ರಾಜ್ಯದ ಚುನಾವಣೆ ಮತ್ತು ಪ್ರಜ್ಞಾವಂತ ಮತದಾರರು ಕೇಳಬೇಕಾದ ಪ್ರಶ್ನೆಗಳು
ಕರ್ನಾಟಕವು ಭಾರತದ ಒಳಗಿನ ಒಂದು ರಾಜ್ಯ ಹೌದು; ಆದರೆ ರಾಜ್ಯಕ್ಕೆ ತನ್ನದೇ ಆದ ಚರಿತ್ರೆ, ಅಸ್ಮಿತೆ, ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ ಇವೆ. ಈಗಾಗಲೇ ಅವುಗಳಿಗೆ ಮಾರಕ ಧಕ್ಕೆ ಆಗಿದೆ. ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ವಹಿಸಿಕೊಡುವ ಜವಾಬ್ದಾರಿ ಎಲ್ಲ ಮತದಾರರಲ್ಲಿಯೂ ಇದೆ. ಇತ್ತೀಚೆಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರನೂ/ಳೂ ಭ್ರಮಾಲೋಕದಿಂದ ಹೊರಬಂದು, ಈ ತುರ್ತನ್ನು ಅರಿತುಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಹಾಗಿದ್ದರೆ ಮಾತ್ರ ಕರ್ನಾಟಕವು ಉಳಿಯುತ್ತದೆ, ಪ್ರಜಾಪ್ರಭುತ್ವ ಸತ್ವಯುತವಾಗುತ್ತದೆ.
ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಪ್ರಚಾರದ ಅಬ್ಬರ ಅರಂಭವಾಗುತ್ತಿ ದ್ದಂತೆಯೇ ಓರ್ವ ಮತದಾರನಾಗಿ ಕೆಲವು ಮೂಲಭೂತ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಬಹುಶಃ ಇನ್ನೂ ಅನೇಕ ಮಂದಿಗೂ ಈ ಪ್ರಶ್ನೆಗಳು ಕಾಡುತ್ತಿರಬಹುದು.
ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯ ಬಗ್ಗೆ ಬಂದ ಕೆಲವು ವರದಿಗಳಿಂದಾಗಿ ಈ ಪ್ರಶ್ನೆಗಳು ಹುಟ್ಟುತ್ತವೆ. ನಾನು ಗಮನಿಸಿದ ಮೂರು ಮುಖ್ಯ ಅಂಶಗಳು ಇವು: ಎಗ್ಗಿಲ್ಲದ ಪಕ್ಷಾಂತರ, ನಾಮಪತ್ರ ಸಲ್ಲಿಸುವ ವಿಧಾನ ಮತ್ತು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಆದಾಯ ಮತ್ತು ಸಂಪತ್ತುಗಳ ಬಗ್ಗೆ ಮಾಹಿತಿ. ಇವು ಮೂರೂ ಚರ್ಚಿಸಬೇಕಾದ ವಿಷಯಗಳು.
