ಯಾರು ಯಾರ ಆಶೀರ್ವಾದ ಪಡೆಯಬೇಕು?

Update: 2023-04-23 18:56 GMT

ಕರ್ನಾಟಕ ಎಂಬುದು ಬಸವಣ್ಣ, ಕನಕದಾಸ, ಸಿದ್ಧಾರೂಢ, ಶಿಶುನಾಳ ಶರೀಫ, ಅಲ್ಲಮ ಪ್ರಭು, ಕುವೆಂಪು, ಬೇಂದ್ರೆ, ಅಕ್ಕಮಹಾದೇವಿ ಮುಂತಾದವರು ನಡೆದಾಡಿದ ನೆಲ. ಈ ನಾಡಿನ ಜನರ ಆಶೀರ್ವಾದವನ್ನು ನಡ್ಡಾ, ಅಮಿತ್ ಶಾ, ಮೋದಿ ಹೀಗೆ ಎಲ್ಲರೂ ಪಡೆಯಬೇಕು. ಕನ್ನಡಿಗರಿಗೆ ಆಶೀರ್ವಾದ ಮಾಡುವಷ್ಟು ದೊಡ್ಡವರು ಯಾರೂ ಇಲ್ಲ.


ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳು ಎಂಬುದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಗೊತ್ತು. ಈ ವ್ಯವಸ್ಥೆಯಲ್ಲಿ ಆಶೀರ್ವಾದ ಮಾಡಬೇಕಾದವರು ಜನತೆ. ಆಶೀರ್ವಾದ ಕೇಳಬೇಕಾದವರು ರಾಜಕಾರಣಿಗಳು. ಐದು ವರ್ಷಕ್ಕೆ ಒಮ್ಮೆ ಚುನಾವಣೆ ಬಂದಾಗ ಜನರ ಆಶೀರ್ವಾದ ಕೋರಿ ರಾಜಕಾರಣಿಗಳು ಜನರ ಮನೆ ಬಾಗಿಲಿಗೆ ಬರುತ್ತಾರೆ. ಜನರು ಆಶೀರ್ವಾದ ಮಾಡಿದರೆ, ಅಧಿಕಾರದ ಕುರ್ಚಿಯ ಮೇಲೆ ಕೂರುತ್ತಾರೆ. ತಿರಸ್ಕರಿಸಿದರೆ, ಮನೆಗೆ ಹೋಗುತ್ತಾರೆ. ಇದು ಮೋದಿಯವರಿಂದ ಹಿಡಿದು ಮನಮೋಹನ ಸಿಂಗ್‌ವರೆಗೆ ಎಲ್ಲರಿಗೂ ಅನ್ವಯಿಸುವ ಮಾತು.

ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ಕರ್ನಾಟಕದ ಜನ ವಂಚಿತರು ಆಗಬಾರದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆದರಿಕೆ ಸ್ವರೂಪದ ಮಾತುಗಳನ್ನು ಆಡಿದ್ದಾರೆ. ಎಪ್ರಿಲ್ 19ರಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತಾಡಿದ ನಡ್ಡಾ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸುವ ಈ ಮಾತನ್ನು ಆಡಿರುವುದು ತೀವ್ರ ವಿವಾದ, ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ, ಒಂದೇ ದೇಶ, ಒಂದೇ ಧರ್ಮ, ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವವರಿಗೆ ಜನಸಾಮಾನ್ಯರು ಎಂದೂ ಕಾಣಿಸುವುದಿಲ್ಲ. ಉಳಿದ ಜನರಿಗಿಂತ ತಾವು ಶ್ರೇಷ್ಠರು ಎಂದು ಭಾವಿಸುವವರು ಜನರ ಆಸ್ಮಿತೆ, ಭಾಷೆ, ಸ್ವಂತಿಕೆ, ಸ್ವಾಭಿಮಾನಗಳನ್ನು ಎಂದೂ ಗೌರವಿಸುವುದಿಲ್ಲ. ಓಟು ಹಾಕಿ ಅಧಿಕಾರ ನೀಡುವ ಜನರಿಂದ ಇವರು ಆಶೀರ್ವಾದ ಕೇಳುವುದಿಲ್ಲ. ತಮ್ಮ ವಿಶ್ವಗುರುವಿನ ಆಶೀರ್ವಾದಕ್ಕೆ ಪಾತ್ರರಾಗಿ ಎಂದು ಕೇಳುತ್ತಾರೆ. ಇದು ಬಹುತ್ವ ಭಾರತವನ್ನು ಇವರು ಎತ್ತ ಕೊಂಡೊಯ್ಯುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ.

