ಕುಸಿಯುತ್ತಿರುವ ಕೋಟೆ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಟ

Update: 2023-05-01 04:37 GMT

ಲಿಂಗಾಯತ ಮಠಾಧೀಶರು ಸರಕಾರದ ಅನುದಾನಕ್ಕಾಗಿ ಬಿಜೆಪಿ ಸರಕಾರದ ಬಗ್ಗೆ ಮೆದು ಧೋರಣೆ ತಾಳಿದರೂ ಎಲ್ಲರೂ ಹಾಗಿಲ್ಲ. ಅನೇಕ ಲಿಂಗಾಯತ ಮಠಾಧೀಶರು ಹಿಂದುತ್ವದ ಕೋಮುವಾದವನ್ನು ವಿರೋಧಿಸುತ್ತಾರೆ. ಗದುಗಿನ ತೋಂಟದ ಮಠದ ಸಿದ್ಧಲಿಂಗ ಸ್ವಾಮಿಗಳಂತೂ ನೇರವಾಗಿ ಸಂಘ ಪರಿವಾರವನ್ನು ಟೀಕಿಸುತ್ತಿದ್ದರು. ಹೀಗಾಗಿ ಕರ್ನಾಟಕವನ್ನು ಹಿಂದುತ್ವದ ಕೋಟೆಯನ್ನಾಗಿ ಮಾಡಿಕೊಳ್ಳುವಲ್ಲಿ ಲಿಂಗಾಯತ ಧರ್ಮ ಅಡ್ಡಿಯಾಗಿದೆ ಎಂಬ ಅಸಮಾಧಾನ ಸಂಘ ಪರಿವಾರದ ನಾಯಕರಲ್ಲಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರು ತಿರುಗಿ ಬಿದ್ದ ನಂತರ ಬಿಜೆಪಿ ಪಾಳೆಯದಲ್ಲಿ ಆತಂಕದ ಛಾಯೆ ಮೂಡಿದೆ. ಹೇಗಾದರೂ ಮಾಡಿ ಶೆಟ್ಟರ್ ಅವರನ್ನು ಸೊಲಿಸಲೇಬೇಕು, ಅದಕ್ಕಾಗಿ ವೀರಶೈವ, ಲಿಂಗಾಯತರ ಓಟ್ ಬ್ಯಾಂಕ್ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಾಕೀತು ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅಸಮಾಧಾನದಿಂದ ಕುದಿಯುತ್ತಿದ್ದಾರೆ. ಅಮಿರ್ ಶಾ ಅವರಿಂದ ಸುಪಾರಿ ಪಡೆದ ಯಡಿಯೂರಪ್ಪನವರು ಹುಬ್ಬಳ್ಳಿಗೆ ಬಂದು ಲಿಂಗಾಯತ ಸಮಾಜದ ಪ್ರಮುಖರ ರಹಸ್ಯ ಸಭೆಯನ್ನು ನಡೆಸಿದರಾದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ.

ಈ ಸಲ ಲಿಂಗಾಯತರು ತಿರುಗಿ ಬೀಳುತ್ತಾರೆ ಎಂಬ ಸುಳಿವು ನಾಗಪುರದ ಜಗದ್ಗುರು ಗಳಿಗೆ ಮತ್ತು ಅವರ ದಿಲ್ಲಿಯ ಶಿಷ್ಯರಿಗೆ ತಿಳಿದಿತ್ತೇನೋ; ಗೊತ್ತಿಲ್ಲ. ಆದರೆ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಬಿಜೆಪಿ ಹೈಕಮಾಂಡ್ ಈ ಬಾರಿ ಒಕ್ಕಲಿಗರ ಕೋಟೆಗಳಾದ ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಮುಂತಾದ ಕಡೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಸೂಚನೆ ನೀಡಿತ್ತು. ಕರಾವಳಿ ಜಿಲ್ಲೆಗಳ ನಂತರ ಮಂಡ್ಯವನ್ನು ಗಮನದಲ್ಲಿಟ್ಟು ಕೊಂಡ ಆರೆಸ್ಸೆಸ್ ದಶಕಗಳಿಂದ ಇಲ್ಲಿ ಅತ್ಯಂತ ಕೆಳ ಹಂತದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ.

