×
Ad

ಪಾನಿಪೂರಿ ಮಾರುತ್ತಿದ್ದಾತ ಈಗ ಐಪಿಎಲ್ ಶತಕವೀರ: ಇದು ಯಶಸ್ವಿ ಜೈಸ್ವಾಲ್ ಯಶೋಗಾಥೆ

Update: 2023-05-01 14:45 IST

ಮುಂಬೈ: ಹಿಂದೊಮ್ಮೆ ಮುಂಬೈನ ಆಝಾದ್ ಮೈದಾನದ  ಟೆಂಟ್‌ಗಳಲ್ಲಿ ವಾಸ ಮಾಡುತ್ತಾ,  ತನ್ನ ಕ್ರಿಕೆಟ್ ಕನಸನ್ನು ಮುಂದುವರಿಸಲು ಪಾನಿಪೂರಿ ಮಾರಾಟ ಮಾಡಿದ್ದ ಯಶಸ್ವಿ ಜೈಸ್ವಾಲ್  ಇದೀಗ, ತನ್ನ ಅದ್ಭುತ ಪ್ರತಿಭೆ ಮೂಲಕ  ಇಂಡಿಯನ್ ಪ್ರೀಮಿಯರ್ ಲೀಗ್‌ನ  ಶತಕವೀರನಾಗಿ ಹೊರಹೊಮ್ಮಿದ್ದಾರೆ.

ಉತ್ತರ ಪ್ರದೇಶದ ಬಡ ಕುಟುಂಬದಿಂದ ಬಂದಿರುವ ಜೈಸ್ವಾಲ್ ತನ್ನ ಬಾಲ್ಯವನ್ನು ಕಳೆದಿರುವ ಮಹಾನಗರಿ  ಮುಂಬೈನಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಭಾರೀ  ಪ್ರೇಕ್ಷಕರ ಸಮ್ಮುಖದಲ್ಲಿ ರಾಜಸ್ಥಾನ  ರಾಯಲ್ಸ್ ಪರ 62 ಎಸೆತಗಳಲ್ಲಿ 124 ರನ್ ಗಳಿಸಿದರು.

 "ಎಂತಹ  ಕಥೆ, ಎಂತಹ ವಿಶೇಷ ಪ್ರತಿಭೆ. ಯಶಸ್ವಿ ಜೈಸ್ವಾಲ್  ಸೂಪರ್‌ಸ್ಟಾರ್ ಆಗಿದ್ದಾರೆ" ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಹಾಗೂ  ಮಾಜಿ ಐಪಿಎಲ್ ಕೋಚ್ ಟಾಮ್ ಮೂಡಿ ಟ್ವೀಟ್ ಮಾಡಿದ್ದಾರೆ.

"ಅವರು ನಿಜವಾದ ಪ್ರತಿಭೆಯನ್ನು ಹೊಂದಿದ್ದಾರೆ. ದೇಶೀಯ ಋತುವಿನಲ್ಲಿ ತೋರಿದ್ದ ಶ್ರೇಷ್ಟ ಪ್ರದರ್ಶನವನ್ನು  ಅವರು ಐಪಿಎಲ್‌ ನಲ್ಲೂ ಮುಂದುವರಿಸಿದ್ದಾರೆ. ಇದರಿಂದ ಅವರಿಗೆ, ಭಾರತೀಯ ಕ್ರಿಕೆಟ್‌ಗೆ ಹಾಗೂ  ರಾಜಸ್ಥಾನ ರಾಯಲ್ಸ್ ಗೂ ಒಳ್ಳೆಯದ್ದಾಗಿದೆ" ಎಂದು ಭಾರತದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಎಡಗೈ ಆಟಗಾರ ಜೈಸ್ವಾಲ್ ಅವರ  ಚೊಚ್ಚಲ ಐಪಿಎಲ್ ಶತಕವು ಪ್ರಸಕ್ತ ಐಪಿಎಲ್ ಋತುವಿನ ಅತ್ಯಧಿಕ ಸ್ಕೋರ್  ಆಗಿದೆ.   ಲೀಗ್‌ನ 2023 ರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಜೈಸ್ವಾಲ್  ಅಗ್ರಸ್ಥಾನಕ್ಕೆ ಏರಿದ್ದಾರೆ.

