×
Ad

ನಾಡಗೀತೆಗೆ ಅಗೌರವ ತೋರಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕ್ಷಮೆಯಾಚಿಸಬೇಕು: ಡಿಎಂಕೆ

Update: 2023-04-28 15:28 IST

ಚೆನ್ನೈ: ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳುನಾಡು ನಾಡಗೀತೆಯಾದ 'ತಮಿಳ್ ತಾಯ್ ವಾಳ್ತು'ಗೆ ಅಗೌರವ ತೋರಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ‌.ಅಣ್ಣಾಮಲೈ ಕ್ಷಮೆ ಯಾಚಿಸಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕನಿಮೋಳಿ, "ತಮಿಳುನಾಡು ಪ್ರಜೆಗಳ ಬಗ್ಗೆ ಕಾಳಜಿ ಹೊಂದಿರುವ 'ತಮಿಳ್ ತಾಯ್ ವಾಳ್ತು' ನಾಡಗೀತೆಗೆ ಅಗೌರವ ತೋರಿದ ತನ್ನ ಪಕ್ಷದ ಸದಸ್ಯರನ್ನು ತಡೆಯಲು ಯಾರಿಗಾದರೂ ಹೇಗೆ ಸಾಧ್ಯವಾಗಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.

ಡಿಎಂಕೆ ನಾಯಕಿಯ ಟ್ವೀಟ್‌ಗೆ ತಿರುಗೇಟು ನೀಡಿರುವ ಅಣ್ಣಾಮಲೈ, ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಧ್ವಜ ಹಾರಿಸಿದ ನಂತರ ರಾಷ್ಟ್ರಗೀತೆ ನುಡಿಸದಿರುವ ಕುರಿತ ಪತ್ರಿಕಾ ವರದಿಯ ತುಣಕೊಂದನ್ನು ಲಗತ್ತಿಸಿ ಟ್ವೀಟ್ ಮಾಡಿದ್ದಾರೆ.

ಆ ಟ್ವೀಟ್‌ನಲ್ಲಿ, "ರಾಷ್ಟ್ರಧ್ವಜ ಹಾರಿಸಿದ ನಂತರ ರಾಷ್ಟ್ರಗೀತೆ ನುಡಿಸಬೇಕು ಎಂಬ ಅರಿವಿಲ್ಲದ ನಾಯಕನಿಂದ ನಿಮಗಿದೆಲ್ಲ ಬೇಕಾ? 'ತಮಿಳ್ ತಾಯ್ ವಾಳ್ತು' ನಾಡಗೀತೆಯಿಂದ " ಕನ್ನಡಮುಂಗ್ ಕಲಿತೆಲುಂಗಂ ಕವಿಮಲಯಾಳಮುಂ ತುಳುವುಂ" ಸಾಲನ್ನು ತೆಗೆದು ರಾಜ್ಯ ವಿಭಜನೆ ಬೀಜ ಬಿತ್ತಿದ ಇತಿಹಾಸ ನಿಮ್ಮದಲ್ಲವೆ? " ಎಂದು ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.

"ನಮ್ಮ ಒಂದೇ ಗುರಿ ತಮಿಳು ಜನರನ್ನು ನಿಮ್ಮಿಂದ ಹಾಗೂ ಡಿಎಂಕೆಯ ಕೀಳು ರಾಜಕೀಯದಿಂದ ರಕ್ಷಿಸುವುದಾಗಿದೆ. ಆತಂಕ ಪಡಬೇಡಿ" ಎಂದೂ ಹೇಳಿದ್ದಾರೆ.

ಇದಕ್ಕೂ ಮುನ್ನ, ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳುನಾಡಿನ ನಾಡಗೀತೆಯಾದ ತಮಿಳ್ ತಾಯ್ ವಾಳ್ತು ಅನ್ನು ಹಾಡಲಾಗಿತ್ತು. ಆದರೆ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅದನ್ನು ಮಧ್ಯದಲ್ಲೇ ತಡೆದು, ಕರ್ನಾಟಕದ ನಾಡಗೀತೆ ನುಡಿಸುವಂತೆ ಸೂಚಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿತ್ತು.

ಗುರುವಾರ ನಡೆದಿದ್ದ ಆ ಸಭೆಯಲ್ಲಿ ಅಣ್ಣಾಮಲೈ ಕೂಡಾ ಭಾಗವಹಿಸಿದ್ದರು.

Similar News