×
Ad

ಪುಲ್ವಾಮಾ ಉಗ್ರ ದಾಳಿ: ಮಲಿಕ್ ಎತ್ತಿರುವ ಪ್ರಶ್ನೆಗಳು ಮತ್ತು ಮೋದಿ ಮೌನ

Update: 2023-04-25 13:43 IST

2019ರ ಪುಲ್ವಾಮಾ ಉಗ್ರ ದಾಳಿ ಬಗ್ಗೆ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೇಂದ್ರ ಸರಕಾರದ ವಿರುದ್ಧ ಮಾಡಿರುವ ಗಂಭೀರ ಆರೋಪ ದೊಡ್ಡ ವಿವಾದವಾಗಿ ಬೆಳೆದಿದೆ. 

ಯೋಧರ ಪ್ರಯಾಣಕ್ಕೆ ಐದು ವಿಮಾನ ಕೇಳಿದ್ದಕ್ಕೆ ಗೃಹ ಸಚಿವಾಲಯ ಕೊಡಲಿಲ್ಲ. ಕೊಟ್ಟಿದ್ದರೆ ಅಂತಹ ಅವಘಡವೇ ಆಗುತ್ತಿರಲಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದರು. ದಾಳಿಗೆ ಗೃಹ ಸಚಿವಾಲಯದ ವೈಫಲ್ಯವೇ ಕಾರಣ ಎಂದು ತಾವು ಹೇಳಿದಾಗ, ಬಾಯಿ ಮುಚ್ಚಿಕೊಂಡಿರುವಂತೆ ಪ್ರಧಾನಿ ಮೋದಿ ಆದೇಶಿಸಿದ್ದರು ಎಂದು ಮಲಿಕ್ ಬಹಳ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳನ್ನು ಅವರು ಮತ್ತೆ ಮತ್ತೆ ಬಲವಾಗಿ ಪುನರುಚ್ಚರಿಸಿದ್ದಾರೆ.

ಆದರೆ ತಮ್ಮ ವಿರುದ್ಧ ಇಷ್ಟು ದೊಡ್ಡ ಆರೋಪವನ್ನು ಅವರು ಮಾಡಿರುವಾಗಲೂ ಪ್ರಧಾನಿ ಕಡೆಯಿಂದ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಮಾಷೆಯೆಂದರೆ, ಜಮ್ಮು-ಕಾಶ್ಮೀರ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಮಲಿಕ್ ಮಾಡಿರುವ ಆರೋಪಗಳ ಸಂಬಂಧ ಅವರಿಗೆ ಈಗ ಸಿಬಿಐನಿಂದ ಸಮನ್ಸ್ ಬಂದಿದೆ.

ಇನ್ನೊಂದೆಡೆ ಕೇಂದ್ರ ಗೃಹಸಚಿವ ಅಮಿತ್ ಶಾ, ಗವರ್ನರ್ ಅವಧಿ ಮುಗಿದ ಬಳಿಕ ಮಲಿಕ್ ಆತ್ಮಸಾಕ್ಷಿ ಜಾಗೃತವಾಯಿತೇ ಎಂದು ಕೇಳಿರುವುದು ಇನ್ನೂ ವಿಚಿತ್ರವಾಗಿದೆ. ಮಲಿಕ್ ಅಧಿಕಾರದಲ್ಲಿದ್ದಾಗ ಮೌನವಾಗಿದ್ದರು ಎಂಬ ಶಾ ಹೇಳಿಕೆ ತಪ್ಪು ಎಂದೂ ಇಲ್ಲಿನ  ಮಾಧ್ಯಮಗಳು ಪ್ರಶ್ನಿಸುವುದಿಲ್ಲ. ಬದಲಿಗೆ ಅವರು ಹೇಳಿದ್ದಕ್ಕೆ ಗೋದಿ ಮೀಡಿಯಾಗಳೆಲ್ಲ ಗೋಣು ಹಾಕುತ್ತಿವೆ. ಇದೇ ಮಲಿಕ್ ಅಧಿಕಾರದಲ್ಲಿದ್ದಾಗಲೂ ಪುಲ್ವಾಮಾ ದಾಳಿಯ ವಿಚಾರವಾಗಿ, ಕೃಷಿ ಕಾನೂನುಗಳಂತಹ ವಿಚಾರಗಳಿಗಾಗಿ ಮೋದಿ ಸರಕಾರದ ವಿರುದ್ಧ ಟೀಕೆ ಮಾಡಿದ್ದನ್ನು ಹಿಂದೆ ಪ್ರಸಾರ ಮಾಡಿದ್ದ ಮಾಧ್ಯಮಗಳು ಈಗೇಕೆ ಬೇಕಂತಲೇ ಮರೆಯುತ್ತಿವೆ?

