×
Ad

ಮೈದಾನದಲ್ಲಿ WWE ಶೈಲಿಯಲ್ಲಿ ಎದುರಾಳಿ ಆಟಗಾರನ ಮೇಲೆ ದಾಳಿ; ಕ್ರಿಸ್ಟಿಯಾನೊ ರೊನಾಲ್ಡೊಗೆ ಹಳದಿ ಕಾರ್ಡ್

Update: 2023-04-20 14:18 IST

ಹೊಸದಿಲ್ಲಿ: ಪೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಲ್ ಹಿಲಾಲ್ ಮತ್ತು ಅಲ್ ನಸ್ಸರ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮತ್ತೆ ಸುದ್ದಿ ಮಾಡಿದ್ದಾರೆ. ಗೋಲು ಗಳಿಸಿದ ಅಥವಾ ಹ್ಯಾಟ್ರಿಕ್ ಸಾಧಿಸಿದ ಕಾರಣಕ್ಕೆ ಅಲ್ಲ; ಅವರ ತಂಡ ಅಲ್ ಹಿಲಾಲ್ ವಿರುದ್ಧ 0-2 ಗೋಲುಗಳ ಹೀನಾಯ ಸೋಲು ಕಂಡಿದೆ.

ರೊನಾಲ್ಡೊ ಅವರು ಅಲ್ ಹಿಲಾಲ್‍ನ ಗೆಸ್ಟಾವೊ ಕ್ಯೂಲರ್ ವಿರುದ್ಧ ಮೈದಾನದಲ್ಲೇ ಹಣಾಹಣಿ ನಡೆಸಿದ ದೃಶ್ಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹತಾಶೆಯಿಂದ ಎದುರಾಳಿ ತಂಡದ ಆಟಗಾರನ ಮೇಲೆ WWE ಶೈಲಿಯಲ್ಲಿ ದಾಳಿ ನಡೆಸಿದರು. ಇಷ್ಟಾಗಿಯೂ ಪಂದ್ಯದ ಫಲಿತಾಂಶ ಮಾತ್ರ ಅಲ್ ನಸ್ಸರ್ ಪರವಾಗಿ ಬರಲಿಲ್ಲ.

ಈ ಆಘಾತಕಾರಿ ಹಣಾಹಣಿಯಿಂದ ರೊನಾಲ್ಡೊ ಪಂದ್ಯದ 57ನೇ ನಿಮಿಷದಲ್ಲಿ ಹಳದಿ ಕಾರ್ಡ್ ಪಡೆದರು. ರೊನಾಲ್ಡೊ ಇನ್ನೂ ಕಠಿಣ ಶಿಕ್ಷೆ ಪಡೆಯಬೇಕಿತ್ತು ಎನ್ನುವುದು ಹಲವು ಮಂದಿ ಪ್ರೇಕ್ಷಕರ ಅಭಿಪ್ರಾಯ.

ವರ್ಣರಂಜಿತ ವೃತ್ತಿಜೀವನದ ಈ ವಿಲಕ್ಷಣ ಪ್ರಸಂಗಕ್ಕೆ ಹಲವು ಮಂದಿ ಮಿಶ್ರ ಟ್ವೀಟ್ ಮಾಡಿದ್ದಾರೆ. ಕೆಲವರಂತೂ ವಿನೋದವಾಗಿ ಪ್ರತಿಕ್ರಿಯಿಸಿದ್ದು, "WWE  ಕ್ರಿಸ್ಟಿಯಾನೊ ರೊನಾಲ್ಡೊ ಜತೆ ಸಹಿ ಮಾಡಬೇಕಿತ್ತು; ಎಂಥ ಫಿನಿಶರ್" ಎಂದು ಒಬ್ಬರು ಉದ್ಗರಿಸಿದ್ದಾರೆ.

ರೊನಾಲ್ಡೊ ಅಲ್ ನಸ್ಸರ್ ತಂಡದ ಜತೆ ಕಳೆದ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಐದು ಪಂದ್ಯದಲ್ಲಿ ಎಂಟು ಗೋಲು ಗಳಿಸಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಅದೇ ವೇಗ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Similar News