ಆಯ್ಕೆಯ ಸ್ವಾತಂತ್ರ್ಯ ಮತ್ತು ಜನ/ರಾಷ್ಟ್ರಹಿತ

Update: 2023-04-20 09:09 GMT

ಅಧಿಕಾರವನ್ನು ಪ್ರಜೆಗಳು ನಿಯಂತ್ರಿಸಬೇಕು. ವಧಾಸ್ಥಾನಕ್ಕೂ ತಲೆತಗ್ಗಿಸಿ ಸರದಿಯ ಸಾಲಿನಲ್ಲಿ ಹೋಗಲು ತಯಾರಿರುವ ನಮ್ಮ ಮತದಾರ ಜನತೆ ಇದನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಚುನಾವಣೆಗಳು ಅರ್ಥಪೂರ್ಣವಾಗಲು ಸಾಧ್ಯ. ಅಷ್ಟೇ ಅಲ್ಲ, ಪಕ್ಷ ಯಾವುದೇ ಇರಲಿ, ಅಧಿಕಾರ ಅಂತಿಮ ಗುರಿಯಾಗಿರುವ ಯಾರನ್ನೂ ಆಯ್ಕೆ ಮಾಡುವುದಿಲ್ಲವೆಂದು ನಿರ್ಣಯಿಸಿದರೆ ಮಾತ್ರ ಇದು ಸಾಧ್ಯ.



ದಾಸರು ಹೇಳಿದ್ದು/ಬರೆದದ್ದು/ಹಾಡಿದ್ದು ''ಆರು ಹಿತವರು ನಿನಗೆ ಈ ಮೂವರೊಳಗೆ..'' ಈಗ ಮೂವರಿಲ್ಲ ಮೂರು ಇದೆ. ನಾಲಗೆ, ನಾಮದಿಂದ ಮೊದಲ್ಗೊಂಡು ಬಾಗಿಲು ದಾಟಿ ದಾರಿಯ ವರೆಗೆ. ಮಹಾಭಾರತದ ರಾಜಸೂಯದ ಸಂದರ್ಭದಲ್ಲಿ ಶ್ರೀಕೃಷ್ಣ ''ಇದರೊಳಾರೀ ಭೂತಳಂಗಳ ಸದೆದು ಜಯಿಸುವ ಭಟರ ತೋರಿಸು..'' ಎಂದರೆ ಅಂತಹ ವ್ಯಕ್ತಿ ಈಗಿಲ್ಲ ಎನ್ನಬೇಕು. ರಾಜರಾಜಕೀಯದಿಂದ ಪ್ರಜಾಪ್ರಭುತ್ವದ ಹೆಸರಿನಲ್ಲಿ ಪಕ್ಷ ರಾಜಕೀಯವು ಅಗ್ರಪೀಠಕ್ಕೆ ಬಂದ ಬಳಿಕ ಸವಾಲು ಭಿನ್ನವಾಗಿದೆ. ಈಗ ಎಲ್ಲವೂ ಎಲ್ಲರೂ ಕೃಷ್ಣಪಕ್ಷ. ಸದ್ಯ ಕರ್ನಾಟಕದ ವಿಧಾನಸಭಾ ಚುನಾವಣೆಯು ಹಲವು ಹತ್ತು ಜೋಡಣೆಗಳನ್ನು ಹೊಂದಿದ್ದು ಎಲ್ಲ ಆಕಾಂಕ್ಷಿಗಳ ನಿರೀಕ್ಷೆಗಳನ್ನು ಹುಸಿಗೊಳಿಸ ಲಿದೆ. ಏನೂ ಆಗಬಹುದು, ಏನೂ ಆಗದಿರಬಹುದು. ಜನಮಾನಸದಡಿ ಹರಿಯುವ ಗುಪ್ತಗಾಮಿನಿ ಮತಚೀಟಿಯಲ್ಲಷ್ಟೇ ತೆರೆದುಕೊಳ್ಳುವ ಗುಟ್ಟು. ಅಲ್ಲೂ ಯಾರು ಯಾರಿಗೆ ಮತನೀಡಿದರೆಂಬುದು ಚಿದಂಬರ ರಹಸ್ಯ. ಗೆದ್ದೆತ್ತಿನ ಬಾಲ ಹಿಡಿಯುವವರು ಚುನಾವಣಾ ಫಲಿತಾಂಶದವರೆಗೆ ಸುಮ್ಮನಿದ್ದು ಆನಂತರ ತಾವು ''ಯಾವಾಗಲೂ ಆಳುವ ಪಕ್ಷ'' ಎಂದೇ ಹೇಳುತ್ತಾರೆ.