ಪಕ್ಷಾಂತರ ಮಾಡಿದವರ ಕುರಿತು ಪ್ರಶ್ನೆಗಳು
ಹಲವಾರು ವರ್ಷಗಳ ತನಕ ಒಂದು ಪಕ್ಷದಲ್ಲಿದ್ದು ಈ ಬಾರಿ ಆ ಪಕ್ಷದಿಂದ ತಮಗೆ ಟಿಕೆಟು ಸಿಗಲಿಲ್ಲ, ಅಲ್ಲಿ ತಮಗೆ ಸರಿಯಾದ ಗೌರವ ಸಿಗಲಿಲ್ಲ ಎನ್ನುತ್ತ ಎರಡನೆಯ ಪಕ್ಷಕ್ಕೆ ಹಾರಿ ಅದರ ಅಭ್ಯರ್ಥಿಯಾಗಿ ಹಲವು ಮಂದಿ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಅವರಿಗೆ ಟಿಕೆಟು ಸಿಕ್ಕಿರಲಿಲ್ಲವೆ? ಅವರು ಪ್ರತಿನಿಧಿ ಆಗಿರಲಿಲ್ಲವೇ? ಮೊನ್ನೆ ತನಕ ತಾವು ಭಕ್ತಿ ಗೌರವದಿಂದ ಕೆಲಸ ಮಾಡುತ್ತಿದ್ದ ಪಕ್ಷ ಬಿಟ್ಟು ಇನ್ನೊಂದಕ್ಕೆ ಸೇರುವ ಉದ್ದೇಶವೇನು? ಜನಸೇವೆಗಾಗಿಯೇ? ಮಂತ್ರಿ ಪದವಿಯ ಆಕಾಂಕ್ಷೆಯಿಂದಲೇ? ಮೊನ್ನೆ ತನಕ ಈ ಪಕ್ಷವನ್ನು ತೀವ್ರವಾಗಿ ಟೀಕಿಸುತ್ತಿದ್ದ ಅಭ್ಯರ್ಥಿಗೆ ಪಕ್ಷ ಬದಲಾವಣೆಯಾದ ತಕ್ಷಣವೇ ಹೊಸ ಪಕ್ಷದ ದುರ್ಗುಣಗಳೆಲ್ಲ ಗೌಣವಾದವೇ? ಅಥವಾ ತಮ್ಮದೇ ಹುಳುಕುಗಳನ್ನು ಮುಚ್ಚಿಡಲು ಪಕ್ಷಾಂತರ ಸಹಾಯಕವಾಗುತ್ತದೆ ಎಂದೆ? ಚುನಾವಣೆಯಲ್ಲಿ ಫಲಿತಾಂಶ ಬಂದ ಬಳಿಕ ಅವರ ಬದ್ಧತೆ ಯಾರಿಗೆ-ತಾವು ಮೊದಲಿದ್ದ ಪಕ್ಷಕ್ಕೆ ಅಥವಾ ಹೊಸತಾಗಿ ಸೇರಿದ ಪಕ್ಷಕ್ಕೇ? ಹೊಸ ಪಕ್ಷಕ್ಕೆ ಬಹುಮತ ಸಿಗದಿದ್ದರೆ ಅದರಲ್ಲಿಯೇ ಮುಂದುವರಿಯುತ್ತಾರೆಯೆ ಅಥವಾ ಗೆದ್ದ ಎತ್ತಿನ ಬಾಲ ಹಿಡಿಯಲಿದ್ದಾರೆಯೆ? ಈ ತರದ ಅನೇಕ ಪ್ರಶ್ನೆಗಳಿಗೆ ಸಾಮಾನ್ಯ ಮತದಾರನಾದ ನಾನು ಯಾರಲ್ಲಿ ಉತ್ತರ ಕೇಳಬೇಕು?