ಈ ಮಸಲತ್ತಿನ ಭಾಗವಾಗಿಯೇ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ವಿರೂಪಗೊಳಿಸಿ ಉರಿಗೌಡ ಮತ್ತು ನಂಜೇಗೌಡರನ್ನು ಸೃಷ್ಟಿಸಲಾಯಿತು. ಹಳೆಯ ಮೈಸೂರು ಭಾಗದಲ್ಲಿ ಈ ಕಲ್ಪಿತ ಇತಿಹಾಸದ ಆಧಾರದಲ್ಲಿ ಚುನಾವಣೆ ಗೆಲ್ಲಲು ತಂತ್ರ ರೂಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಬಂದಾಗ ಉರಿಗೌಡ ಮತ್ತು ನಂಜೇಗೌಡ ಎಂಬ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಆದರೆ ಒಕ್ಕಲಿಗರು ಅಷ್ಟು ಸುಲಭವಾಗಿ ಬಲಿ ಬೀಳುವವರಲ್ಲ, ಮುಸಲ್ಮಾನರ ವಿರುದ್ಧ ಅವರನ್ನು ಎತ್ತಿಕಟ್ಟುವುದು ಸುಲಭವಲ್ಲ ಎಂದು ಗೊತ್ತಾದಾಗ ಸಂಘ ಪರಿವಾರದವರಲ್ಲಿ ಒಂದು ವಿಧದ ಹತಾಶ ಭಾವನೆ ಮೂಡತೊಡಗಿತು.

ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರು ಉರಿ ಗೌಡ, ನಂಜೇಗೌಡರ ಕಟ್ಟುಕಥೆಯನ್ನು ತಳ್ಳಿ ಹಾಕಿದ ನಂತರ ಪರಿಸ್ಥಿತಿ ಬದಲಾಗತೊಡಗಿತು. ಸಚಿವರಾದ ಅಶೋಕ್, ಅಶ್ವತ್ಥನಾರಾಯಣ ಹಾಗೂ ಸಿ.ಟಿ. ರವಿಯ ಕಿವಿ ಹಿಂಡಿದ ಸ್ವಾಮಿಗಳು ಮತ್ತೆ ಈ ನಕಲಿ ಕತೆ ಹರಡಿ ಸಾಮಾಜಿಕ ಶಾಂತಿ ಮತ್ತು ನೆಮ್ಮದಿ ಕದಡಬಾರದೆಂದು ಎಚ್ಚರಿಕೆ ನೀಡಿದರು. ಮಂಡ್ಯ, ಮೈಸೂರು, ಹಾಸನದ ಒಕ್ಕಲಿಗರ ಕೋಟೆ ಎಚ್.ಡಿ. ದೇವೇಗೌಡರ ನಿಯಂತ್ರಣದಲ್ಲಿ ಇದೆ. ಇದನ್ನು ಲಪಟಾಯಿಸಲು ಸಂಘ ಪರಿವಾರ ನಡೆಸಿದ ಮಸಲತ್ತು ವಿಫಲಗೊಂಡ ನಂತರ ಹತಾಶೆ ಮೂಡತೊಡಗಿತು.