ಈ ಬಾರಿ ಎಲ್ಲ ಕಡೆ ತ್ರಿಕೋಣ ಅಥವಾ ಅದಕ್ಕೂ ಮೀರಿದ ಕೋಣಗಳ (ಅಂದರೆ ಚತುಷ್ಕೋಣ, ಪಂಚಕೋಣ, ಷಟ್ಕೋಣ... ಹೀಗೆ) ಸ್ಪರ್ಧೆಯಾಗಲಿದೆ. ಆದರೆ ಕೊನೆಗೂ ಈ ಆಯ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ಮೂರು ಪಕ್ಷಗಳ ನಡುವೆ ನಡೆಯುತ್ತದೆ. ಮೂರರೊಳಗಿನ ಅಂಕೆ-ಸಂಖ್ಯೆಗೆ ಸೀಮಿತವಾಗಿದೆ. ಒಂದರ್ಥದಲ್ಲಿ ಇದು ಮೂರೂ ಇಲ್ಲ, ಎರಡೂವರೆಗೆ ಸೀಮಿತವಾಗಿದೆ. ಏಕೆಂದರೆ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಬಹುಮತವನ್ನು ಪಡೆಯುವುದಿಲ್ಲವೆಂಬುದು ಆ ಪಕ್ಷದ ಅವರ ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ತಿಳಿಯದಿದ್ದರೂ ಅದರ ವರಿಷ್ಠರಿಗೆ ತಿಳಿದಿರಬಹುದು. ಆದರೆ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಬಾರದಿದ್ದರೆ ಮತ್ತು ಅತಂತ್ರ ಸ್ಥಿತಿಯುಂಟಾದರೆ ಅವರ ಪಾತ್ರ ನಿಜಕ್ಕೂ 'ಪೋಷಕ'ವಾಗಲಿದೆ. ಇದರರ್ಥ ಇತರ ಪಕ್ಷಗಳು ನಗಣ್ಯವೆಂದಲ್ಲ; ಅಥವಾ ಉದ್ದೇಶ ಇತರ ಪಕ್ಷಗಳನ್ನು ಕಡೆಗಣಿಸುವುದಲ್ಲ. ಹಲವೆಡೆ ಎಎಪಿ, ಎಸ್‌ಡಿಪಿಐ ಮುಂತಾದ ಪಕ್ಷಗಳು ತಕ್ಕ ಮಟ್ಟಿಗೆ ಶಕ್ತಿಯನ್ನು, ಜನಪ್ರಿಯತೆಯನ್ನು ಹೊಂದಿವೆ.

ಎಎಪಿ ಈಗ ರಾಷ್ಟ್ರೀಯ ಪಕ್ಷವಾಗಿದ್ದು ಅದು ಬಿಜೆಪಿಗೆ ತರಬಲ್ಲ ಅಪಾಯವನ್ನು ಕೇಂದ್ರ ಸರಕಾರ ಮನಗಂಡಿದೆ. ಎಎಪಿ ಮಾತ್ರವಲ್ಲ, ಎಸ್‌ಡಿಪಿಐ ಮುಂತಾದ ಪರಿಧಿಯ, ಅಂಚಿನ ಪಕ್ಷಗಳ ನಾಯಕರ ವಿರುದ್ಧ ಅದು ಈ.ಡಿ., ಸಿಬಿಐ, ಐಟಿ ಇಲಾಖೆಗಳ ಮೂಲಕ ಹೂಡುವ ಪ್ರಕರಣಗಳು, ಈ ಮಾತಿಗೆ ಸಮರ್ಥನೆಯನ್ನು ಒದಗಿಸುತ್ತವೆ. ಇವೆಲ್ಲ ಕಾನೂನಿನ ಸಮಸ್ಯೆಗಳು, ಅವನ್ನೇಕೆ ರಾಜಕೀಯಗೊಳಿಸುತ್ತೀರಿ ಎಂಬ ತರ್ಕವು ವಿತಂಡವಾದವಾಗಬಹುದು. ಏಕೆಂದರೆ ಇಲ್ಲಿ ಉತ್ತರ ನೀಡುವ ಎರಡು ಸಮಸ್ಯೆಗಳಿವೆ. ಮೊದಲನೆಯದಾಗಿ, ಇವು ಚುನಾವಣೆ ಹತ್ತಿರವಾದಂತೆ ಉಲ್ಬಣವಾಗುವುದು; ಎರಡನೆಯದು ಸರಕಾರ ಜನರ ತೆರಿಗೆ ಹಣವನ್ನು ವೆಚ್ಚಮಾಡಿ ಇಂತಹ ಪ್ರಕರಣಗಳಲ್ಲಿ ಮುಂದೊತ್ತಿ ಬಂದರೆ ಈ ಪ್ರಕರಣಗಳ ಬಲಿಪಶುಗಳು ತಾವೇ ತಮ್ಮ ಸ್ವಂತ ಹಣದಿಂದ ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಮ್ಮ ಸಂವಿಧಾನವಾಗಲಿ, ನ್ಯಾಯಾಂಗವಾಗಲಿ, ಸಮಾನತೆಯ ರೀತಿರಿವಾಜುಗಳನ್ನು, ವಿಧಿಗಳನ್ನು ನೀಡಿಲ್ಲ. ಇದು ಆಳುವ ಪಕ್ಷಕ್ಕೆ ಅಸಮತೋಲ ಅನುಕೂಲಗಳನ್ನು ನೀಡುತ್ತದೆ. ಇದು ಇಂದು ಮಾತ್ರವಲ್ಲ, ಈ ಹಿಂದೆಯೂ ನಡೆದಿದೆ; ಇನ್ನು ಮುಂದೆಯೂ ನಡೆಯಲಿದೆ.