40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಫೆಬ್ರವರಿ 15, 2019ರಲ್ಲಿ ಮಲಿಕ್ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ್ದ ಸಂದರ್ಶನದಲ್ಲಿ, ಈ ದಾಳಿ ಗುಪ್ತಚರ ವೈಫಲ್ಯದ ಪರಿಣಾಮ ಎಂದಿದ್ದರು. ಸ್ಫೋಟಕಗಳಿಂದ ತುಂಬಿದ್ದ ವಾಹನ ಅದೇ ಹೆದ್ದಾರಿಯಲ್ಲಿ ಬಂದಿರುವುದನ್ನು ಪತ್ತೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ನಮ್ಮದೂ ತಪ್ಪಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು. ಅದೇ ದಿನ ಯೋಧರಿಗೆ ವಿಮಾನಕ್ಕೆ ಮಾಡಿದ ಮನವಿ ನಾಲ್ಕು ತಿಂಗಳುಗಳಿಂದ ಗೃಹ ಸಚಿವಾಲಯದಲ್ಲಿ ಬಾಕಿ ಇಟ್ಟುಕೊಳ್ಳಲಾಗಿತ್ತು ಎಂಬುದೂ ವರದಿಯಾಗಿತ್ತು.

ಆದರೆ, ಆ ಬಳಿಕ ಭಾರತೀಯ ವಾಯುಪಡೆ ಬಾಲಾಕೋಟ್ ವೈಮಾನಿಕ ದಾಳಿ ನಡೆಸಿತು. ಮತ್ತದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯಿತು. ಅದೆಲ್ಲದರ ನಡುವೆ ಭದ್ರತಾ ಲೋಪದ ವಿಚಾರ, ಚರ್ಚೆ ಅಡಗಿಹೋಗಿತ್ತು. ಆಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಲಾತೂರ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮೊದಲ ಬಾರಿ ಮತದಾನ ಮಾಡುತ್ತಿರುವವರು ಹುತಾತ್ಮ ಸೈನಿಕರ ಹೆಸರಿನಲ್ಲಿ ಮತ ಚಲಾಯಿಸಬೇಕು, ಬಾಲಾಕೋಟ್ನಲ್ಲಿ ವೈರಿಗಳ ವಿರುದ್ಧ ಹೋರಾಡಿದ ವೀರ ಯೋಧರ ಹೆಸರಿನಲ್ಲಿ ಮತ ಹಾಕಬೇಕು ಎಂದಿದ್ದರು.
ಇದಾದ ಕೆಲ ತಿಂಗಳುಗಳಲ್ಲಿಯೇ ಮಲಿಕ್ ಅವರನ್ನು ಗೋವಾ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಯಿತು. ಬಳಿಕ ಆಗಸ್ಟ್ 2020ರಲ್ಲಿ ಮೇಘಾಲಯಕ್ಕೆ ಗವರ್ನರ್ ಆಗಿ ವರ್ಗಾವಣೆ ಮಾಡಲಾಯಿತು. ಮೇಘಾಲಯ ರಾಜ್ಯಪಾಲರಾಗಿದ್ದಾಗಲೂ ಮಲಿಕ್ ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. 

