72 ಗಂಟೆಗಳ ಕದನ ವಿರಾಮದ ನಡುವೆ ಸುಡಾನ್‌ನಿಂದ 534 ಭಾರತೀಯರ ತೆರವು
Update: 2023-04-26 22:17 IST
ಹೊಸದಿಲ್ಲಿ,ಎ.26: ಭಾರತವು 72 ಗಂಟೆಗಳ ಕದನ ವಿರಾಮದ ನಡುವೆ ಸಂಘರ್ಷ ಪೀಡಿತ ಸುಡಾನ್ನಿಂದ ತನ್ನ 534 ಪ್ರಜೆಗಳನ್ನು ತೆರವುಗೊಳಿಸಿದ್ದು, ಇನ್ನಷ್ಟು ಭಾರತೀಯರ ಸ್ಥಳಾಂತರಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ತಿಳಿಸಿದೆ.
ಮಂಗಳವಾರ ಪೋರ್ಟ್ ಸುಡಾನ್ ನಿಂದ ಭಾರತೀಯ ನೌಕಾಪಡೆಯ ಐಎನ್ಎಸ್ ಸುಮೇಧಾ ಮೂಲಕ ನಿರ್ಗಮಿಸಿದ್ದ 278 ಭಾರತೀಯರ ಪ್ರಥಮ ತಂಡವು ಬಳಿಕ ಅದೇ ದಿನ ಸೌದಿ ಅರೇಬಿಯಾದ ಜಿದ್ದಾವನ್ನು ತಲುಪಿತ್ತು. ತಡರಾತ್ರಿ ಭಾರತೀಯರ ಇನ್ನೊಂದು ಗುಂಪು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಜಿದ್ದಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಬುಧವಾರ ನಸುಕಿನಲ್ಲಿ ಮೂರನೇ ಗುಂಪು ಸಹ ಭಾರತೀಯ ವಾಯುಪಡೆಯ ವಿಮಾನದ ಮೂಲಕ ಜಿದ್ದಾ ತಲುಪಿದೆ.
ಜಿದ್ದಾಕ್ಕೆ ಕರೆತರಲಾಗಿರುವ ಭಾರತೀಯರು ಶೀಘ್ರವೇ ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ತಿಳಿಸಿದರು.