ನಾಮಪತ್ರ ಸಲ್ಲಿಕೆಯ ವಿಧಾನದ ಬಗ್ಗೆ ಪ್ರಶ್ನೆಗಳು
ನಾಮಪತ್ರ ಸಲ್ಲಿಸಿದ ವಿಧಾನಗಳೂ ಉಲ್ಲೇಖನೀಯ. ಅನೇಕ ಅಭ್ಯರ್ಥಿಗಳು ಊರಿನಲ್ಲಿರುವ ಎಲ್ಲ ದೇವಸ್ಥಾನ, ಮಸೀದಿ, ಇಗರ್ಜಿ ಮತ್ತು ಇತರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಅದ್ದೂರಿಯಾಗಿ ಪ್ರಾರ್ಥನೆ ಮಾಡಿ ದೊಡ್ಡ ಜಾತ್ರೆಯಂತೆ ಸಾವಿರಾರು ಮಂದಿ ಬೆಂಬಲಿಗರು, ಕಾರುಗಳು, ದ್ವಿಚಕ್ರ ವಾಹನಗಳು ಎತ್ತಿನ ಗಾಡಿ ಮುಂತಾದವುಗಳ ಮೆರವಣಿಗೆಯಲ್ಲಿ ಬಂದು ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಿದರೆಂಬ ವರದಿಗಳನ್ನು ಓದಿದೆ. ದೇವರ ಮೇಲೆ ನಂಬಿಕೆ ಒಂದು ಖಾಸಗಿ ವಿಷಯ; ಮನೆಯಲ್ಲಿಯೇ ತಮ್ಮ ಆರಾಧ್ಯ ದೈವಕ್ಕೆ ಅಥವಾ ಪೂಜೆ ಅಥವಾ ಪ್ರಾರ್ಥನೆ ನಡೆಸಿ ಬರುವುದರ ಬದಲು ಸಾರ್ವಜನಿಕವಾಗಿ ತಾವು ದೈವಭಕ್ತರೆಂದು ತೋರಿಸಿಕೊಳ್ಳುವ ಅಗತ್ಯವೇನಿತ್ತು? ತಮ್ಮನ್ನು ಆರಿಸುವ ಮತದಾರರ ಆಶೋತ್ತರಗಳಿಗೆ ಸ್ಪಂದಿಸುವ ಬದ್ಧತೆಯನ್ನು ತಮ್ಮ ಸಾಧನೆಯ ಮೂಲಕ ತೋರಿಸಬೇಡವೇ? ಬರೇ ಪೂಜಾಮಂದಿರಗಳಲ್ಲಿ ಘಂಟಾಘೋಷವಾಗಿ ಪೂಜೆ ಮಾಡಿದರೆ ಮುಗಿಯಿತೆ? ಆ ಮೇಲೆ ಆ ಧರ್ಮದ ಮೂಲತತ್ವಗಳನ್ನು ಬದಿಗಿರಿಸಿ ವರ್ತಿಸುವುದು ಎಷ್ಟು ಸರಿ? ಇನ್ನೊಂದು ಪಕ್ಷಕ್ಕೆ ವೋಟು ನೀಡಿದರೆ ರಾಜ್ಯದಲ್ಲಿ ಗಲಭೆಯಾಗಬಹುದು ಎಂದೂ ಒಬ್ಬ ನಾಯಕರು ಹೇಳಿದ್ದು ಓದಿದೆ. ಅವರ ಅನುಯಾಯಿಗಳು ಪ್ರಾರ್ಥನಾ ಮಂದಿರಗಳಲ್ಲಿ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಸಿ ಎಂದು ಪ್ರಾರ್ಥನೆ ಮಾಡಿದರೆ?
ಅಭ್ಯರ್ಥಿಗಳ ಸಂಪತ್ತು ಮತ್ತು ಆದಾಯದ ಕುರಿತು ಪ್ರಶ್ನೆಗಳು:
ಬಂದ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪುನರಾಯ್ಕೆ ಬಯಸುವ ಬಹುತೇಕ ಅಭ್ಯರ್ಥಿಗಳ ಸಂಪತ್ತು ಹೋದ ಐದು ವರ್ಷದಲ್ಲಿ ಅನೇಕ ಪಟ್ಟು ಹೆಚ್ಚಿದೆ. ಅವರ ಹೆಂಡತಿ, ಮಕ್ಕಳ ಸಂಪತ್ತು ಕೂಡ ಊರ್ಧ್ವಮುಖವಾಗಿದೆ! ಜನಸಾಮಾನ್ಯರ-ಕೂಲಿ ಕಾರ್ಮಿಕರ, ಗುತ್ತಿಗೆ ಕಾರ್ಮಿಕರ, ಸಂಪಾದನೆ ಕಡಿತವಾಗಿದೆ, ಉದ್ಯೋಗಗಳೇ ಇಲ್ಲ. ದಿನಗೂಲಿಗಾರರು, ಕೃಷಿ ಕಾರ್ಮಿಕರು, ಮನೆಕೆಲಸ ಮಾಡುವ ಹೆಣ್ಮಕ್ಕಳು, ಆಶಾ ಕಾರ್ಯಕರ್ತೆಯರು-ಮುಂತಾದವರದ್ದೆಲ್ಲ ವೇತನ ಹೆಚ್ಚಿಲ್ಲ. ಕೃಷಿಕರ ಆದಾಯ ಮತ್ತಷ್ಟು ಕಡಿತವಾಗಿದೆ; ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಹಸುಗಳನ್ನು ಸಾಕಲು ಸಾಧ್ಯವಾಗದೆ ಅವುಗಳನ್ನು ಮಾರುತ್ತಿದ್ದಾರೆ-ಮೀನುಗಾರರ ಸಂಪಾದನೆಯೂ ಅಷ್ಟೆ.