ನಡ್ಡಾ ಅವರೇ ಕರ್ನಾಟಕ ಎಂಬುದು ಬಸವಣ್ಣ, ಕನಕದಾಸ, ಸಿದ್ಧಾರೂಢ, ಶಿಶುನಾಳ ಶರೀಫ, ಅಲ್ಲಮ ಪ್ರಭು, ಕುವೆಂಪು, ಬೇಂದ್ರೆ, ಅಕ್ಕಮಹಾದೇವಿ ಮುಂತಾದವರು ನಡೆದಾಡಿದ ನೆಲ. ಈ ನಾಡಿನ ಜನರ ಆಶೀರ್ವಾದವನ್ನು ನಡ್ಡಾ, ಅಮಿತ್ ಶಾ, ಮೋದಿ ಹೀಗೆ ಎಲ್ಲರೂ ಪಡೆಯಬೇಕು. ಕನ್ನಡಿಗರಿಗೆ ಆಶೀರ್ವಾದ ಮಾಡುವಷ್ಟು ದೊಡ್ಡವರು ಯಾರೂ ಇಲ್ಲ.
ಕರ್ನಾಟಕದ ಜನರು ಪ್ರತಿವರ್ಷ ಕೇಂದ್ರ ಸರಕಾರಕ್ಕೆ 4.75 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಾರೆ. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕಕ್ಕೆ ವಾಪಸ್ ಕೊಡುತ್ತಿರುವುದು ಕೇವಲ 27,000 ಕೋಟಿ ರೂ. ಮಾತ್ರ. ಕರ್ನಾಟಕದ ಪಾಲಿನ ಜಿಎಸ್‌ಟಿ ಹಣವನ್ನೂ ಕೊಡದೇ ಚುನಾವಣೆ ಬಂದಾಗ ಒಮ್ಮಿಂದೊಮ್ಮೆಲೆ ಕರ್ನಾಟಕದ ಮೇಲೆ ಅನುಕಂಪ ಉಕ್ಕೇರಿ ವಾರದಲ್ಲಿ ಮೂರು ದಿನ ಇಲ್ಲಿ ಬರುತ್ತಿರುವುದ್ದೇಕೆ?

ಅಷ್ಟಕ್ಕೂ ಕರ್ನಾಟಕಕ್ಕೆ ಮೋದಿ ನೇತೃತ್ವದ ಬಿಜೆಪಿ ಸರಕಾರ ನೀಡಿದ ಕೊಡುಗೆಯಾದರೂ ಏನು? ಕರ್ನಾಟಕದ ಜನರ ಬದುಕು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಾಗ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ಎಲ್ಲಿದ್ದರು? ಯಾಕೆ ಸಕಾಲದಲ್ಲಿ ಬಂದು ಸಹಾಯ ಮಾಡಲಿಲ್ಲ. ಕೋವಿಡ್‌ನಿಂದ ಎಲ್ಲೆಡೆಯಂತೆ ಕರ್ನಾಟಕದಲ್ಲೂ ಅನೇಕರು ಕೊನೆಯುಸಿರೆಳೆದರು. ಚಾಮರಾಜನಗರದಲ್ಲಿ 30ಕ್ಕೂ ಹೆಚ್ಚು ಜನ ಸತ್ತರು. ಕೇಂದ್ರ ಸರಕಾರ ಸಕಾಲದಲ್ಲಿ ಆಕ್ಸಿಜನ್ ಪೂರೈಸಲಿಲ್ಲ. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಯಿತು.

ಕರ್ನಾಟಕಕ್ಕೆ ಸಮರ್ಥ, ದಕ್ಷ, ಮುಖ್ಯಮಂತ್ರಿ ಬೇಕು. ಇಲ್ಲಿ ಜಾತಿ, ಮತ ಮುಖ್ಯವಲ್ಲ. ಬಡವರ, ಹಸಿದವರ ನೋವಿಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು. ಬಸವಣ್ಣನವರು ಹೇಳಿದಂತೆ ಸಕಲ ಜೀವಾತ್ಮರಲಿ ಲೇಸನು ಬಯಸುವ ಬಾಬಾಸಾಹೇಬರ ಸಂವಿಧಾನವನ್ನು ಗೌರವಿಸುವ, ಹಸಿದವರಿಗೆ ಅನ್ನ ನೀಡುವ ಸರಕಾರ ಮತ್ತು ಮುಖ್ಯಮಂತ್ರಿ ಬೇಕು. ಮನುಷ್ಯರನ್ನು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಪ್ರತ್ಯೇಕಿಸುವ ಸರಕಾರ ಅಥವಾ ಮುಖ್ಯಮಂತ್ರಿ ಈ ಕರ್ನಾಟಕಕ್ಕೆ ಬೇಡ.