ಒಕ್ಕಲಿಗರು ಗೌರವಿಸುವ ಕೆಂಪೇಗೌಡ ಮತ್ತು ಕುವೆಂಪು ಸೇರಿದಂತೆ ಅನೇಕರು ಸರ್ವ ಧರ್ಮಗಳ ಸಹಬಾಳ್ವೆಯ ಪ್ರತಿಪಾದಕರು. ಕುವೆಂಪು ಅವರಂತೂ ಮೂಢನಂಬಿಕೆ, ಕಂದಾಚಾರಗಳ ವಿರೋಧಿ ಹೀಗಾಗಿ ಒಕ್ಕಲಿಗರ ಕೋಟೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ ಎಂಬುದು ಇತ್ತೀಚೆಗೆ ಮಂಡ್ಯಕ್ಕೆ ಆದಿತ್ಯನಾಥ್ ಬಂದಾಗಲೇ ಗೊತ್ತಾಯಿತು.ಅವರ ಸ್ವಾಗತಕ್ಕೆ ನಿರೀಕ್ಷಿಸಿದಷ್ಟು ಜನರು ಬರಲಿಲ್ಲ. ಹೀಗಾಗಿ ಹತಾಶಗೊಂಡ ನಾಗಪುರದ ಗ್ಯಾಂಗಿನವರು ಮತ್ತೆ ಉತ್ತರ ಕರ್ನಾಟಕದ ಕಡೆ ಗಮನವನ್ನು ಕೇಂದ್ರೀಕರಿಸಿದರು. ಆದರೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರ ಕಾಂಗ್ರೆಸ್ ಸೇರ್ಪಡೆ ಬಿಜೆಪಿಯನ್ನು ಧೃತಿಗೆಡಿಸಿದೆ.

ವಾಸ್ತವವಾಗಿ ಲಿಂಗಾಯತರ ಮಾನಸಿಕ ಸ್ಥಿತಿಯೇ ಆರೆಸ್ಸೆಸ್‌ಗೆ ವಿರೋಧವಾದುದು. ಆರೆಸ್ಸೆಸ್ ಹಿಂದೂಗಳ ಏಕತೆಗೆ ಆ ಮೂಲಕ ಮನುವಾದದ ಮರುಸ್ಥಾಪನೆಗೆ ಆದ್ಯತೆ ನೀಡುತ್ತದೆ. ಆದರೆ ಹನ್ನೆರಡನೇ ಶತಮಾನದ ಎಲ್ಲರನ್ನೂ ಒಳಗೊಳ್ಳುವ, ಸಕಲ ಜೀವಾತ್ಮರ ಲೇಸನು ಬಯಸುವ ಬಸವಣ್ಣನವರ ಅನುಯಾಯಿಗಳು ಎಂದೂ ಸಂಘದ ಸಿದ್ಧಾಂತವನ್ನು ಒಪ್ಪಿಕೊಂಡವರಲ್ಲ. ಆದರೆ ರಾಜಕೀಯ ನಾಯಕತ್ವವಿಲ್ಲದ ಕಾರಣಕ್ಕಾಗಿ ಯಡಿಯೂರಪ್ಪನವರು ತಮ್ಮನ್ನು ಲಿಂಗಾಯತ ನಾಯಕ ಎಂದು
ಬಿಂಬಿಸಿಕೊಂಡುದರಿಂದ ಒಲ್ಲದ ಮನಸ್ಸಿನಿಂದ ಬಿಜೆಪಿ ಜೊತೆಗೆ ಗುರುತಿಸಿ ಕೊಂಡರು. ಆದರೂ ಎಲ್ಲ ಲಿಂಗಾಯತರ ಬೆಂಬಲವನ್ನು ಬಿಜೆಪಿ ಎಂದೂ ಪಡೆಯಲಿಲ್ಲ. ಹೀಗಾಗಿ ಸ್ವಂತ ಬಲದಿಂದ ಬಿಜೆಪಿ ಕರ್ನಾಟಕದಲ್ಲಿ ಎಂದೂ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಾಗಲೂ ಒಂದು ಸ್ಥಿರವಾದ ಉತ್ತಮ ಸರಕಾರವನ್ನು ನೀಡಲಿಲ್ಲ.

ಯಡಿಯೂರಪ್ಪನವರು ಕರ್ನಾಟಕದ ತುಂಬಾ ಓಡಾಡಿ ಪಕ್ಷವನ್ನು ಕಟ್ಟಿದರು. ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆಯವರ ನಂತರ ಉಂಟಾಗಿದ್ದ ಶೂನ್ಯವನ್ನು ತುಂಬಿದ ಯಡಿಯೂರಪ್ಪ ಮುಖ್ಯಮಂತ್ರಿ ಯೇನೋ ಆದರು. ಆದರೂ ಭ್ರಷ್ಟಾಚಾರದ ಹಗರಣಗಳಿಂದ ಜೈಲಿಗೆ ಹೋಗಬೇಕಾಯಿತು. ನಂತರ ಸದಾನಂದ ಗೌಡರು ಮುಖ್ಯಮಂತ್ರಿ ಯಾದರು.ಅವರ ವಿರುದ್ಧ ಭಿನ್ನಮತ ಭುಗಿಲೆದ್ದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಹೀಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಐದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಬೇಕಾಯಿತು.

ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಆದಿತ್ಯನಾಥ್‌ರಂತೆ ಅಲ್ಪಸಂಖ್ಯಾತರ ಮೇಲೆ ವಿಷಕಾರುವ ಮುಖ್ಯಮಂತ್ರಿಯಾಗಲಿಲ್ಲ. ಅವರ ಮೇಲೆ ಭ್ರಷ್ಟಾಚಾರದ ಏನೇ ಆರೋಪಗಳಿದ್ದರೂ ಕೋಮು ಪ್ರಚೋದನಾಕಾರಿ ಮಾತುಗಳನ್ನು ಆಡಲಿಲ್ಲ. ಹೀಗಾಗಿ ನಾಗಪುರದ ಜಗದ್ಗುರುಗಳು ಯಡಿಯೂರಪ್ಪನವರನ್ನು ಇಷ್ಟಪಡಲಿಲ್ಲ. ಬಲವಂತವಾಗಿ ಅತ್ಯಂತ ಅವಮಾನಕಾರಿಯಾಗಿ ಯಡಿಯೂರಪ್ಪನವರನ್ನು ರಾಜೀನಾಮೆ ಕೊಡಿಸಲಾಯಿತು. ಇದರಿಂದ ಲಿಂಗಾಯತರು ಕೋಪಗೊಳ್ಳಬಾರದೆಂದು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾ ಯಿತು. ಅವರು ನಾಗಪುರದ ಗುರುಗಳನ್ನು ಒಲೈಸಲು ಕ್ರಿಯೆಗೆ, ಪ್ರತಿಕ್ರಿಯೆ ಎಂಬಂಥ ಪ್ರಚೋದನಾಕಾರಿ ಮಾತುಗಳನ್ನು ಆಡಿದರು. ಗರ್ಭಗುಡಿಯ ಮಾಲಕರು ಬಸವರಾಜ ಬೊಮ್ಮಾಯಿಯವರನ್ನು ನಂಬಲಿಲ್ಲ. ಅಂತಲೇ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲೇಇಲ್ಲ.

ಈ ನಡುವೆ ಬಂದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾ ಗುವ ತಯಾರಿಯಲ್ಲಿದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಯಿತು. ಯಡಿಯೂರಪ್ಪನವರಿಗೆ ಮಗ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡುವುದಾಗಿ ಹಾಗೂ ತನಿಖಾ ಸಂಸ್ಥೆಗಳ ಬೆದರಿಕೆ ಹಾಕಿ ಬಾಯಿ ಮುಚ್ಚಿಸಲಾಯಿತು. ಈಶ್ವರಪ್ಪ ತನ್ನ ಬದಲಾಗಿ ಮಗ ಕಾಂತೇಶನಿಗೆ ಟಿಕೆಟ್ ಕೇಳಿದರಾದರೂ ಪಟ್ಟು ಹಿಡಿಯಲಿಲ್ಲ. ಇನ್ನು ಜಗದೀಶ ಶೆಟ್ಟರ್ ಅವರಿಗೆ ಮುಂಚೆ ತಿಳಿಸದೇ ಟಿಕೆಟ್ ನಿರಾಕರಿಸಲಾಯಿತು. ಇದರಿಂದ ರೊಚ್ಚಿಗೆದ್ದ ಜಗದೀಶ್ ಶೆಟ್ಟರ್ ಹೊಲಸಾದ ಶರ್ಟ್ ಕಳಚಿ ಎಸೆದು ಹೊರಗೆ ಬಂದಂತೆ ಬಿಜೆಪಿಗೆ ರಾಜೀನಾಮೆ ನೀಡಿ ಹೊರಗೆ ಬಂದರು.ಸಂಘಪರಿವಾರದ ಒಡನಾಟದಲ್ಲಿ ಐದಾರು ದಶಕಗಳ ಕಾಲ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ಯಾವ ಮುಲಾಜಿಲ್ಲದೇ ಹೊರಗೆ ಬರಲು ಕಾರಣ ಅವರ ಸ್ವಾಭಿಮಾನ ಮತ್ತು ಲಿಂಗಾಯತ ಹಿನ್ನೆಲೆಯಲ್ಲದೆ ಬೇರೇನೂ ಅಲ್ಲ.