ಕೊರೋನದ ಸಂದರ್ಭದಲ್ಲಿ ಹೇರಿದ ಲಾಕ್‌ಡೌನ್‌ನಿಂದ ಸಂಪಾದನೆಯ ದಾರಿ ಕಳಕೊಂಡು ದೇಶದಾದ್ಯಂತ ಬಡವರು ಮತ್ತಷ್ಟು ಬಡವರಾಗಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳ, ಮಂತ್ರಿಗಳ, ರಾಜಕಾರಣಿಗಳ ಆದಾಯ ಬಹಳಷ್ಟು ಹೆಚ್ಚಿದೆ; ಸಂಪತ್ತು ತೀವ್ರಗತಿಯಲ್ಲಿ ಬೆಳೆದಿದೆ. ಇದು ಹೇಗೆ ಸಾಧ್ಯವಾಯಿತು? ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ನಿಸ್ಪೃಹರಾಗಿ ದುಡಿಯುವ ಅಥವಾ ತಮ್ಮದೇ ಸ್ವಂತ ಕಿರು ಉದ್ದಿಮೆಯನ್ನು ನಡೆಸುತ್ತ ಬದುಕಿಗೆ ದಾರಿ ಕಂಡುಕೊಂಡ ಲಕ್ಷಗಟ್ಟಲೆ ನಾಗರಿಕರ ಸಂಪತ್ತು ಬಿಡಿ, ಆದಾಯವೇ ಕುಂಠಿತವಾಗಿದ್ದ ಈ ಸಂಕೀರ್ಣ ಕಾಲಘಟ್ಟದಲ್ಲಿ ನಮ್ಮ ರಾಜಕೀಯ ಧುರೀಣರ ಆದಾಯ ಮತ್ತು ಸಂಪತ್ತು ಹೆಚ್ಚಾಗಲು ಹೇಗೆ ಸಾಧ್ಯವಾಯಿತು?
ಈ ಮೂರೂ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಬೇಕು.
