ಎನ್‌ಸಿಇಆರ್‌ಟಿ ಕೈಬಿಟ್ಟ ವಿಷಯ ರಾಜ್ಯ ಪಠ್ಯಕ್ರಮದಲ್ಲಿ ಸೇರಿಸಲು ಕೇರಳ ನಿರ್ಧಾರ
ತಿರುವನಂತಪುರ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) 11 ಮತ್ತು 12ನೇ ತರಗತಿಯ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಿಂದ ಕೈಬಿಟ್ಟ ವಿಷಯಗಳನ್ನು ಕ್ರೋಢೀಕರಿಸಿ ಪೂರಕ ಪಠ್ಯಪುಸ್ತಕವಾಗಿ ಸಿದ್ಧಪಡಿಸಿ, ಹಂಚಲು ಕೇರಳ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎಸ್‌ಸಿಇಆರ್‌ಟಿ) ಸರ್ಕಾರದ ಒಪ್ಪಿಗೆ ಕೋರಿದೆ.
2002ರ ಗುಜರಾತ್ ಗಲಭೆ, ಮೊಘಲ್ ಸಾಮ್ರಾಜ್ಯದ ಇತಿಹಾಸ, ಆರೆಸ್ಸೆಸ್ ನಿಷೇಧ ಮತ್ತು ಮಹಾತ್ಮಾಗಾಂಧಿ ಹತ್ಯೆಗೆ ಸಂಬಂಧಿಸಿದ ಭಾಗವನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟ ಎನ್‌ಸಿಇಆರ್‌ಟಿ ಕ್ರಮವನ್ನು ಕೇರಳ ಸರ್ಕಾರ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಸಿಇಆರ್‌ಟಿ ಪಠ್ಯಕ್ರಮದ ಚಾಲನಾ ಸಮಿತಿ, ಪೂರಕ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ, ಎನ್‌ಸಿಇಆರ್‌ಟಿ ಕೈಬಿಟ್ಟ ವಿಷಯಗಳನ್ನು ಮತ್ತೆ ಸೇರಿಸಲು ಸಲಹೆ ಮಾಡಿದೆ.
ಕೆಲವು ತಿಂಗಳಲ್ಲಿ ಈ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಮುದ್ರಿಸಲು ಸಾಧ್ಯ. ಆಗಸ್ಟ್ ತಿಂಗಳ ಒಳಗಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಪೂರೈಸಬಹುದಾಗಿದೆ ಎಂದು ಎಸ್‌ಸಿಇಆರ್‌ಟಿ ನಿರ್ದೇಶಕ ಎಂ.ಜಯಚಂದ್ರನ್ ಹೇಳಿದ್ದಾರೆ. 6ರಿಂದ 12ನೇ ತರಗತಿವರೆಗಿನ ಪಠ್ಯದ ಹಲವು ಭಾಗಗಳನ್ನು ಎನ್‌ಸಿಇಆರ್‌ಟಿ ಕೈಬಿಟ್ಟಿತ್ತು. ಆದರೆ ಕೇರಳ ಸರ್ಕಾರ 11 ಮತ್ತು 12ನೇ ತರಗತಿಯ ಪಠ್ಯಕ್ಕೆ ಮಾತ್ರ ಎನ್‌ಸಿಇಆರ್‌ಟಿಯನ್ನು ಅವಲಂಬಿಸಿರುವುದರಿಂದ ಉಳಿದ ತರಗತಿಗಳ ಪಠ್ಯದಿಂದ ವಿಷಯಗಳನ್ನು ಕೈಬಿಟ್ಟಿರುವುದು ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ .
ಸಾಮಾನ್ಯ ಶಿಕ್ಷಣ ಖಾತೆ ಸಚಿವ ವಿ.ಶಿವನ್‌ಕುಟ್ಟಿಯವರು ಈ ವಿಷಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ಚರ್ಚಿಸುವಂತೆ ಸಮಿತಿ ಮನವಿ ಮಾಡಿದೆ. ಪಠ್ಯವನ್ನು ತಿರುಚುವ ಮೂಲಕ ಕೇಂದ್ರ ಸರ್ಕಾರ ಹಾಗೂ ಎನ್‌ಸಿಇಆರ್‌ಟಿ ತಮ್ಮದೇ ಕಾರ್ಯಸೂಚಿ ಅನುಷ್ಠಾನಕ್ಕೆ ಹುನ್ನಾರ ನಡೆಸಿವೆ ಎಂದು ಸಮಿತಿಯ ಅಧ್ಯಕ್ಷರೂ ಆಗಿಅರುವ ಶಿವನ್‌ಕುಟ್ಟಿ ದೂರಿದ್ದಾರೆ.