ಯಾವುದೇ ದೂರು ದಾಖಲಾಗದಿದ್ದರೂ ದ್ವೇಷ ಭಾಷಣದ ವಿರುದ್ಧ ಪ್ರಕರಣ ದಾಖಲಿಸಬೇಕು: ರಾಜ್ಯಗಳಿಗೆ ಸುಪ್ರೀಂ ಆದೇಶ
"ಪ್ರಕರಣ ದಾಖಲಿಸಲು ವಿಳಂಬವಾದಲ್ಲಿ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು"
ಹೊಸದಿಲ್ಲಿ: ದ್ವೇಷದ ಭಾಷಣ ಕುರಿತಂತೆ ಸುಪ್ರೀಂ ಕೋರ್ಟ್ ತನ್ನ 2022 ಆದೇಶದ ವ್ಯಾಪ್ತಿಯನ್ನು ಇಂದು ವಿಸ್ತರಿಸಿದೆ. ಯಾವುದೇ ದೂರು ದಾಖಲಾಗದೇ ಇದ್ದರೂ ಸಹ ದ್ವೇಷದ ಭಾಷಣದ ಕುರಿತಂತೆ ಪ್ರಕರಣ ದಾಖಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇಂತಹ ಘಟನೆಗಳಲ್ಲಿ ಪ್ರಕರಣ ದಾಖಲಿಸಲು ವಿಳಂಬವಾದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.
ದ್ವೇಷದ ಭಾಷಣವನ್ನು ಗಂಭೀರ ಅಪರಾಧ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್, ದೇಶದ ಜಾತ್ಯತೀತ ತತ್ವವನ್ನು ಬಾಧಿಸುವ ಸಾಮರ್ಥ್ಯ ಅದಕ್ಕಿದೆ ಎಂದು ಹೇಳಿದೆ.
ದ್ವೇಷದ ಭಾಷಣ ಕುರಿತಂತೆ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿದೆ. ದ್ವೇಷದ ಭಾಷಣಗಳ ಕುರಿತಂತೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ʻʻಇಂತಹ ಭಾಷಣ ಮಾಡಿದವರ ಧರ್ಮವನ್ನು ಪರಿಗಣಿಸದೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಮೂಲಕ ದೇಶದ ಸಂವಿಧಾನದ ಮುನ್ನುಡಿಯಲ್ಲಿ ಉಲ್ಲೇಖಿತವಾಗಿರುವ ಭಾರತದ ಜಾತ್ಯತೀತ ಸ್ವರೂಪವನ್ನು ರಕ್ಷಿಸಬೇಕು,” ಎಂದು ಜಸ್ಟಿಸ್ ಕೆ ಎಂ ಜೋಸೆಫ್ ಮತ್ತು ಜಸ್ಟಿಸ್ ಬಿ ವಿ ನಾಗರತ್ನ ಅವರ ಪೀಠ ಹೇಳಿದೆ.
ಪ್ರತಿ ರಾಜ್ಯಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕೆಂಬ ಸಲಹೆಯನ್ನು ಅರ್ಜಿದಾರರು ನೀಡಿದ್ದರೆ ಪ್ರತಿ ಜಿಲ್ಲೆಗೆ ಒಬ್ಬ ಅಧಿಕಾರಿ ನೇಮಿಸಬೇಕೆಂಬ ಸಲಹೆ ಪೀಠದಿಂದ ಬಂತು.
ಸಾಮಾಜಿಕ ಜಾಲತಾಣಗಳಿಂದ ದ್ವೇಷದ ಕುರಿತಾದ ಪೋಸ್ಟ್‌ಗಳನ್ನು ತೆಗೆದುಹಾಕಲು ಒಂದು ಪ್ರಕ್ರಿಯೆ ಅಗತ್ಯವಿದೆ ಎಂದೂ ಅರ್ಜಿದಾರರು ಕೋರಿದ್ದರು.
ಕೇಂದ್ರ ಸಚಿವ ಅನುರಾಗ್ ಠಾಕುರ್ ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠ, ಎಫ್‌ಐಆರ್ ದಾಖಲಿಸಲು ಅನುಮತಿ ಅಗತ್ಯವಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದರು ಹಾಗೂ 156(3) ಅಡಿ ಪ್ರಕರಣ ದಾಖಲಿಸಲು ಅನುಮತಿ ಅಗತ್ಯ ಎಂದು ಹೈಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ ಎಂದು ಹೇಳಿದೆ.
“ನ್ಯಾಯಾಧೀಶರು ರಾಜಕೀಯೇತರರಾಗಿದ್ಧಾರೆ ಹಾಗೂ ಸಂವಿಧಾನವನ್ನು ಮಾತ್ರ ಅವರು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ,” ಎಂದು ನಾಯಪೀಠ ಹೇಳಿತು.
ಮುಂದಿನ ವಿಚಾರಣೆ ಮೇ 12ರಂದು ನಡೆಯಲಿದೆ.