ಜೈಸ್ವಾಲ್ ಅವರು 159.70 ಸ್ಟ್ರೈಕ್ ರೇಟ್‌ನೊಂದಿಗೆ  ಇದೀಗ 428 ರನ್‌ಗಳನ್ನು ಗಳಿಸಿದ್ದಾರೆ.  ದಕ್ಷಿಣ ಆಫ್ರಿಕಾದ ಬ್ಯಾಟರ್  ಎಫ್ ಡು ಪ್ಲೆಸಿಸ್ (422 - ರಾಯಲ್ ಚಾಲೆಂಜರ್ಸ್ ಬೆಂಗಳೂರು) ಹಾಗೂ  ನ್ಯೂಝಿಲ್ಯಾಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ (414 - ಚೆನ್ನೈ ಸೂಪರ್ ಕಿಂಗ್ಸ್) ಅವರನ್ನು ಹಿಂದಿಕ್ಕಿದ್ದಾರೆ.

ಪಾನಿ ಪುರಿಯಿಂದ ಪ್ರೀಮಿಯರ್ ಲೀಗ್ ತನಕ…

ಜೈಸ್ವಾಲ್ ಅವರು ಕೇವಲ 11 ವರ್ಷದವರಾಗಿದ್ದಾಗ ತನ್ನ ಹೆತ್ತವರಿಲ್ಲದೆ ಮುಂಬೈಗೆ ತೆರಳಿದ್ದರು.

"ನಾನು ಡೈರಿಯಲ್ಲಿ ಮಲಗುತ್ತಿದ್ದೆ. ನಂತರ ನನ್ನ ಚಿಕ್ಕಪ್ಪನ ಮನೆಯಲ್ಲಿಯೇ ಇದ್ದೆ.  ಆದರೆ ಅದು ಸಾಕಷ್ಟು ದೊಡ್ಡದಾಗಿರಲಿಲ್ಲ. ಹೀಗಾಗಿ ಬೇರೆ ಸ್ಥಳವನ್ನು ಹುಡುಕಿಕೊ ಎಂದು ಚಿಕ್ಕಪ್ಪ, ನನಗೆ ಹೇಳಿದರು. ನಾನು ನಂತರ ಆಝಾದ್ ಮೈದಾನ (ಮುಂಬೈ ಕ್ರೀಡಾ ಮೈದಾನ) ಬಳಿಯ ಟೆಂಟ್‌ನಲ್ಲಿ ಉಳಿಯಲು ಆರಂಭಿಸಿದೆ. ಹಗಲಿನಲ್ಲಿ ಅಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಆಹಾರಕ್ಕಾಗಿ   ಸ್ವಲ್ಪ ಹಣವನ್ನು ಗಳಿಸಲು ನಾನು ರಾತ್ರಿ ವೇಳೆ ಪಾನಿ ಪುರಿ ಮಾರಾಟ ಮಾಡಿದ್ದೇನೆ" ಎಂದು ಜೈಸ್ವಾಲ್ 2020 ರಲ್ಲಿ AFP ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜೈಸ್ವಾಲ್ 2019 ರಲ್ಲಿ ಮುಂಬೈ ರಾಜ್ಯ ತಂಡದಲ್ಲಿ ಸ್ಥಾನ ಪಡೆದರು.   17 ವರ್ಷ ಮತ್ತು 292 ದಿನಗಳಲ್ಲಿ ದೇಶೀಯ ಏಕದಿನ ಕ್ರಿಕೆಟ್ ನಲ್ಲಿ  ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ವಿಶ್ವದ ಶ್ರೀಮಂತ ಟಿ-20 ಟೂರ್ನಮೆಂಟ್‌ನ 2019 ರ ಹರಾಜಿನಲ್ಲಿ ಯುವ ಆಟಗಾರನನ್ನು ರಾಜಸ್ಥಾನವು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

2020 ರಲ್ಲಿ ಜೈಸ್ವಾಲ್ ಭಾರತದ ಅಂಡರ್-19 ತಂಡದ ಪರ  ಪ್ರಮುಖ ಸ್ಕೋರರ್ ಆಗಿದ್ದರು ಮತ್ತು 2020 ರ ಅಂಡರ್-19 ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಆಟಗಾರರಾಗಿದ್ದರು.

ಜೈಸ್ವಾಲ್ ಅವರ ಮೊದಲ ಮೂರು ಐಪಿಎಲ್ ಋತುಗಳು ಸಾಮಾನ್ಯವಾಗಿದ್ದವು, ಆದರೆ ಈ ವರ್ಷ ಅವರು ಇಂಗ್ಲೆಂಡ್ ವೈಟ್-ಬಾಲ್ ನಾಯಕ ಜೋಸ್ ಬಟ್ಲರ್ ಅವರೊಂದಿಗೆ ಉತ್ತಮ ಆರಂಭ ನೀಡಲು ಆರಂಭಿಸಿದ್ದಾರೆ.

Similar News