ಮತದಾರರು ಪ್ರಶ್ನಿಸಲು ಆರಂಭಿಸಬೇಕು
ಈ ಲೇಖನವನ್ನು ಬರೆಯುವ ಹೊತ್ತಿಗೆ, ಒಂದು ರಾಷ್ಟ್ರೀಯ ಪಕ್ಷದ ಪರವಾಗಿ ಪ್ರಚಾರಮಾಡಲು ಯುವಕರ ಒಂದು ಪಟ್ಲಾಮು ಮನೆಗೆ ಬಂದು ಕರೆಗಂಟೆ ಬಾರಿಸಿದರು. ಕರಪತ್ರ ಕೊಟ್ಟು ತಮ್ಮ ಪಕ್ಷದ ಅಭ್ಯರ್ಥಿಗೆ ಮತನೀಡಬೇಕೆಂದು ಪ್ರಾರ್ಥಿಸಿದರು. ಅವರನ್ನು ನಗುತ್ತಾ ಕೇಳಿದೆ: ‘‘ಹೋದ ಬಾರಿ ಚುನಾಯಿತರಾದ ಬಳಿಕ ನಮ್ಮ ಪ್ರದೇಶಕ್ಕೆ ಒಮ್ಮೆಯೂ ಪ್ರತಿನಿಧಿಗಳು ಭೇಟಿ ಕೊಟ್ಟಿಲ್ಲ; ನಮ್ಮ ರಸ್ತೆಯಲ್ಲಿ ಗುಂಡಿ ಬಿದ್ದು ಓಡಾಡಲೂ ಕಷ್ಟವಾಗುತ್ತಿತ್ತು. ಅವರು ಒಮ್ಮೆಯಾದರೂ ಬಂದು ನಮ್ಮ ಸುಖದುಃಖವನ್ನು ವಿಚಾರಿಸಲೇ ಇಲ್ಲ, ಯಾಕೆ ಹೀಗೆ?’’ ಉತ್ತರಿಸುವ ದಾರಿ ತಿಳಿಯದ ಯುವಕರು, ‘‘ಇನ್ನೊಂದು ದಿನ ಅವರನ್ನೇ ಕರಕೊಂಡು ಬರುತ್ತೇವೆ ಸರ್’’ ಎಂದು ಹೇಳಿ ಪಕ್ಕದ ಮನೆಗೆ ಹೋದರು.
ತಳಮಟ್ಟದ ಸರಳ ಪ್ರಶ್ನೆಗಳು
ಪ್ರಜ್ಞಾವಂತ ಮತದಾರರಿಗೆ ನನ್ನ ಕಳಕಳಿಯ ವಿನಂತಿ ಅಂದರೆ ಮತಯಾಚನೆಗೆ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಕರಪತ್ರ ಹಿಡಿದು ಬಂದಾಗ ಅಥವಾ ದೂರವಾಣಿಯಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಕರೆ ಬಂದಾಗ ಅವರಿಗೆ ಮರುಪ್ರಶ್ನೆ ಹಾಕಬೇಕು.
ಉದಾಹರಣೆಗೆ ನೀವು ಗ್ರಾಮೀಣ ಪ್ರದೇಶದವರಾದರೆ, ನಮ್ಮ ಊರಿನ ಶಾಲೆಗೆ ಅಧ್ಯಾಪಕರನ್ನು ಯಾವಾಗ ನೇಮಕ ಮಾಡಿಸುತ್ತೀರಿ? ನಮ್ಮ ಊರಿನ ರಸ್ತೆ ಯಾವಾಗ ರಿಪೇರಿಯಾಗುತ್ತದೆ? ನಮಗೆ ಕುಡಿಯಲು ನೀರು ವಾರದಲ್ಲಿ ಎಷ್ಟು ದಿನ ಖಾತ್ರಿಯಾಗಿ ಬರುತ್ತದೆ? ನಮ್ಮ ಆರೋಗ್ಯ ಕೇಂದ್ರದಲ್ಲಿ ಡಾಕ್ಟರರನ್ನು ಮತ್ತು ಅಗತ್ಯದ ಶುಶ್ರೂಷಕರನ್ನು ಯಾವಾಗ ನೇಮಿಸುತ್ತೀರಿ? ಅಲ್ಲಿ ಔಷಧಿಗಳು ನಿರಂತರ ಸಿಗಲು ಏನು ಮಾಡುತ್ತೀರಿ?
ನೀವು ನಗರವಾಸಿಗಳಾಗಿದ್ದರೆ ಕೇಳಿ: ನಮ್ಮ ಕಾಲುದಾರಿಗಳನ್ನು ಯಾವಾಗ ಸರಿಪಡಿಸುತ್ತೀರಿ? ನೀರು ಸರಬರಾಜು ವಾರದಲ್ಲಿ ಯಾವತ್ತೆಲ್ಲ ಲಭ್ಯವಿರುವಂತೆ ಮಾಡುತ್ತೀರಿ?