ಜನರ ಬಳಿ ಹೋಗಲು ಮುಖವಿಲ್ಲದವರು ಈಗ ಲಿಂಗಾಯತ ಮುಖ್ಯಮಂತ್ರಿ ಸ್ವರ ತೆಗೆದಿದ್ದಾರೆ. ಯಡಿಯೂರಪ್ಪನವರು ಲಿಂಗಾಯತ ಮುಖ್ಯಮಂತ್ರಿಯಾಗಿದ್ದರಲ್ಲ ಅವರನ್ನೇಕೆ ಅವಮಾನಕಾರಿಯಾಗಿ ಪದಚ್ಯುತಗೊಳಿಸಲಾಯಿತು ಎಂಬುದಕ್ಕೆ ಇವರ ಬಳಿ ಉತ್ತರವಿಲ್ಲ. ಕಾಂಗ್ರೆಸ್‌ನವರಿಗೆ ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಮಾಡಲು ಹೇಳುವ ಇವರೇಕೆ ತಮ್ಮ ಮುಂದಿನ ಮುಖ್ಯಮಂತ್ರಿ ಲಿಂಗಾಯತ ಎಂದು ಘೋಷಿಸುವುದಿಲ್ಲ? ಯಾಕೆಂದರೆ ಬಹುಮತ ಬಂದರೆ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ದಲಿತರು ಮತ್ತು ಮುಸಲ್ಮಾನರು ಕೂಡ ಈ ರಾಜ್ಯದ ಪ್ರಜೆಗಳಲ್ಲವೇ ಆ ಸಮುದಾಯದಿಂದ ಬಂದವರೇಕೆ ಮುಖ್ಯಮಂತ್ರಿ ಆಗಬಾರದು. ಬಿಜೆಪಿ ಸರಕಾರದಲ್ಲಿ ಗೋವಿಂದ ಕಾರಜೋಳ, ಜಿಗಜಿಣಗಿಯವರಂಥ ಅರ್ಹರಿರಲಿಲ್ಲವೇ ಅವರನ್ನೇಕೆ ಮುಖ್ಯ ಮಂತ್ರಿ ಮಾಡಲಿಲ್ಲ ಎಂಬ ಪ್ರಶ್ನೆ ಗೆ ಉತ್ತರ ಬೇಕಾಗಿದೆ.

ಮುಖ್ಯಮಂತ್ರಿ ಅಂದರೆ ಸಿದ್ಧವ್ವನಹಳ್ಳಿ ನಿಜಲಿಂಗಪ್ಪನವರಂತೆ ಇರಬೇಕು. ಅವರು ಅನೇಕ ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರೂ ಬೆಂಗಳೂರಿನಲ್ಲಿ ಸ್ವಂತಕ್ಕೆ ಒಂದು ಬಂಗಲೆ ಹೋಗಲಿ ಮನೆಯನ್ನೂ ಮಾಡಿಕೊಳ್ಳಲಿಲ್ಲ. ತಮ್ಮ ವಕೀಲಿ ವೃತ್ತಿಯಿಂದ ಬಂದ ಹಣದಿಂದ ಕಟ್ಟಿಸಿದ ಚಿತ್ರದುರ್ಗದ ಮನೆಯಲ್ಲಿ ಕೊನೆಯ ದಿನಗಳನ್ನು ಕಳೆದು ಅಲ್ಲೇ ಕೊನೆಯುಸಿರನ್ನೆಳೆದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಜಲಿಂಗಪ್ಪನವರು ಒಮ್ಮೆ ತೀವ್ರ ಅಸ್ವಸ್ಥರಾದಾಗ ಖಾಸಗಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಮುಖ್ಯಮಂತ್ರಿ ಹೇಳಿದರೂ ಅದನ್ನು ಒಪ್ಪಿಕೊಳ್ಳದ ನಿಜಲಿಂಗಪ್ಪ ಸರಕಾರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಕರ್ನಾಟಕದ ಅತ್ಯಂತ ಹೆಮ್ಮೆಯ ಮುಖ್ಯಮಂತ್ರಿಯಾಗಿದ್ದವರೆಂದರೆ ದೇವರಾಜ ಅರಸು. ಸಾಮಾಜಿಕ ನ್ಯಾಯದ ಹೊಸ ಶಕೆಗೆ ಚಾಲನೆ ನೀಡಿದ ದೇವರಾಜ ಅರಸು ದಮನಿತ ಸಮುದಾಯಗಳ ಅನೇಕ ಯುವಕರನ್ನು ರಾಜಕೀಯದ ಮುಂಚೂಣಿಗೆ ತಂದರು. ಖರ್ಗೆ, ಧರಂಸಿಂಗ್, ಮೊಯಿಲಿ ಮುಂತಾದವರನ್ನು ಬೆಳೆಸಿದರು. ಸಾಯುವಾಗ ಒಂದು ಪೈಸೆಯೂ ಅವರ ಬ್ಯಾಂಕ್ ಖಾತೆಯಲ್ಲಿ ಇರಲಿಲ್ಲ. ಆಗ ಅವರ ಶಿಷ್ಯ ಗುಂಡೂರಾವ್ ಮುಖ್ಯಮಂತ್ರಿ. ಸರಕಾರದ ಖರ್ಚಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