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಈ.ಡಿ. ಹಠಾತ್ ಕ್ರಮಕೈಗೊಂಡು ಅವರು ಕೆಲವು ವಾರಗಳ ಕಾಲವಾದರೂ ಬಂಧನದಲ್ಲಿರುವ ಪ್ರಮೇಯ ನಡೆದಿದೆ. ಸಾಂದರ್ಭಿಕವಾಗಿ ಹೇಳುವುದಾದರೆ- ಪಿಎಮ್‌ಎಲ್‌ಎ, ಯುಎಪಿಎ ಮುಂತಾದವೆಲ್ಲ ಕಾನೂನಿನ ಕ್ರಮಗಳಲ್ಲವೇ ಮತ್ತು ಇಂತಹ ಕ್ರಮಗಳು ಇತರ ಕಾಯ್ದೆಗಳಡಿಯೂ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಆದರೆ ಇವುಗಳ ಗುರುತ್ವವು ಇತರ ಕಾನೂನುಗಳಡಿ ನಡೆಸುವ ಕ್ರಮಗಳಿಗಿಂತ ಭಿನ್ನವಾಗಿದೆ. ಇಲ್ಲಿ ತಾನು ತಪ್ಪುಮಾಡಿಲ್ಲ ಅಥವಾ ತನ್ನ ಮೇಲೆ ಈ ಕಾಯ್ದೆಗಳು ಅನ್ವಯವಾಗುವುದಿಲ್ಲವೆಂದು ಸಾಬೀತು ಪಡಿಸುವ ಹೊಣೆ ಆಪಾದಿತರ ಮೇಲಿರುತ್ತದೆ. ಇವನ್ನು ಪ್ರಯೋಗಿಸುವ ಸಮಯ, ಸಂದರ್ಭ ಕೂಡಾ ವಿಶೇಷದ್ದು. ಚುನಾವಣೆ ಅಥವಾ ಸಂಘಟಿತ ಹೋರಾಟಗಳ ಸಂದರ್ಭದಲ್ಲೆಲ್ಲ ಜನರ ಬಾಯಿಮುಚ್ಚಿಸಲು ಸಾಧ್ಯವಾಗದಾಗ ಜನನಾಯಕರನ್ನು ಅಸಹಾಯಗೊಳಿಸಲು ಇವನ್ನು ಬಳಸಲಾಗುತ್ತದೆ. ಇದರ ಹೊರತಾಗಿಯೂ ಹೋರಾಟ ಮುಂದುವರಿದರೆ ಪೊಲೀಸ್ ಮುಂತಾದ ಬಲಪ್ರಯೋಗ ಸಾಧನಗಳಿವೆ.