ನಿರುದ್ಯೋಗಿಗಳಾಗಿದ್ದರೆ, ನಮಗೆ ಉದ್ಯೋಗ ಯಾವಾಗ ಸಿಗುತ್ತದೆ?
ನೀವು ಇತ್ತೀಚೆಗಷ್ಟೆ ರಾಜ್ಯಸರಕಾರದ ಪಿಂಚಣಿಗೆ ಅರ್ಹರಾದರೆ ಕೇಳಿ: ನನ್ನ ನಿವೃತ್ತಿ ವೇತನ ಯಾವತ್ತಿನಿಂದ ಸಿಗುತ್ತದೆ?
ನಿಮ್ಮ ಮಗಳ ಅಥವಾ ಮೊಮ್ಮಗಳ ವಿವಾಹದ ನೋಂದಣಿಗೆ ಹೋದಾಗ ನೋಂದಣಿ ಕಚೆೇರಿಯಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣವನ್ನು ಯಾಕೆ ಕೇಳುತ್ತಾರೆ? ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲನಾ ಪರವಾನಿಗೆ ಕೊಡಲು ನಿಗದಿತ ಶುಲ್ಕವಲ್ಲದೆ ಜಾಸ್ತಿ ಯಾಕೆ ಕೊಡಬೇಕು? ಈ ಪ್ರಶ್ನೆಗಳನ್ನು ಕೇಳಿ.
ನೀವು ಸಣ್ಣ ಉದ್ದಿಮೆಯನ್ನು ಆರಂಭಿಸುವುದಿದ್ದರೆ, ಯಾವ ಎಲ್ಲ ಕಚೇರಿಗಳಿಗೆ ಎಷ್ಟು ಬಾರಿ ಹೋಗಿದ್ದೀರಿ, ಎಷ್ಟೆಷ್ಟು ಅಧಿಕ ಶುಲ್ಕ ತೆರಬೇಕಾಯಿತು ಎಂದು ನೆನಪಿಸಿ ಅವರಿಗೆ ಕೇಳಿ: ಈ ಸಮಸ್ಯೆಯಿಂದ ಯಾವಾಗ ಮುಕ್ತಿ ಎಂದು. ನೀವು ಈಗಾಗಲೇ ಕಿರು ಅಥವಾ ಸಣ್ಣ ಉದ್ದಿಮೆದಾರರಾಗಿದ್ದರೆ ಮತ್ತು ಜಿಎಸ್‌ಟಿ ಕೊಡುವವರಾಗಿದ್ದರೆ ಕೇಳಿ: ಕಚ್ಚಾ ವಸ್ತುಗಳಿಗೆ ಕೊಟ್ಟ ತೆರಿಗೆ ವಾಪಸಾಗಲು ಎಷ್ಟು ಸಮಯ ನಾವು ಕಾಯಬೇಕು?
ನೀವು ಸಣ್ಣ ವ್ಯಾಪಾರದ ಅಂಗಡಿ ಹೊಂದಿದ್ದರೆ, ತೆರಿಗೆ ಅಧಿಕಾರಿಗಳಿಂದ ಅಥವಾ ಸ್ಥಾನೀಯ ಆಡಳಿತದ ಅಧಿಕಾರಿಗಳಿಗೆ ಕೊಡಬೇಕಾದ ಕಾಣಿಕೆಯಿಂದ ಯಾವಾಗ ಮುಕ್ತಿ ಸಿಗುತ್ತದೆ?
