ಗೆಹ್ಲೋಟ್ vs ಪೈಲಟ್; ನಾವು ಕಿತ್ತಾಡುವಂತೆ ಮಾಡಬೇಡಿ: ಮಾಧ್ಯಮಗಳಿಗೆ ರಾಜಸ್ಥಾನ ಸಿಎಂ ತರಾಟೆ
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ನಾಯಕತ್ವಕ್ಕಾಗಿನ ತಿಕ್ಕಾಟ ತೀವ್ರಗೊಂಡಿದ್ದು, ಈ ನಡುವೆ "ಮಾಧ್ಯಮಗಳು ಜನರು ಕಿತ್ತಾಡುವಂತೆ ಮಾಡಬಾರದು" ಎಂದು ಅಶೋಕ್ ಗೆಹ್ಲೋಟ್ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸರ್ಕಾರವು ಜಾರಿಗೊಳಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಬಿಂಬಿಸುವತ್ತ ಕಾಂಗ್ರೆಸ್ ಚುನಾವಣಾ ಪ್ರಚಾರ ಅಭಿಯಾನ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಕಳೆದ ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯ ಆಧಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಮರಳಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಮಾಧ್ಯಮಗಳು ಸತ್ಯ ಮತ್ತು ವಾಸ್ತವಗಳಿಗೆ ಬದ್ಧವಾಗಿರಬೇಕು. ಮಾಧ್ಯಮಗಳು ನಾವಿಬ್ಬರೂ ಕಿತ್ತಾಡುವಂತೆ ಮಾಡಬಾರದು. ಅವರು (ಮಾಧ್ಯಮ ಮಂದಿ) ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಹಾಗೂ ಅದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರಬೇಕು. ಸರ್ಕಾರವು ಮತ್ತೆ ಅಧಿಕಾರಕ್ಕೆ ಮರಳಿ ಬರಲು ಮಾಧ್ಯಮಗಳು ಸತ್ಯಾಂಶದ ಆಧಾರದಲ್ಲಿ ನೆರವು ನೀಡಬೇಕು" ಎಂದು ಮನವಿ ಮಾಡಿದ್ದಾರೆ.
"ನಾನು ಸುಳ್ಳು ಅಂಕಿ-ಅಂಶಗಳನ್ನು ಮಂಡಿಸಿ ಅಥವಾ ಸುಳ್ಳೇ ಶ್ಲಾಘಿಸಿ ಎಂದು ಹೇಳುವುದಿಲ್ಲ. ಆದರೆ, ಮಾಧ್ಯಮಗಳು ಸತ್ಯಾಂಶವನ್ನು ಆಧರಿಸಿ ಕಾರ್ಯನಿರ್ವಹಿಸಬೇಕು ಎಂದು ಬಯಸುತ್ತೇನೆ. ಮಾಧ್ಯಮಗಳು ಕೇಂದ್ರ ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಅವು ಸಾರ್ವಜನಿಕರ ಹಿತಾಸಕ್ತಿಯನ್ನೂ ಗಮನಿಸಬೇಕು" ಎಂದು ಗೆಹ್ಲೋಟ್ ತಾಕೀತು ಮಾಡಿದ್ದಾರೆ.
ಸರ್ಕಾರವು ಜನತೆಯ ಆಶೋತ್ತರ ಹಾಗೂ ಅವರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುತ್ತಿದೆ ಎಂದೂ ಹೇಳಿದ್ದಾರೆ.
ಆದರೆ, ಪೈಲಟ್ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ವಾಗ್ದಾಳಿಯ ಕುರಿತು ಅವರು ಯಾವುದೇ ನೇರ ಪ್ರತಿಕ್ರಿಯೆ ನೀಡಲಿಲ್ಲ.
2018ರಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಗೆಹ್ಲೋಟ್ ಹಾಗೂ ಪೈಲಟ್ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಇದೇ ವರ್ಷದ ಕೊನೆಯಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈ ಇಬ್ಬರು ನಾಯಕರ ತಿಕ್ಕಾಟದಿಂದ ಕಾಂಗ್ರೆಸ್ ಪಾಳೆಯದಲ್ಲಿ ಚುನಾವಣಾ ಫಲಿತಾಂಶ ವ್ಯತಿರಿಕ್ತವಾಗಬಹುದು ಎಂಬ ಆತಂಕ ಮನೆ ಮಾಡಿದೆ.