×
Ad

ಯುವಕನನ್ನು ಥಳಿಸಿದ ಬಿಜೆಪಿ ಸಚಿವ: ವೀಡಿಯೊ ವೈರಲ್

Update: 2023-05-03 07:43 IST

ಡೆಹ್ರಾಡೂನ್: ಹೃಕೇಶದಲ್ಲಿ ತಮ್ಮ ಜತೆ ವಾಗ್ವಾದ ನಡೆಸಿದ ಯುವಕನನ್ನು ಉತ್ತರಾಖಂಡ ಹಣಕಾಸು ಸಚಿವ ಪ್ರೇಮಚಂದ್ ಅಗರ್‌ವಾಲ್, ಅವರ ಗನ್‌ಮ್ಯಾನ್ ಮತ್ತು ಇತರ ಕೆಲವರು ಹಿಡಿದು ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಮ್ಮ ಜತೆಗೆ ಮಾತನಾಡುತ್ತಿದ್ದ ಯುವಕನನ್ನು ಸಚಿವರು ಹೊಡೆಯುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಚಿವರ ಗನ್‌ಮ್ಯಾನ್ ಕೂಡಾ ಯುವಕನನ್ನು ಹೊಡೆಯುತ್ತಿದ್ದು, ಮತ್ತೆ ಕೆಲವರು ಯುವಕನನ್ನು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ.

ಸಚಿವರ ಕಾರು ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು ಹಾಗೂ ಯುವಕನ ಬೈಕ್ ಅದಕ್ಕೆ ಡಿಕ್ಕಿ ಹೊಡೆದಿತ್ತು. ಈ ಕ್ಷುಲ್ಲಕ ವಿಷಯಕ್ಕೆ ಸಚಿವರು ಹಾಗೂ ಗನ್‌ಮ್ಯಾನ್, ಬೈಕ್ ಸವಾರನ ಮೇಲೆ ದಾಳಿ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಗರೀಮಾ ದಸೌನಿ ಹೇಳಿದ್ದಾರೆ.

ಇದು ನಾಚಿಕೆಗೇಡಿನ ಕೃತ್ಯ ಹಾಗೂ ಜನಸಾಮಾನ್ಯರ ಬಗೆಗಿನ ಬಿಜೆಪಿ ಸಚಿವರು ಮತ್ತು ಶಾಸಕರ ನಡವಳಿಕೆಗೆ ಕನ್ನಡಿ ಎಂದು ಅವರು ಬಣ್ಣಿಸಿದ್ದಾರೆ.

ಆ ಬಳಿಕ ಹೇಳಿಕೆ ನೀಡಿದ ಸಚಿವರು, ಸುರೇಂದ್ರ ಸಿಂಗ್ ನೇಗಿ ಎಂಬ ವ್ಯಕ್ತಿ ತಮ್ಮನ್ನು ನಿಂದಿಸಿದ್ದಲ್ಲದೇ ಹಲ್ಲೆ ನಡೆಸಲು ಯತ್ನಿಸಿದರು. ಆದ್ದರಿಂದ ಗನ್‌ಮ್ಯಾನ್ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ನೇಗಿಯನ್ನು ವಿಚಾರಣೆ ಸಲುವಾಗಿ ವಶಕ್ಕೆ ಪಡೆಯಲಾಗಿದೆ. ಆ ವ್ಯಕ್ತಿ ಅಶ್ಲೀಲ ಸನ್ನೆಯನ್ನು ಮಾಡಿ ಅಸಹ್ಯ ಭಾಷೆ ಬಳಸಿದ್ದ ಎಂದು ಅಗರ್‌ವಾಲ್ ಆಪಾದಿಸಿದ್ದಾರೆ. ನಾನು ಇದಕ್ಕೆ ಆಕ್ಷೇಪಿಸಿದಾಗ ನನ್ನ ಮೇಲೆ ದಾಳಿ ಮಾಡಿ ನನ್ನ ಕುರ್ತಾ ಹರಿದಿದ್ದಾನೆ. ನನ್ನ ಹಣ ಹಾಗೂ ಜೇಬಿನಲ್ಲಿದ್ದ ಮೌಲ್ಯ ವಸ್ತುಗಳು ಕಾಣೆಯಾಗಿವೆ ಎಂದು ಆಪಾದಿಸಿದ್ದಾರೆ. ಜತೆಗೆ ಭದ್ರತಾ ಸಿಬ್ಬಂದಿಯ ಸಮವಸ್ತ್ರದ ಕಿಸೆ ಹರಿದಿರುವುದನ್ನು ತೋರಿಸಿ, ಅತನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ.

Similar News