ನೀವು ಇತ್ತೀಚೆಗಷ್ಟೆ ಮನೆ ಕಟ್ಟಿಸಿದ್ದರೆ, ಅದಕ್ಕೆ ಬೇಕಾದ ಪರವಾನಿಗೆಗಳನ್ನು ಪಡೆಯಲು ಏನೆಲ್ಲ ತಾಪತ್ರಯ ಸಹಿಸಿಕೊಳ್ಳಬೇಕಾಯಿತು ಎಂದು ಜ್ಞಾಪಿಸಿಕೊಳ್ಳಿ. ಮತ್ತೆ ಕೇಳಿ-ಇದು ಯಾಕೆ ಹೀಗೆ?
ನಿಮ್ಮ ಮನೆಯಲ್ಲಿ ಯಾರಾದರು ಮೃತರಾಗಿದ್ದರೆ, ಅವರ ಮರಣ ಪ್ರಮಾಣಪತ್ರ ಸಿಗಲು ಎಷ್ಟು ಒದ್ದಾಡಿದಿರಿ ಎಂದು ನೆನಪಿಸಿಕೊಳ್ಳಿ. ಅದರ ಬಗ್ಗೆ ಕೇಳಿ.
ನೀವು ಒಂದು ಕಾರ್ಖಾನೆಯ ಕಾರ್ಮಿಕರಾಗಿದ್ದರೆ, ನಿಮ್ಮ ಕಾರ್ಖಾನೆಯಲ್ಲಿ ಉದ್ಯೋಗಿಗಳ ಮತ್ತು ನೆರೆಹೊರೆಯವರ ಜೀವಭದ್ರತೆಗೆ ಕಂಪೆನಿಯು ಅಗತ್ಯದ ಕಾನೂನು ನಿಯಮಗಳನ್ನು ಪಾಲಿಸುವಂತೆ ಏನು ಮಾಡುತ್ತೀರಿ ಎಂದು ಅಭ್ಯರ್ಥಿಗೆ ಕೇಳಿ. ಸಮೀಪದ ಜನವಸತಿಯ ಪ್ರದೇಶದಲ್ಲಿ ಕುಡಿಯುವ ನೀರಿನ ಬಾವಿಗಳು ಕೆರೆಗಳು ಯಾಕೆ ಕಶ್ಮಲಗೊಂಡಿವೆ ಎಂದೂ ಕೇಳಿ.
ನಿಮಗೆ ಇವು ಯಾವುದೂ ಸಮಸ್ಯೆ ಇಲ್ಲದಿದ್ದರೆ, ಮನೆಯಲ್ಲಿ ಉಪಯೋಗಿಸುವ ಅಡುಗೆ ಅನಿಲದ ಬೆಲೆ ಯಾವಾಗ ಇಳಿಯುತ್ತದೆ ಎಂದು ಕೇಳಿ. ನಳ್ಳಿಯಲ್ಲಿ ಬರುವ ನೀರಿನ ಬೆಲೆ, ಉಪಯೋಗಿಸುವ ವಿದ್ಯುತ್ತಿನ ಬೆಲೆ ಮುಂದಿನ ಎರಡು ವರ್ಷವಾದರೂ ಏರದಂತೆ ಏನು ಮಾಡುತ್ತೀರಿ ಎಂದು ಕೇಳಿ.
ಅಂಗಡಿಯಿಂದ ಪ್ಯಾಕ್ ಮಾಡಿ ತಂದ ಅಕ್ಕಿ, ಬೇಳೆಗಳ ಮೇಲೆ ಎಷ್ಟು ಜಿಎಸ್‌ಟಿ, ಆಗಾಗ ಜೀವರಕ್ಷಕ ಔಷಧಿಗಳನ್ನು ಉಪಯೋಗಿಸುತ್ತೀರಾದರೆ, ಅಭ್ಯರ್ಥಿಗಳಿಗೆ ಕೇಳಿ- ಐಸ್‌ಕ್ರೀಮ್ ಮೇಲೆ ಶೇ. ೫ ಮಾತ್ರ ಜಿಎಸ್‌ಟಿ ಕೊಡಬೇಕಾದಾಗ, ಅತೀ ಅಗತ್ಯದ ಔಷಧಿಗಳ ಮೇಲೆ ನಾನು ಶೇ. ೧೨ ಜಿಎಸ್‌ಟಿ ಯಾಕೆ ಕೊಡಬೇಕು?
