ಜನಪದ ಕಲೆಗಳ ಪಾರಂಪರಿಕ ಸೊಗಡು ಕ್ಷೀಣ: ಕೆ.ಪಿ.ರಾವ್
ಉಡುಪಿ: ಜನಪದ ಕಲೆಗಳು ಪಾರಂಪರಿಕ ಸೊಗಡನ್ನು ಕಳೆದು ಕೊಳ್ಳುತ್ತ ಮಾರುಕಟ್ಟೆಯಲ್ಲಿನ ಸಿಂಥೆಟಿಕ್ ವರ್ಣಗಳ ಬಳಕೆ ಹೆಚ್ಚಾಗುತ್ತಿದೆ. ಕಲೆಯ ಜೀವಾಳವಾಗಿರುವ ಸಪಾಟಾದ ಮೇಲ್ಮೈಯ ಗುಣವನ್ನು ತೋರಿಸುವು ದರ ಬದಲು ದುಂಡನೆಯದಾಗಿಸುವ ವಿಕೃತಿ ಮೆರೆಯುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಕೀಲಿ ಮಣೆ ತಜ್ಞ, ವಿಜ್ಞಾನಿ ನಾಡೋಜ ಕೆ.ಪಿ.ರಾವ್ ಹೇಳಿದ್ದಾರೆ.
ಹಾವಂಜೆ ಭಾವನಾ ಫೌಂಡೇಶನ್ ಹಾಗೂ ಬಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಉಡುಪಿಯ ವೆಂಟನಾ ಫೌಂಡೇಶನ್‌ನ ಸಹಯೋಗ ದಲ್ಲಿ ಇಂದು ನಡೆದ ಜನಪದ ದೇಶಿಕಲೆಗಳ ಸರಣಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಆ ನಿಟ್ಟಿನಲ್ಲಿ ಈ ತೆರನಾದ ತರಬೇತಿ ಕಾರ್ಯಾಗಾರಗಳು ನಿಜ ಬಣ್ಣವನ್ನು ತೋರ್ಪಡಿಸುವುದರ ಜೊತೆಗೆ ಯಶಸ್ವಿಯಾಗಬೇಕೆಂದು ಅವರು ಹಾರೈಸಿದರು.
ಕಾರ್ಯಾಗಾರವನ್ನು ಫೌಂಡೇಶನ್‌ನ ಟ್ರಸ್ಟಿ ಶಿಲ್ಪಾಭಟ್ ಉದ್ಘಾಟಿಸಿದರು. ಉದ್ಯಮಿ ಸುಗುಣ ಶಂಕರ್ ಸುವರ್ಣ, ಭಾವನಾ ಪ್ರತಿಷ್ಠಾನದ ನಿರ್ದೇಶಕ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕ ಡಾ.ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಈ ಸರಣಿ ಕಾರ್ಯಾಗಾರದ ಭಾಗವಾಗಿ ಬಿಹಾರದ ಕರಕುಶಲ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಿಥಿಲಾ ಲೋಕಚಿತ್ರವಾದ ಮಧುಬನಿ, ಗೋಧ್ನಾ ಹಾಗೂ ಪೇಪರ್ ಮೆಶ್ ಕಲಾಕೃತಿಗಳನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರವಣ್ ಪಾಸ್ವಾನ್, ಉಜಾಲಾ ಕುಮಾರಿ, ಸಂತೋಷ್ ಪಾಸ್ವಾನ್ ಎ.೩೦ ರವರೆಗೆ ದಿನ ಕ್ಕೊಂದು ಶೈಲಿಯ ಕಲೆಯನ್ನು ರಚಿಸಲು ಇಲ್ಲಿ ಕಲಿಸಿಕೊಡಲಿದ್ದಾರೆ.
ನೈಸರ್ಗಿಕ ವರ್ಣಗಳ ರಚನಾಕ್ರಮ, ಅದನ್ನು ಬಳಸುವ ಕ್ರಮ ಹಾಗೂ ಮಧುಬನಿ ಶೈಲಿಯ ಗುಣಗಳನ್ನು ಕೂಡ ಹೇಳಿಕೊಡಲಾಗುತ್ತದೆ. ಅಲ್ಲದೆ ಸಂಜೆ ಮಧುಬನಿ ಕಲೆಯ ಮಾರಾಟವನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಜನಾರ್ದನ ಹಾವಂಜೆ ತಿಳಿಸಿದ್ದಾರೆ.