'ಮನ್‌ಕಿಬಾತ್'ನ 100ನೇ ಸಂಚಿಕೆ ಪ್ರಸಾರ ಮಾಡಿ ಸಾಕ್ಷ್ಯ ಒದಗಿಸಲು ಸಮುದಾಯ ರೇಡಿಯೊ ಕೇಂದ್ರಗಳಿಗೆ ಸರಕಾರ ಸೂಚನೆ: ವರದಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ ’ಕಾರ್ಯಕ್ರಮದ 100ನೇ ಸಂಚಿಕೆಯನ್ನು ಪ್ರಸಾರ ಮಾಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತದ ಎಲ್ಲ ಸಮುದಾಯ ರೇಡಿಯೊ ಕೇಂದ್ರಗಳಿಗೆ ಸೂಚನೆಯನ್ನು ನೀಡಿದೆ. ಸರಕಾರಿ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ 100ನೇ ಸಂಚಿಕೆಯು ಭಾರೀ ಪ್ರಚಾರವನ್ನು ಪಡೆಯುತ್ತಿದೆ ಮತ್ತು ಅದರ ಸ್ಮರಣಾರ್ಥ 100 ರೂ. ನಾಣ್ಯಗಳ ಸರಣಿಯನ್ನು ಟಂಕಿಸಲಾಗುತ್ತಿದೆ. ತನ್ನ ರೇಡಿಯೊ ಕಾರ್ಯಕ್ರಮದ ಲಾಂಛನ ಮತ್ತು ಶೀರ್ಷಿಕೆಯನ್ನೊಳಗೊಂಡ ನಾಣ್ಯವನ್ನು ಸ್ವತಃ ಮೋದಿಯವರೇ ಬಿಡುಗಡೆಗೊಳಿಸಲಿದ್ದಾರೆ.
ಈ ಹಿಂದೆಯೂ ’ಮನ್ ಕಿ ಬಾತ್’ನ ಪ್ರಸಾರಕ್ಕಾಗಿ ಸೂಚನೆಗಳು ಹೊರಬಿದ್ದಿದ್ದವಾದರೂ ಈ ಬಾರಿ ಸರಕಾರವು ಈ ಬಗ್ಗೆ ಕಟ್ಟುನಿಟ್ಟಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಮನ್ ಕಿ ಬಾತ್ನ ಪ್ರಸಾರ ಪೂರ್ಣಗೊಂಡ ತಕ್ಷಣ ಆರಂಭದ 25 ಸೆಕೆಂಡ್ ಮತ್ತು ಕೊನೆಯ 25 ಸೆಕೆಂಡ್ಗಳು ಸೇರಿದಂತೆ ಕಾರ್ಯಕ್ರಮದ ಪ್ರಸಾರದ ಒಂದು ನಿಮಿಷ ಅವಧಿಯ ಆಡಿಯೊ ಕ್ಲಿಪ್ ಅನ್ನು ಕಳುಹಿಸುವಂತೆ ಎ.24ರಂದು ಎಲ್ಲ ಸಮುದಾಯ ರೇಡಿಯೊ ಕೇಂದ್ರಗಳಿಗೆ ನಿರ್ದೇಶವನ್ನು ಹೊರಡಿಸಿದೆ. ಈ ಆಡಿಯೊ ಕ್ಲಿಪ್ ಸಮುದಾಯ ರೇಡಿಯೊ ಕೇಂದ್ರದ ಹೆಸರನ್ನು ಹೊಂದಿರಬೇಕು ಮತ್ತು ಅದನ್ನು ಶೀಘ್ರವೇ ಹಂಚಿಕೊಳ್ಳಲಾಗುವ ಲಿಂಕ್ ಮೂಲಕ ಕಳುಹಿಸಬಹುದಾಗಿದೆ ಎಂದು thewire.in ವರದಿ ಮಾಡಿದೆ.