ನಮ್ಮ ನ್ಯಾಯಾಂಗವು ತಾನು ಸಂವಿಧಾನರಕ್ಷಕನೆಂದು ಎಷ್ಟೇ ಹೇಳಿಕೊಂಡರೂ ಅದರ ವಿಧಿವಿಧಾನಗಳು, ಪ್ರಕ್ರಿಯೆಗಳು ಮನುಷ್ಯನ ಬದುಕಿನ ಬಹುಪಾಲು ವೇಳೆಯನ್ನು ನಿಷ್ಕ್ರಿಯಗೊಳಿಸುತ್ತವೆ. ಸಾಮಾನ್ಯ ಕಾನೂನುಗಳಲ್ಲೂ ಹೀಗೆ ನಡೆಯುವುದು ಬಹಳಷ್ಟಿದೆ. ಮರಣದಂಡನೆಗೆ ಗುರಿಯಾದವನೊಬ್ಬ 28 ವರ್ಷಗಳ ಬಳಿಕ ಬಿಡುಗಡೆಯಾಗಿ ಹೊರಬರುವುದು, ಅಪರಾಧಿಯಲ್ಲದವನೊಬ್ಬ ಶಿಕ್ಷೆಗೊಳಗಾಗಿ ಜೀವಿತಾವಧಿಯ ಬಹುಪಾಲು ಕಳೆದ ಬಳಿಕ ಆತ ತಪ್ಪಿತಸ್ಥನಲ್ಲವೆಂದು ಸರ್ವೋಚ್ಚ ನ್ಯಾಯಾಲಯವು ಆದೇಶಮಾಡುವುದು, ಜಾಮೀನು ಸಿಕ್ಕದ ಅಪರಾಧದ ಆರೋಪವೆಂಬ ಕಾರಣಕ್ಕಾಗಿಯೇ ಅಧೀನ/ವಿಚಾರಣಾ ನ್ಯಾಯಾಲಯಗಳು ಜಾಮೀನನ್ನು ತಿರಸ್ಕರಿಸುವುದು, ಇದನ್ನು ಉಚ್ಚ ನ್ಯಾಯಾಲಯದವರೆಗೆ ಮೇಲ್ಮನವಿಯ ನ್ಯಾಯಾಲಯಗಳು ದೃಢೀಕರಿಸುವುದು ಮತ್ತು ತಾಕತ್ತಿದ್ದವರಷ್ಟೇ ಸರ್ವೋಚ್ಚ ನ್ಯಾಯಾಲಯದ ವರೆಗೂ ಹೋಗಬಲ್ಲ ಸ್ಥಿತಿಯಲ್ಲಿ ಅಲ್ಲಿ ಈ ಎಲ್ಲ ಆದೇಶಗಳೂ ರದ್ದಾಗಿ ಆತ ಜಾಮೀನಿನ ಮೇಲೆ ಬಿಡುಗಡೆಯಾಗುವುದು ಇಂತಹ ವಿಪರ್ಯಾಸಗಳ ನಡುವೆ ಸರಕಾರದೆದುರು ಹೋರಾಡಬಲ್ಲವರು ಯಾರು?

ಚುನಾವಣೆ ಬಂತೆಂದರೆ ಜನರಿಗೆ ಹೊಸ ಮತ್ತು ಒಂದು ಹುಸಿ ಆತ್ಮವಿಶ್ವಾಸ ಬರುತ್ತದೆ. ಚುನಾವಣೆಯು ಇಂತಹ ತಿರುಗಾಮುರುಗಾ ಸ್ಥಿತಿಯನ್ನು ಒಂದು ನೆಲೆಗೆ ತರಲಿರುವ ಮೌನಕ್ರಾಂತಿ. ಆದರೆ ಈಗ ಅದು ಸಾಕಷ್ಟು ಸದ್ದು ಮಾಡುತ್ತಿದ್ದರೆ ಅದಕ್ಕೆ ರಾಜಕೀಯ ಪಕ್ಷಗಳು ಕಾರಣ. ಜನರು ಸಾಮಾನ್ಯವಾಗಿ ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಹೀಗಾಗಿ ಹಿಂದೆಲ್ಲ ಮತದಾನವಾಗದೆ ಬಹಳಷ್ಟು ಮತದಾರರ ಇಷ್ಟಾನಿಷ್ಟಗಳು ಅರ್ಥವಾಗುತ್ತಿರಲಿಲ್ಲ. ಜನರು ಯೋಚಿಸಬಲ್ಲರೆಂದು ಮತ್ತು ಯೋಚಿಸುತ್ತಾರೆಂದು ಗೊತ್ತಾಗುವುದೇ ಚುನಾವಣೆಯಲ್ಲಿ. ಇದರಿಂದಾಗಿ ಚುನಾವಣಾಪೂರ್ವ ಸಮೀಕ್ಷೆಗಳು ಎಂಬುದೊಂದಿರಲಿಲ್ಲ. ಆದರೆ ಈಗ ಜನರು ಎಚ್ಚರವಾಗಿದ್ದಾರೆಂದು ಅನ್ನಿಸಿದರೆ ಅದಕ್ಕೆ ಕಾರಣ ರಾಜಕೀಯ ಪಕ್ಷಗಳು ನೀಡುವ ಭೋಗಭಾಗ್ಯಗಳು. ಆದರೆ ಈ ಮೂರೂ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯವು ಇತರ ಅಂದರೆ ಉಳಿವಿನ ಅಂಚಿನಲ್ಲಿರುವ ಇತರ ಪಕ್ಷಗಳನ್ನೂ ಆಧರಿಸಿವೆ. ಚಿಕ್ಕಪಕ್ಷಗಳೆಂದು ಅಲಕ್ಷಿಸಿದ ಪಕ್ಷಗಳೇ ಅನೇಕ ಬಾರಿ ಮುಖ್ಯ ಸ್ಪರ್ಧಾಳುಗಳ ಸೋಲು-ಗೆಲುವಿಗೆ ಕಾರಣವಾಗುತ್ತವೆ. ಕೆಲವು ಬಾರಿ ಇತರ ವೈಯಕ್ತಿಕ ಅಭ್ಯರ್ಥಿಗಳೂ ಹೀಗೆ ಸೋಲು-ಗೆಲುವನ್ನು ನಿರ್ಧರಿಸುವುದುಂಟು. ಇನ್ನು ಕೆಲವು ಬಾರಿ ಈ ರೀತಿಯ 'ಇತರರ' ಪೈಕಿ ಒಬ್ಬರು ಗೆದ್ದು ಅನಿರೀಕ್ಷಿತ ಫಲಿತಾಂಶವನ್ನು ನೀಡುವುದೂ ಉಂಟು.

