'ಮನ್ ಕಿ ಬಾತ್'ಗೆ 830 ರೂ. ಕೋಟಿ ವೆಚ್ಚವಾಗಿದೆ ಎಂದು ಆರೋಪಿಸಿದ್ದ ಗುಜರಾತ್ ಆಪ್ ಮುಖ್ಯಸ್ಥನ ವಿರುದ್ಧ ಕೇಸು ದಾಖಲು

Update: 2023-05-01 14:35 GMT

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದ 100 ಕಂತಿಗೆ ಈವರೆಗೆ ತೆರಿಗೆದಾರರ ರೂ. 830 ಕೋಟಿ ವ್ಯಯಿಸಲಾಗಿದೆ ಎಂದು ಟ್ವೀಟ್ ಮೂಲಕ ಪ್ರತಿಪಾದಿಸಿದ್ದ ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಇಸುದನ್ ಗಾಢ್ವಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಗಾಢ್ವಿ ತಮ್ಮ ಪ್ರತಿಪಾದನೆಗೆ ಯಾವುದೇ ಪೂರಕ ದತ್ತಾಂಶಗಳನ್ನು ಒದಗಿಸದೆ ಇದ್ದುದರಿಂದ ಶನಿವಾರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಸದರಿ ಟ್ವೀಟ್ ಅನ್ನು ಗಾಢ್ವಿ ಅಳಿಸಿ ಹಾಕಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಆಡಳಿತಾರೂಢ ಬಿಜೆಪಿಯು ತನ್ನ ನಾಯಕರ ಮೇಲೆ ಸುಳ್ಳು ಪ್ರಾಥಮಿಕ ಮಾಹಿತಿ ವರದಿಗಳನ್ನು ದಾಖಲಿಸಿಕೊಂಡು, ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದ 100ನೇ ಕಂತು ರವಿವಾರ ಪ್ರಸಾರವಾಗಿತ್ತು.

ಈ ಕುರಿತು ಎಪ್ರಿಲ್ 28ರಂದು ಟ್ವೀಟ್ ಮಾಡಿದ್ದ ಗಾಢ್ವಿ, "ಮನ್ ಕಿ ಬಾತ್' ಕಾರ್ಯಕ್ರಮದ ಒಂದು ಕಂತಿಗೆ ರೂ. 8.3 ಕೋಟಿ ವೆಚ್ಚವಾಗುತ್ತದೆ. ಅದರರ್ಥ ಈವರೆಗೆ 100 ಕಂತುಗಳಿಗೆ ಕೇಂದ್ರ ಸರ್ಕಾರವು ರೂ. 830 ಕೋಟಿ ವೆಚ್ಚ ಮಾಡಿದೆ ಎಂದು. ಇದು ವಿಪರೀತವಾಯಿತು. ಈ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕರ್ತರು ಆಲಿಸುವುದರಿಂದ ಅವರು ಇದರ ವಿರುದ್ಧ ಪ್ರತಿಭಟಿಸಬೇಕು" ಎಂದು ಕರೆ ನೀಡಿದ್ದರು.

ಈ ಟ್ವೀಟ್ ಅನ್ನು ಗಮನಕ್ಕೆ ತೆಗೆದುಕೊಂಡ ಅಹಮದಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು, ಭಾರತೀಯ ದಂಡ ಸಂಹಿತೆಯ ಪೂರಕ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳಡಿ ಗಾಢ್ವಿ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ ಎಂದು ಸೈಬರ್ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜೆ.ಎಂ.ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Similar News