×
Ad

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಿಪಿಎಂ ಕರೆ

Update: 2023-04-27 18:11 IST

ಉಡುಪಿ: ಬೆಲೆ ಏರಿಕೆಯ ಮೂಲಕ ಸಮಸ್ತ ಜನ ಸಮುದಾಯವನ್ನು ವಂಚಿಸಿದ, ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದ, ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಪರವಾಗಿರುವ, ಬಿಜೆಪಿ ರಾಜ್ಯ ಸರಕಾರ ವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸಬೇಕೆಂದು ಸಿಪಿಐಎಂ ಕರೆ ನೀಡಿದೆ.

ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಹಿತ ದೃಷ್ಟಿಯಿಂದ ಬಿಜೆಪಿಯ ದುರಾಡಳಿತ ಕೊನೆಗೊಳಿ ಸಲು ಮುಂದಾಗಬೇಕೆಂದು ಜಿಲ್ಲೆಯ ಮತದಾರರಲ್ಲಿ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.

ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಐಕ್ಯ ಹೋರಾಟ ನಡೆಸಬೇಕಾದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ನೀತಿ ಅನುಸರಿಸುವ ಮೂಲಕ ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ.

ಕೇಂದ್ರ ಬಿಜೆಪಿ ಸರಕಾರ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ಪರಿಣಾಮವಾಗಿ ಎಲ್ಲಾ ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಹೆಚ್ಚಳ ವಾಗಿದೆ. ಅವಿಭಜಿತ ದ.ಕ.ಜಿಲ್ಲೆಯ ಪ್ರತಿಷ್ಟಿತ ಬ್ಯಾಂಕುಗಳಾದ ವಿಜಯ, ಕಾರ್ಪೊರೇಷನ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿದ್ದು ಮಾತ್ರವಲ್ಲದೆ, ಇದೀಗ ರೈತರ ಕಣ್ಮಣಿಯಾಗಿರುವ ’ನಂದಿನಿ’ ಬ್ರಾಂಡ್ ಕೆ.ಎಂ.ಎಫ್. ಡೈರಿಯನ್ನು ಗುಜರಾತ್‌ನ ಅಮುಲ್‌ ನೊಂದಿಗೆ ವಿಲೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅದು ದೂರಿದೆ.

ಇತ್ತೀಚೆಗೆ ಇದ್ರಿಷ್ ಪಾಷಾ ಎಂಬ ಕಾರ್ಮಿಕನನ್ನು ಗೋರಕ್ಷಕರು ಎಂದು ಹೇಳಿಕೊಂಡವರು ಕೊಲೆ ಮಾಡಿದ ಸಂದರ್ಭದಲ್ಲಿ ಅನಾಥರಾದ ಕುಟುಂಬಕ್ಕೆ ಸರಕಾರ ಯಾವುದೇ ಪರಿಹಾರ ನೀಡಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಧರ್ಮ ಆಧಾರಿತ ತಾರತಮ್ಯ ಮಾಡುತ್ತಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.

ಸಭೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕುಂದಾಪುರ ವಲಯ ಕಾರ್ಯದರ್ಶಿ ಎಚ್.ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ ಕಲ್ಲಾಗರ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ವೆಂಕಟೇಶ ಕೋಣಿ,  ನಾಗರತ್ನ ನಾಡ, ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಗೂಂಡಾ ಸಂಸ್ಕೃತಿಯ ಅಭ್ಯರ್ಥಿ

ಉಡುಪಿ ಜಿಲ್ಲೆಯೂ ಸೇರಿದಂತೆ, ರಾಜ್ಯದ ಅನೇಕ ಕಡೆಗಳಲ್ಲಿ ಗೂಂಡಾ ಸಂಸ್ಕ್ರತಿಯ ಹಿನ್ನಲೆಯ, ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅನೇಕರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಇದು ಮುಂಬರುವ ಅಪಾಯವನ್ನು ಸೂಚಿಸುತ್ತದೆ ಎಂದು ಸಿಪಿಐಎಂ ಆತಂಕ ವ್ಯಕ್ತಪಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಶುಲ್ಕ ಹೆಚ್ಚಿಸುವ ತೂಗುಗತ್ತಿ ಎಲ್ಲರ ತಲೆಯ ಮೇಲಿದೆ. ಅಕ್ರಮ ಸುರತ್ಕಲ್ ಟೋಲ್ ಗೇಟ್ ಮುಚ್ಚಿದ ಬಳಿಕ ಬಸ್ ಪ್ರಯಾಣ ದರ ಕಡಿಮೆ ಮಾಡಬೇಕಾಗಿತ್ತು. ಆದರೆ ಚುನಾವಣೆ ಬಳಿಕ ಶುಲ್ಕ ಹೆಚ್ಚಳ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಹೀಗೆ ಜನ ವಿರೋಧಿ, ಕಾರ್ಪೊರೇಟ್ ಪರ ನೀತಿಗಳು ಒಂದೆಡೆಯಾದರೆ, ಜನರನ್ನು ಒಡೆದು ಆಳುವ ನೀತಿಯ ಭಾಗವಾಗಿ ಅಲ್ಪ ಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ ಎಂದು ಪಕ್ಷ ತಿಳಿಸಿದೆ.

Similar News