ನೀವು ತುಸು ಯೋಚನೆ ಮಾಡಿದರೆ ಈ ತರದ ಅನೇಕ ವಿಷಯಗಳು ನೆನಪಾಗಬಹುದು. ಅವುಗಳು ನಮಗೆಲ್ಲರಿಗೂ ಸಂಬಂಧಿಸಿದ್ದು; ಆ ವ್ಯವಸ್ಥೆಯನ್ನು ಸುಧಾರಿಸಿ ನಮ್ಮ ಬದುಕು ನಿರುಮ್ಮಳವಾಗಿ ಮಾಡಲೆಂದೇ ನಾವು ಸರಕಾರಗಳನ್ನು ಚುನಾಯಿಸುವುದು-ಮಂತ್ರಿಗಳ, ಜನಪ್ರತಿನಿಧಿಗಳ, ಅಧಿಕಾರಿಗಳ ಸಂಪತ್ತು ಬೆಳೆಸಲು ಅಲ್ಲ ಎಂಬುದನ್ನು ಗಮನಿಸಿ ಆಯ್ಕೆ ಮಾಡಿ. ಧರ್ಮ, ಪೂಜೆ, ನಂಬಿಕೆ, ಆಚಾರ ವಿಚಾರಗಳೆಲ್ಲ ನಮ್ಮ ನಮ್ಮ ಮನೆಯ ಒಳಗೆ; ಹೆಚ್ಚೆಂದರೆ ಇಷ್ಟ ಬಂದಾಗ ಸ್ಥಳೀಯ ಪೂಜಾಮಂದಿರಕ್ಕೆ ಹೋಗಿ ಸೇವೆಯನ್ನೋ ಪ್ರಾರ್ಥನೆಯನ್ನೋ ಮಾಡಿ; ಅದಕ್ಕೆ ಯಾವುದೇ ಪಕ್ಷದ ಅಥವಾ ಜನಪ್ರತಿನಿಧಿಗಳ ಶಿಫಾರಸು ಸರ್ವಥಾ ಅನಗತ್ಯ.
ರಾಜ್ಯದ ಜನತೆಯ ಮುಂದಿನ ತುರ್ತು
ಕರ್ನಾಟಕವು ಭಾರತದ ಒಳಗಿನ ಒಂದು ರಾಜ್ಯ ಹೌದು; ಆದರೆ ರಾಜ್ಯಕ್ಕೆ ತನ್ನದೇ ಆದ ಚರಿತ್ರೆ, ಅಸ್ಮಿತೆ, ಭಾಷೆ, ಆಹಾರ ಪದ್ಧತಿ, ಸಂಸ್ಕೃತಿ ಇವೆ. ಈಗಾಗಲೇ ಅವುಗಳಿಗೆ ಮಾರಕ ಧಕ್ಕೆ ಆಗಿದೆ. ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ವಹಿಸಿಕೊಡುವ ಜವಾಬ್ದಾರಿ ಎಲ್ಲ ಮತದಾರರಲ್ಲಿಯೂ ಇದೆ. ಇತ್ತೀಚೆಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರನೂ/ಳೂ ಭ್ರಮಾಲೋಕದಿಂದ ಹೊರಬಂದು, ಈ ತುರ್ತನ್ನು ಅರಿತುಕೊಂಡು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಹಾಗಿದ್ದರೆ ಮಾತ್ರ ಕರ್ನಾಟಕವು ಉಳಿಯುತ್ತದೆ, ಪ್ರಜಾಪ್ರಭುತ್ವ ಸತ್ವಯುತವಾಗುತ್ತದೆ.