"ಅತೀಕ್‌ ಸಹೋದರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾಹಿತಿ ಹಂತಕರಿಗೆ ಹೇಗೆ ದೊರೆಯಿತು?"

ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

Update: 2023-04-28 13:42 GMT

ಹೊಸದಿಲ್ಲಿ: ಎಪ್ರಿಲ್‌ 15 ರಂದು ನಡೆದ ಗ್ಯಾಂಗ್‌ಸ್ಟರ್‌, ರಾಜಕಾರಣಿ ಅತೀಕ್‌ ಅಹ್ಮದ್‌ ಮತ್ತಾತನ ಸಹೋದರ ಅಶ್ರಫ್‌ ಅಹ್ಮದ್‌ ಅವರ ಹತ್ಯೆ ಪ್ರಕರಣದ ತನಿಖೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸುವ ಸಮಗ್ರ ಅಫಿಡವಿಟ್‌ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಅತೀಕ್‌ ಅಹ್ಮದ್‌ನ ಪುತ್ರ ಅಸದ್‌ ಸಹಿತ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದ ಇತರ ಆರೋಪಿಗಳ ಎನ್‌ಕೌಂಟರ್‌ ಹತ್ಯೆಗಳ ಕುರಿತ ತನಿಖೆಯ ಮಾಹಿತಿಯನ್ನೂ ಸುಪ್ರೀಂ ಕೋರ್ಟ್‌ ಕೇಳಿದೆ.

ಅತೀಕ್‌ ಮತ್ತಾತನ ಸಹೋದರ ಅಶ್ರಫ್‌ ಇಬ್ಬರನ್ನೂ ಪ್ರಯಾಗರಾಜ್‌ನ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಹತ್ತಿರದಿಂದ ಪತ್ರಕರ್ತರ ಸೋಗಿನಲ್ಲಿ ಬಂದಿದ್ದವರು ಗುಂಡಿಕ್ಕಿ ಹತ್ಯೆಗೈದಿದ್ದರು.

ಹತ್ಯೆಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ವಕೀಲ ವಿಶಾಲ್‌ ತಿವಾರಿ ಎಂಬವರು ಸಲ್ಲಿಸಿದ್ದ ಪಿಐಎಲ್‌ ಅನ್ನು ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಹಾಗೂ ದೀಪಾಂಕರ್‌ ದತ್ತಾ ಅವರ ಪೀಠ ವಿಚಾರಣೆ ನಡೆಸುತ್ತಿದೆ.

ಅತೀಕ್‌ ಅಹ್ಮದ್‌ ಸೋದರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಹಂತಕಕರಿಗೆ ಹೇಗೆ ದೊರೆಯಿತು.  ಅವರನ್ನು ಆಸ್ಪತ್ರೆಯ ಮುಖ್ಯ ದ್ವಾರದ ತನಕ ಅಂಬುಲೆನ್ಸ್‌ನಲ್ಲಿ ಕರೆದೊಯ್ಯುವ ಬದಲು ನಡೆಸಿಕೊಂಡು ಏಕೆ ಹೋಗಲಾಯಿತು ಎಂದು ಸುಪ್ರೀಂ ಕೋರ್ಟ್‌ ಪೀಠ ಪ್ರಶ್ನಿಸಿದೆ.

ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ, ಈ ಪ್ರಕರಣ ಸಂಬಂಧ ನೋಟಿಸ್‌ ಜಾರಿಗೊಳಿಸದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರಲ್ಲದೆ ರಾಜ್ಯ ಸರ್ಕಾರ ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದರು. ಅಷ್ಟೇ ಅಲ್ಲದೆ ಆರೋಪಿ ಮತ್ತಾತನ ಇಡೀ ಕುಟುಂಬ ಕಳೆದ 30 ವರ್ಷಗಳಲ್ಲಿ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದೆ. ಇದರಿಂದ ಅವರ ಮೇಲೆ ದ್ವೇಷವಿದ್ದವರಿಂದ ಹತ್ಯೆ ನಡೆದಿರಬಹುದು. ಈ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ,” ಎಂದು ರೋಹಟ್ಗಿ ಹೇಳಿದರು.

Similar News