ಆರೆಸ್ಸೆಸ್ ನಾಯಕನಿಗೆ ಸಂಬಂಧಿಸಿದ್ದೂ ಸೇರಿದಂತೆ ಎರಡು ಫೈಲ್ಗಳನ್ನು ತೆರವುಗೊಳಿಸಲು ತಮಗೆ 300 ಕೋಟಿ ರೂ. ಲಂಚದ ಆಮಿಷ ನೀಡಲಾಯಿತು ಎಂದು ಮಲಿಕ್ ಹೇಳಿದ್ದು ಪಿಟಿಐ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಈ ಬಗ್ಗೆ  ಸಿಬಿಐ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿತ್ತು.
ಮೋದಿ ಬಹಳ ದುರಹಂಕಾರಿ. ರೈತರು ನನಗಾಗಿ ಸತ್ತರೇ ಎಂದು ನನ್ನನ್ನು ಪ್ರಶ್ನಿಸಿದ್ದರು ಎಂದೂ ಮೇಘಾಲಯ ಗವರ್ನರ್ ಆಗಿದ್ದ ವೇಳೆಯೇ ಸತ್ಯಪಾಲ್ ಗಂಭೀರ ಆರೋಪ ಮಾಡಿದ್ದರು. ಕೇಂದ್ರದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೆ ಉಪರಾಷ್ಟ್ರಪತಿಯಾಗಬಹುದು ಎಂದು ಮಲಿಕ್ ಹೇಳಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು. ಮೇಘಾಲಯದ ರಾಜ್ಯಪಾಲರಾಗಿದ್ದ ಹೊತ್ತಲ್ಲಿಯೇ ಮತ್ತೊಮ್ಮೆ, ಸೆಪ್ಟಂಬರ್ 15, 2022ರಂದು ದಿ ವೈರ್ನಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಅವರು, ಪ್ರಧಾನಿ ಮೋದಿಗೆ ಎಲ್ಲವೂ ತಾನೇ ಎನ್ನುವ ಮನಃಸ್ಥಿತಿಯಿದೆ ಎಂದಿದ್ದರು. ಸರಕಾರದ ಕೇಂದ್ರೀಕೃತ ಸ್ವರೂಪದ ಬಗ್ಗೆಯೂ ಅವರು ಅದೇ ಸಂದರ್ಶನದಲ್ಲಿ ಟೀಕಿಸಿದ್ದರು. ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರಿಗೆ ಅವರ ಸಾಧನೆಗಾಗಿ ಯಾವುದೇ ಕ್ರೆಡಿಟ್ ಸಿಗುವುದಿಲ್ಲ. ಎಲ್ಲಾ ಕ್ರೆಡಿಟ್ ಮೋದಿಗೆ ಮಾತ್ರ ಹೋಗುತ್ತಿದೆ ಎಂದಿದ್ದರು.

ಇದೆಲ್ಲ ಆದ ಬಳಿಕ ಅಕ್ಟೋಬರ್ 6, 2022ರಂದು ಮಲಿಕ್ ಗವರ್ನರ್ ಅಧಿಕಾರಾವಧಿ ಮುಗಿದಿತ್ತು. ಅದಾಗಿ ಎರಡೇ ದಿನಗಳ ನಂತರ ಕಾಶ್ಮೀರ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಲಿಕ್ ಅವರನ್ನು ಸಿಬಿಐ ಪ್ರಶ್ನಿಸಿತ್ತು.
ಸತ್ಯಪಾಲ್ ಮಲಿಕ್ ರಾಜ್ಯಪಾಲರಾಗಿರುವಾಗಲೇ ಎಲ್ಲವನ್ನೂ ಹೇಳಿದ್ದರು ಎಂಬುದಕ್ಕೆ ಇಷ್ಟೆಲ್ಲಾ ದಾಖಲೆಗಳಿದ್ದರೂ, ಅವರೇಕೆ ಆಗ ಮಾತನಾಡಿರಲಿಲ್ಲ ಎಂದು ಅಮಿತ್ ಶಾ ಕೇಳುತ್ತಿರುವುದು ನಿಜಕ್ಕೂ ವಿಚಿತ್ರವಾಗಿದೆ.

ಇದೇವೇಳೆ, ಪ್ರಧಾನಿ ಮೌನವೂ ಅಷ್ಟೇ ಅಚ್ಚರಿಯದ್ದಾಗಿದೆ.    
ಮಲಿಕ್ ಆರೋಪದ ಬೆನ್ನಲ್ಲೇ ಶರದ್ ಪವಾರ್ ಮಾತನಾಡಿ, ಸೈನಿಕರ ರಕ್ಷಣೆಗೆ ನಿಲ್ಲದ ಸರಕಾರಕ್ಕೆ ಅಧಿಕಾರದಲ್ಲಿರುವ ಹಕ್ಕಿಲ್ಲ ಎಂದಿದ್ದಾರೆ. ಪುಣೆಯಲ್ಲಿ ಅವರು ಮಾತನಾಡಿದ್ದನ್ನು ಕೂಡ ಗೋದಿ ಮೀಡಿಯಾಗಳು ವರದಿ ಮಾಡಿಲ್ಲ ಎಂದಿದ್ದಾರೆ ಪತ್ರಕರ್ತ ರವೀಶ್ ಕುಮಾರ್.

