×
Ad

ಕುಸ್ತಿಪಟುಗಳ ಪ್ರತಿಭಟನೆ ಕುರಿತು ಪಿ.ಟಿ. ಉಷಾ ಹೇಳಿಕೆ ನಮಗೆ ನೋವುಂಟು ಮಾಡಿದೆ: ಬಜರಂಗ್ ಪುನಿಯಾ

Update: 2023-04-28 14:39 IST

ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯ ಕುರಿತಂತೆ ಪಿ.ಟಿ ಉಷಾ ಅವರ ಹೇಳಿಕೆಯಿಂದ ತಮಗೆ ನೋವಾಗಿದೆ ಎಂದು ಒಲಿಂಪಿಕ್ಸ್ ನಲ್ಲಿ  ಕಂಚಿನ ಪದಕ ವಿಜೇತ ಕುಸ್ತಿ ತಾರೆ ಬಜರಂಗ್ ಪುನಿಯಾ ಹೇಳಿದರು.

"ಈ ಹೇಳಿಕೆಯಿಂದ ನಮಗೆ ನೋವಾಗಿದೆ. ಉಷಾ ಕೂಡ  ಅತ್ಲೀಟ್, ಐಕಾನ್ ಕೂಡ ಆಗಿದ್ದಾರೆ.  ಸ್ವತಃ ಮಹಿಳೆಯಾಗಿರುವ  ಅವರು ಮಹಿಳಾ ಅತ್ಲೀಟ್ ಗಳ ಕುರಿತು ಈ ರೀತಿ ಹೇಳುತ್ತಿದ್ದಾರೆ. ಇದು ಖೇದಕರ''  ಎಂದು ಅವರು ANI ಜೊತೆ ಮಾತನಾಡುವಾಗ ಹೇಳಿದರು.

"ಉಷಾ ಅವರು  ನಮ್ಮನ್ನು ಅಶಿಸ್ತಿನೆಂದು ವರ್ತಿಸುತ್ತಿದ್ದಾರೆಂದು ಹೇಳಿದ್ದಾರೆ.  ಇದು ಕುಸ್ತಿ ಪಂದ್ಯವಲ್ಲ. ಭಾರತದ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿರುವ ಕಾರಣ ದೇಶದ ಎಲ್ಲಾ ಕ್ರೀಡಾಪಟುಗಳು  ಒಗ್ಗಟ್ಟಾಗಿ ನಡೆಸುತ್ತಿರುವ ಹೋರಾಟ ಇದಾಗಿದೆ. ನಾವು ಸುಪ್ರೀಂಕೋರ್ಟ್‌ನಿಂದ ನ್ಯಾಯಕ್ಕಾಗಿ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇವೆ.  ಏಕೆಂದರೆ ನಮಗೆ ತಿಳಿದಿರುವಂತೆ  ಮುಖ್ಯ  ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸರ್ ಯಾವಾಗಲೂ ಸತ್ಯದೊಂದಿಗೆ ನಿಲ್ಲುತ್ತಾರೆ. ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ'' ಎಂದು ಬಜರಂಗ್ ಹೇಳಿದ್ದಾರೆ.

ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಎಪ್ರಿಲ್ 21 ರಂದು ಎಫ್‌ಐಆರ್ ದಾಖಲಿಸಲು ದಿಲ್ಲಿ ಪೊಲೀಸರಿಗೆ ಮನವರಿಕೆ ಮಾಡಲು ವಿಫಲವಾದ ನಂತರ ನ್ಯಾಯಾಲಯದ ಮೆಟ್ಟಿಲೇರಿದ್ದರು.  ದೂರಿನಲ್ಲಿ ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ರಾಷ್ಟ್ರೀಯ ಹಾಗೂ  ಅಂತರರಾಷ್ಟ್ರೀಯ ಪದಕ ವಿಜೇತರಿಗೆ  ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

 'ಕುಸ್ತಿಪಟುಗಳು  ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ  ದೇಶದ ಪ್ರತಿಷ್ಠೆಗೆ ಮಸಿ ಬಳಿಯುತ್ತಿದ್ದಾರೆ. ಕುಸ್ತಿಪಟುಗಳು ಬೀದಿಗಳಲ್ಲಿ ಪ್ರತಿಭಟನೆ ನಡೆಸುವುದು ಅಶಿಸ್ತಿಗೆ ಸಮ. ಇದು ಭಾರತದ ವರ್ಚಸ್ಸಿಗೆ ಕಳಂಕ ತರುತ್ತಿದೆ’ಎಂದು ಐಒಎ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಗುರುವಾರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಉಷಾ ಸುದ್ದಿಗಾರರಿಗೆ ತಿಳಿಸಿದರು.

Similar News