ಒಟ್ಟಿನಲ್ಲಿ ಇದು ಪಕ್ಷಗಳ ಕಾಲ. ಪಕ್ಷಗಳು ಯಾಕೆ ಬೇಕು? ಬೆಂಜಮಿನ್‌ಡಿಸ್ರೇಲಿ ಹೇಳಿದಂತೆ ಪಕ್ಷಗಳಿಲ್ಲದೆ ಸಂಸದೀಯ ಸರಕಾರ ಅಸಾಧ್ಯ. ಹಾಗೆಂದು ರಾಜಕೀಯ ಪಕ್ಷಗಳಿಗೆ ರಾಷ್ಟ್ರದ, ರಾಜ್ಯದ ಅಭ್ಯುದಯ, ಅಭಿವೃದ್ಧಿಯ ಕಡೆಗೆ ದೃಷ್ಟಿಯಿಲ್ಲದೆ ತಮ್ಮ ಅಧಿಕಾರದ ಅಸ್ತಿತ್ವವೇ ಮುಖ್ಯವಾದರೆ ಪ್ರಜಾಪ್ರಭುತ್ವದ ಅಡಿಗಲ್ಲಿಗೇ ಅಪಾಯ. ನಮ್ಮ ಈಗಿನ ರಾಜಕೀಯ ಪಕ್ಷಗಳ ಗೋಗರೆತ ಮತ್ತು ಅಪೇಕ್ಷೆ, ''ತತ್ವ-ಸಿದ್ಧಾಂತ ಸತ್ತುಹೋಗಲಿ, ನಮ್ಮ ಪಕ್ಷವನ್ನು ಬೆಂಬಲಿಸಿ'' ಎಂಬಂತಿದೆ. ಇದನ್ನು ಅನೇಕರು ಬೆಂಬಲಿಸುತ್ತಾರೆ. ಏಕೆಂದರೆ ಗೊತ್ತುಗುರಿಯಿಲ್ಲದೆ ಇನ್ನೊಬ್ಬರ ಅಡಿಯಾಳಾಗಿ ಬದುಕಬಹುದು. ಸ್ವಂತ ನಿಲುವನ್ನು ಬಲಿಗೊಟ್ಟು ಜೋಳವಾಳಿಗೆಗೆ ಶರಣುಹೋಗಬಹುದು. ಪಕ್ಷವೆಂದರೆ ನಾವೆಲ್ಲರೂ ಸೇರಿ ರೂಪಿಸಿಕೊಂಡ ನಿಲುವು, ಅಭಿಪ್ರಾಯ, ಸಿದ್ಧಾಂತವಾದ್ದರಿಂದ ವೈಯಕ್ತಿಕ ಅಭಿಪ್ರಾಯವೇ ಬೇಡವೆಂದಾಗಿದೆ. ರೋಮನ್ ಆಧಿಪತ್ಯದಲ್ಲಿ ರಾಜಕೀಯ ಪಕ್ಷಗಳಿರಲಿಲ್ಲವಂತೆ. ಮೆಕಾಲೆ ಬರೆಯುವಂತೆ ಆಗ ಯಾರೂ ಪಕ್ಷಪ್ರೇಮಿಗಳಾಗಿರಲಿಲ್ಲ. ಎಲ್ಲರೂ ರಾಷ್ಟ್ರಪ್ರೇಮಿಗಳಾಗಿದ್ದರು. ದೊಡ್ಡವರು ಬಡವರಿಗೆ ನೆರವಾಗುತ್ತಿದ್ದರು. ಬಡವರು ಈ ದೊಡ್ಡವರನ್ನು ಪ್ರೀತಿಸುತ್ತಿದ್ದರು. ಭೂಮಿಯನ್ನು ನ್ಯಾಯರೀತಿಯಲ್ಲಿ ಹಂಚುತ್ತಿದ್ದರು. ಬೆಳೆಯನ್ನು ನ್ಯಾಯಯುತವಾಗಿ ಮಾರುತ್ತಿದ್ದರು.