ಗಂಭೀರ ಭದ್ರತಾ ಲೋಪ ಕುರಿತ ಆರೋಪಕ್ಕೆ ಪ್ರಧಾನಿ ಏಕೆ ಉತ್ತರಿಸುತ್ತಿಲ್ಲ? ಸಿಆರ್ಪಿಎಫ್ ಕೋರಿಕೆಯಂತೆ ವಿಮಾನ ನೀಡಿದ್ದರೆ ಸೈನಿಕರು ದಾಳಿಗೊಳಗಾಗುವ ಸಂಭವವೇ ಇರುತ್ತಿರಲಿಲ್ಲ. ಪುಲ್ವಾಮಾ ಮತ್ತು ಬಾಲಾಕೋಟ್ ವಿಚಾರ ಹೇಳಿಕೊಂಡು ಮತ ಪಡೆದ ಮೋದಿ ಸರಕಾರಕ್ಕೆ, ಸೈನಿಕರ ವಿಚಾರದಲ್ಲಿ ಇದ್ದ ಕಾಳಜಿ ಎಂಥದು ಎಂಬುದರ ನಿಜರೂಪ ಮಲಿಕ್ ಮಾಡಿರುವ ಆರೋಪಗಳ ಬಳಿಕ ಬಯಲಾಗಿದೆ. ಹಾಗಾದರೆ ಅಂದು ಸೈನಿಕರ ಹೆಸರಲ್ಲೇಕೆ ಮತ ಕೇಳಬೇಕಿತ್ತು ಎಂಬ ಪ್ರಶ್ನೆಗಳನ್ನು ಪತ್ರಕರ್ತ ರವೀಶ್ ಕುಮಾರ್ ಎತ್ತಿದ್ದಾರೆ.

ಅವರು ಉಲ್ಲೇಖಿಸುವಂತೆ, ಪುಲ್ವಾಮಾ ದಾಳಿಯ ನಂತರ ದೈನಿಕ್ ಭಾಸ್ಕರ್ ಮತ್ತು ದಿ ಕ್ವಿಂಟ್ನಲ್ಲಿ, ಸೈನಿಕರ ಸಾಗಾಟಕ್ಕೆ ವಿಮಾನ ಸೌಲಭ್ಯ ಕೇಳಿ ಮಾಡಿಕೊಳ್ಳಲಾಗಿದ್ದ ಮನವಿಯನ್ನು, ಹಣಕಾಸಿನ ಕಾರಣ ನೀಡಿ ತಿರಸ್ಕರಿಸಲಾಗಿತ್ತು ಎಂಬುದರ ಕುರಿತು ವರದಿಗಳು ಬಂದಿದ್ದವು. ಸಿಆರ್ಪಿಎಫ್ ಮನವಿ ನಾಲ್ಕು ತಿಂಗಳುಗಳ ಕಾಲ ಗೃಹ ಸಚಿವಾಲಯದಲ್ಲಿ ಹಾಗೆಯೇ ಬಿದ್ದಿತ್ತು. 

ಸೈನಿಕರ ಬಗ್ಗೆ ಇಷ್ಟೊಂದು ಮಾತನಾಡುವ ಸರಕಾರದ ಬಳಿ, ಸೈನಿಕರ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದ್ದ ಕೆಲಸವೊಂದಕ್ಕೆ ವೈಮಾನಿಕ ನೆರವು ನೀಡುವಷ್ಟೂ ಹಣವಿರಲಿಲ್ಲವೆ ಎಂಬುದು ಈಗ ಎದ್ದಿರುವ ಪ್ರಶ್ನೆಯಾಗಿದೆ.

