×
Ad

ಚೀತಾಗೆ ಬೇಕಾದಷ್ಟು ಸಂಪನ್ಮೂಲ ಇಲ್ಲ, ಬೇರೆಡೆಗೆ ಸ್ಥಳಾಂತರಿಸಿ: ಕೇಂದ್ರಕ್ಕೆ ಮಧ್ಯಪ್ರದೇಶ ಅರಣ್ಯ ಇಲಾಖೆ ಮನವಿ

Update: 2023-04-25 16:59 IST

ಭೋಪಾಲ್: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ (ಕೆಎನ್‌ಪಿ) ವಿದೇಶದಿಂದ ಕರೆತರಲಾದ ಚೀತಾಗಳಲ್ಲಿ ಎರಡು ಚೀತಾಗಳು ಮೃತಪಟ್ಟ ಬೆನ್ನಲ್ಲೇ, ಸಂಪನ್ಮೂಲ ಮತ್ತು ಸ್ಥಳಾವಕಾಶದ ಕೊರತೆಯನ್ನು ಮುಂದಿಟ್ಟುಕೊಂಡು ಮಧ್ಯಪ್ರದೇಶ ಅರಣ್ಯ ಇಲಾಖೆಯು ಚೀತಾಗಳಿಗೆ ಪರ್ಯಾಯ ಸ್ಥಳವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ವರದಿಯಾಗಿದೆ.

ಕೆಎನ್‌ಪಿಯಲ್ಲಿ ಒಂದು ತಿಂಗಳೊಳಗೆ ಎರಡು ಚೀತಾಗಳು ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಸರಿಯಾಗಿ ಚೀತಾಗಳನ್ನು ನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. 

ಕಳೆದ ವರ್ಷ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಎರಡು ಹಂತಗಳಲ್ಲಿ  20 ಚೀತಾಗಳನ್ನು ಕರೆತರಲಾಗಿದ್ದು, ಅವುಗಳನ್ನು ನಿರ್ವಹಿಸಲು ಸಾಕಷ್ಟು ಸಂಪನ್ಮೂಲಗಳು ನಮ್ಮಲ್ಲಿ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ PTI ವರದಿ ಮಾಡಿದೆ.

 'ಒಂದು ಚೀತಾದ ಮೇಲೆ ಹಗಲಿರುಳು ನಿಗಾ ಇಡಲು ನಮಗೆ ಒಂಬತ್ತು ಸಿಬ್ಬಂದಿ ಬೇಕು. ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ' ಎಂದು ಅಧಿಕಾರಿ ಹೇಳಿದ್ದಾರೆ. ಚೀತಾಗಳಿಗೆ ಸ್ಥಳಾವಕಾಶದ ಕೊರತೆ ಮಾತ್ರವಲ್ಲ, ಸಾಕಷ್ಟು ಸಂಪನ್ಮೂಲಗಳು ಬೇಕು" ಎಂದು ಹೇಳಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಚೀತಾ ಪುನಶ್ಚೇತನ ಯೋಜನೆಯಡಿ ಕೆಎನ್‌ಪಿಗೆ ಚೀತಾಗಳನ್ನು ಕರೆ ತರುವ ಮೊದಲೇ, ಕೆಲವು ತಜ್ಞರು ಅಲ್ಲಿ ಸ್ಥಳದ ಕೊರತೆಯ ಬಗ್ಗೆ ಅನುಮಾನಗಳನ್ನು ಎತ್ತಿದ್ದರು. 

ರವಿವಾರ, ಕೆಎನ್‌ಪಿಯಲ್ಲಿ ಎರಡನೇ ಚೀತಾ ಮೃತಪಟ್ಟಿತ್ತು, ಆರು ವರ್ಷ ವಯಸ್ಸಿನ ಈ ಚೀತಾವನ್ನು ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಕರೆತರಲಾಗಿತ್ತು. ಈ ಚಿರತೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯು ಚೀತಾ ಪುನಶ್ಚೇತನ ಯೋಜನೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪರಿಗಣಿಸಲಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಚಿರತೆಗಳು ಮತ್ತು ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು.

ನಮೀಬಿಯಾದಿಂದ ತಂದ ಎಂಟು ಚಿರತೆಗಳಲ್ಲಿ ಒಂದಾದ ಸಾಶಾ ಎಂಬ ಹೆಸರಿನ ಚೀತಾ, ಮೂತ್ರಪಿಂಡ ಕಾಯಿಲೆಯಿಂದ ಮಾರ್ಚ್ 27 ರಂದು ಕೆಎನ್‌ಪಿಯಲ್ಲಿ ಸಾವನ್ನಪ್ಪಿದೆ.

Similar News