ಕೊನೆಯ ಗಳಿಗೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನರನ್ನು ಹುಬ್ಬಳ್ಳಿಗೆ ಕಳಿಸಿ ಜಗದೀಶ್ ಶೆಟ್ಟರ್ ಅವರ ಮನವೊಲಿಸಲು ಯತ್ನಿಸ ಲಾಯಿತು. ಅವರ ಹೆಂಡತಿ ಮತ್ತು ಮಗನಿಗೆ ಟಿಕೆಟ್ ಕೊಡುವುದಾಗಿ ಹೇಳಲಾಯಿತು. ಆಗ ಶೆಟ್ಟರ್ ಅವರು, ಕಾಂಗ್ರೆಸ್ ನವರಿಗೆ ವಂಶಾಡಳಿತ ಎಂದೆನ್ನುತ್ತೀರಿ ನನಗೇಕೆ ಹೆಂಡತಿ, ಮಕ್ಕಳಿಗೆ ಟಿಕೆಟ್ ಕೊಡಿಸುವ ಆಮಿಷ ಒಡ್ಡುತ್ತಿದ್ದೀರಿ? ಇದು ವಂಶಾಡಳಿತ ಅಲ್ಲವೇ ಎಂದು ಮರು ಪ್ರಶ್ನೆ ಹಾಕಿದಾಗ ಮನವೊಲಿಸಲು ಬಂದಿದ್ದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿಯವರು ಜಾಗ ಖಾಲಿ ಮಾಡಿದರು.

ಹೀಗಾಗಿ ಒಕ್ಕಲಿಗರು ಮಾತ್ರವಲ್ಲ ಉತ್ತರ ಕರ್ನಾಟಕದ ಲಿಂಗಾಯತರೂ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಇದಕ್ಕೆ ಬರೀ ರಾಜಕೀಯ ಕಾರಣಗಳಲ್ಲ. ಕರ್ನಾಟಕವನ್ನು ಹಿಂದುತ್ವದ ಕೋಟೆಯನ್ನಾಗಿ ಮಾಡುವಲ್ಲಿ ಸಂಘ ಪರಿವಾರ ಯಶಸ್ವಿಯಾದರೆ ಸಕಲ ಜೀವಾತ್ಮರ ಲೇಸನು ಬಯಸುವ ಬಸವಣ್ಣನವರ ಸಿದ್ಧಾಂತ ಮತ್ತು ಲಿಂಗಾಯತ ಧರ್ಮ ದುರ್ಬಲವಾಗುತ್ತವೆ ಎಂಬ ಆತಂಕ ಲಿಂಗಾಯತರಲ್ಲಿದೆ. ಲಿಂಗಾಯತ ಸ್ವತಂತ್ರ ಧರ್ಮದ ಅಸ್ತಿತ್ವವನ್ನು ಆರೆಸ್ಸೆಸ್ ಮತ್ತು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ. ಲಿಂಗಾಯತ ಎಂಬುದು ಹಿಂದೂ ಧರ್ಮದ ಒಂದು ಭಾಗ ಎಂದು ಸಂಘದ ನಾಯಕರು ಹೇಳುತ್ತಾರೆ.ಇದೇ ರೀತಿ ಪಂಜಾಬ್‌ನ ಸಿಖ್ಖರನ್ನು ಹಿಂದೂ ಧರ್ಮದಲ್ಲಿ ಸೇರಿಸಿಕೊಂಡು ಸಿಖ್ ಧರ್ಮದ ಅಸ್ತಿತ್ವವನ್ನೇ ಅಳಿಸಿ ಹಾಕಲು ಹೋಗಿ ಮುಖಭಂಗಕ್ಕೆ ಒಳಗಾದ ಸಂಘ ಪರಿವಾರ ಕರ್ನಾಟಕದಲ್ಲಿ ಲಿಂಗಾಯತವನ್ನು ಹಿಂದೂ ಧರ್ಮದ ಭಾಗವನ್ನಾಗಿ ಮಾಡಿಕೊಳ್ಳುವ ಮಸಲತ್ತು ನಡೆಸಿದೆ. ಈ ಅಪಾಯವನ್ನು ಅರಿತ ಲಿಂಗಾಯತರು ಈ ಸಲ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ . ಜಗದೀಶ್ ಶೆಟ್ಟರ್ ಈ ಅಸಮಾಧಾನದ ಸಾಂಕೇತಿಕ ಸ್ಫೋಟವಾಗಿದ್ದಾರೆ.