ಬಂಗಾರಪ್ಪ, ವೀರೇಂದ್ರ ಪಾಟೀಲ, ಬಿ.ಡಿ.ಜತ್ತಿ, ವೀರಪ್ಪ ಮೊಯಿಲಿ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಧರಂಸಿಂಗ್, ದೇವೇಗೌಡ, ಕುಮಾರಸ್ವಾಮಿ, ಸಿದ್ದರಾಮಯ್ಯ ಹೀಗೆ ಅನೇಕ ಮುಖ್ಯಮಂತ್ರಿಗಳು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಡಿಯೂರಪ್ಪನವರು ಅವರ ಪಕ್ಷದವರ ಪಿತೂರಿಯಿಂದ ಜೈಲಿಗೆ ಹೋಗಿ ಬಂದರು. ಇತ್ತೀಚೆಗೆ ದಿಲ್ಲಿಯ ದೊರೆಗಳು ಅವಧಿಗೆ ಮುನ್ನವೇ ಅವರನ್ನು ಮನೆಗೆ ಕಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸಿದ್ದರಾಮಯ್ಯನವರು ಅತ್ಯಂತ ಒಳ್ಳೆಯ ಮುಖ್ಯಮಂತ್ರಿ ಎಂದು ಹೆಸರಾದರು. ಅವರ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಮುಂತಾದ ಜನಪರ ಯೋಜನೆಗಳು ಮನೆ ಮಾತಾದವು. ವೈಯಕ್ತಿಕವಾಗಿ ಅವರಿಗೆ ಯಾವ ಕಪ್ಪು ಚುಕ್ಕೆಯೂ ಇಲ್ಲ. ಕೇಂದ್ರದ ಸರ್ವಾಧಿಕಾರಿ ನೀತಿಯ ವಿರುದ್ಧ ಕರ್ನಾಟಕದ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ಎತ್ತಿ ಹಿಡಿದ ಅವರ ದಿಟ್ಟತನ ಶ್ಲಾಘನೀಯ. ನನ್ನ ಅಭಿಪ್ರಾಯವನ್ನು ಅನೇಕರು ಒಪ್ಪಬಹುದು, ಒಪ್ಪದಿರಬಹುದು.ಹಾಗೆಂದು ಇನ್ನೊಬ್ಬರ ಅಭಿಪ್ರಾಯ ನನ್ನ ಅಭಿಪ್ರಾಯ ಆಗಬೇಕೆಂದಿಲ್ಲ.

ಅಂತಿಮವಾಗಿ ಜನ ನೀಡುವ ತೀರ್ಪು ಮಹತ್ವದ್ದು. ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಇರುವ ಮಹತ್ವ ಇನ್ಯಾವುದಕ್ಕೂ ಇಲ್ಲ. ಸಂವಿಧಾನ ಬದ್ಧತೆ ಮತ್ತು ಸಾಮಾಜಿಕ ನ್ಯಾಯ, ಜಾತ್ಯತೀತ ಆಶಯವನ್ನು ಎತ್ತಿ ಹಿಡಿಯುತ್ತ ಬಂದ ಕರ್ನಾಟಕದ ಜನತೆ ಮತ್ತೆ ಮಹತ್ವದ ಆದೇಶ ನೀಡಲಿದ್ದಾರೆ. ಕಾಯ್ದು ನೋಡಬೇಕು.

Similar News