×
Ad

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಟ್ಟು ಹತ್ಯೆ

Update: 2023-04-21 12:59 IST

ಓಹಿಯೊ: ಅಮೆರಿಕಾದ ಓಹಿಯೊ ರಾಜ್ಯದಲ್ಲಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ 24 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯು ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಆ ರಾಜ್ಯದ ಪೊಲೀಸರು ತಿಳಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಮೃತ ಯುವಕನನ್ನು ಸಾಯೇಶ್ ವೀರ ಎಂದು ಗುರುತಿಸಲಾಗಿದ್ದು, ಈ ಘಟನೆಯು ಓಹಿಯೋ ರಾಜ್ಯದ ಕೊಲಂಬಸ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

"ಎಪ್ರಿಲ್ 20, 2023ರಂದು ರಾತ್ರಿ 12.50ರ ಹೊತ್ತಿನಲ್ಲಿ ಗುಂಡೇಟು ವರದಿಯಾದ ಕಾರಣಕ್ಕೆ ಕೊಲಂಬಸ್ ಪ್ರಾಂತ್ಯದ ಪೊಲೀಸರನ್ನು 1000 ಬ್ಲಾಕ್‌ನಲ್ಲಿರುವ ಡಬ್ಲ್ಯೂ.ಬ್ರಾಡ್ ಸ್ಟೇಷನ್‌ಗೆ ರವಾನಿಸಲಾಯಿತು. ಸ್ಥಳಕ್ಕೆ ಧಾವಿಸಿದಾಗ 24 ವರ್ಷದ ಸಾಯೇಶ್ ವೀರ ಎಂಬ ಸಂತ್ರಸ್ತ ಯುವಕನು ಗುಂಡೇಟಿನ ಗಾಯದಿಂದ ನರಳುತ್ತಿರುವುದು ಕಂಡು ಬಂದಿತು" ಎಂದು ಪೊಲೀಸ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಲಂಬಸ್ ಅಗ್ನಿಶಾಮಕ ಸೇವೆ ಸಿಬ್ಬಂದಿಗಳು ಸಂತ್ರಸ್ತ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಚಿಕಿತ್ಸೆ ಫಲಕಾರಿಯಾಗದೇ  ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಈ ಕುರಿತು ಮೃತ ಯುವಕನ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಸಾಯೇಶ್ ವೀರ ಅವರ ಮೃತದೇಹವನ್ನು ಭಾರತಕ್ಕೆ ಮರಳಿಸಲು ಅಂತರ್ಜಾಲ ನಿಧಿ ಸಂಗ್ರಹ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿರುವ ರೋಹಿತ್ ಯಲಮಂಚಿಲಿ ಪ್ರಕಾರ, ಮೃತ ಯುವಕನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದು, ಆತ ಇನ್ನು ಹತ್ತು ದಿನಗಳೊಳಗೆ ಪದವಿ ಪಡೆಯಲಿದ್ದ. ಆತನನ್ನು ಎಚ್1ಬಿ ವೀಸಾದಡಿ ಅಮೆರಿಕಾಗೆ ತೆರಳಲು ಆಯ್ಕೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಒಂದೆರಡು ವಾರಗಳಲ್ಲಿ ಆತ ಪೆಟ್ರೋಲ್ ಬಂಕ್‌ನಲ್ಲಿ ತಾನು ನಿರ್ವಹಿಸುತ್ತಿದ್ದ ಹುದ್ದೆಯನ್ನು ತೊರೆಯುವವನಿದ್ದ ಎಂದೂ ಅವರು ತಿಳಿಸಿದ್ದಾರೆ.

ಕೊಲಂಬಸ್ ಪ್ರಾಂತ್ಯದಲ್ಲಿ ಕ್ರಿಕೆಟ್ ಆಡುವ ಎಲ್ಲರಿಗೂ ಆತ ಚಿರಪರಿಚಿತನಾಗಿದ್ದ. ಆತ ಅದ್ಭುತ ಕ್ರಿಕೆಟ್ ಪಟು ಹಾಗೂ ಉತ್ತಮ ಗೆಳೆಯನಾಗಿದ್ದ ಎಂದು ರೋಹಿತ್ ಯಲಮಂಚಿಲಿ ಹೇಳಿದ್ದಾರೆ.

Similar News