ಆ ಹಳೆಯ ಒಳ್ಳೆಯ ದಿನಗಳಲ್ಲಿ ರೋಮನ್ನರು ಸೋದರರಂತಿದ್ದರು. ಆದರೆ ಈಗ? ಪಕ್ಷ ರಾಜಕೀಯಕ್ಕಾಗಿ ಪ್ರಜೆಗಳು ಎಲ್ಲವನ್ನೂ ಎಲ್ಲರನ್ನೂ ತೊರೆಯುವುದಕ್ಕೆ ತಯಾರಿದ್ದಾರೆ. ಯಾಕೆ ನಾನು ಸರಿ, ನನ್ನ ಪಕ್ಷ ಸರಿ ಎಂದು ಯೋಚಿಸುವ ವ್ಯವಧಾನ ಅವರಿಗಿಲ್ಲ. ಈ ರೀತಿಯ ಅಂಧ ಪಕ್ಷಪ್ರೇಮದಿಂದ ಯಾರಿಗೆ ಲಾಭ? ಅಭ್ಯರ್ಥಿಗಳಿಗೂ ರಾಜಕೀಯ ಪಕ್ಷಗಳಿಗೂ! ಕೆಲವರ ಲಾಭಕ್ಕೆ ಹೆಚ್ಚು ಮಂದಿ ತೋರುವ ಹುಚ್ಚಿಗೆ ಪಕ್ಷಪ್ರೇಮವೆನ್ನುತ್ತಾರೆ ಎಂಬ ಮಾತು ಸರಿಯಿರಬಹುದು. ಇದನ್ನು ಮೀರಿ ಯೋಚಿಸುವ ಯಾವ ಶಿಕ್ಷಣವೂ ನಮ್ಮಲ್ಲಿಲ್ಲ. ನಮ್ಮ ವಿದ್ಯಾವಂತರು ಚುನಾವಣೆಯ ಕುರಿತು, ಪಕ್ಷರಾಜಕೀಯದ ಕುರಿತು ತೋರುವ ಧೋರಣೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗಬಹುದು. ಈ ಧೋರಣೆ ತಾರ್ಕಿಕವಾಗಿಯೂ ಇರದೆ, ಮೊಂಡುತನದ ವಿತಂಡವಾದದ ಹಂತಕ್ಕೆ ಇಳಿಯುವುದು ಸಾಮಾನ್ಯ. ಇಂತಹ ತತ್ವಸಿದ್ಧಾಂತಗಳ ಬೆಳಕಿನಲ್ಲಿ, ನೆರಳಿನಲ್ಲಿ ನಾವೀಗ ಎದುರಿಸುತ್ತಿರುವ ಚುನಾವಣೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ.

ಈ ಬಾರಿಯ ಚುನಾವಣೆಗಳನ್ನು ನಚ್ಚಿಕೊಳ್ಳುವುದಾದರೆ ಕೋಟಿಕೋಟಿ ಹಣ ಮತ್ತು ಬೆಲೆಬಾಳುವ ಆಮಿಷಗಳು ಪತ್ತೆಯಾಗಿವೆ. ಹಿಂದೆಯೂ ಆಗಿದ್ದವು. ಆದರೆ ಇದು ಬೆಲೆಗಳಂತೆ ಮೇಲೇರುತ್ತವೆಯೇ ಹೊರತು ಇಳಿಯುವುದಿಲ್ಲ. ಚುನಾವಣಾ ನೀತಿ ಸಂಹಿತೆಯೆಂಬ ಒಂದು ಕಟ್ಟುಕತೆಯಡಿ ಸಾಕಷ್ಟು ಪ್ರಕರಣಗಳು ಪತ್ತೆಯಾಗುತ್ತವೆ. ಆನಂತರ ಈ ಹಣ ಎಲ್ಲಿ ಶೇಖರಣೆಯಾಗುತ್ತದೆ, ಇದರ ಫಲಾನುಭವಿಗಳು ಯಾರು ಒಂದೂ ಅರ್ಥವಾಗುವುದಿಲ್ಲ. ನೀತಿಸಂಹಿತೆಯ ಉಲ್ಲಂಘನೆಯಾದ ಸಂದರ್ಭದಲ್ಲಿ ವೈಭವೋಪೇತವಾಗಿ ಅದ್ದೂರಿಯ ಪ್ರಚಾರ ಪಡೆಯುವ ಪ್ರಕರಣಗಳಲ್ಲಿ ಎಷ್ಟು ಪ್ರಮಾಣದ ದಂಡನೆ-ಶಿಕ್ಷೆಯಾಗಿದೆ? ಒಂದೊಂದು