 ಸೈದ್ಧಾಂತಿಕವಾಗಿ ಸಂಘ ಪರಿವಾರದ ಹಿಂದುತ್ವ ಸಿದ್ಧಾಂತಕ್ಕೆ ವಿರೋಧಿಯಾದ ಲಿಂಗಾಯತ ಧರ್ಮವನ್ನು ಹಿಂದುತ್ವದ ಬುಟ್ಟಿಗೆ ಹಾಕಿಕೊಳ್ಳುವುದು ಅಸಾಧ್ಯವೆನಿಸಿದಾಗ ಬಿಜೆಪಿಯೊಳಗಿನ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮುಂತಾದ ನಾಯಕರನ್ನು ಮೂಲೆಗುಂಪು ಮಾಡಲು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮಸಲತ್ತು ರೂಪಿಸಿತು. ಸಂಘಪರಿವಾರಕ್ಕೆ ಮುಸಲ್ಮಾನರು ಮತ್ತು ಕ್ರೈಸ್ತರ ವಿರುದ್ಧ ದ್ವೇಷದ ಉರಿಕಾರುವ ನಾಯಕರು ಬೇಕು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಹುತೇಕ ಲಿಂಗಾಯತ ನಾಯಕರು ಎಂದೂ ಹಾಗೆ ವಿಷಕಾರುವುದಿಲ್ಲ. ಬಸವರಾಜ ಬೊಮ್ಮಾಯಿಯವರು ಕೂಡ ನಾಗಪುರದವರನ್ನು ಒಲಿಸಿಕೊಳ್ಳಲು ಹಿಂದುತ್ವದ ಪರವಾಗಿ ಮಾತಾಡಿದರೂ ಅದು ಕೇವಲ ನಾಟಕ ಎಂಬ ಭಾವನೆ ಸಂಘ ಪರಿವಾರದ ಗರ್ಭಗುಡಿಯಲ್ಲಿದೆ.

