್ತಲಿನ ಪ್ರದೇಶಗಳಲ್ಲಿ ಮಾಂಸ ಮಾರಾಟ, ಖರೀದಿಗೆ ನಿಷೇಧ ಆದೇಶಕ್ಕೆ ಹೈಕೋರ್ಟ್‌ ತಡೆ

Update: 2023-04-19 17:15 IST

ಚಂಡೀಗಢ: ಹರ್ಯಾಣಾದ ಪಂಚಕುಲ ಜಿಲ್ಲೆಯ ಮಾತಾ ಮಾನ್ಸ ದೇವಿ ದೇವಸ್ಥಾನದ  ಪ್ರದೇಶದಲ್ಲಿ ಮಾಂಸ ಮತ್ತು ಮಾಂಸ ಉತ್ಪನ್ನಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ.

ಸರ್ಕಾರದ ಆದೇಶದಿಂದ ಬಾಧಿತ ಮಾಂಸ ಮಾರಾಟಗಾರರು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ನಂತರ ನ್ಯಾಯಮೂರ್ತಿ ವಿನೋದ್‌ ಎಸ್‌ ಭಾರದ್ವಾಜ್‌ ಅವರ ಪೀಠ ತಡೆಯಾಜ್ಞೆ ವಿಧಿಸಿದೆ. ಮುಂದಿನ ವಿಚಾರಣಾ ದಿನಾಂಕದ ತನಕ ತಡೆಯಾಜ್ಞೆ ಊರ್ಜಿತದಲ್ಲಿರಲಿದೆ ಎಂದು ನ್ಯಾಯಾಲಯ ಹೇಳಿದೆ.

ಡಿಸೆಂಬರ್‌ 21, 2022 ರಂದು ಹರ್ಯಾಣ ಸರ್ಕಾರದ  ನಗರ ಸ್ಥಳೀಯಾಡಳಿತಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿ ಮಾನ್ಸ ದೇವಿ ದೇವಸ್ಥಾನದ ಸುತ್ತಲಿನ ಗುರುತಿಸಲಾದ ಪ್ರದೇಶವನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿರುವುದರಿಂದ ಅಲ್ಲಿ ಪ್ರಾಣಿ ವಧೆ, ಮಾಂಸ ಮತ್ತು ಮಾಂಸ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ನಿಷೇಧ ಹೇರಿತ್ತು.

ಈ ಆದೇಶವು ತಮಗೆ ಹೊಂದಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಯಾವುದೇ ಕಾನೂನನ್ನು ಆದೇಶ ಉಲ್ಲೇಖಿಸಿಲ್ಲ ಎಂದು ಮಾಂಸ ಮಾರಾಟಗಾರರು ತಮ್ಮ ಅಪೀಲಿನಲ್ಲಿ ಹೇಳಿದ್ದರಲ್ಲದೆ ತಾವು ಮಾಂಸ ಮಾರಾಟಕ್ಕೆ ಸೂಕ್ತ ಪರವಾನಗಿ ಹೊಂದಿರುವುದಾಗಿಯೂ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಪಂಚಕುಲ ಮುನಿಸಿಪಲ್‌ ಕಾರ್ಪೊರೇಷನ್‌ಗೆ ನೋಟಿಸ್‌ ಜಾರಿಗೊಳಿಸಿದೆ ಹಾಗೂ ಮುಂದಿನ ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ನಿಗದಿಪಡಿಸಿದೆ.

Similar News