ಕ್ಷೇತ್ರಕ್ಕೂ ಕಡಿಮೆಯೆಂದರೆ ಸುಮಾರು 50 ಕೋಟಿ ಹಣ ವೆಚ್ಚವಾಗಬಹುದು. ಈ ವೆಚ್ಚ ಯಾರಿಂದ, ಎಲ್ಲಿಂದ? ಯಾರಿಗಾಗಿ? ಮತದಾರರಿಗೆ ಇವ್ಯಾವುದೂ ಬೇಡ. ಅಭ್ಯರ್ಥಿಗಳು ನೀಡುವ ಪುಡಿಗಾಸೋ, ಕೆಲವು ಪುಟ್ಟ ಭ್ರಷ್ಟ ಉಡುಗೊರೆಗಳೇ ಮತವನ್ನು ಅಪೇಕ್ಷಿಸುವ ಮತ್ತು ನೀಡುವವರ ಮಾನವನ್ನು ಅಳೆಯಲು ಸಾಕು. ಇನ್ನುಳಿದವರು ಮತಿಭ್ರಾಂತರು. ಚುನಾವಣೆ ಹತ್ತಿರವಾದಂತೆ ಟಿಕೆಟು ಪ್ರಕರಣಗಳು ಹೆಚ್ಚಾಗಿವೆ. ತತ್ವ-ಸಿದ್ಧಾಂತಗಳ ಆಧಾರದಲ್ಲಿ ಪಕ್ಷವೊಂದನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದುಂಟು. 1977ರಲ್ಲಿ ತುರ್ತುಪರಿಸ್ಥಿತಿ ರದ್ದಾಗಿ ಚುನಾವಣೆ ಘೋಷಣೆಯಾದಾಗ ಜಗಜೀವನ ರಾಮ್, ಬಹುಗುಣ ಹೀಗೆ ಹಲವು ಹಿರಿಯ ರಾಜಕಾರಣಿಗಳು ಕಾಂಗ್ರೆಸ್ ಪಕ್ಷ ತೊರೆದರು. ಅಲ್ಲೊಂದು ತರ್ಕವಿತ್ತು. ಪ್ರಜಾಪ್ರಭುತ್ವಕ್ಕೆ ಮರಳುವ ಹಂಬಲವಿತ್ತು. (ಇಂದಿರಾಗಾಂಧಿ ಚುನಾವಣಾ ರಾಜಕೀಯಕ್ಕೆ ಮರಳಿದ್ದು ಅವರ ಘನಸ್ಥಿಕೆಗೆ ಪುರಾವೆಯೂ ಹೌದು.)

ಆದರೆ ಈಗ ನಡೆಯುವ ಚುನಾವಣಾಪೂರ್ವ ರಾಜೀನಾಮೆಗಳು, ಪಕ್ಷಾಂತರಗಳು ಪ್ರಹಸನಗಳಂತಿವೆ. ಅಲ್ಲಿ ಸಲ್ಲದವರು ಇಲ್ಲಿ, ಇಲ್ಲಿ ಸಲ್ಲದವರು ಅಲ್ಲಿ ಪ್ರಕಟವಾಗುತ್ತಿದ್ದಾರೆ. ರಾಜಕೀಯ ಅನುಕೂಲಗಳು ಹೊಸ ಜೋಡಣೆಗೆ ಸಾಕ್ಷಿಯಾಗುತ್ತಿವೆ. ಹೋಗಲಿ, ಚುನಾವಣೆಯಲ್ಲಿ ಆಯ್ಕೆಯಾದವರಿಗೂ ಯಾವ ಶಿಸ್ತು ಇರುವುದಿಲ್ಲ. 'ಆಪರೇಷನ್'ಗಳನ್ನು ನಂಬಿಯೇ ಸರಕಾರ ನಡೆಸುವ ರಾಜಕೀಯ ಪಕ್ಷಗಳನ್ನು ನಾವು ಕಳೆದ ಚುನಾವಣೆಯ ನಂತರ ನೋಡಿದ್ದೇವೆ. ಈ ಬಾರಿಯೂ ನೋಡಬಹುದು. ಬಂಡಾಯವೆದ್ದ ಅಭ್ಯರ್ಥಿ ತಾನು ಗೆದ್ದರೆ ತನ್ನ ಮಾಜಿ ಪಕ್ಷಕ್ಕೆ ಮರಳುತ್ತೇನೆಂದು ಈಗಲೇ ಹೇಳುವುದಾದರೆ ಅವನ ಉದ್ದೇಶವೇನು? ಅಧಿಕಾರ ಮಾತ್ರ. ವಿಡಂಬನೆಯೆಂದರೆ ಯಾವ ಪಕ್ಷಗಳು, ರಾಜಕಾರಣಿಗಳು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸರ್ವಾಧಿಕಾರದ ವಿರುದ್ಧ 1970ರ ದಶಕದಲ್ಲಿ ಹೋರಾಡಿದರೋ ಅವರೇ ಈಗ ಸರ್ವಾಧಿಕಾರದ ಪರವಾಗಿ ಮಾತನಾಡುತ್ತ ಜನರಿಗೆ ಮಂಕುಬೂದಿಯನ್ನು ಎರಚುತ್ತಿರುವುದು. ಇದಕ್ಕೆ ಧರ್ಮ, ದೇವರುಗಳು ಅನುಕೂಲಕರ ಪರಿಕರಗಳು. ಮನುಷ್ಯ-ಮನುಷ್ಯರನ್ನು ದೂರವಾಗಿಸಿ ಅಥವಾ ಅವರಲ್ಲಿ ಮೌಢ್ಯಪರಂಪರೆಯನ್ನು ಬೇರೂರಿಸಿ ಅಧಿಕಾರಕ್ಕೆ ಏರುವುದಕ್ಕಾಗಿ ನಡೆಸುವ ಚಾಣಾಕ್ಷ ನಡೆ ಚಾಣಕ್ಯನಿಗೆ ಸುಖ ತರದು; ಶಕುನಿಗೆ ಸಂತಸ ತಂದೀತು.

ಈ ದೃಷ್ಟಿಯಿಂದ ಬ್ರಿಟಿಷರು ನಮ್ಮಿಂದ ಹೆಚ್ಚು ಬುದ್ಧಿವಂತರು. 2ನೇ ಮಹಾಯುದ್ಧದಲ್ಲಿ ತಮಗೆ ಗೆಲುವು ತಂದುಕೊಟ್ಟ ಚರ್ಚಿಲ್‌ರನ್ನು ಆನಂತರದ ಚುನಾವಣೆಯಲ್ಲಿ ಸೋಲಿಸಿದರು. ಚರ್ಚಿಲ್ ಬರೆದರು: ''10 ಮೇ 1940ರ ರಾತ್ರಿ ಈ ಮಹಾಯುದ್ಧ ಪ್ರವೇಶಿಕೆಯಲ್ಲಿ ನಾನು ಈ ರಾಷ್ಟ್ರದ ಸರ್ವಾಧಿಕಾರಿಯಾಗಿದ್ದೆ ಮತ್ತು ಮುಂದಿನ ಐದು ವರ್ಷ ಮೂರು ತಿಂಗಳುಗಳ ಕಾಲದ ಮಹಾಯುದ್ಧದಲ್ಲಿ ಅದನ್ನು ಹೊಂದಿದ್ದೆ; ಇದಾದ ನಂತರ ನಮ್ಮೆಲ್ಲ ಶತ್ರುಗಳು ಬೇಷರತ್ತಾಗಿ ಶರಣಾದಾಗ ಅಥವಾ ಶರಣಾದ ಬಳಿಕ ಬ್ರಿಟಿಷ್ ಮತದಾರರು ನನ್ನನ್ನು ಅವರ ಮುಂದಿನ ಎಲ್ಲಾ ವ್ಯವಹಾರಗಳ ನಿಯಂತ್ರಣದಿಂದ ವಜಾ ಮಾಡಿದರು.'' ಅಧಿಕಾರವನ್ನು ಪ್ರಜೆಗಳು ನಿಯಂತ್ರಿಸಬೇಕು. ವಧಾಸ್ಥಾನಕ್ಕೂ ತಲೆತಗ್ಗಿಸಿ ಸರದಿಯ ಸಾಲಿನಲ್ಲಿ ಹೋಗಲು ತಯಾರಿರುವ ನಮ್ಮ ಮತದಾರ ಜನತೆ ಇದನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಚುನಾವಣೆಗಳು ಅರ್ಥಪೂರ್ಣವಾಗಲು ಸಾಧ್ಯ. ಅಷ್ಟೇ ಅಲ್ಲ, ಪಕ್ಷ ಯಾವುದೇ ಇರಲಿ, ಅಧಿಕಾರ ಅಂತಿಮ ಗುರಿಯಾಗಿರುವ ಯಾರನ್ನೂ ಆಯ್ಕೆ ಮಾಡುವುದಿಲ್ಲವೆಂದು ನಿರ್ಣಯಿಸಿದರೆ ಮಾತ್ರ ಇದು ಸಾಧ್ಯ.

Similar News