ಕೇಂದ್ರ ಗೃಹ ಸಚಿವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಕಾಂಗ್ರೆಸ್
‘ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಲ್ಲಿ ರಾಜ್ಯದಲ್ಲಿ ಗಲಭೆ ಎಂಬ ಅಮಿತ್ ಶಾ ಹೇಳಿಕೆಗೆ ಖಂಡನೆ
ಹೊಸದಿಲ್ಲಿ,,ಎ.26; ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಮರಳಿದಲ್ಲಿ, ರಾಜ್ಯವು ಗಲಭೆಗಳಿಂದ ತತ್ತರಿಸಲಿದೆಯೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್ಚರಿಕೆ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬುಧವಾರ ತೀವ್ರವಾಗಿ ಖಂಡಿಸಿದ್ದಾರೆ. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದ ಮುಂದೆ ಪ್ರಸ್ತಾವಿಸುವುದಾಗಿ ಅವರು ಹೇಳಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಯು ‘ಬಹಿರಂಗವಾಗಿ ಒಡ್ಡಿರುವ ಬೆದರಿಕೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಜನತೆ ನೀಡಿರುವ ಅಭೂತಪೂರ್ವ ಪ್ರತಿಕ್ರಿಯಿಂದ ಬೆಚ್ಚಿಬಿದ್ದಿರುವ ಅಮಿತ್ ಶಾ ಅವರು, ‘ಅಪಮಾನಿಸು, ಕಿಚ್ಚುಹೊತ್ತಿಸು, ಪ್ರಚೋದಿಸು ಹಾಗೂ ಬೆದರಿಸು’ ಎಂಬ ನಾಲ್ಕು ಕಾರ್ಯತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಜೈರಾಮ್ ಆರೋಪಿಸಿದ್ದಾರೆ.
ಮಂಗಳವಾರ ಬೆಳಗಾವಿ ಜಿಲ್ಲೆಯ ತೆರದಾಳದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಭೆ ಮಾತನಾಡಿದ ಅಮಿತ್ ಶಾ ಅವರು ಒಂದು ವೇಳೆ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಮರಳಿದಲ್ಲಿ, ರಾಜ್ಯದಲ್ಲಿ ವಂಶಾಡಳಿತವು ಹಿಂದೆಂದಿಗಿಂತಲೂ ಹೆಚ್ಚಾಗಲಿದೆ ಮತ್ತು ಅದು ಗಲಭೆಯಿಂದ ತತ್ತರಿಸಲಿದೆಯೆಂದುಹೇಳಿದ್ದರು ಕೇವಲ ಭಾರತೀಯಜನತಾ ಪಕ್ಷವೊಂದೇ ನವಕರ್ನಾಟಕದ ನಿರ್ಮಾಣದತ್ತ ರಾಜ್ಯವನ್ನು ಕೊಂಡೊಯ್ಯಲಿದೆಯೆಂದವರು ಹೇಳಿದ್ದರು.
ಒಂದು ವೇಳೆ ಕಾಂಗ್ರೆಸ್ ಪ್ರಮಾದವಶಾತ್ಅಧಿಕಾರಕ್ಕೆ ಬಂದಲ್ಲಿ, ಭ್ರಷ್ಟಾಚಾರವು ಸಾರ್ವಕಾಲಿಕವಾಗಿ ಅಧಿಕವಾಗಲಿದೆ ಹಾಗೂ ತುಷ್ಟೀಕರಣ ರಾಜಕೀಯವನ್ನು ಕಾಣಲಿದೆ ಎಂದು ಅಮಿತ್ ಶಾ ಹೇಳಿದ್ದರು.
ಅಮಿತ್ ಶಾ ಭಾಷಣದ ಬಗ್ಗೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್ ಇಂದು ಈ ಬಗ್ಗೆ ಟ್ವೀಟ್ ಮಾಡಿದ್ದು, ‘‘ ಇದೊಂದು ನಿರ್ಲಜ್ಜೆಯೊಂದಿಗೆ ಒಡ್ಡಿರುವ ಬೆದರಿಕೆಯಾಗಿದೆ. ಭಾರತದ ಪ್ರಪ್ರಥಮ ಗೃಹ ಸಚಿವರಿಂದ ನಿಷೇಧಿಸಲ್ಪಟ್ಟ ಸಂಘಟನೆಗೆ ನಿಷ್ಠರಾಗಿರುವ ಕೇಂದ್ರ ಗೃಹ ಸಚಿವರು ಈಗ, ಚುನಾವಣೆಯಲ್ಲಿ ತನ್ನ ಪಕ್ಷಕ್ಕೆ ಸೋಲು ಖಚಿತವೆಂದು ಅರಿವಾದಾಗ, ಬಹಿರಂಗವಾಗಿ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ’’ ಎಂದರು.
ಕರ್ನಾಟಕದಲ್ಲಿ ಬಿಜೆಪಿಯು ನಿರ್ಣಾಯಕ ಸೋಲನ್ನು ಕಾಣಲಿರುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕತ್ವದ ಚುನಾವಣಾ ಪ್ರಚಾರಕ್ಕೆ ಜನತೆಯ ಪ್ರತಿಕ್ರಿಯೆಯು ಅಗಾಧವಾಗಿದೆ. ಈ ಕಾರಣಕ್ಕಾಗಿ ಅಮಿತ್ ಶಾ ಅವರು ಅಪಮಾನಿಸು, ಕಿಚ್ಚುಹೊತ್ತಿಸು, ಪ್ರಚೋದಿಸು ಹಾಗೂ ಬೆದರಿಸು ಎಂಬ ನಾಲ್ಕು ಕಾರ್ಯತಂತ್ರಗಳನ್ನು ಅನುಸರಿಸುವುದಕ್ಕೆ ಇದು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.