ಅಸ್ಸಾಂ: ಗರ್ಭಧಾರಣೆ ಬಗ್ಗೆ ನಿಗಾ ಇಡಲು ಶಾಲಾ ಮಕ್ಕಳಿಗೆ 'ಋತುಸ್ರಾವ' ಕಾರ್ಡ್!

Update: 2023-04-30 03:04 GMT

ಗುವಾಹತಿ: ಅಸ್ಸಾಂನಲ್ಲಿ ಶಾಲಾ ಬಾಲಕಿಯರ ಆರೋಗ್ಯ ಏರುಪೇರು ಅಥವಾ ಗರ್ಭಧಾರಣೆ ಬಗ್ಗೆ ನಿಗಾ ಇಡುವ ಸಾಧನವಾಗಿ ವಿದ್ಯಾರ್ಥಿನಿಯರಿಗೆ ’ಋತುಸ್ರಾವ ಕಾರ್ಡ್’ಗಳನ್ನು ಇದೀಗ ವಿತರಿಸಲಾಗುತ್ತಿದೆ. ಇದರ ಆಧಾರದಲ್ಲಿ ಪ್ರತಿ ತಿಂಗಳ ಋತುಚಕ್ರದ ಅವಧಿಯ ಮೇಲೆ ನಿಗಾ ಇಡಲಾಗುತ್ತದೆ. ಅಸ್ಸಾಂನಲ್ಲಿ ಅತ್ಯಧಿಕ ಪ್ರಮಾಣದ ಹೆರಿಗೆ ಮತ್ತು ಶಿಶು ಮರಣ ಪ್ರಮಾಣ ಇದ್ದು, ಇದಕ್ಕೆ ಬಾಲ್ಯವಿವಾಹ ಪ್ರಮುಖ ಕಾರಣವಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ತಿಳಿದು ಬರುತ್ತದೆ.

ಈ ಕಾರ್ಡ್‌ಗಳನ್ನು 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಕೂಡಾ ಅದನ್ನು ಉಳಿಸಿಕೊಳ್ಳಬೇಕಾಗುತ್ತದೆ. ಪ್ರೌಢಾವಸ್ಥೆ ತಲುಪಿದರೂ ಎಂಟಕ್ಕಿಂತ ಕೆಳಗಿನ ತರಗತಿಯ ಹಾಗೂ 10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಕಾರ್ಡ್ ವಿತರಿಸುವ ಯಾವುದೇ ಉದ್ದೇಶ ಇಲ್ಲ. ರಾಜ್ಯದ 31 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಒಂದು ಕೋಟಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆ ಈಗಾಗಲೇ ಕಾರ್ಡ್‌ಗಳನ್ನು ವಿತರಿಸಿದೆ.

ಹದಿಹರೆಯದ ಗರ್ಭಧಾರಣೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಕಳೆದ ವರ್ಷ ಆರಂಭಿಸಿದ ಕಾರ್ಯಾಚರಣೆಯ ಬೆನ್ನಲ್ಲೇ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಇದರಿಂದ ಮಾಸಿಕ ಋತುಸ್ರಾವ ದಿನಾಂಕವನ್ನು ನಮೂದಿಸುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಲು ಅನುಕೂಲವಾಗಲಿದೆ ಎಂದು ಇಲಾಖೆ ಹೇಳಿದೆ. ಶೀಘ್ರವೇ ವಿವಾಹ ಬಂಧನಕ್ಕೆ ಒಳಗಾಗಲಿರುವ ಯುವತಿಯರಿಗೂ ಈ ಕಾರ್ಡ್‌ಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ವಿವಾಹಿತ ಯುವತಿಯರಿಗೂ ವಿತರಿಸುವ ಉದ್ದೇಶವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Similar News