ಲಿಂಗಾಯತ ಮಠಾಧೀಶರು ಸರಕಾರದ ಅನುದಾನಕ್ಕಾಗಿ ಬಿಜೆಪಿ ಸರಕಾರದ ಬಗ್ಗೆ ಮೆದು ಧೋರಣೆ ತಾಳಿದರೂ ಎಲ್ಲರೂ ಹಾಗಿಲ್ಲ. ಅನೇಕ ಲಿಂಗಾಯತ ಮಠಾಧೀಶರು ಹಿಂದುತ್ವದ ಕೋಮುವಾದವನ್ನು ವಿರೋಧಿಸುತ್ತಾರೆ. ಗದುಗಿನ ತೋಂಟದ ಮಠದ ಸಿದ್ಧಲಿಂಗ ಸ್ವಾಮಿಗಳಂತೂ ನೇರವಾಗಿ ಸಂಘ ಪರಿವಾರವನ್ನು ಟೀಕಿಸುತ್ತಿದ್ದರು. ಈಗ ನಿಜಗುಣಾನಂದ ಸ್ವಾಮಿಗಳ ಪ್ರವಚನಗಳಿಗೆ ಸಾವಿರಾರು ಜನ ಸೇರುತ್ತಾರೆ. ಅವರ ಯೂಟ್ಯೂಬ್ ಪ್ರವಚನಗಳು ದೇಶ,ವಿದೇಶಗಳಲ್ಲಿ ಜನಪ್ರಿಯವಾಗಿವೆ. ಹೀಗಾಗಿ ಕರ್ನಾಟಕವನ್ನು ಹಿಂದುತ್ವದ ಕೋಟೆಯನ್ನಾಗಿ ಮಾಡಿಕೊಳ್ಳುವಲ್ಲಿ ಲಿಂಗಾಯತ ಧರ್ಮ ಅಡ್ಡಿಯಾಗಿದೆ ಎಂಬ ಅಸಮಾಧಾನ ಸಂಘ ಪರಿವಾರದ ನಾಯಕರಲ್ಲಿದೆ. ಆ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಮುಂತಾದವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಹೀಗಾಗಿ ಕರ್ನಾಟಕವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಡ್ಡಾ, ರಾಜನಾಥ ಸಿಂಗ್ ಮೊದಲಾದ ಘಟಾನುಘಟಿಗಳು ರಾಜ್ಯಕ್ಕೆ ಪದೇ ಪದೇ ಬಂದು ಉರಿ ಬಿಸಿಲಲ್ಲಿ ಬೆವರಿಳಿಸುತ್ತಿದ್ದಾರೆ. ಹೇಳಲು ವಿಷಯಗಳಿಲ್ಲ. ಸರಕಾರದ ಸಾಧನೆಗಳಿಲ್ಲ. ಕಾಂಗ್ರೆಸ್ ನಾಯಕರು ಭಾಷಣಗಳಲ್ಲಿ ತನ್ನನ್ನು ಟೀಕಿಸುತ್ತಾರೆಂದು ಹೇಳುವುದನ್ನು ಬಿಟ್ಟರೆ ಮೋದಿಯವರು ಬೇರೇನೂ ಮಾತಾಡುತ್ತಿಲ್ಲ.

ಲಿಂಗಾಯತರು, ಒಕ್ಕಲಿಗರು ದೂರ ಸರಿದ ನಂತರ ಕೆಲವು ಹಿಂದುಳಿದ ಸಮುದಾಯಗಳ ಮಠಾಧೀಶರ ಮೂಲಕ ಅವರ ಓಟುಗಳಿಗೆ ಮತ್ತು ದಲಿತರ ಕೆಲ ಪಂಗಡಗಳ ಓಟುಗಳಿಗೆ ಬಲೆ ಬೀಸಿದರೂ ಪ್ರಯೋಜನವಿಲ್ಲ. ಸಿದ್ದರಾಮಯ್ಯನವರಂಥ ಜನಪ್ರಿಯ ನಾಯಕರೂ ಬಿಜೆಪಿಯಲ್ಲಿ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರಂಥ ಅನುಭವಿ ಹಿರಿಯ ನಾಯಕರೂ ಇಲ್ಲ. ಹೀಗಾಗಿ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಜಯ ಸಾಧಿಸಲು ಬಿಜೆಪಿ ಹೊರಟಿದೆ.ಮೋದಿಯವರು ತಾನು ಪ್ರಧಾನಿ ಎಂಬುದನ್ನು ಮರೆತು ವಾರದ ಸಂತೆಗೆ ಬಂದಂತೆ ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ. ಅಂತಿಮವಾಗಿ ಜನ ಯಾರ ಪರವಾಗಿ ತೀರ್ಪು ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಕರ್ನಾಟಕದ ಜನ ಎಂದಿಗೂ ಭ್ರಷ್ಟಾಚಾರದ ಪರವಾಗಿ, ಕೋಮುವಾದದ ಪರವಾಗಿ, ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ಪರವಾಗಿ ಮತ ನೀಡುವುದಿಲ್ಲ ಎಂಬುದು ವಾಸ್ತವ ಸಂಗತಿ.

Similar News