 ಇಂಥ ಗಂಭೀರ ಪ್ರಶ್ನೆಗೆ ಮೋದಿ ಉತ್ತರಿಸುತ್ತಿಲ್ಲ. ಸೈನಿಕರ ಬಗ್ಗೆ, ದೇಶಪ್ರೇಮದ ಬಗ್ಗೆ ಸಿಕ್ಕಾಪಟ್ಟೆ ಅಬ್ಬರದಿಂದ ಮಾತನಾಡುವ ಮೀಡಿಯಾಗಳೂ ಈ ಪ್ರಶ್ನೆಯನ್ನು ಎತ್ತುತ್ತಿಲ್ಲ. ಯಾಕೆಂದರೆ, ಅವು ತಮ್ಮನ್ನು ಸಾಕುತ್ತಿರುವ ಮೋದಿ ಸರಕಾರದ ಹೊಗಳಿಕೆಯಲ್ಲಿಯೇ ಮೈಮರೆತಿವೆ.      
ಪಾಕಿಸ್ತಾನ ಗಡಿಗೆ ತೀರಾ ಹತ್ತಿರವಿದ್ದ ಹೆದ್ದಾರಿಯಲ್ಲಿ 2,500ಕ್ಕೂ ಹೆಚ್ಚು ಸೈನಿಕರನ್ನು 78 ವಾಹನಗಳಲ್ಲಿ ಸಾಗಿಸುವ ನಿರ್ಧಾರ ಸರಿಯಾದುದಾಗಿರಲಿಲ್ಲ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧರಿ ಹೇಳಿದ್ದೂ ವರದಿಯಾಗಿದೆ. ಸೈನಿಕರ ಸಾವಿಗೆ ಪ್ರಾಥಮಿಕ ಹೊಣೆ ಪ್ರಧಾನಿಯದ್ದು ಮತ್ತು ರಾಷ್ಟ್ರೀಯ ಭದ್ರತೆ ಸಲಹೆಗಾರರದ್ದು ಎಂದೂ ಅವರು ಹೇಳಿದ್ದಾರೆ. ಹಾಗಾದರೆ, ಪ್ರಾಥಮಿಕ ಹೊಣೆ ಹೊರಬೇಕಾಗಿದ್ದ ಮೋದಿ ಮಾಡಿದ್ದೇನು? ಸೈನಿಕರ ಹೆಸರಿನಲ್ಲಿ ಮತ ಕೇಳಿದ್ದೇ? 

ಮೊದಲ ಸಲ ಮತದಾನ ಮಾಡುತ್ತಿದ್ದವರಲ್ಲಿ ಸೈನಿಕರ ಹೆಸರಲ್ಲಿ ವೋಟು ಪಡೆದ ಮೋದಿ ಸರಕಾರ, ನಿಜವಾಗಿಯೂ ಸೈನಿಕರ ರಕ್ಷಣೆಗೆ ತೆಗೆದುಕೊಳ್ಳಬೇಕಾಗಿದ್ದ ಕ್ರಮದ ವಿಚಾರದಲ್ಲಿ ಏಕೆ ನಿರ್ಲಕ್ಷ್ಯ ವಹಿಸಿತ್ತು? ಅಂದು ಮೊದಲ ಸಲ ಮತ ಹಾಕಿದ್ದವರೆಲ್ಲರೂ ಸರಕಾರವನ್ನು ಕೇಳಬೇಕಾಗಿರುವ ಪ್ರಶ್ನೆ ಇದಾಗಿದೆ. 

40 ಪರ್ಸೆಂಟ್ ಆರೋಪದಲ್ಲಿ ಸಿಕ್ಕಿಹಾಕಿಕೊಂಡು ಹುದ್ದೆ ಕಳೆದುಕೊಂಡು, ಕಡೆಗೆ ಪಕ್ಷದ ಟಿಕೆಟ್ ಕೂಡ ಇಲ್ಲದಂತಾಗಿ ಕುಳಿತಿರುವ ಈಶ್ವರಪ್ಪಗೆ ಫೋನ್ ಮಾಡಿ ಹೊಗಳಲು ಪ್ರಧಾನಿಗೆ ಸಮಯವಿರುತ್ತದೆ. ಆದರೆ ಸೈನಿಕರ ವಿಚಾರವಾಗಿ ಮಲಿಕ್ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಸಮಯವಿಲ್ಲವೆ? ಸತ್ಯ ಹೇಳಬಲ್ಲವರಾಗಿದ್ದರೆ ಮಲಿಕ್ಗೂ ಅವರು ಫೋನ್ ಮಾಡಿ ಮಾತನಾಡಬಹುದಿತ್ತಲ್ಲವೆ?
ಕೇಂದ್ರದ ಕೈಯಲ್ಲಿರುವ ಸಿಬಿಐ, ಮಲಿಕ್ ಅವರನ್ನು ವಿಮೆ ಹಗರಣಕ್ಕೆ ಸಂಬಂಧಿಸಿ ಪ್ರಶ್ನಿಸಲು ಕರೆದಿದೆ. ಆದರೆ ಅದೇ ಸರಕಾರದ ಮುಖ್ಯಸ್ಥರು ಪುಲ್ವಾಮಾ ದಾಳಿ ಬಗ್ಗೆ ಮಲಿಕ್ ಮಾಡಿರುವ ಆರೋಪಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದು ನಿಜಕ್ಕೂ ವಿಚಿತ್ರವಾಗಿದೆ.

Similar News