ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಹೆಸರಿನಲ್ಲಿ ನಕಲಿ ಪತ್ರ ಪೋಸ್ಟ್ ಮಾಡಿದ್ದ ಯುವಕನ ಬಂಧನ
ಥಾಣೆ: ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಪತ್ರವನ್ನು ಪೋಸ್ಟ್ ಮಾಡಿದ್ದ ಆರೋಪದಲ್ಲಿ ಪುಣೆಯ 24 ವರ್ಷದ ಯುವಕನನ್ನು ರಾಯಗಢ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ತನಗೆ ನೀಡಲಾಗಿದ್ದ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಧರ್ಮಾಧಿಕಾರಿ ಹೇಳಿದಂತೆ ಆ ಪತ್ರವನ್ನು ಸೃಷ್ಟಿಸಲಾಗಿತ್ತು.
ಈ ನಕಲಿ ಪತ್ರವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ವಾಣಿಜ್ಯ ಪದವೀಧರನಾದ ಶುಭಂ ಕಾಳೆ ಎಂಬ ಯುವಕನನ್ನು ರಾಯಗಢ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಆರೋಪಿ ಯುವಕನನ್ನು ಆಲಿಬಾಗ್‌ನ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಲಯವು ಆರೋಪಿಯನ್ನು ಒಂದು ದಿನದ ಮಟ್ಟಿಗೆ ಪೊಲೀಸರ ವಶಕ್ಕೆ ಒಪ್ಪಿಸಿತು.
ಗಮನಾರ್ಹ ಸಂಗತಿಯೆಂದರೆ, ಎಪ್ರಿಲ್ 16ರಂದು ರಾಯಗಢ ಜಿಲ್ಲೆಯ ನೆರೆ ಪ್ರದೇಶವಾದ ಖಾರ್ಘರ್‌ನ ತೆರೆದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದವರ ಪೈಕಿ 14 ಮಂದಿ ಸೂರ್ಯಾಘಾತದಿಂದ ಮೃತಪಟ್ಟಿದ್ದರು.