ಇದು ಮಾತ್ರವಲ್ಲ,ರೇಡಿಯೊ ಕೇಂದ್ರಗಳು 100ನೇ ಸಂಚಿಕೆಯನ್ನು ಆಚರಿಸುವಂತೆ ಮತ್ತು ಹೆಚ್ಚುವರಿ ಪುರಾವೆಯಾಗಿ ಚಿತ್ರವೊಂದನ್ನೂ ಕಳುಹಿಸಬೇಕು ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಸ್ಮರಣಿಕೆಯಾಗಿ ಸಮುದಾಯವು ಕಾರ್ಯಕ್ರಮವನ್ನು ಆಲಿಸುತ್ತಿರುವ ಚಿತ್ರವನ್ನೂ ಕಳುಹಿಸಬೇಕು ಎಂದು ಸಚಿವಾಲಯದ ಪತ್ರದಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ‘ಐತಿಹಾಸಿಕ ಘಟನೆ’ ಎಂದು ಬಣ್ಣಿಸಲ್ಪಟ್ಟಿರುವ ಮನ್ ಕಿ ಬಾತ್ ನ 100ನೇ ಸಂಚಿಕೆಯು ರವಿವಾರ, ಎ.30ರಂದು ಪೂರ್ವಾಹ್ನ 11 ಗಂಟೆಗೆ ಪ್ರಸಾರಗೊಳ್ಳಲಿದೆ. ಇದರ ಫೀಡ್ ಆಕಾಶವಾಣಿ ಮತ್ತು Newsonair appನಲ್ಲಿ ಲಭ್ಯವಿರಲಿದೆ. ಆದರೆ ಸಮುದಾಯ ರೇಡಿಯೊ ನಿರ್ವಾಹಕರು ಈ ‘ಐತಿಹಾಸಿಕ ಘಟನೆ’ಯ ಬಗ್ಗೆ ಉತ್ಸುಕರಾಗಿಲ್ಲ.
‘‘ವಾರಾಂತ್ಯದಲ್ಲಿ ಜನರು ಈಗಾಗಲೇ ತಮ್ಮ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹೇಗಿದ್ದರೂ ಶ್ರೋತೃಗಳು ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಆದರೆ ಈ ಬಾರಿ ಕಡ್ಡಾಯವಾಗಿರುವುದರಿಂದ ನಾವು ‘ಮನ್ ಕಿ ಬಾತ್ ’ ಅನ್ನು ಪ್ರಸಾರ ಮಾಡಬೇಕಿದೆ. ಇಲ್ಲದಿದ್ದರೆ ನಾವು ಈ ಸಂಚಿಕೆಗಳನ್ನು ಅಪರೂಪಕ್ಕೆ ಪ್ರಸಾರ ಮಾಡುತ್ತೇವೆ’’ ಎಂದು ರೇಡಿಯೊ ನಿರ್ವಾಹಕರೋರ್ವರು ತಿಳಿಸಿದರು.
‘ನಾವು ಈ ಹಿಂದೆ ಮನ್ ಕಿ ಬಾತ್ ಅನ್ನು ಪ್ರಸಾರಿಸುವ ಸಂದರ್ಭ ಬಂದಿರಲಿಲ್ಲ,ಹೀಗಾಗಿ ಕೇಂದ್ರದ ಸ್ಲಾಟ್ ಗಳು ಈಗಾಗಲೇ ನಿಗದಿಯಾಗಿವೆ. ಆರೋಗ್ಯ, ಶಿಕ್ಷಣ, ಜೀವನೋಪಾಯ ಬೆಂಬಲ ಇತ್ಯಾದಿಗಳ ಕುರಿತು ನಾವು ಕಾರ್ಯಕ್ರಮಗಳನ್ನು ಹೊಂದಿದ್ದೇವೆ. ಸ್ಲಾಟ್ ಗಳು ಈಗಾಗಲೇ ಸಿದ್ಧಗೊಂಡಿರುವುದರಿಂದ ಮನ್ ಕಿ ಬಾತ್ ನ ಪ್ರಸಾರ ಸಾಧ್ಯವಿಲ್ಲ. ಕಾರ್ಯಕ್ರಮವನ್ನು ಪ್ರಸಾರಿಸುವಂತೆ ಇಂತಹ ಸೂಚನೆ ಸಚಿವಾಲಯದಿಂದ ನಮಗೆ ಹಿಂದೆಂದೂ ಬಂದಿರಲಿಲ್ಲ. ಆದರೆ ಇದು ಕಡ್ಡಾಯವಾಗಿದ್ದರೆ ನಾವು ಆಡಳಿತ ವರ್ಗದೊಂದಿಗೆ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’ ಎಂದು ಒಡಿಶಾದ ಧಿಮ್ಸಾದಲ್ಲಿಯ ರೇಡಿಯೊ ಧಿಮ್ಸಾದ ರಾಮಪ್ರಸಾದ ಹೇಳಿದರು. ಇನ್ನೂ ಅನೇಕ ಸಮುದಾಯ ರೇಡಿಯೊ ನಿರ್ವಾಹದ್ದಾರೆ. ಇಂತಹುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕೃಪೆ: thewire.in